By Election 2026| ದಾವಣಗೆರೆ ದಕ್ಷಿಣ: ಶಾಮನೂರು ಕುಟುಂಬಕ್ಕೆ ʼಸಮರ್ಥʼನೆ; ʼಕೈʼ ಕೊಡಲಿದ್ದಾರೆಯೇ  ಮುಸ್ಲಿಂ ನಾಯಕರು?
x
ಸಮರ್ಥ್‌ ಹಾಗೂ ಸಾದಿಕ್‌ ಪೈಲ್ವಾನ್‌

By Election 2026| ದಾವಣಗೆರೆ ದಕ್ಷಿಣ: ಶಾಮನೂರು ಕುಟುಂಬಕ್ಕೆ ʼಸಮರ್ಥʼನೆ; ʼಕೈʼ ಕೊಡಲಿದ್ದಾರೆಯೇ ಮುಸ್ಲಿಂ ನಾಯಕರು?

ಅನುಕಂಪದ ಅಲೆ ಹಾಗೂ ಲಿಂಗಾಯತ ಮತಗಳನ್ನು ಒಂದುಗೂಡಿಸುವ ಉದ್ದೇಶದಿಂದಲೇ ಟಿಕೆಟ್‌ ಘೋಷಿಸಲಾಗಿದೆ ಎಂದು ʼಸಮರ್ಥʼನೆ ನೀಡಿರುವ ಕಾಂಗ್ರೆಸ್‌ ಇಕ್ಕಟ್ಟಿನಲ್ಲಿದೆ!


ಕರ್ನಾಟಕದ ಮ್ಯಾಂಚೆಸ್ಟರ್‌ ಖ್ಯಾತಿಯ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಬ್ಬರ ಜೋರಾಗಿದೆ. ರಾಜಕೀಯ 'ಭೀಷ್ಮ', ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ಸ್ಥಾನಕ್ಕೆ ಮೊಮ್ಮಗ ಸಮರ್ಥ್‌ ಹೆಸರು ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷಕ್ಕೆ ಅಲ್ಪಸಂಖ್ಯಾತರಿಂದ ಬಂಡಾಯದ ಬಿಸಿ ಮುಟ್ಟಿದೆ.

ದಶಕಗಳಿಂದ ಕಾಂಗ್ರೆಸ್‌ ಭದ್ರಕೋಟೆಯಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯವು ಪ್ರಬಲವಾಗಿದ್ದರೂ ಕಾಂಗ್ರೆಸ್‌ ನಾಯಕರು ಮತ್ತೆ ಶಾಮನೂರು ಕುಟುಂಬಕ್ಕೇ ಮಣೆ ಹಾಕಿರುವುದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಸಚಿವರಾಗಿದ್ದು, ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಂಸದರಾಗಿದ್ದಾರೆ. ಹಾಗಿದ್ದರೂ, ಮೂರನೇ ತಲೆಮಾರಿನ ಸಮರ್ಥ್ ಅವರಿಗೆ ಟಿಕೆಟ್ ಘೋಷಿಸುವ ಮೂಲಕ ಕಾಂಗ್ರೆಸ್‌ ಪಕ್ಷವು ಕುಟುಂಬ ರಾಜಕಾರಣ ಪೋಷಿಸುತ್ತಿದೆ ಎಂದು ಟೀಕಿಸಿದೆ.

ಮುಸ್ಲಿಂ ಮತಗಳು ನಿರ್ಣಾಯಕ

2024 ರ ಅಂಕಿ ಅಂಶಗಳ ಪ್ರಕಾರ ದಾವಣಗೆರೆಯಲ್ಲಿ ಒಟ್ಟು 21.20 ಲಕ್ಷ ಜನಸಂಖ್ಯೆ ಇದೆ. ನಗರ ಪ್ರದೇಶದಲ್ಲಿ ಶೇ 80.64 ರಷ್ಟು ಮತದಾರರು ಇದ್ದರೆ, ಗ್ರಾಮೀಣ ಭಾಗದಲ್ಲಿ ಶೇ19.36 ರಷ್ಟು ಮತದಾರರಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿರುವ ಒಟ್ಟು 2.21 ಲಕ್ಷ ಮತದಾರರಲ್ಲಿ ಮುಸ್ಲಿಂ ಮತಗಳ ಸಂಖ್ಯೆ 80ಸಾವಿರಕ್ಕೂ ಹೆಚ್ಚಿದ್ದು, ನಿರ್ಣಾಯಕ ಪಾತ್ರ ವಹಿಸಿದೆ.

ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿ ವಿಧಾನ ಪರಿಷತ್‌ ಸದಸ್ಯ ಅಬ್ದುಲ್ ಜಬ್ಬಾರ್, ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ. ಹುಸೇನ್ ಹಾಗೂ ಸ್ಥಳೀಯ ನಾಯಕ ಸಾದಿಕ್ ಪೈಲ್ವಾನ್ ಮಧ್ಯೆ ತೀವ್ರ ಲಾಬಿ ನಡೆದಿತ್ತು. ವಕ್ಫ್‌ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಕೂಡ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್‌ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿದ್ದರು. ಆದಾಗ್ಯೂ, ಅನುಕಂಪದ ಅಲೆ ಹಾಗೂ ಲಿಂಗಾಯತ ಮತಗಳನ್ನು ಒಂದುಗೂಡಿಸುವ ಉದ್ದೇಶದಿಂದಲೇ ಸಮರ್ಥ್‌ಗೆ ಟಿಕೆಟ್‌ ಘೋಷಿಸಲಾಗಿದೆ ಎಂಬುದು ಕಾಂಗ್ರೆಸ್‌ ನಾಯಕರ ಸಮರ್ಥನೆಯಾಗಿದೆ.

ಅಲ್ಪಸಂಖ್ಯಾತರಿಂದ ʼಕೈʼಗೆ ಬಂಡಾಯದ ಬಿಸಿ

ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್‌ಗೆ ಟಿಕೆಟ್ ಘೋಷಣೆಯ ಬೆನ್ನಲ್ಲೇ ಕಾಂಗ್ರೆಸ್ ಪಾಳಯಕ್ಕೆ ಬಂಡಾಯದ ಬಿಸಿ ತಟ್ಟಿದೆ.

ದಾವಣಗೆರೆ ದಕ್ಷಿಣದಲ್ಲಿ ಕಳೆದ ಐದು ಚುನಾವಣೆಗಳಿಂದ ಶಾಮನೂರು ಶಿವಶಂಕರಪ್ಪ ಅವರನ್ನು ಮುಸ್ಲಿಮರು ಬೆಂಬಲಿಸಿದ್ದಾರೆ. ಈಗ ಅವರ ಮೂರನೇ ತಲೆಮಾರಿಗೂ ಬೆಂಬಲ ನೀಡಬೇಕೆಂಬ ವಾದ ಸರಿಯಲ್ಲ, ನಿರ್ಣಾಯಕ ಮತ ಬ್ಯಾಂಕ್‌ ಆಗಿರುವ ಸಮುದಾಯವನ್ನು ಕಾಂಗ್ರೆಸ್‌ ಪಕ್ಷ ಕಡೆಗಣಿಸಿದೆ. ಪಕ್ಷಕ್ಕೆ ಲಿಂಗಾಯತ ಮತಗಳು ಅಷ್ಟೇನೂ ಇಲ್ಲದಿದ್ದರೂ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವ ಸಲುವಾಗಿ ನೆಪ ಹೇಳಿದೆ ಎಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಾದಿಕ್ ಪೈಲ್ವಾನ್ ಬಂಡಾಯವಾಗಿ ಸ್ಪರ್ಧೆಗಿಳಿಯಲು ನಿರ್ಧರಿಸಿದ್ದಾರೆ. ಅಲ್ಲದೇ ಎಸ್‌ಡಿಪಿಐ ವತಿಯಿಂದಲೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಮುಸ್ಲಿಂ ಮತಗಳನ್ನು ವಿಭಜಿಸಲಾಗುವುದು ಎಂದು ಎಚ್ಚರಿಕೆ ನೀಡಿರುವುದು ಕೈ ಪಾಳಯದಲ್ಲಿ ಆತಂಕ ಮೂಡಿಸಿದೆ.

ಸಮರ್ಥ್ ಶಿಕ್ಷಣ, ರಾಜಕೀಯ ಪಯಣ

ತಮಿಳುನಾಡಿನ ಕೊಡೈಕೆನಾಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಕಲಿತ ಸಮರ್ಥ್, ಉನ್ನತ ಶಿಕ್ಷಣವನ್ನು ಇಂಗ್ಲೆಂಡ್ನ ಎಕ್ಸೆಟರ್ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ವಿದೇಶದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮುಗಿಸಿ ತಾಯ್ನಾಡಿಗೆ ಮರಳಿದ ಸಮರ್ಥ್‌, ಸದ್ಯ ತಮ್ಮದೇ ಒಡೆತನದ ಬಾಪೂಜಿ ವಿದ್ಯಾಸಂಸ್ಥೆ ಮತ್ತು ಶಾಮನೂರು ಶುಗರ್ಸ್ ಆಡಳಿತ ನೋಡಿಕೊಳ್ಳುತ್ತಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ತಂದೆ ಎಸ್.ಎಸ್.ಮಲ್ಲಿಕಾರ್ಜುನ್ ಪರವಾಗಿ ಪ್ರಚಾರಕ್ಕಿಳಿಯುವ ಮೂಲಕ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ತಾಯಿ ಪ್ರಭಾ ಮಲ್ಲಿಕಾರ್ಜುನ್ ಅವರ ಪರವಾಗಿಯೂ ಚುನಾವಣಾ ಪ್ರಚಾರ ನಡೆಸಿದ್ದರು. ವಿಶೇಷವೆಂದರೆ ತಾಯಿಯ ಗೆಲುವಿಗಾಗಿ ಹರಕೆ ಹೊತಿದ್ದ ಸಮರ್ಥ್, ಬರಿಗಾಲಲ್ಲೇ ಕ್ಷೇತ್ರದಾದ್ಯಂತ ಸಂಚರಿಸಿ ತಾಯಿಯ ಗೆಲುವಿಗೆ ಶ್ರಮಿಸಿದ್ದರು. ಈಗ ತಾವೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರು ಭದ್ರಕೋಟೆಯಂತಿರುವ ದಾವಣಗೆರೆಯಲ್ಲಿ ತಾತನ ವರ್ಚಸ್ಸೇ ಸಮರ್ಥ್ ಅವರಿಗೆ ಶ್ರೀರಕ್ಷೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

“ಜನರ ಮೇಲೆ ನಮಗೆ ವಿಶ್ವಾಸ ಇದೆ. ಆಕಾಂಕ್ಷಿಗಳು ಬಹಳ ಜನ ಇದ್ದಾಗ ಗೊಂದಲ ಸಾಮಾನ್ಯ, ಆದರೆ, ಗೆಲ್ಲುವಂತಹ ಅಭ್ಯರ್ಥಿಗೆ ಅಭ್ಯರ್ಥಿ ಇರ್ತಾರೆ ಅವರಿಗೆ ಟಿಕೆಟ್ ಕೊಡುತ್ತಾರೆ. ಎಲ್ಲರೂ ನನ್ನನ್ನು ಊರಿನ ಮಗ ಅಂತ ಹೇಳ್ತಾರೆ. ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಅಭ್ಯರ್ಥಿ ಸಮರ್ಥ್ ಶಾಮನೂರು ಹೇಳಿದ್ದಾರೆ.

Read More
Next Story