
ಜಮೀರ್‌ಗೆ ಚೆಕ್‌ಮೇಟ್! ಸಿದ್ದರಾಮಯ್ಯ-ಡಿಕೆಶಿ ನಡುವೆ ಶುರುವಾಯ್ತು ಮುಸ್ಲಿಂ ನಾಯಕತ್ವದ ಹಗ್ಗಜಗ್ಗಾಟ!
ಜಮೀರ್ ಅವರ ಈ ಗೈರುಹಾಜರಿಯನ್ನೇ ತಮ್ಮ ಅಸ್ತ್ರವಾಗಿ ಬಳಸಿಕೊಂಡ ಡಿ.ಕೆ. ಶಿವಕುಮಾರ್, ಶಾಸಕರಾದ ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್ ಮತ್ತು ಎನ್.ಎ. ಹ್ಯಾರಿಸ್ ಅವರನ್ನು ಮುನ್ನೆಲೆಗೆ ತಂದಿದ್ದರು.
ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಇದೀಗ ಮುಸ್ಲಿಂ ಸಮುದಾಯದ ನಾಯಕತ್ವದ ವಿಚಾರವಾಗಿ ಒಳಸ್ತರದಲ್ಲಿ ತೀವ್ರ ಪೈಪೋಟಿ ಹಾಗೂ ಹಗ್ಗಜಗ್ಗಾಟಗಳು ಶುರುವಾಗಿವೆ. ಇದುವರೆಗೂ ರಾಜ್ಯದಲ್ಲಿ "ನಾನೇ ಅಲ್ಪಸಂಖ್ಯಾತರ ಏಕಮೇವ ನಾಯಕ" ಎಂದು ಬಿಂಬಿಸಿಕೊಳ್ಳುತ್ತಿದ್ದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪ್ರಾಬಲ್ಯಕ್ಕೆ ಇದೀಗ ಸ್ವಪಕ್ಷೀಯರಿಂದಲೇ ದೊಡ್ಡ ಮಟ್ಟದ ಸವಾಲು ಎದುರಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆಯಲ್ಲಿ ಜಮೀರ್ ಅವರು ತೋರಿದ ಅಸಡ್ಡೆಯನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡು ಅವರ ಬದಲಿಗೆ ಪರ್ಯಾಯ ನಾಯಕರೊಬ್ಬರನ್ನು ಸೃಷ್ಟಿಸುವ ಕಸರತ್ತನ್ನು ಕೈಪಡೆಯ ಪ್ರಮುಖ ನಾಯಕರು ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭವನ್ನು ಬಳಸಿಕೋಂಡು, ಸಿದ್ದರಾಮಯ್ಯ ಅವರ ಪರಮಾಪ್ತ ಜಮೀರ್ ಅವರನ್ನು ಹಿಂದಿಕ್ಕಿ, ಮುಸ್ಲಿಂ ಸಮುದಾಯದ ಮುಂಚೂಣಿ ನಾಯಕರಾಗಿ ಹೊರಹೊಮ್ಮಲು ಪಕ್ಷದ ಒಳಗೇ ಹಲವು ಪ್ರಭಾವಿ ಮುಖಂಡರು ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ ಎಂದೂ ಹೇಳಲಾಗಿದೆ. ವಿಶೇಷವೆಂದರೆ, ಈ ಆಂತರಿಕ ಪೈಪೋಟಿಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪರೋಕ್ಷ ಬೆಂಬಲವಿದೆ ಎಂಬುದೇ ಚರ್ಚೆಯ ಪ್ರಮುಖ ವಿಷಯ.
ಸಿಎಂ ಆಪ್ತವಲಯದ ಜಮೀರ್‌ಗೆ ಡಿ.ಕೆ.ಶಿ ಬ್ರೇಕ್?
ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ವಲಯದಲ್ಲಿ ಕೆಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಾಳೆಯ ಸೇರಿದ ಬಳಿಕ ರಾಜ್ಯಾದ್ಯಂತ ಸುತ್ತಾಡಿ, ಅಲ್ಪಸಂಖ್ಯಾತ ಸಮುದಾಯದ ಪ್ರಶ್ನಾತೀತ ನಾಯಕ ತಾನೇ ಎಂಬ ಇಮೇಜ್ ಅನ್ನು ಅವರು ಕಟ್ಟಿಕೊಂಡಿದ್ದಾರೆ. ಯಾವುದೇ ವೇದಿಕೆಯಲ್ಲಾದರೂ ಮುಸ್ಲಿಂ ಸಮುದಾಯದ ಪರವಾಗಿ ತಾನೇ ಧ್ವನಿಯೆತ್ತುತ್ತೇನೆ ಎಂದು ಸದಾ ಹೇಳುತ್ತಿರುತ್ತಾರೆ. ಇಷ್ಟೆಲ್ಲ ಮುಂದುವರಿದಿರುವ ಜಮೀರ್ ಅವರಿಗೆ ಬ್ರೇಕ್ ಹಾಕಲು ಡಿ.ಕೆ. ಶಿವಕುಮಾರ್ ರಣತಂತ್ರ ರೂಪಿಸಿದಂತಿದೆ ಎಂದು ಕಾಂಗ್ರೆಸ್ ಒಳಗಿನ ಮೂಲಗಳು ತಿಳಿಸಿವೆ. ಸಿಎಂ ಕ್ಯಾಂಪ್‌ನ ಬಲ ಕುಗ್ಗಿಸುವುದು ಈ ಕಾರ್ಯತಂತ್ರದಲ್ಲಿ ಅವರ ಎರಡನೇ ಉದ್ದೇಶ.
ದಾವಣಗೆರೆ ಉಪಚುನಾವಣೆಯಲ್ಲಿ ಸಿಕ್ಕ ಅವಕಾಶ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಈ ನಾಯಕತ್ವದ ಫೈಟ್‌ಗೆ ವೇದಿಕೆಯೊದಗಿಸಿದೆ. ಈ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಜಮೀರ್ ಅಹ್ಮದ್ ಖಾನ್, ಪ್ರಚಾರದ ಅಖಾಡದಿಂದ ಅಂತರ ಕಾಯ್ದುಕೊಂಡಿದ್ದರು. ಒಂದು ದಿನ ಮಾತ್ರ ನಾಮ್‌ಕೇವಾಸ್ತೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಜಮೀರ್, ಅಭ್ಯರ್ಥಿ ಸಮರ್ಥ್ ಅವರ ತಂದೆ ಹಾಗೂ ಹಾಲಿ ಸರ್ಕಾರದ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ಅವರನ್ನು 'ಚಡ್ಡಿ ದೋಸ್ತ್' ಎಂದು ಬಿಗಿದಪ್ಪಿ ವಾಪಸ್ ಬಂದಿದ್ದಾರೆ. ಯಾವುದೇ ಬಹಿರಂಗ ಪ್ರಚಾರ ಸಭೆಗಳಲ್ಲಿ ಭಾಗವಹಿಸದೇ, ಮುಸ್ಲಿಂ ಮತಗಳು 'ಕೈ' ಬಿಟ್ಟು ಹೋಗದಂತೆ ನೋಡಿಕೊಳ್ಳದೇ ಪಕ್ಷಕ್ಕೆ ಪರೋಕ್ಷವಾಗಿ ಕೈಕೊಟ್ಟಿದ್ದರು. ತಾನು ಪ್ರಚಾರಕ್ಕೆ ಹೋಗದಿರುವ ಮೂಲಕ ತಮ್ಮನ್ನು ಏಕವಚನದಲ್ಲಿ ಕರೆದ ಮಲ್ಲಿಕಾರ್ಜುನ್ ಹಾಗೂ ನಿರ್ಲಕ್ಷಿಸಿದ ಹಿರಿಯ ಮುಖಂಡರಿಗೆ ಪಾಠ ಕಲಿಸಬಹುದು ಎಂದು ಅವರು ಭಾವಿಸದಂತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಮುಂಚೂಣಿಗೆ ಬಂದ ರಿಜ್ವಾನ್, ಸಲೀಂ, ಹ್ಯಾರಿಸ್
ಜಮೀರ್ ಅವರ ಈ ಗೈರುಹಾಜರಿಯನ್ನೇ ತಮ್ಮ ಅಸ್ತ್ರವಾಗಿ ಬಳಸಿಕೊಂಡ ಡಿ.ಕೆ. ಶಿವಕುಮಾರ್, ತಕ್ಷಣವೇ 'ಪ್ಲಾನ್ ಬಿ' ಜಾರಿಗೊಳಿಸಿದ್ದಾರೆ. ಜಮೀರ್ ಅನುಪಸ್ಥಿತಿಯಲ್ಲಿ ಅಲ್ಪಸಂಖ್ಯಾತರ ಮನವೊಲಿಸುವ ಸಂಪೂರ್ಣ ಜವಾಬ್ದಾರಿಯನ್ನು ಶಾಸಕರಾದ ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್ ಮತ್ತು ಎನ್.ಎ. ಹ್ಯಾರಿಸ್ ಅವರಿಗೆ ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಗೆಳೆಯ ಹಾಗೂ ಮಾಜಿ ಸಚಿವ ದಿವಂಗತ ಎಚ್ ವೈ ಮೇಟಿ ಅವರ ಕ್ಷೇತ್ರದಲ್ಲಿ ಅವರ ಪುತ್ರ ಉಮೇಶ್ ಮೇಟಿಯವರನ್ನು ಗೆಲ್ಲಿಸಲು ಆ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದ ಸಂದರ್ಭ ಬಳಸಿ ಡಿಕೆಶಿ ತಂತ್ರ ಹೂಡಿದ್ದರು. ಡಿಸಿಎಂ ಬೆಂಬಲದೊಂದಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ ಈ ಮೂವರು ಮುಸ್ಲಿಂ ನಾಯಕರು, ಮತದಾರರ ಅಸಮಾಧಾನ ತಗ್ಗಿಸಲು ಯಶಸ್ವಿಯಾಗಿದ್ದರು. ಜಮೀರ್ ಇಲ್ಲದಿದ್ದರೂ ಸಮುದಾಯವನ್ನು ಒಗ್ಗೂಡಿಸಬಹುದು ಹಾಗೂ ಪಕ್ಷದ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ರವಾನಿಸಲಾಗಿತ್ತು.
ಮರಳಿ ಅಖಾಡಕ್ಕಿಳಿದ ಜಮೀರ್!
ತನ್ನ ಅನುಪಸ್ಥಿತಿಯ ಹೊರತಾಗಿಯೂ ದಾವಣಗೆರೆ ಉಪಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗಿದ್ದನ್ನು ಗಮನಿಸಿದ ಜಮೀರ್‌ಗೆ ಆತಂಕ ಶುರುವಾಗಿತ್ತು ಎನ್ನಲಾಗಿದೆ. ತಮಗೆ ಪರ್ಯಾಯವಾಗಿ ಸಲೀಂ, ರಿಜ್ವಾನ್ ಹಾಗೂ ಹ್ಯಾರಿಸ್ ಅವರನ್ನು ಮೇಲೆತ್ತುವ ಪ್ರಯತ್ನಗಳು ನಡೆಯುತ್ತಿರುವುದನ್ನು ಅರಿತ ಅವರು, ತನ್ನ ರಾಜಕೀಯ ಅಸ್ತಿತ್ವಕ್ಕೆ ಹಾಗೂ 'ಮುಸ್ಲಿಂ ನಾಯಕ' ಎಂಬ ಇಮೇಜ್‌ಗೆ ಎಲ್ಲಿ ಕುತ್ತು ಬರುತ್ತದೆಯೋ ಎಂದು ವಿಚಲಿತರಾಗಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ತಮ್ಮ ಹಳೆಯ ಪಟ್ಟುಗಳನ್ನು ಬದಿಗಿಟ್ಟು ಕೇರಳ ಚುನಾವಣೆಯ ಪ್ರಚಾರದ ನಡುವೆ ದಿಢೀರನೆ ಮತ್ತೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ತಮ್ಮ ಹಳೆಯ ಪಟ್ಟುಗಳನ್ನು ಬದಿಗಿಟ್ಟು ದಿಢೀರನೆ ಮತ್ತೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು ಎನ್ನಲಾಗಿದೆ. ಆದರೆ, ಹೆಚ್ಚು ಆಸ್ಥೆ ತೋರದೆ ವಾಪಸ್ ಹೊರಟಿದ್ದರು.
ಈ ಎಲ್ಲ ಬೆಳವಣಿಗೆಗಳಿಂದ ಕಾಂಗ್ರೆಸ್ ಪಕ್ಷದೊಳಗೆ ಮುಸ್ಲಿಂ ನಾಯಕತ್ವಕ್ಕಾಗಿ ನಡೆಯುತ್ತಿರುವ ಈ ಶೀತಲ ಸಮರ ಮುನ್ನೆಲೆಗೆ ಬಂದಿದೆ ಎನ್ನಲಾಗಿದೆ. ದಾವಣಗೆರೆ ದಕ್ಷಿಣ ಉಪಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ, ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕತ್ವದ ಹಗ್ಗಜಗ್ಗಾಟ ಮತ್ತಷ್ಟು ಮುಂದುವರಿಯುವ ಸಾಧ್ಯತೆಗಳಿವೆ.

