
CM Siddaramaiah|ಸಚಿವರ ವಿರುದ್ಧ ಶಾಸಕರ ಆಕ್ರೋಶ- ಸಂಪುಟ ಪುನಾರಚನೆ ಸುಳಿವು ಕೊಟ್ಟ ಸಿಎಂ
Cabinet Reshuffle| ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಸಚಿವರ ಕಾರ್ಯವೈಖರಿ ವಿರುದ್ಧ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಸಂಪುಟ ಪುನಾರಚನೆಯ ಸದ್ದು ಜೋರಾಗಿದೆ. ಬುಧವಾರ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಸಚಿವರ ವಿರುದ್ಧ ಶಾಸಕರು ಮುಗಿಬಿದ್ದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯ ಸುಳಿವು ನೀಡುವ ಮೂಲಕ ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.
ಸಚಿವರಿಗೆ ಹೈಕಮಾಂಡ್ ಶಾಕ್ ಕೊಟ್ಟ ಸಿಎಂ ಹೇಳಿಕೆ
ಸಭೆಯಲ್ಲಿ ಸಚಿವರ ಕಾರ್ಯವೈಖರಿ ವಿರುದ್ಧ ಶಾಸಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, "ಸಚಿವರು ಅಧಿವೇಶನಕ್ಕೆ ಸರಿಯಾಗಿ ಬಾರದಿರುವುದು ಮತ್ತು ಶಾಸಕರಿಗೆ ಸಿಗದಿರುವುದು ನನ್ನ ಗಮನಕ್ಕೂ ಬಂದಿದೆ. ಪ್ರತಿಯೊಬ್ಬ ಸಚಿವರ ಪರ್ಫಾರ್ಮೆನ್ಸ್ ರಿಪೋರ್ಟ್ ಕಾಲಕಾಲಕ್ಕೆ ಹೈಕಮಾಂಡ್ ತಲುಪುತ್ತಿದೆ. ಮುಂದಿನ ತೀರ್ಮಾನವನ್ನು ಹೈಕಮಾಂಡ್ ಮಾಡಲಿದೆ," ಎಂದು ಮಾರ್ಮಿಕವಾಗಿ ನುಡಿದರು. ಈ ಮೂಲಕ ಕೆಲಸ ಮಾಡದ ಸಚಿವರಿಗೆ ಕೋಕ್ ನೀಡಿ, ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದೆ ಎಂಬ ಸಂದೇಶ ರವಾನಿಸಿದ್ದಾರೆ.
ಸಚಿವರ ವಿರುದ್ಧ ಶಾಸಕರ ಗರಂ
ಸಚಿವರು ನಮ್ಮ ಕೈಗೇ ಸಿಗುತ್ತಿಲ್ಲ, ಕೆಲಸಗಳಿಗಾಗಿ ಅಲೆದರೂ ಸ್ಪಂದಿಸುತ್ತಿಲ್ಲ. ನಾವು ಶಾಸಕರಾಗಿರುವುದರಿಂದಲೇ ಅವರು ಸಚಿವರಾಗಿರುವುದು ಎಂಬುದು ನೆನಪಿರಲಿ. ಹೀಗೇ ಮುಂದುವರಿದರೆ ನಾವು ಬಹಿರಂಗವಾಗಿ ಅಸಮಾಧಾನ ಹೊರಹಾಕಬೇಕಾಗುತ್ತದೆ ಎಂದು ಶಾಸಕರು ನೇರವಾಗಿಯೇ ಎಚ್ಚರಿಕೆ ನೀಡಿದರು. ಸಚಿವರ ಜೊತೆಗೆ ಅಧಿಕಾರಿಗಳ ವಿರುದ್ಧವೂ ಕಿಡಿಕಾರಿದ ಶಾಸಕರು, "ಐಎಎಸ್ ಅಧಿಕಾರಿಗಳು ನಮ್ಮನ್ನು ಪರಿಗಣಿಸುತ್ತಲೇ ಇಲ್ಲ. ಕ್ಷೇತ್ರಕ್ಕೆ ಬಂದಾಗ ಪ್ರೋಟೋಕಾಲ್ ಪಾಲಿಸುವುದಿಲ್ಲ, ಕೆಲಸಗಳಿಗಾಗಿ ಸತಾಯಿಸುತ್ತಾರೆ," ಎಂದು ದೂರಿದರು.
ಅನುದಾನದ ಅವಲತ್ತು
ಚುನಾವಣೆಗೆ ಇನ್ನು ಕೇವಲ ಎರಡು ವರ್ಷ ಬಾಕಿ ಇದೆ. ಈ ಹಿಂದೆ ಭರವಸೆ ನೀಡಿದ್ದ 50 ಕೋಟಿ ರೂ. ಇನ್ನೂ ಬಿಡುಗಡೆಯಾಗಿಲ್ಲ. ಈಗ ತಲಾ 100 ಕೋಟಿ ರೂ. ಅನುದಾನ ನೀಡದಿದ್ದರೆ ಕ್ಷೇತ್ರದಲ್ಲಿ ಮುಖ ತೋರಿಸಲು ಸಾಧ್ಯವಿಲ್ಲ, ಎಂದು ಶಾಸಕರು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, "ಎರಡ್ಮೂರು ತಿಂಗಳು ಕಾಯಿರಿ, ಖಂಡಿತ ಅನುದಾನ ನೀಡುತ್ತೇನೆ," ಎಂದು ಭರವಸೆ ನೀಡಿದರು.
ಸಂಪುಟದಲ್ಲಿ ಬದಲಾವಣೆ ಫಿಕ್ಸ್?
ಸಿಎಂ ನೀಡಿರುವ ಈ ಹೇಳಿಕೆ ಈಗ ಸಚಿವ ಸಂಪುಟದಲ್ಲಿ ನಡುಕ ಹುಟ್ಟಿಸಿದೆ. ಅನುದಾನದ ಭರವಸೆ ಮತ್ತು ಸಂಪುಟ ಬದಲಾವಣೆಯ ಸುಳಿವು ನೀಡುವ ಮೂಲಕ ಸಿಎಂ ಸದ್ಯಕ್ಕೆ ಶಾಸಕರ ಆಕ್ರೋಶವನ್ನು ತಣ್ಣಗಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹೈಕಮಾಂಡ್ ಯಾವಾಗ ಈ ಬಗ್ಗೆ ಅಂತಿಮ ಮುದ್ರೆ ಒತ್ತಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

