
ಕೋಲಾರದಲ್ಲಿ ದೇಶದ ಮೊದಲ ಟಾಟಾ ಏರ್‌ಬಸ್ ಹೆಲಿಕಾಪ್ಟರ್ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ!
ಕೋಲಾರದ ವೇಮಗಲ್‌ನಲ್ಲಿ ಟಾಟಾ-ಏರ್‌ಬಸ್ ಹೆಲಿಕಾಪ್ಟರ್ ಘಟಕ ಉದ್ಘಾಟಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಚಾಲನೆ ನೀಡಿದೆ.
ಕರ್ನಾಟಕದ ಪಾಲಿಗೆ ಇಂದು ಅತ್ಯಂತ ಹೆಮ್ಮೆಯ ದಿನ. ರಾಜ್ಯದ ಕೋಲಾರ ಜಿಲ್ಲೆಯು ರಾಷ್ಟ್ರಮಟ್ಟದಲ್ಲಿ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗುತ್ತಿದೆ. ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಟಾಟಾ ಏರ್‌ಬಸ್ (Tata Airbus) ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕಕ್ಕೆ ಇಂದು ಅಧಿಕೃತ ಚಾಲನೆ ದೊರೆಯಲಿದೆ.
ಮೋದಿ ಮತ್ತು ಮ್ಯಾಕ್ರನ್ ಅವರಿಂದ ವರ್ಚುವಲ್ ಉದ್ಘಾಟನೆ
ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರನ್ ಅವರು ಜಂಟಿಯಾಗಿ ವರ್ಚುವಲ್ ಮೂಲಕ ಈ ಅತ್ಯಾಧುನಿಕ ಘಟಕವನ್ನು ಉದ್ಘಾಟಿಸಲಿದ್ದಾರೆ. ಭಾರತ ಮತ್ತು ಫ್ರಾನ್ಸ್ ನಡುವಿನ ರಕ್ಷಣಾ ಮತ್ತು ಕೈಗಾರಿಕಾ ಸಹಭಾಗಿತ್ವದ ಸಂಕೇತವಾಗಿ ಈ ಯೋಜನೆ ಹೊರಹೊಮ್ಮಿದೆ.
ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಅಸೆಂಬ್ಲಿ ಲೈನ್ (FAL)
ಇಲ್ಲಿಯವರೆಗೆ ಭಾರತದಲ್ಲಿ ಹೆಲಿಕಾಪ್ಟರ್ ಅಥವಾ ವಿಮಾನಗಳ ತಯಾರಿಕೆ ಎಂದರೆ ಅದು ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ (HAL) ಸಂಸ್ಥೆಗೆ ಮಾತ್ರ ಸೀಮಿತವಾಗಿತ್ತು. ಆದರೆ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ವೇಮಗಲ್‌ನಲ್ಲಿ ಸ್ಥಾಪಿಸಿರುವ ಈ ಘಟಕವು ದೇಶದ ಮೊದಲ ಖಾಸಗಿ ವಲಯದ ನಾಗರಿಕ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 16 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಘಟಕವು ಭಾರತದ 'ಮೇಕ್ ಇನ್ ಇಂಡಿಯಾ' ಕನಸಿಗೆ ದೊಡ್ಡ ಬಲ ನೀಡಿದೆ.
ಶಕ್ತಿಶಾಲಿ H125 ಹೆಲಿಕಾಪ್ಟರ್‌ಗಳ ಉತ್ಪಾದನೆ
ಈ ಘಟಕದಲ್ಲಿ ಜಗತ್ತಿನಲ್ಲೇ ಅತ್ಯಂತ ಜನಪ್ರಿಯವಾಗಿರುವ H125 ಮಾದರಿಯ ಮಿನಿ ಹೆಲಿಕಾಪ್ಟರ್‌ಗಳನ್ನು ತಯಾರಿಸಲಾಗುತ್ತದೆ. ಮೊದಲ ಹಂತದಲ್ಲಿ ವರ್ಷಕ್ಕೆ 10 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಹೆಲಿಕಾಪ್ಟರ್‌ಗಳನ್ನು ಪ್ರವಾಸೋದ್ಯಮ, ತುರ್ತು ವೈದ್ಯಕೀಯ ಸೇವೆ (Air Ambulance), ವಿವಿಐಪಿ ಪ್ರಯಾಣ ಮತ್ತು ಕಣ್ಗಾವಲು ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಫ್ರಾನ್ಸ್‌ನ ಏರ್‌ಬಸ್ ಕಂಪನಿಯ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಇಲ್ಲಿ ಅಸೆಂಬ್ಲಿ ಮಾಡಲಾಗುತ್ತದೆ, ಇದು ಮುಂದಿನ ದಿನಗಳಲ್ಲಿ ಭಾರತವನ್ನು ಹೆಲಿಕಾಪ್ಟರ್ ರಫ್ತು ಮಾಡುವ ದೇಶವಾಗಿಯೂ ರೂಪಿಸಲಿದೆ.
ಉದ್ಯೋಗಾವಕಾಶ
ಈ ಯೋಜನೆಯು ಕೇವಲ ಯಂತ್ರಗಳ ತಯಾರಿಕೆಗೆ ಸೀಮಿತವಾಗಿಲ್ಲ, ಇದು ಸ್ಥಳೀಯ ಆರ್ಥಿಕತೆಗೂ ದೊಡ್ಡ ಚೈತನ್ಯ ನೀಡಲಿದೆ. ಆರಂಭಿಕ ಹಂತದಲ್ಲಿ ನೂರಾರು ಪರಿಣಿತ ಎಂಜಿನಿಯರ್‌ಗಳು ಮತ್ತು ತಾಂತ್ರಿಕ ನುರಿತ ಯುವಕರಿಗೆ ಇಲ್ಲಿ ನೇರ ಉದ್ಯೋಗ ದೊರೆಯಲಿದೆ.
ಪರೋಕ್ಷ ಉದ್ಯೋಗ: ಈ ಘಟಕಕ್ಕೆ ಬಿಡಿಭಾಗಗಳನ್ನು ಪೂರೈಸುವ ಸಣ್ಣ ಕೈಗಾರಿಕೆಗಳು ಸುತ್ತಮುತ್ತಲ ಪ್ರದೇಶದಲ್ಲಿ ತಲೆಎತ್ತಲಿದ್ದು, ಸಾವಿರಾರು ಜನರಿಗೆ ಪರೋಕ್ಷವಾಗಿ ಕೆಲಸ ಸಿಗಲಿದೆ. ಕೋಲಾರ ಜಿಲ್ಲೆಯ ಯುವಕರಿಗೆ ಇದೊಂದು ಸುವರ್ಣಾವಕಾಶವಾಗಿದೆ.
ರಕ್ಷಣಾ ಮತ್ತು ನಾಗರಿಕ ವಲಯಕ್ಕೆ ಆನೆಬಲ
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಉಪಸ್ಥಿತಿಯಲ್ಲಿ ಚಾಲನೆ ಸಿಗುತ್ತಿರುವ ಈ ಘಟಕವು, ಭವಿಷ್ಯದಲ್ಲಿ ನಾಗರಿಕ ಅಗತ್ಯಗಳ ಜೊತೆಗೆ ರಕ್ಷಣಾ ಇಲಾಖೆಯ ಸಣ್ಣಪುಟ್ಟ ಅಗತ್ಯಗಳನ್ನೂ ಪೂರೈಸುವ ಸಾಮರ್ಥ್ಯ ಹೊಂದಿದೆ. ಭಾರತವು ಹೆಲಿಕಾಪ್ಟರ್ ಬಿಡಿಭಾಗಗಳಿಗಾಗಿ ವಿದೇಶಗಳ ಮೇಲೆ ಅವಲಂಬಿತವಾಗುವುದನ್ನು ಇದು ತಪ್ಪಿಸಲಿದೆ.
ವೇಮಗಲ್‌ಗೆ ರಕ್ಷಣಾ ಸಚಿವರ ಭೇಟಿ
ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರೀನ್ ವಾಟ್ರಿನ್ ಅವರು ಖುದ್ದು ವೇಮಗಲ್‌ಗೆ ಇಂದು ಆಗಮಿಸಲಿದ್ದಾರೆ. ಗಣ್ಯರ ಭೇಟಿಯ ಹಿನ್ನೆಲೆಯಲ್ಲಿ ಕೈಗಾರಿಕಾ ಪ್ರದೇಶದಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಎಂ.ಆರ್. ರವಿ ಮತ್ತು ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

