
ಸಿಎಂ ಸಿದ್ದರಾಮಯ್ಯ
"ಕುರಿ ಕಾಯುವವನು ಸಿಎಂ ಆಗಿದ್ದೇ ಇವರಿಗೆ ಹೊಟ್ಟೆಕಿಚ್ಚು": ಸಿದ್ದರಾಮಯ್ಯ ಮಾರ್ಮಿಕ ಪೋಸ್ಟ್
ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಕಿರುವ ಸಂದೇಶ ಮತ್ತೊಮ್ಮೆ ನಾಯಕತ್ವ ಬಿಕ್ಕಟ್ಟು ಅಥವಾ ಅಧಿಕಾರದ ಹಸ್ತಾಂತರದ ಮುನ್ಸೂಚನೆಯೇ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಅಧಿಕಾರ ಹಸ್ತಾಂತರದ ಚರ್ಚೆ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯೊಂದು ಭಾರಿ ಸಂಚಲನ ಮೂಡಿಸಿದೆ.
ಇತ್ತೀಚೆಗಷ್ಟೇ ಅಸ್ಸಾಂ ಚುನಾವಣೆ ನಿಮಿತ್ತ ದೆಹಲಿಗೆ ತೆರಳಿದ್ದ ಸಿಎಂ, ಹೈಕಮಾಂಡ್ ವರಿಷ್ಠರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಭೇಟಿಯ ನಂತರ ರಾಜ್ಯದಲ್ಲಿ ನಾಯಕತ್ವದ ಬಿಕ್ಕಟ್ಟು ತಿಳಿಯಾಗಿದೆ ಎಂಬ ಭರವಸೆಯೊಂದಿಗೆ ವಾಪಸ್ ಆಗಿದ್ದ ಸಿಎಂ, ಇದೀಗ ಶುಕ್ರವಾರ (ಫೆ.20) ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂದೇಶವು "ಅಧಿಕಾರ ಹಸ್ತಾಂತರದ ಮುನ್ಸೂಚನೆಯೇ?" ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಸಿಎಂ ಸಂದೇಶದ ಸಾರಾಂಶ
"ಕುರಿ ಕಾಯುತ್ತಾ ಇರಬೇಕಾದವನು ಮುಖ್ಯಮಂತ್ರಿ ಆಗಿಬಿಟ್ಟನಲ್ಲ ಎಂಬ ಅಸೂಯೆ ಕೆಲವರಿಗಿದೆ. 'ಇವನನ್ನು' ರಾಜಕೀಯವಾಗಿ ಮುಗಿಸಿಬಿಟ್ಟರೆ ತಮ್ಮ ಹಾದಿ ಸುಗಮವಾಗುತ್ತದೆ ಎಂಬ ಭಾವನೆ ಪಟ್ಟಭದ್ರ ಹಿತಾಸಕ್ತಿಗಳಲ್ಲಿದೆ. ಆರ್ಥಿಕ ತಜ್ಞರಿಗೆ ಸರಿಸಮನಾಗಿ ನಿಂತು ಸಾಲು ಸಾಲು ಬಜೆಟ್ ಮಂಡಿಸಿ ಶಹಬ್ಬಾಸ್‌ಗಿರಿ ಗಳಿಸುತ್ತಿದ್ದಾನಲ್ಲಾ ಎಂಬ ಅಸಹನೆ ಅವರೊಳಗೆ ದ್ವೇಷವಾಗಿ ಕುದಿಯುತ್ತಿದೆ," ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.
ಇತಿಹಾಸದ ಉಲ್ಲೇಖದೊಂದಿಗೆ ವಿರೋಧಿಗಳಿಗೆ ಟಾಂಗ್
ಮುಂದುವರಿದು ಅವರು, "ಸಾಮಾಜಿಕ ಬದಲಾವಣೆಗೆ ಕೈ ಹಾಕಿದವರೆಲ್ಲರ ವಿರುದ್ಧ ಇಂತಹ ಷಡ್ಯಂತ್ರಗಳು ನಡೆದಿರುವುದನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಪೆರಿಯಾರ್, ನಾರಾಯಣ ಗುರು ಹಾಗೂ ಕನಕದಾಸರಂತಹ ಮಹಾಪುರುಷರನ್ನು ಹಣಿಯುವ, ದಮನಿಸುವ ಸಂಚುಗಳು ಅಂದಿನಿಂದಲೂ ನಡೆಯುತ್ತಲೇ ಬಂದಿವೆ. ಬಸವಣ್ಣನವರು ಜಾತಿ ವಿನಾಶಕ್ಕೆ ಪ್ರಯತ್ನಿಸಿ, ತಬ್ಬಲಿ ಜಾತಿಗಳಿಗೆ ಸ್ವಾಭಿಮಾನದ ದೀಕ್ಷೆ ನೀಡಿದ್ದಕ್ಕಾಗಿಯೇ ಅವರನ್ನು ವ್ಯವಸ್ಥಿತ ಸಂಚಿನ ಮೂಲಕ ಮುಗಿಸಲಾಯಿತು," ಎಂದು ಹೇಳುವ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರ ಹಸ್ತಾಂತರದ ಮುನ್ಸೂಚನೆಯೇ?
ದೆಹಲಿ ಪ್ರವಾಸ ಮುಗಿಸಿ ಬಂದ ಮೇಲೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರು ಮಾಧ್ಯಮಗಳ ಮುಂದೆ ಅತ್ಯಂತ ಭರವಸೆಯ ಮಾತುಗಳನ್ನಾಡಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರ ಈ 'ಭಾವನಾತ್ಮಕ ಪೋಸ್ಟ್' ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ. ಬಜೆಟ್ ಅಧಿವೇಶನದ ನಂತರ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಥವಾ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆಯೇ ಎಂಬ ಚರ್ಚೆಗಳು ಈಗ ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ.

