
ʼಕೈʼ ಅಭ್ಯರ್ಥಿ ಸೋಲಿಸಲು ಷಡ್ಯಂತ್ರ ನಡೆಸಿದ ಮುಸ್ಲಿಂ ಮುಖಂಡರು ಯಾರು? ಭಿನ್ನಮತ ಪುಷ್ಠೀಕರಿಸಿದ ಶಾಸಕರ ಆರೋಪ
ಪಕ್ಷದ ಕೆಲ ಹಿರಿಯ ಮುಖಂಡರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ದೊಡ್ಡ ಷಡ್ಯಂತ್ರ ನಡೆಸಿದ್ದರು ಎಂಬ ಮುಸ್ಲಿಂ ಸಮುದಾಯದ ಶಾಸಕರ ಆರೋಪವು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಉಪಚುನಾವಣೆಯಲ್ಲಿ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಮತ್ತು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಗೈರುಹಾಜರಿ ನಡುವೆಯೇ, ಅಲ್ಪಸಂಖ್ಯಾತ ಸಮುದಾಯದ ಶಾಸಕರ ಈ ಆರೋಪವು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಪುಷ್ಠೀಕರಿಸಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಸ್ವತಃ ಸಚಿವ ಜಮೀರ್ ಅಹಮದ್ ಅವರು ಟಿಕೆಟ್‌ಗಾಗಿ ಹಕ್ಕೊತ್ತಾಯ ಮಾಡಿದ್ದರು. ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ನೀಡಿದ ವಾಗ್ದಾನ (ತಮ್ಮ ನಂತರ ಮುಸ್ಲಿಂ ಸಮುದಾಯಕ್ಕೆ ಟಿಕೆಟ್) ಉಳಿಸಿಕೊಳ್ಳಬೇಕು ಎಂದು ಜಮೀರ್ ಹಾಗೂ ಅಬ್ದುಲ್ ಜಬ್ಬಾರ್ ಆಗ್ರೆಹಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ಘೋಷಿಸಿತ್ತು. ಇದರಿಂದ ಜಮೀರ್ ಅಹಮದ್ ಹಾಗೂ ಅಬ್ದುಲ್ ಜಬ್ಬಾರ್ ಮುನಿಸಿಕೊಂಡು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು.
ಮುಸ್ಲಿಂ ಸಮುದಾಯದಲ್ಲೇ ಭಿನ್ನಮತ
ಮುಸ್ಲಿಂ ಸಮುದಾಯವು ತಮ್ಮ ಸಮುದಾಯಕ್ಕೇ ಟಿಕೆಟ್ ನೀಡಬೇಕು ಎಂಬ ಪಟ್ಟು ಹಿಡಿದಿದ್ದ ಹಿನ್ನೆಲೆ ಭಿನ್ನಮತ ತೀವ್ರಗೊಂಡಿತ್ತು. ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಮುಸ್ಲಿಂ ಸಮುದಾಯ ಆಗ್ರಹಿಸಿತ್ತು. ಆದರೆ, ಅಲ್ಪಸಂಖ್ಯಾತ ಸಮುದಾಯದ ನಾಯಕರ ಬೇಡಿಕೆಗೆ ಕಿವಿಗೊಡದೇ ಹೈಕಮಾಂಡ್ ನಾಯಕರು ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿದ್ದರು. ಪಕ್ಷದ ಇದರಿಂದ ಆಕ್ರೋಶಗೊಂಡ ಅಬ್ದುಲ್ ಜಬ್ಬಾರ್ ಅವರು ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯಲೇ ಇಲ್ಲ. ಸಚಿವ ಜಮೀರ್ ಅಹ್ಮದ್ ಅವರು ದಾವಣಗೆರೆಗೆ ಭೇಟಿ ನೀಡಿದರೂ ಪ್ರಚಾರದಲ್ಲಿ ತೊಡಗಿಸಿಕೊಂಡಿರಲಿಲ್ಲ. ಇದರಿಂದ ಮುಸ್ಲಿಂ ಸಮುದಾಯದ ಬಹುತೇಕ ಮಂದಿ ಕಾಂಗ್ರೆಸ್‌ಗೆ ಮತ ಚಲಾಯಿಸಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.
ಒಗ್ಗಟ್ಟು ಪ್ರದರ್ಶಿಸಲು ಪತ್ರಿಕಾಗೋಷ್ಠಿ
ಮುಸ್ಲಿಮರಲ್ಲಿ ಒಡಕು ಮೂಡಿದೆ ಎಂಬ ಮಾತುಗಳ ಬೆನ್ನಲ್ಲೇ ಮುಸ್ಲಿಂ ಸಮುದಾಯದ ʼಕೈʼ ನಾಯಕರು ಪತ್ರಿಕಾಗೋಷ್ಠಿ ನಡೆಸಿ, ಕೆಲವರ ವಿರುದ್ಧ ಷಡ್ಯಂತ್ರ್ಯ ಆರೋಪ ಮಾಡಿರುವುದು ಇದೀಗ ರಾಜಕೀಯ ಪಡಸಾಲೆಯಲ್ಲಿ ನಾನಾ ಚರ್ಚೆಗಳಿಗೆ ಕಾರಣವಾಗಿದೆ.
ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಮತ್ತು ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಯಾಸಿರ್ ಖಾನ್ ಪಠಾಣ್, ಬಲ್ಕಿಸ್ ಬಾನು, ಕೆಪಿಸಿಸಿ ಉಪಾಧ್ಯಕ್ಷರಾದ ಸಹೀದ್ ಅಹಮದ್, ಉಬೇದುಲ್ಲಾ ಷರಿಫ್, ಕೆಪಿಸಿಸಿ ಕಾರ್ಯದರ್ಶಿ ಅಘಾ ಸುಲ್ತಾನ್, ಮಕಂದರ್, ಚಾಂದ್ ಪಾಷ ಮುಂತಾದವರು ಉಪಸ್ಥಿತರಿದ್ದರು.
ಸಲೀಂ ಅಹ್ಮದ್ ಮಾತನಾಡಿ, ಪಕ್ಷದ ಒಂದಷ್ಟು ಹಿರಿಯ ಮುಖಂಡರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ದೊಡ್ಡ ಷಡ್ಯಂತ್ರ ನಡೆಸಿದ್ದರು. ಪಕ್ಷದೊಳಗಿನ ಬಂಡಾಯವು ಅಭ್ಯರ್ಥಿಯನ್ನು ಸೋಲಿಸುವ ತಂತ್ರದವರೆಗೂ ಹೋಗಿತ್ತು ದೂರಿದ್ದಾರೆ.
ನೇರವಾಗಿ ಸಚಿವ ಜಮೀರ್ ಅಹ್ಮದ್ ಅವರ ಹೆಸರು ಪ್ರಸ್ತಾಪಿಸದಿದ್ದರೂ, ಸಲೀಂ ಅವರ ಮಾತುಗಳು ಅವರಡೆಗೆ ಬೊಟ್ಟು ಮಾಡಿದ್ದು ಸ್ಪಷ್ಟವಾಗಿತ್ತು. ಹೈಕಮಾಂಡ್ ಸಭೆಯಲ್ಲಿ ಎಲ್ಲರ ಒಪ್ಪಿಗೆ ಪಡೆದೇ ಸಮರ್ಥ್ ಅವರಿಗೆ ಟಿಕೆಟ್ ನೀಡಲಾಗಿತ್ತು ಎಂಬುದನ್ನು ತಿಳಿಸಿದರು.
ಜಮೀರ್ ಅಹ್ಮದ್ ವಿರುದ್ಧ ಅಸಮಾಧಾನ
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಟಿಕೆಟ್ ಹಂಚಿಕೆಯ ವೇಳೆ ನಡೆದ ಎಡವಟ್ಟುಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಲ್ಪಸಂಖ್ಯಾತ ನಾಯಕರೆಲ್ಲರೂ ಸೇರಿ ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ನೀಡಬೇಕೆಂದು ತೀರ್ಮಾನಿಸಲಾಗಿತ್ತು. ಸಭೆಯಲ್ಲಿ ಸಚಿವರಾದ ಜಮೀರ್ ಅಹ್ಮದ್ ಖಾನ್, ರಹೀಂಖಾನ್ ಸೇರಿದಂತೆ ಇತರೆ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು. ಆದರೆ, ಜಬ್ಬಾರ್ ಅವರಿಗೆ ಕ್ಷೇತ್ರದಲ್ಲಿ ಜನಪ್ರಿಯತೆ ಇಲ್ಲ, ಗೆಲ್ಲುವ ಸಾಮರ್ಥ್ಯದ ಬಗ್ಗೆ ಸಂಶಯವಿದೆ ಎಂಬ ವರದಿ ಬಂದಿತ್ತು. ಕೇವಲ ಒಬ್ಬರೇ ಅಭ್ಯರ್ಥಿಯ ಹೆಸರನ್ನು ಒತ್ತಾಯಿಸುವ ಬದಲು, ನಾಲ್ಕೈದು ಹೆಸರನ್ನು ನೀಡಬೇಕಿತ್ತು ಅಥವಾ ಸ್ಥಳೀಯ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೇ ಸೂಕ್ತ ಮುಸ್ಲಿಂ ಅಭ್ಯರ್ಥಿ ಸೂಚಿಸಲು ಬಿಡಬೇಕಿತ್ತು. ಈ ಕಾರ್ಯತಂತ್ರದ ವೈಫಲ್ಯವೇ ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೈತಪ್ಪಲು ಮುಖ್ಯ ಕಾರಣ ಎಂದು ಹೇಳಿದರು.
ಪಕ್ಷದ ವೇದಿಕೆಯಲ್ಲಿ ಟಿಕೆಟ್ ನಿರ್ಧಾರಕ್ಕೆ ಒಪ್ಪಿಗೆ ನೀಡಿ, ಈಗ ಹೊರಗಡೆ ಬಂದು ಸಮುದಾಯಕ್ಕೆ ದ್ರೋಹವಾಗಿದೆ ಎಂಬುದಾಗಿ ಬಿಂಬಿಸುವುದು ಅಥವಾ ಅಂತರ ಕಾಯ್ದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಇದು ನೇರವಾಗಿ ಪ್ರಚಾರದಿಂದ ದೂರ ಉಳಿದ ಜಮೀರ್ ಅಹ್ಮದ್ ಮತ್ತು ಅಸಮಾಧಾನ ವ್ಯಕ್ತಪಡಿಸಿದ ಇತರ ನಾಯಕರಿಗೆ ನೀಡಿದ ತಿರುಗೇಟು ಆಗಿದೆ. ಅಲ್ಲದೇ, ಮುಖ್ಯಮಂತ್ರಿ ಮತ್ತು ಹೈಕಮಾಂಡ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಪ್ಪಿಕೊಂಡ ನಾಯಕರು, ಪ್ರಚಾರದ ವೇಳೆ ಕೈಕೊಟ್ಟಿದ್ದು ದುರುದ್ದೇಶಪೂರ್ವಕ ಇರಬಹುದು ಎಂಬ ಭಾವನೆ ಮೂಡಿದೆ ಎಂಬ ಸಂದೇಶವನ್ನು ನೀಡಿದರು.
ಬಿಜೆಪಿ ಮತ್ತು ಎಸ್‌ಡಿಪಿಐ ಪಕ್ಷಗಳು ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ದ್ರೋಹ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದ ಪ್ರಚಾರ ಖಂಡನೀಯ. ಅಲ್ಪಸಂಖ್ಯಾತ ಮತದಾರರು ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಹಿರಿಯ ನಾಯಕರ ಅಸಹಕಾರವಿದ್ದರೂ, ಸಮುದಾಯದ ಸಾಮಾನ್ಯ ಮತದಾರರು ಮತ್ತು ಸಕ್ರಿಯ ಕಾರ್ಯಕರ್ತರು ಪಕ್ಷವನ್ನು ಕೈಬಿಟ್ಟಿಲ್ಲ ಎಂದು ಉಭಯ ನಾಯಕರು ಅಭಿಪ್ರಾಯಪಟ್ಟರು.
ರಂಜಾನ್ ಹಬ್ಬದಂದು ಸಭೆ
ರಂಜಾನ್ ಹಬ್ಬದ ದಿನದಂದೇ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡ ಸಭೆಯನ್ನು ಕರೆಯಲಾಗಿತ್ತು. ಜವಾಬ್ದಾರಿ ನೀಡಿದ ಮೇಲೆ ಪ್ರತಿಯೊಬ್ಬ ಅಲ್ಪಸಂಖ್ಯಾತ ಶಾಸಕರು ದಾವಣಗೆರೆಗೆ ತೆರಳಿ ಕೆಲಸ ಮಾಡಿದ್ದಾರೆ. ಸಮುದಾಯದ ದ್ರೋಹಿಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳುವುದು ಸರಿಯಲ್ಲ. ಒಳಗಡೆ ಒಪ್ಪಿಕೊಂಡು ಹೊರಗಡೆ ವಿರೋಧ ಮಾಡುವುದು ಸರಿಯಲ್ಲ. ಹೀಗಿದ್ದರೆ ಮೊದಲೇ ಒಪ್ಪಿಕೊಳ್ಳಬಾರದಿತ್ತು. ಬಿಜೆಪಿ, ಆರ್‌ಎಸ್‌ಎಸ್ ಅಲ್ಪಸಂಖ್ಯಾತರ ವಿರುದ್ದ ದ್ವೇಷ ರಾಜಕಾರಣ ಮಾಡುತ್ತಿವೆ. ಇವರ ಹುನ್ನಾರದ ವಿರುದ್ದ ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಕಾಂಗ್ರೆಸ್ ನಮ್ಮ ವಿರುದ್ದವಾಗಿದೆ ಎಂಬುದನ್ನು ಅಲ್ಪಸಂಖ್ಯಾತರು ಯಾರೂ ಒಪ್ಪುವುದಿಲ್ಲ. ಬಿಜೆಪಿ ಷಡ್ಯಂತ್ರ ಮಾಡಿ ಈ ರೀತಿಯ ವಿಚಾರ ಬಿತ್ತುತ್ತಿದೆ. ಕಾಂಗ್ರೆಸ್ ಪಕ್ಷವೇ ದ್ರೋಹ ಮಾಡಿದೆ ಎಂದು ಬಿಂಬಿಸಲು ಹೊರಟಿದ್ದು ಸರಿಯಾದ ರಾಜಕೀಯವಲ್ಲ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ನಾಯಕರು ಸಹ ದಾವಣಗೆರೆಗೆ ತೆರಳಿ ಶ್ರಮಿಸಿದ್ದಾರೆ. ಮುಖಂಡರಾದ ಹ್ಯಾರಿಸ್, ತನ್ವಿರ್ ಸೇಠ್ ಅವರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಎಂದರು.

