
ಪಶ್ಚಿಮ ಬಂಗಾಳ ಕದನ ಕಣ: ಒಂಟಿಯೋ, ಜಂಟಿಯೋ? ನಿದ್ದೆ ಬಿಟ್ಟೆದ್ದಿಲ್ಲ ಕಾಂಗ್ರೆಸ್
ಯುದ್ಧ ಇನ್ನೇನು ಸಮೀಪಿಸಿದೆ ಎನ್ನುವಾಗ ಸಮರಾಭ್ಯಾಸ ಮಾಡುವುದು ಕಾಂಗ್ರೆಸ್ ಧೋರಣೆ. ಪಶ್ಚಿಮ ಬಂಗಾಲದಲ್ಲಿ ತಳಕಚ್ಚಿರುವ ಪಕ್ಷವನ್ನು ಮೇಲೆತ್ತಲು ಒಂಟಿಯಾಗಿ ಕಣಕ್ಕಿಳಿಯಬೇಕೆ? ಮೈತ್ರಿ ಮಾಡಿಕೊಳ್ಳಬೇಕೆ? ಸ್ಪಷ್ಟ ನಿರ್ಧಾರ ಅದಕ್ಕಿನ್ನೂ ಸಾಧ್ಯವಾಗಿಲ್ಲ.
ತೃಣಮೂಲ ಕಾಂಗ್ರೆಸ್ ಅಥವಾ ಸಿಪಿಐ-ಎಂ ಜೊತೆ ಮೈತ್ರಿ ಮಾಡಿಕೊಳ್ಳಬೇಕೆ ಅಥವಾ ಒಂಟಿಯಾಗಿ ಕಣಕ್ಕೆ ಇಳಿಯಬೇಕೆ? ಎಂಬ ಗೊಂದಲದಲ್ಲಿ ಪಶ್ಚಿಮ ಬಂಗಾಲದ ಕಾಂಗ್ರೆಸ್ ಮುಳುಗಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ದಿನಗಳು ಹತ್ತಿರವಾಗುತ್ತಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಉತ್ಸಾಹ ಗರಿಗೆದರಿಲ್ಲ. ಚುನಾವಣಾ ಕಾರ್ಯತಂತ್ರದ ಬಗ್ಗೆ ಅದು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಪಶ್ಚಿಮ ಬಂಗಾಲದ ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯಗಳು ತೀವ್ರವಾಗಿವೆ. ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಪಕ್ಷದ ಪಾಲಿಗೆ ಒಬ್ಬನೇ ಒಬ್ಬ ಶಾಸಕ ಇಲ್ಲ. ಹಾಗಾಗಿ ಪಕ್ಷವನ್ನು ಮತ್ತೆ ಕಟ್ಟಿ ಬೆಳೆಸಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಆದ್ದರಿಂದ ಚುನಾವಣೆಯಲ್ಲಿ ಒಂಟಿಯಾಗಿ ಕಣಕ್ಕಿಳಿಯುವುದೇ ಸೂಕ್ತ ಎಂದು ಬಹುಪಾಲು ನಾಯಕರು ವಾದಿಸುತ್ತಿದ್ದಾರೆ. ಆದರೆ ಮಾಜಿ ಸಂಸದರು ಮತ್ತು ಹಾಲಿ ಸಂಸದರನ್ನು ಒಳಗೊಂಡ ಇನ್ನೊಂದು ಬಣ ಎಡಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಇರಾದೆ ವ್ಯಕ್ತಪಡಿಸಿದೆ.
ಈ ಬಗ್ಗೆ ʼದ ಫೆಡರಲ್ʼಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಪಶ್ಚಿಮ ಬಂಗಾಲದ ಉಸ್ತುವಾರಿ ಗುಲಾಮ್ ಅಹ್ಮದ್ ಮೀರ್, ಚುನಾವಣೆಗೆ ಸಂಬಂಧಿಸಿದಂತೆ ಪಕ್ಷವು ಈವರೆಗೆ ಯಾವುದೇ ʼಕಾರ್ಯತಂತ್ರʼದ 1ಸಭೆ ನಡೆಸಿಲ್ಲ ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಈ ಬಗ್ಗೆ ಇನ್ನಷ್ಟು ಹೊಳವು ಲಭ್ಯವಾಗಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಕೋಮು ಶಕ್ತಿಗಳ ವಿರುದ್ಧದ ಹೋರಾಟ
“ಈ ಬಾರಿ ಒಂಟಿಯಾಗಿ ಸ್ಪರ್ಧಿಸಬೇಕು” ಎಂಬುದು ಪಕ್ಷದಲ್ಲಿರುವ ಪ್ರಬಲ ಅಭಿಪ್ರಾಯ ಎಂಬುದನ್ನು ಮೀರ್ ಒಪ್ಪಿಕೊಂಡಿದ್ದಾರೆ. “ನಮಗೀಗ ಕಳೆದುಕೊಳ್ಳಲು ಏನೂ ಇಲ್ಲ. ಆದರೂ, ಈವರೆಗೆ ಯಾವುದೂ ಅಂತಿಮವಾಗಿಲ್ಲ. ಇದಕ್ಕೆ ರಾಷ್ಟ್ರೀಯ ದೃಷ್ಟಿಕೋನವೂ ಇದೆ. ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳಿಂದ ಎದುರಾಗಿರುವ ಭೀತಿ ಮತ್ತು ಅವುಗಳನ್ನು ಸಮರ್ಥವಾಗಿ ಎದುರಿಸುವ ಅಗತ್ಯತೆಯ ಬಗ್ಗೆ ಅವರು ಆಲೋಚಿಸಬೇಕು. ನಾವು ಅವರ ಟಿಎಂಸಿ ಬಳಿ ಹೋಗುತ್ತಿಲ್ಲ. ಕೋಮುವಾದಿ ಶಕ್ತಿಗಳು ಬೆಳೆಯದಂತೆ ನೋಡಿಕೊಳ್ಳುವ ಸಮಾನ ಜವಾಬ್ದಾರಿ ಪ್ರತಿ ಪಕ್ಷದ ಮೇಲಿದೆ. ಮತಗಳು ವಿಭಜನೆಯಾಗದಂತೆಯೂ ನಾವು ನೋಡಿಕೊಳ್ಳಬೇಕು,” ಎಂದು ಅವರು 'ದ ಫೆಡರಲ್'ಗೆ ತಿಳಿಸಿದ್ದಾರೆ.
ಒಂದು ವೇಳೆ ಟಿಎಂಸಿ ಕೂಡ ಭಾಗವಾಗಿರುವ 'ಇಂಡಿಯಾ' ಮೈತ್ರಿಕೂಟವು ಒಟ್ಟಾಗಿ ಚುನಾವಣೆ ಎದುರಿಸುವುದಾದರೆ, ಆ ಬಗ್ಗೆ ನಿರ್ಧಾರವನ್ನು ಕೇಂದ್ರ ಮಟ್ಟದಲ್ಲಿ ಪಕ್ಷದ ಅಧ್ಯಕ್ಷರು ತೆಗೆದುಕೊಳ್ಳಲಿದ್ದಾರೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.
ಅಲ್ಪಸಂಖ್ಯಾತ ಮತಗಳ ಚಿಂತೆ
ಪಕ್ಷವು ರಾಜ್ಯದ ಎಲ್ಲಾ 294 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಬೇಕೆಂದು ಬಲವಾಗಿ ನಂಬುವ ಕಾಂಗ್ರೆಸ್ ನಾಯಕರು, ಕನಿಷ್ಠ ಒಂದು ಡಜನ್ ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ಪಕ್ಷಕ್ಕಿದೆ ಎಂದು ವಾದಿಸುತ್ತಾರೆ. ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿರುವ ಮುರ್ಷಿದಾಬಾದ್, ಮಾಲ್ಡಾ ಮತ್ತು ಉತ್ತರ ದಿನಾಜ್ಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಇಂದಿಗೂ ಗಮನಾರ್ಹ ಪ್ರಭಾವ ಹೊಂದಿದೆ ಎಂಬುದು ಅವರ ಅಭಿಮತ. “ಅಭ್ಯರ್ಥಿಗಳ ಆಯ್ಕೆ ಸರಿಯಾಗಿದ್ದರೆ, ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾರೂ ಸವಾಲು ಹಾಕಲು ಸಾಧ್ಯವಿಲ್ಲ” ಎಂದು ಪಕ್ಷದ ಮೂಲಗಳು 'ದ ಫೆಡರಲ್'ಗೆ ತಿಳಿಸಿವೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾಗ, ಈ ಜಿಲ್ಲೆಗಳ ಹಲವಾರು ಸ್ಥಾನಗಳಲ್ಲಿ ಟಿಎಂಸಿ ನಂತರ ಎರಡನೇ ಸ್ಥಾನ ಪಡೆದಿತ್ತು ಎಂಬುದನ್ನು ಅವರು ನೆನಪಿಸುತ್ತಾರೆ. ಆದ್ದರಿಂದ, ಈ ಗುಂಪು ಒಂಟಿಯಾಗಿ ಸ್ಪರ್ಧಿಸುವುದು ಉತ್ತಮ ಆಯ್ಕೆ ಎಂದು ಭಾವಿಸಿದೆ; ಏಕೆಂದರೆ ಇದು ಗೆಲ್ಲಬಹುದಾದ ಸ್ಥಾನಗಳನ್ನು ಮೈತ್ರಿ ಪಕ್ಷಗಳಿಗಾಗಿ ತ್ಯಾಗ ಮಾಡುವ ಅನಿವಾರ್ಯತೆಯನ್ನು ತಪ್ಪಿಸುತ್ತದೆ. ಈ ಹಿಂದಿನ ಎಡಪಕ್ಷ ಅಥವಾ ಟಿಎಂಸಿ ಜೊತೆಗಿನ ಮೈತ್ರಿಗಳು ರಾಜ್ಯದಲ್ಲಿ ಕಾಂಗ್ರೆಸ್ನ ರಾಜಕೀಯ ನೆಲೆಯನ್ನು ಮತ್ತಷ್ಟು ಕುಗ್ಗಿಸಿವೆ ಎಂದು ಅವರು ನಂಬಿದ್ದಾರೆ.
ಆದಾಗ್ಯೂ, ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿರುವ ಮುರ್ಷಿದಾಬಾದ್, ಮಾಲ್ಡಾ ಮತ್ತು ಉತ್ತರ ದಿನಾಜ್ಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ಗೆ ದೊಡ್ಡ ಚಿಂತೆಯೆಂದರೆ ಹುಮಾಯೂನ್ ಕಬೀರ್ ಅವರ ಹೊಸದಾಗಿ ರೂಪುಗೊಂಡ 'ಜನತಾ ಉನ್ನಯನ್ ಪಾರ್ಟಿ' (JUP) ಮತ್ತು ಅಸಾದುದ್ದೀನ್ ಓವೈಸಿ ಅವರ 'ಎಐಎಂಐಎಂ' ನಡುವಿನ ಮೈತ್ರಿ. ಈ ಎರಡೂ ಪಕ್ಷಗಳು ಮುಸ್ಲಿಂ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. “ಕಾಂಗ್ರೆಸ್ ಘಟಕದಲ್ಲಿ ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗಿಲ್ಲ ಮತ್ತು ಅವರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗಿದೆ ಎಂದು ಈ ಪಕ್ಷಗಳು ವಾದಿಸಬಹುದು," ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಆತಂಕದಿಂದ ನುಡಿದಿದ್ದಾರೆ.
ಒಂಟಿ ಹೋರಾಟ ಬೇಡ
ರಾಜ್ಯ ಘಟಕದ ಇತ್ತೀಚಿನ ಸಭೆಗಳಲ್ಲಿ ಅಧೀರ್ ರಂಜನ್ ಚೌಧರಿ, ಪ್ರದೀಪ್ ಭಟ್ಟಾಚಾರ್ಯ ಮತ್ತು ಚಂಪದಾನಿ ಕ್ಷೇತ್ರದ ಮಾಜಿ ಶಾಸಕ ಅಬ್ದುಲ್ ಮನ್ನನ್ ಸೇರಿದಂತೆ ಹಲವು ಮಾಜಿ ಸಂಸದರು ಒಂಟಿಯಾಗಿ ಸ್ಪರ್ಧಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಮಾಲ್ಡಾ ಕ್ಷೇತ್ರದ ಏಕೈಕ ಹಾಲಿ ಸಂಸದ ಇಶಾ ಖಾನ್ ಚೌಧರಿ ಕೂಡ ಸಿಪಿಐ(ಎಂ) ಜೊತೆ ಮೈತ್ರಿ ಮಾಡಿಕೊಳ್ಳುವ ಪರವಾಗಿದ್ದಾರೆ ಎಂದು ಮೂಲಗಳು ಸೇರಿಸಿವೆ.
ಅಧೀರ್ ರಂಜನ್ ಚೌಧರಿ ಅವರಿಗೆ ಸಿಪಿಐ(ಎಂ) ಮೇಲೆ ಮೃದು ಧೋರಣೆಯಿದೆ ಎಂದು ಹಲವು ನಾಯಕರು ನಂಬಿದ್ದಾರೆ. ಇದು ಅವರ ಎಡಪಂಥೀಯ ಸಿದ್ಧಾಂತ ಮತ್ತು ಕಾಂಗ್ರೆಸ್ ಸೇರುವ ಮೊದಲು 'ರೆವಲ್ಯೂಷನರಿ ಸೋಶಿಯಲಿಸ್ಟ್ ಪಾರ್ಟಿ' ಜೊತೆಗಿನ ಅವರ ಒಡನಾಟದ ಹಿನ್ನೆಲೆಯಿಂದ ಬಂದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು 'ದ ಫೆಡರಲ್' ತಂಡವು ಅಧೀರ್ ಚೌಧರಿ, ಇಶಾ ಖಾನ್ ಚೌಧರಿ, ಭಟ್ಟಾಚಾರ್ಯ ಮತ್ತು ಮನ್ನನ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಇಷ್ಟೆಲ್ಲ ಗೊಂದಲಗಳ ನಡುವೆಯೂ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಎಂಸಿ ಜೊತೆ ಕೈಜೋಡಿಸುವ ಸಾಧ್ಯತೆಗಳೇ ದಟ್ಟವಾಗಿರುವಂತೆ ಕಾಣುತ್ತಿದೆ. ಒಂಟಿಯಾಗಿ ಕಣಕ್ಕೆ ಇಳಿದರೆ ಮತ ವಿಭಜನೆಯಾಗುವುದು ಖಚಿತ. ಅದರಿಂದ ಲಾಭವಾಗುವುದು ಬಿಜೆಪಿಗೆ. ಅದನ್ನು ತಪ್ಪಿಸಲಾದರೂ ಮೈತ್ರಿ ಅನಿವಾರ್ಯವಾದೀತು ಎಂಬುದು ಸ್ಥಳೀಯ ನಾಯಕರ ಅಭಿಮತ.
ಪಶ್ಚಿಮ ಬಂಗಾಲದಲ್ಲಿ ಆಡಳಿತಾರೂಢ ಟಿಎಂಸಿಗಿಂತ ಸಿಪಿಐ-ಎಂ ಜೊತೆ ಕೈಜೋಡಿಸುವುದು ಉತ್ತಮ ಎಂಬುದು ಕಾಂಗ್ರೆಸ್ ಪಕ್ಷದ ಒಂದು ಗುಂಪಿನ ನಾಯಕರ ನಂಬಿಕೆ. ಅದರಿಂದ ಲಾಭವಾಗುವ ಬಗ್ಗೆ ಇನ್ನೊಂದು ಬಣಕ್ಕೆ ಅನುಮಾನವಿದೆ.

