
ಕುರ್ಚಿ ಕದನ| ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸು
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಮುನಿಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವಿನ 'ಕುರ್ಚಿ' ಕದನವು ಮತ್ತೊಮ್ಮೆ ಇಬ್ಬರ ಮಧ್ಯೆ ಮುನಿಸಿಗೆ ಕಾರಣವಾಗಿದೆ. ಇಬ್ಬರೂ ನಾಯಕರು ಕಳೆದೊಂದು ವಾರದಿಂದ ನಾನೊಂದು ತೀರ, ನೀನೊಂದು ತೀರ ಎನ್ನುವಂತೆ ಪರಸ್ಪರ ಮುನಿಸಿಗೆ ಶರಣಾಗಿದ್ದಾರೆ.
ಅಧಿಕಾರ ಹಂಚಿಕೆ ಸೂತ್ರದಡಿ ಸಿಎಂ ಪಟ್ಟಕ್ಕಾಗಿ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದು ಹೈಕಮಾಂಡ್ ಕದ ತಟ್ಟಿದರೆ, ಕುರ್ಚಿ ಬಿಟ್ಟುಕೊಡಲು ಒಲ್ಲದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಣದ ಶಾಸಕರನ್ನು ʼವಿದೇಶ ಪ್ರವಾಸʼಕ್ಕೆ ಕಳುಹಿಸುವ ಮೂಲಕ ಠಕ್ಕರ್ ನೀಡಿದ್ದಾರೆ.
ರಾಜ್ಯ ಸರ್ಕಾರವನ್ನು ಅಸ್ತಿತ್ವಕ್ಕೆ ತರುವಾಗ 'ಜೋಡೆತ್ತು'ಗಳಂತೆ ಕಾಣಿಸಿಕೊಳ್ಳುತ್ತಿದ್ದ ಈ ಇಬ್ಬರೂ ನಾಯಕರ ಮಧ್ಯೆ ಕುರ್ಚಿ ಕದನವು ಆಗಿಂದಾಗ್ಗೆ ಕಲಹ ಉಂಟು ಮಾಡುತ್ತಿದೆ. ಡಿಕೆಶಿ ಹೈಕಮಾಂಡ್ ಭೇಟಿಯ ಬಳಿಕ ಸಿಎಂ-ಡಿಸಿಎಂ ಪರಸ್ಪರ ದೂರವಾಗಿದ್ದು ಇಬ್ಬರು ಇತ್ತೀಚಿನ ನಡವಳಿಕೆಗಳಿಂದ ಬಯಲಾಗುತ್ತಿದೆ.
ಅಪರೂಪಕ್ಕೊಮ್ಮೆ ಔಪಚಾರಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರೂ, ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿರುವಾಗಲೇ "ಅಧಿಕಾರ ಹಂಚಿಕೆ"ಯ ಪ್ರಸ್ತಾವವೂ ಮುನ್ನೆಲೆಗೆ ಬಂದಿರುವ ಹಿನ್ನೆಲೆ ಚಟುವಟಿಕೆಗಳು ಗರಿಗೆದರಿವೆ. ಗಡುವು ಸಮೀಪಿಸುತ್ತಿರುವುದರಿಂದ ಇಬ್ಬರ ಮೌನವು ಒಂದು ದೊಡ್ಡ ರಾಜಕೀಯ ಬಿರುಗಾಳಿಯ ಮುನ್ಸೂಚನೆಯಂತೆ ಕಾಣುತ್ತಿದೆ. ಬಾಹ್ಯವಾಗಿ ಇಬ್ಬರೂ ನಾಯಕರು "ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ನಾವಿಬ್ಬರೂ ಒಂದೇ" ಎಂದು ಹೇಳುತ್ತಿದ್ದರೂ, ಆಂತರಿಕವಾಗಿ ವೈಮನಸ್ಸು ಹೆಚ್ಚಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಏನಿದು ಮುನಿಸು?
ಡಿಕೆಶಿ ಹೈಕಮಾಂಡ್ ಭೇಟಿ ಹಾಗೂ ಸಿಎಂ ಅವರು ಶಾಸಕರನ್ನು ವಿದೇಶಕ್ಕೆ ಕಳುಹಿಸುತ್ತಿರುವ ಪ್ರಹಸನಗಳು ಆರಂಭವಾದ ಬಳಿಕ ಇಬ್ಬರೂ ನಾಯಕರು ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಎರಡು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಂಡರೂ ಪರಸ್ಪರ ಮಾತನಾಡದೇ ಮೌನಕ್ಕೆ ಜಾರಿದ್ದರು.
ಈ ಇಬ್ಬರು ನಾಯಕರ ಮುನಿಸು ಪಕ್ಷದ ಶಾಸಕರು ಮತ್ತು ಮುಖಂಡರಲ್ಲಿ ಮತ್ತೆ ಅಸಮಧಾನಕ್ಕೆ ಕಾರಣವಾಗಿದೆ. ಇದರಿಂದ ಎರಡು ಬಣಗಳ ಶಾಸಕರು, ಸಚಿವರು ಹಾಗೂ ಕಾರ್ಯಕರ್ತರು ಕೂಡ ಪರಸ್ಪರ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಎದುರಾಗಿದೆ. "ನಮ್ಮ ನಾಯಕರೇ ಸಿಎಂ ಆಗಬೇಕು" ಎಂಬ ಜಿದ್ದಿಗೆ ಬಿದ್ದಿರುವ ಶಾಸಕರ ಎರಡು ತಂಡಗಳು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿವೆ. ಶಾಸಕರಾದ ಇಕ್ಬಾಲ್ ಹುಸೇನ್, ಎಚ್.ಸಿ. ಬಾಲಕೃಷ್ಣ, ಗಾಣಿಗ ರವಿ ಮೊದಲಾದವರು ಡಿಸಿಎಂ ಶಿವಕುಮಾರ್ ಪರ ಬ್ಯಾಟಿಂಗ್ ಮಾಡುತ್ತಿದ್ದರೆ; ಸಚಿವ ಎಚ್.ಸಿ. ಮಹದೇವಪ್ಪ, ಬೈರತಿ ಸುರೇಶ್, ಹರೀಶ್ ಗೌಡ ಮತ್ತಿತರರು ಸಿಎಂ ಸಿದ್ದರಾಮಯ್ಯ ಪರ ವಕಾಲತು ವಹಿಸುತ್ತಿದ್ದಾರೆ.
ಸಿಎಂ-ಡಿಸಿಎಂ ದೂರ-ದೂರ
ಫೆ. 10ರಂದು ನಡೆದ ಬಜೆಟ್ ಪೂರ್ವಭಾವಿ ಸಭೆಗೆ ಡಿ.ಕೆ. ಶಿವಕುಮಾರ್ ಗೈರಾಗಿದ್ದರು. ವಿಶೇಷವೆಂದರೆ, ಅಂದು ಡಿಕೆಶಿಯವರೇ ಉಸ್ತುವಾರಿ ವಹಿಸಿಕೊಂಡಿರುವ ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳಬಗ್ಗೆ ಚರ್ಚೆಯಾಗಿತ್ತು. ಆದರೆ, ಡಿಕೆಶಿ ಅವರು ಸಭೆಗೆ ಹಾಜರಾಗದೇ ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು.
ಫೆ. 17ರಂದು ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಣದ ಸುಮಾರು 27 ಶಾಸಕರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿದ್ದರು. ಈ ಪ್ರವಾಸದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮಾಹಿತಿ ಇರಲಿಲ್ಲ. "ಈ ಪ್ರವಾಸದ ಬಗ್ಗೆ ನನಗೇನೂ ಗೊತ್ತಿಲ್ಲ, ಮಾಧ್ಯಮಗಳಿಂದಲೇ ತಿಳಿದುಕೊಂಡೆ" ಎಂದು ಡಿಕೆಶಿಯೇ ಹೇಳಿಕೆ ನೀಡಿದ್ದು ಇಬ್ಬರ ನಡುವಿನ ಸಮನ್ವಯದ ಕೊರತೆಯನ್ನು ತೋರಿಸಿದೆ. ಸಿಎಲ್‌ಪಿ (CLP) ಸಭೆ ಕರೆಯುವಂತೆ ಡಿಕೆಶಿ ಒತ್ತಡ ಹೇರುವುದನ್ನು ತಪ್ಪಿಸಲು ಸಿಎಂ ಬಣ ಈ ತಂತ್ರ ಹೂಡಿದೆ ಎನ್ನಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಇಬ್ಬರೂ ನಾಯಕರು ಪ್ರತ್ಯೇಕ ಸಭೆಗಳನ್ನು ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಬಜೆಟ್ ಸಿದ್ಧತೆಯಲ್ಲಿ ತೊಡಗಿದ್ದರೆ, ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಭೇಟಿಗಾಗಿ ಪದೇ ಪದೆ ದೆಹಲಿಗೆ ಹೋಗುತ್ತಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಅಕ್ಕಪಕ್ಕ ಕುಳಿತಿದ್ದರೂ ಪರಸ್ಪರ ಮಾತನಾಡಿದ್ದು ವಿರಳ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, "ಇಬ್ಬರ ನಡುವೆ ಯುದ್ಧ ನಡೆಯುತ್ತಿದೆ" ಎಂದು ಲೇವಡಿ ಮಾಡಿದಾಗಲೂ ಕೇವಲ ನಗುವಿನ ಮೂಲಕ ಪ್ರತಿಕ್ರಿಯಿಸಿದರೇ ಹೊರತು ಚರ್ಚೆಯಲ್ಲಿ ತೊಡಗಲಿಲ್ಲ.
ಸಿದ್ದರಾಮಯ್ಯ ಆಪ್ತ ಸಚಿವ ಎಚ್.ಸಿ. ಮಹದೇವಪ್ಪ "ಬಾಲವು ನಾಯಿಯನ್ನು ಅಲ್ಲಾಡಿಸಲು ಸಾಧ್ಯವೇ?" ಎಂಬ ಹೇಳಿಕೆ ನೀಡಿದ್ದು ಡಿಕೆಶಿ ಬಣವನ್ನು ಕೆರಳಿಸಿತ್ತು. ಇದರಿಂದ ಶೀತಲ ಸಮರ (Cold War) ಇನ್ನಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಇನ್ನು ಮಾಧ್ಯಮಗೋಷ್ಠಿಯಲ್ಲಿ ಸಿದ್ದರಾಮಯ್ಯ ಮಾತನಾಡುವಾಗ ಡಿಕೆಶಿ ಮೌನವಾಗಿ ಕುಳಿತಿದ್ದರು. ಕೇವಲ "ಸಿಎಂ ಹೇಳಿದ್ದೇ ಅಂತಿಮ" ಎಂದು ಹೇಳಿ ಮಾತು ಮುಗಿಸಿದ್ದರು.

