It is not right to make personal insults, MLA Shivalingegowda clarifies on the noise in the House
x

ಸದನದಲ್ಲಿ ಶಾಸಕ ಶಿವಲಿಂಗೇಗೌಡ ಹಾಗೂ ಬಿಜೆಪಿ ಶಾಸಕರ ನಡುವೆ ಬುಧವಾರ(ಫೆ.4) ನಡೆದ ಜಟಾಪಟಿ

ರಾಗಿ, ಕೊಬ್ಬರಿ ಕಳ್ಳ ಎಂದಿದ್ದಕ್ಕೆ ಸಿಡಿದೆದ್ದೆ: ಬಿಜೆಪಿ ಶಾಸಕರ ವಿರುದ್ಧ ಶಿವಲಿಂಗೇಗೌಡ ಆಕ್ರೋಶ

ಸದನದಲ್ಲಿ ಬುಧವಾರ(ಫೆ.4) ಪ್ರತಿಪಕ್ಷಗಳ ನಡುವೆ ನಡೆದ ವಾಗ್ವಾದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ.


Click the Play button to hear this message in audio format

ವಿಧಾನಸಭೆಯಲ್ಲಿ ನಿನ್ನೆ ನಡೆದ ಗದ್ದಲದ ಬಳಿಕವೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವಿನ ವಾಕ್ಸಮರ ಮುಂದುವರಿದಿದೆ. ತಮ್ಮ ವಿರುದ್ಧ ವೈಯಕ್ತಿಕ ನಿಂದನೆ ಮತ್ತು ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿರುವ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ, ಬಿಜೆಪಿ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ(ಫೆ.5) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಸದನದಲ್ಲಿ ವಿಷಯಾಧಾರಿತ ಚರ್ಚೆ ನಡೆಯಬೇಕು. ಅದನ್ನು ಬಿಟ್ಟು ಪ್ರತಿಪಕ್ಷ ಅಂದ ತಕ್ಷಣ ಕೇವಲ ಗಲಾಟೆ ಮಾಡೋದಾ? ವಿಧಾನಸಭೆಯ ನಿಯಮಾವಳಿಗಳನ್ನು ಬದಲಿಸುವ ತುರ್ತು ಅಗತ್ಯವಿದೆ," ಎಂದು ಅಭಿಪ್ರಾಯಪಟ್ಟರು.

ನನ್ನನ್ನು ಕೆಣಕಿ ಪ್ರಚೋದಿಸಿದರು

ನಿನ್ನೆ ಸದನದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ್ ಅವರ ವಿಚಾರವಾಗಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಆ ಸಮಯದಲ್ಲಿ ನಾನು ಮಾತನಾಡಲು ಎದ್ದಾಗ, ನನ್ನನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡರು. ವೇದವ್ಯಾಸ ಕಾಮತ್, ಶರಣು ಸಲಗರ ಮತ್ತು ಸುರೇಶ್ ಗೌಡ ಅವರು ನಿರಂತರವಾಗಿ ನನ್ನ ವಿರುದ್ಧ ವೈಯಕ್ತಿಕ ನಿಂದನೆಗೆ ಇಳಿದರು. 'ನಮಗೆ ಹೈಕಮಾಂಡ್‌ನಿಂದ ನಿರ್ದೇಶನವಿದೆ' ಎಂದು ಹೇಳುತ್ತಲೇ ನನ್ನನ್ನು ಕೆಣಕಿದರು," ಎಂದು ಶಿವಲಿಂಗೇಗೌಡ ಆರೋಪಿಸಿದರು.

'ಕಳ್ಳ' ಎಂದಿದ್ದಕ್ಕೆ ಸಿಡಿದ ಶಿವಲಿಂಗೇಗೌಡ

"ನನ್ನನ್ನು 'ರಾಗಿ ಕಳ್ಳ', 'ಕೊಬ್ಬರಿ ಕಳ್ಳ' ಎಂದು ಹೀಗಳೆದರು. ನನ್ನ ರಾಜಕೀಯ ಜೀವನದ ಬಗ್ಗೆ ಟೀಕಿಸಲಿ, ಆದರೆ ನನ್ನ ವೈಯಕ್ತಿಕ ಬದುಕಿಗೆ ಏಕೆ ಕೈ ಹಾಕಬೇಕು? ಅವರು ನನ್ನನ್ನು ನೋಡಿ 'ತಕತಕ' ಎಂದು ಕುಣಿಯುತ್ತಾ ಹೀಯಾಳಿಸಿದಾಗ ನನಗೂ ಸಿಟ್ಟು ಬಂತು. ಅದಕ್ಕೆ ನಾನೂ ಸ್ವಲ್ಪ ಹೊರಟಾಗಿ ಪ್ರತಿಕ್ರಿಯಿಸಿದೆ. ಆದರೆ, ದುರದೃಷ್ಟವಶಾತ್ ನನ್ನ ಮಾತುಗಳು ಮಾತ್ರ ರೆಕಾರ್ಡ್ ಆಗಿವೆ, ಅವರು ಬಾವಿಯಲ್ಲಿದ್ದು ಆಡಿದ ಪ್ರಚೋದನಾಕಾರಿ ಮಾತುಗಳು ಜನರಿಗೆ ತಲುಪಿಲ್ಲ," ಎಂದು ಬೇಸರ ವ್ಯಕ್ತಪಡಿಸಿದರು.

ಶರಣು ಸಲಗರ ಪತ್ನಿ ಪ್ರಸ್ತಾಪಕ್ಕೆ ವಿಷಾದ

ತಮ್ಮ ಮಾತಿನ ಭರದಲ್ಲಿ ಬಿಜೆಪಿ ಶಾಸಕ ಶರಣು ಸಲಗರ ಅವರ ಪತ್ನಿಯ ವಿಷಯ ಪ್ರಸ್ತಾಪಿಸಿದ್ದಕ್ಕೆ ಶಿವಲಿಂಗೇಗೌಡ ವಿಷಾದ ವ್ಯಕ್ತಪಡಿಸಿದರು. "ಶರಣು ಸಲಗರ ಅವರ ಪತ್ನಿಯ ಬಗ್ಗೆ ಮಾತನಾಡಿದ್ದಕ್ಕೆ ನಾನು ವಿಷಾದಿಸುತ್ತೇನೆ. ಆದರೆ, ಬೇರೆ ಯಾವುದೇ ವಿಚಾರಕ್ಕೂ ನಾನು ವಿಷಾದ ವ್ಯಕ್ತಪಡಿಸುವುದಿಲ್ಲ. ನನ್ನನ್ನು ವಿಧಾನಸೌಧದ ಪವಿತ್ರ ಸದನದಲ್ಲಿ 'ಕಳ್ಳ' ಎಂದು ಕರೆದಿದ್ದಕ್ಕೆ ಬಿಜೆಪಿ ನನಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ನಾನು ಬೀದಿಗಿಳಿದು ಹೋರಾಟ ಮಾಡುತ್ತೇನೆ," ಎಂದು ಎಚ್ಚರಿಕೆ ನೀಡಿದರು.

ಸದನದ ಒಳಗಿನ ನೈಜ ಚಿತ್ರಣ ಜನರಿಗೆ ಸಿಗಬೇಕಾದರೆ ಖಾಸಗಿ ವಾಹಿನಿಗಳ ಕ್ಯಾಮೆರಾಗಳಿಗೆ ಪ್ರವೇಶ ನೀಡಬೇಕು ಎಂದು ಅವರು ಪ್ರತಿಪಾದಿಸಿದರು. "ಖಾಸಗಿ ವಾಹಿನಿಗಳ ಕ್ಯಾಮೆರಾ ಇದ್ದಿದ್ದರೆ, ಅವರು ಹೇಗೆ ಕುಣಿದು ಕುಪ್ಪಳಿಸುತ್ತಿದ್ದರು ಎಂಬುದು ಜನರಿಗೆ ತಿಳಿಯುತ್ತಿತ್ತು. ಬಾವಿಯಲ್ಲಿದ್ದವರ ವರ್ತನೆ ಮತ್ತು ಪ್ರಚೋದನೆ ಸ್ಪೀಕರ್‌ಗೂ ತಿಳಿದಿದೆ. ನಾನು ಈ ಬಗ್ಗೆ ಸ್ಪೀಕರ್ ಅವರಿಗೆ ದೂರು ನೀಡುತ್ತೇನೆ ಹಾಗೂ ಮುಂದಿನ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಹೋರಾಟ ಮಾಡುತ್ತೇನೆ," ಎಂದು ಹೇಳಿದರು.

ನಾನು ಈಗಾಗಲೇ ಧರ್ಮಸ್ಥಳದಲ್ಲಿ ಆಣೆ ಮಾಡಿದ್ದೇನೆ

ಹಿಂದೆ ರವಿಕುಮಾರ್ ಅವರು ತಮ್ಮನ್ನು 'ರಾಗಿ ಕಳ್ಳ' ಎಂದು ಕರೆದಾಗ, ಧರ್ಮಸ್ಥಳದಲ್ಲಿ ಸತ್ಯ ಮಾಡಲು ಸವಾಲು ಹಾಕಿದ್ದೆ. ಅವರು ಬರದಿದ್ದರೂ ನಾನೇ ಹೋಗಿ ಪ್ರಮಾಣ ಮಾಡಿದ್ದೇನೆ. ಆದರೂ ಪದೇ ಪದೇ ನನ್ನನ್ನು 'ಕಳ್ಳ' ಎಂದು ಕರೆಯುವ ಮೂಲಕ ತೇಜೋವಧೆ ಮಾಡಲಾಗುತ್ತಿದೆ ಎಂದು ಶಿವಲಿಂಗೇಗೌಡ ಕಿಡಿಕಾರಿದರು. ನನ್ನ ಮಾತುಗಳು ಮುಂಬೈವರೆಗೂ ತಲುಪಿದೆ ಎಂದು ತಿಳಿದಿದ್ದೇನೆ, ದಾಖಲೆಗಳು ಸಿಕ್ಕ ಮೇಲೆ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಅವರು ತಿಳಿಸಿದರು.

Read More
Next Story