
BS Yediyurappa|ಬಿಎಸ್‌ವೈ 83ನೇ ಜನ್ಮದಿನದ ಸಂಭ್ರಮ: ಅದ್ಧೂರಿ ಆಚರಣೆಗೆ ಸಜ್ಜಾದ ಶಿಕಾರಿಪುರ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ 83ನೇ ಹುಟ್ಟುಹಬ್ಬದ ಅಂಗವಾಗಿ ಶಿಕಾರಿಪುರದಲ್ಲಿ ಇಂದು ಅದ್ದೂರಿ ಗೌರವ ಸಮರ್ಪಣಾ ಕಾರ್ಯಕ್ರಮ ಮತ್ತು ಸಂಗೀತ ಹಬ್ಬ ಆಯೋಜಿಸಲಾಗಿದೆ.
ರಾಜ್ಯ ರಾಜಕಾರಣದ 'ರಾಜಹುಲಿ', ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಇಂದು (ಫೆಬ್ರವರಿ 27, 2026) 83ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಮಹತ್ವದ ದಿನವನ್ನು ಅವರ ರಾಜಕೀಯ ಕರ್ಮಭೂಮಿ ಶಿಕಾರಿಪುರದಲ್ಲಿ ಅತ್ಯಂತ ಅದ್ದೂರಿಯಾಗಿ ಆಚರಿಸಲು ಕುಟುಂಬಸ್ಥರು ಮತ್ತು ಅಭಿಮಾನಿ ಬಳಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಾಮಾನ್ಯವಾಗಿ ಪ್ರತಿವರ್ಷ ಬೆಂಗಳೂರಿನಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಬಿಎಸ್‌ವೈ, ಈ ಬಾರಿ ತಮ್ಮ ತವರು ಕ್ಷೇತ್ರ ಶಿಕಾರಿಪುರದಲ್ಲಿ ಅಭಿಮಾನಿಗಳ ನಡುವೆ ಸಂಭ್ರಮಿಸಲಿದ್ದಾರೆ.
ದಿನದ ಪ್ರಮುಖ ಕಾರ್ಯಕ್ರಮಗಳು
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ 83ನೇ ಹುಟ್ಟುಹಬ್ಬದ ಅಂಗವಾಗಿ ಇಂದು ಅವರ ರಾಜಕೀಯ ಕರ್ಮಭೂಮಿ ಶಿಕಾರಿಪುರದಲ್ಲಿ ಅದ್ದೂರಿ ಸಂಭ್ರಮಾಚರಣೆ ಏರ್ಪಡಿಸಲಾಗಿದೆ. ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಈ ಆಚರಣೆಯನ್ನು ಈ ಬಾರಿ ಕುಟುಂಬಸ್ಥರು ಮತ್ತು ಅಭಿಮಾನಿ ಬಳಗವು ಶಿಕಾರಿಪುರದ ಏಕಲವ್ಯ ಕ್ರೀಡಾಂಗಣದಲ್ಲಿ 'ಗೌರವ ಸಮರ್ಪಣಾ' ಸಮಾವೇಶದ ಮೂಲಕ ಆಯೋಜಿಸಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿನಂದನಾ ಭಾಷಣ ಮಾಡಲಿದ್ದಾರೆ ಹಾಗೂ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ.
ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ
ಈ ಕಾರ್ಯಕ್ರಮದಲ್ಲಿ ಸಂಜೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ತಂಡದಿಂದ ಸಾಂಸ್ಕೃತಿಕ ರಸಮಂಜರಿ ನಡೆಯಲಿದ್ದು, ಅನುಶ್ರೀ, ಮಂಗ್ಲಿ ಸೇರಿದಂತೆ ಹಲವು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಇಡೀ ಪಟ್ಟಣವು ಕೇಸರಿ ಮಯವಾಗಿದ್ದು, ಬಿಎಸ್‌ವೈ ಅವರನ್ನು ಬೆಳೆಸಿದ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುವ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಇಡೀ ಶಿಕಾರಿಪುರ ಮಧುವಣಗಿತ್ತಿಯಂತೆ ಶೃಂಗಾರಗೊಂಡು ಸಜ್ಜಾಗಿದೆ. ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹಾಪೂರವೇ ಹರಿಯಲಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮತ್ತು ತಂಡದಿಂದ 'ಸಂಗೀತ ಹಬ್ಬ' ಆಯೋಜಿಸಲಾಗಿದೆ. ಜನಪ್ರಿಯ ನಿರೂಪಕಿ ಅನುಶ್ರೀ, ಗಾಯಕಿಯರಾದ ಮಂಗ್ಲಿ, ಪೃಥ್ವಿ ಭಟ್, ಗಾಯಕ ವ್ಯಾಸರಾಜ್ ಹಾಗೂ ಬಿಗ್‌ಬಾಸ್ ವಿಜೇತ ಗಿಲ್ಲಿ ನಟರಾಜ್ ಸೇರಿದಂತೆ ಹಲವು ತಾರೆಯರು ಮನೋರಂಜನೆ ನೀಡಲಿದ್ದಾರೆ.
ಶಿಕಾರಿಪುರದಲ್ಲಿ ಹಬ್ಬದ ವಾತಾವರಣ
ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಏಕಲವ್ಯ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, ಸುಮಾರು 1 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದೆ. ಇಡೀ ಪಟ್ಟಣವು ಕೇಸರಿ ಮಯವಾಗಿದ್ದು, ಫ್ಲೆಕ್ಸ್ ಮತ್ತು ಬ್ಯಾನರ್‌ಗಳಿಂದ ಕಂಗೊಳಿಸುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಜನನ ಮತ್ತು ಬಾಲ್ಯ
ಬಿ.ಎಸ್. ಯಡಿಯೂರಪ್ಪ ಅವರು 1943ರ ಫೆಬ್ರವರಿ 27ರಂದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸಿದ್ದಲಿಂಗಪ್ಪ ಮತ್ತು ತಾಯಿ ಪುಟ್ಟತಾಯಮ್ಮ. ಯಡಿಯೂರಪ್ಪ ಅವರಿಗೆ ಕೇವಲ ನಾಲ್ಕು ವರ್ಷ ವಯಸ್ಸಾಗಿದ್ದಾಗಲೇ ಅವರ ತಾಯಿ ನಿಧನರಾದರು. ತುಮಕೂರು ಜಿಲ್ಲೆಯ ಪವಿತ್ರ ಕ್ಷೇತ್ರವಾದ ಯಡಿಯೂರಿನ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ಸ್ಮರಣಾರ್ಥವಾಗಿ ಇವರಿಗೆ 'ಯಡಿಯೂರಪ್ಪ' ಎಂದು ನಾಮಕರಣ ಮಾಡಲಾಗಿತ್ತು.
ಶಿಕ್ಷಣ ಮತ್ತು ವೃತ್ತಿಜೀವನ
ಯಡಿಯೂರಪ್ಪ ಅವರು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ತಮ್ಮ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದರು. ಶಿಕ್ಷಣದ ನಂತರ 1965ರಲ್ಲಿ ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದರೂ, ಅವರ ಗಮನ ಪೂರ್ತಿ ಇದ್ದಿದ್ದು ರಾಜಕೀಯದೆಡೆಗೆ. ಅಲ್ಪಕಾಲದಲ್ಲೇ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ ಅವರು ಶಿಕಾರಿಪುರಕ್ಕೆ ತೆರಳಿ, ಅಲ್ಲಿನ ವೀರಭದ್ರ ಶಾಸ್ತ್ರಿಗಳ ಅಕ್ಕಿ ಗಿರಣಿಯಲ್ಲಿ ಕೆಲಸಕ್ಕೆ ಸೇರಿದರು. 1967ರಲ್ಲಿ ಮೈತ್ರಾದೇವಿ ಅವರನ್ನು ವಿವಾಹವಾದ ನಂತರ, ಸ್ವಂತ ಹಾರ್ಡ್‌ವೇರ್ ಮಳಿಗೆಯನ್ನು ಪ್ರಾರಂಭಿಸಿ ಉದ್ಯಮಿಯಾಗಿ ಗುರುತಿಸಿಕೊಂಡರು. ಇದೇ ಕಾಲಘಟ್ಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದಿದ್ದು ಅವರ ಜೀವನದ ದಿಕ್ಕನ್ನೇ ಬದಲಿಸಿತು.
1967ರಲ್ಲಿ ಮೈತ್ರಾದೇವಿ ಅವರನ್ನು ವಿವಾಹವಾದ, ಇವರಿಗೆ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಅರುಣಾದೇವಿ, ಪದ್ಮಾವತಿ, ಉಮಾದೇವಿ ಎಂಬ ಐವರು ಮಕ್ಕಳಿದ್ದಾರೆ. 2004ರಲ್ಲಿ ಇವರ ಪತ್ನಿ ಮೈತ್ರಾದೇವಿ ನಿಧನರಾದರು.
ರಾಜಕೀಯ ಪಯಣದ ಮೈಲಿಗಲ್ಲುಗಳು
ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನವು ಸತತ ಹೋರಾಟ ಮತ್ತು ಏರಿಳಿತಗಳಿಂದ ಕೂಡಿದ್ದು, ಅವರ ಏಳಿಗೆ ಹಂತ-ಹಂತವಾಗಿ ನಡೆದಿದೆ. 1972ರಲ್ಲಿ ಜನಸಂಘದ ಶಿಕಾರಿಪುರ ತಾಲೂಕು ಅಧ್ಯಕ್ಷರಾಗಿ ರಾಜಕೀಯ ಪ್ರವೇಶಿಸಿದ ಇವರು, 1975ರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಕ್ರಿಯ ಹೋರಾಟ ನಡೆಸಿ ಸುಮಾರು 45 ದಿನಗಳ ಕಾಲ ಜೈಲುವಾಸ ಅನುಭವಿಸಿದರು. ನಂತರ 1977ರಲ್ಲಿ ಶಿಕಾರಿಪುರ ಪುರಸಭಾ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಆಡಳಿತಾತ್ಮಕ ಅನುಭವ ಪಡೆದರು.
1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಯಡಿಯೂರಪ್ಪ ಅವರು, ಅಲ್ಲಿಂದ ಮುಂದೆ ಒಟ್ಟು ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿ ಶಿಕಾರಿಪುರ ಮತ್ತು ರಾಜ್ಯ ರಾಜಕಾರಣದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು. 2006ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ ಇವರು, ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಅಡಿಪಾಯ ಹಾಕಿದರು. ಅಂತಿಮವಾಗಿ 2007ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಯ ಮೊದಲ ಸರ್ಕಾರಕ್ಕೆ ಮುನ್ನುಡಿ ಬರೆದರು, ಆದರೆ ಆ ಸಂದರ್ಭದಲ್ಲಿ ಅವರ ಅಧಿಕಾರ ಅವಧಿ ಕೇವಲ ಏಳು ದಿನಗಳಿಗೆ ಸೀಮಿತವಾಗಿತ್ತು.
ಮುಖ್ಯಮಂತ್ರಿಯಾಗಿ 4 ಬಾರಿ ಅಧಿಕಾರ
ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮೊದಲ ಬಾರಿಗೆ ಅಧಿಕಾರಕ್ಕೆ ತಂದ ಅಪ್ರತಿಮ ಶ್ರೇಯಸ್ಸು ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಇವರು ಒಟ್ಟು ನಾಲ್ಕು ಅವಧಿಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದ್ದಾರೆ. ಮೊದಲ ಬಾರಿಗೆ ನವೆಂಬರ್ 12, 2007 ರಿಂದ ನವೆಂಬರ್ 19, 2007 ರವರೆಗೆ ಕೇವಲ ಒಂದು ವಾರಗಳ ಕಾಲ ಅಧಿಕಾರ ನಡೆಸಿದರು.
ನಂತರ 2008ರ ಚುನಾವಣೆಯಲ್ಲಿ ಬಿಜೆಪಿಯನ್ನು ಅತಿದೊಡ್ಡ ಪಕ್ಷವಾಗಿ ಸಂಘಟಿಸಿ, ಮೇ 30, 2008 ರಿಂದ ಆಗಸ್ಟ್ 4, 2011 ರವರೆಗೆ ಎರಡನೇ ಬಾರಿಗೆ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾದರು. 2018ರ ವಿಧಾನಸಭಾ ಚುನಾವಣೆಯ ನಂತರ ಮೂರನೇ ಬಾರಿಗೆ ಮೇ 17, 2018 ರಂದು ಪ್ರಮಾಣವಚನ ಸ್ವೀಕರಿಸಿದರಾದರೂ, ಬಹುಮತ ಸಾಬೀತುಪಡಿಸಲಾಗದೆ ಮೇ 19, 2018 ರಂದು ರಾಜೀನಾಮೆ ನೀಡಬೇಕಾಯಿತು. ತದನಂತರ ರಾಜಕೀಯ ಬದಲಾವಣೆಗಳ ಫಲವಾಗಿ ಜುಲೈ 26, 2019 ರಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಜುಲೈ 26, 2021 ರವರೆಗೆ ಯಶಸ್ವಿಯಾಗಿ ಎರಡು ವರ್ಷಗಳ ಕಾಲ ಆಡಳಿತ ನಡೆಸಿದರು.
ʻರೈತ ನಾಯಕʼ ಯಡಿಯೂರಪ್ಪ
ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ನಾಡಿನ ಜನತೆ ಪ್ರೀತಿಯಿಂದ 'ರೈತ ನಾಯಕ' ಎಂದೇ ಕರೆಯುತ್ತಾರೆ. ಇವರು ಪ್ರತಿ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗಲೂ ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸುವ ಮೂಲಕ ಕೃಷಿಕರ ಮೇಲಿರುವ ತಮ್ಮ ಗೌರವವನ್ನು ಜಗತ್ತಿಗೆ ಸಾರುತ್ತಿದ್ದರು. ದೇಶದಲ್ಲೇ ಮೊದಲ ಬಾರಿಗೆ ರೈತರಿಗಾಗಿ ಪ್ರತ್ಯೇಕ 'ಕೃಷಿ ಬಜೆಟ್' ಮಂಡಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು, ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ 'ಭಾಗ್ಯಲಕ್ಷ್ಮಿ' ಯೋಜನೆ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು 'ಉಚಿತ ಸೈಕಲ್ ವಿತರಣೆ'ಯಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಇವರು ತೋರಿದ ಛಲ ಮತ್ತು ಸಂಘಟನಾ ಚಾತುರ್ಯಕ್ಕಾಗಿ ಅಭಿಮಾನಿಗಳು ಇವರನ್ನು 'ರಾಜಹುಲಿ' ಎಂದು ಕರೆಯುತ್ತಾರೆ.

