
ಸಾಂದರ್ಭಿಕ ಚಿತ್ರ
ದಾವಣಗೆರೆ ದಕ್ಷಿಣ: ಎಸ್‌ಡಿಪಿಐ ಅಭ್ಯರ್ಥಿ ಕಣಕ್ಕೆ; ಮುಸ್ಲಿಂ ಮತ ವಿಭಜನೆ ಭೀತಿಯಲ್ಲಿ ಕಾಂಗ್ರೆಸ್
ಎಸ್‌ಡಿಪಿಐ ಪಕ್ಷದಿಂದ ಅಪ್ಸರ್ ಕೊಡ್ಲಿಪೇಟೆ ಅವರು ಚುನಾವಣಾ ಅಖಾಡಕ್ಕೆ ಧುಮುಕಿರುವುದು, ಸಾಂಪ್ರದಾಯಿಕವಾಗಿ ಅಲ್ಪಸಂಖ್ಯಾತರ ಮತಗಳನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ತಲ್ಲಣ ಮೂಡಿಸಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತನ್ನ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಭಾರಿ ಕುತೂಹಲ ಕೆರಳಿಸಿದೆ.
ಎಸ್‌ಡಿಪಿಐ ಪಕ್ಷದಿಂದ ಅಪ್ಸರ್ ಕೊಡ್ಲಿಪೇಟೆ ಅವರು ಚುನಾವಣಾ ಅಖಾಡಕ್ಕೆ ಧುಮುಕಿರುವುದು, ಸಾಂಪ್ರದಾಯಿಕವಾಗಿ ಅಲ್ಪಸಂಖ್ಯಾತರ ಮತಗಳನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ತಲ್ಲಣ ಮೂಡಿಸಿದೆ.
ಶಾಮನೂರು ಕುಟುಂಬಕ್ಕೆ ಮಣೆ ಮತ್ತು ಅಸಮಾಧಾನ
ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ನಾಯಕರಿಗೇ ಟಿಕೆಟ್ ನೀಡಬೇಕು ಎಂದು ಸಮುದಾಯದ ಮುಖಂಡರು ತೀವ್ರ ಪಟ್ಟು ಹಿಡಿದಿದ್ದರು. ಆದರೆ, ಅಲ್ಪಸಂಖ್ಯಾತರ ಈ ಬೇಡಿಕೆಯನ್ನು ಕಡೆಗಣಿಸಿರುವ ಕಾಂಗ್ರೆಸ್ ವರಿಷ್ಠರು, ಕ್ಷೇತ್ರದ ಟಿಕೆಟ್ ಅನ್ನು ಮತ್ತೆ ಪ್ರಭಾವಿ ಶಾಮನೂರು ಕುಟುಂಬಕ್ಕೇ ನೀಡಿ ಮಣೆಹಾಕಿದ್ದಾರೆ. ಪಕ್ಷದ ಈ ನಿಲುವಿನಿಂದಾಗಿ ಸ್ಥಳೀಯ ಮುಸ್ಲಿಂ ಸಮುದಾಯದಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮತ ವಿಭಜನೆಯ ಆತಂಕದಲ್ಲಿ ಕೈ ಪಡೆ
ಕಾಂಗ್ರೆಸ್ ನಾಯಕರ ಮೇಲಿನ ಇದೇ ಅಸಮಾಧಾನವನ್ನು ಬಂಡವಾಳವಾಗಿಸಿಕೊಳ್ಳಲು ಎಸ್‌ಡಿಪಿಐ ಮುಂದಾಗಿದೆ. ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ಅಪ್ಸರ್ ಕೊಡ್ಲಿಪೇಟೆ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಕನ್ನ ಹಾಕಲು ಎಸ್‌ಡಿಪಿಐ ರಣತಂತ್ರ ರೂಪಿಸಿದೆ. ಒಂದು ವೇಳೆ ಮುಸ್ಲಿಂ ಮತಗಳು ಎಸ್‌ಡಿಪಿಐ ಮತ್ತು ಕಾಂಗ್ರೆಸ್ ನಡುವೆ ಚದುರಿ ಹೋದರೆ, ಅದು ಚುನಾವಣಾ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ದೊಡ್ಡ ಆತಂಕ ಕಾಂಗ್ರೆಸ್ ನಾಯಕರನ್ನು ಕಾಡಲಾರಂಭಿಸಿದೆ.

