
ಕೃಷ್ಣೆ ಹರಿಸಲು ಎಚ್‌ಡಿಕೆ ಮನವಿ ಬೆನ್ನಲ್ಲೇ ಆಲಮಟ್ಟಿಗಾಗಿ ನಾಯ್ಡು ತಕರಾರು
ಪ್ರವಾಹದ ಸಂದರ್ಭದಲ್ಲಿ ಕೃಷ್ಣಾ ನದಿಯಿಂದ ಸಮುದ್ರ ಸೇರುವ ನೀರನ್ನು ಆಂಧ್ರದ ಗಡಿ ಭಾಗದಲ್ಲಿರುವ 'ಹಂದ್ರಿ ಸುಜಲಾ ಶ್ರವಂತಿ ಯೋಜನೆ'ಯಡಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಹರಿಸಲು ಮನವಿ ಮಾಡಲಾಗಿದೆ.
ಒಂದು ಕಡೆ ಬಯಲು ಸೀಮೆ ಜಿಲ್ಲೆಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಹರಿಸುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಮನವಿ ಸ್ವೀಕರಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಕರ್ನಾಟಕದ ವಿರುದ್ಧವೇ ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದಾರೆ!
ಫೆ.10 ರಂದು ಕುಮಾರಸ್ವಾಮಿ ಹಾಗೂ ಕೋಲಾರ ಸಂದ ಮಲ್ಲೇಶ್‌ಬಾಬು ಅವರಿಂದ ಮನವಿ ಸ್ವೀಕರಿಸಿದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಅವರು ಆಲಮಟ್ಟಿ ಅಣೆಕಟ್ಟು ಎತ್ತರಿಸುವ ಕರ್ನಾಟಕದ ವಿರುದ್ಧ ತಗಾದೆ ತೆಗೆದಿದ್ದಾರೆ.
ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಿದರೆ ಆಂಧ್ರಪ್ರದೇಶದ ಕೆಳಭಾಗದ ಪ್ರದೇಶಗಳಿಗೆ ನೀರು ಸಿಗುವುದಿಲ್ಲ. ಹಾಗಾಗಿ ಕರ್ನಾಟಕ ಸರ್ಕಾರ ಕ್ರಮವನ್ನು ಪ್ರತಿಬಂಧಿಸಬೇಕು ಎಂದು ನಾಯ್ಡು ಅವರು ಕೇಂದ್ರ ಜಲ ಶಕ್ತಿ ಸಚಿವ ಸಿ. ಆರ್. ಪಾಟೀಲ್‌ಗೆ ದೂರು ನೀಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಅಣೆಕಟ್ಟೆ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಲು ಅನುಮತಿ ನೀಡುವಂತೆ ಕೃಷ್ಣಾ ನ್ಯಾಯಾಧೀಕರಣವನ್ನು ಕೋರಿತ್ತು.
2010ರಲ್ಲಿ ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಾಧೀಕರಣವು ಆಂಧ್ರಪ್ರದೇಶ, ಮಹಾರಾಷ್ಟ್ರದ ವಾದವನ್ನು ಆಲಿಸಿ ಆಲಮಟ್ಟಿ ಅಣೆಕಟ್ಟನ್ನು ಐದು ಮೀಟರ್ ಹೆಚ್ಚಿಸಲು ಅನುಮತಿ ನೀಡಿತ್ತು. ಆದರೆ, ಕೇಂದ್ರ ಸರ್ಕಾರ ಈವರೆಗೂ ತೀರ್ಪಿನ ಗೆಜೆಟ್ ಅಧಿಸೂಚನೆ ಪ್ರಕಟಿಸದೇ ವಿಳಂಬ ಮಾಡಿದೆ. ಹೀಗಿರುವಾಗ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಅಣೆಕಟ್ಟು ಎತ್ತರ ಹೆಚ್ಚಿಸಲು ಆಕ್ಷೇಪ ವ್ಯಕ್ತಪಡಿಸಿರುವುದು ಅಂತಾರಾಜ್ಯ ನದಿ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದೆ.
2025 ರ ಆಗಸ್ಟ್ ತಿಂಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೂಡ ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಣೆಕಟ್ಟು ಎತ್ತರ ಹೆಚ್ಚಳದಿಂದ ಗಡಿಯಲ್ಲಿರುವ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಲಿದೆ ಎಂದು ಜಲಶಕ್ತಿ ಸಚಿವರಿಗೆ ಪತ್ರ ಬರೆದಿದ್ದರು. ಈಗ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳು ತಕರಾರು ತೆಗೆದಿರುವುದು ಕರ್ನಾಟಕದಲ್ಲಿ ಆತಂಕ ಸೃಷ್ಟಿಸಿದೆ.
ಬಯಲು ಸೀಮೆಗೆ ನೀರು ಹರಿಸಲು ಮನವಿ
ಬಯಲು ಸೀಮೆ ಜಿಲ್ಲೆಗಳಿಗೆ ಆಂಧ್ರದ ಕೃಷ್ಣಾ ನದಿಯಿಂದ ಕುಡಿಯುವ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಚಿಂತಾಮಣಿಯಲ್ಲಿ ಭರವಸೆ ನೀಡಿದ್ದರು. ಭರವಸೆಯ ಭಾಗವಾಗಿಯೇ ಫೆ.10 ರಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ವಿಪರ್ಯಾಸವೆಂದರೆ ಮನವಿ ಪಡೆದ ಬಳಿಕ ಚಂದ್ರಬಾಬು ನಾಯ್ದು ಅವರು ಕೇಂದ್ರ ಸಚಿವರಿಗೆ ದೂರು ನೀಡಿದ್ದು, ಆಲೆಮಟ್ಟಿ ಅಣೆಕಟ್ಟು ಎತ್ತರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಎಚ್‌ಡಿಕೆ ಸಲ್ಲಿಸಿದ ಮನವಿಯಲ್ಲಿ ಏನಿದೆ?
ಪ್ರವಾಹದ ಸಂದರ್ಭದಲ್ಲಿ ಕೃಷ್ಣಾ ನದಿಯಿಂದ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದೆ. ಹೀಗೆ ವ್ಯರ್ಥವಾಗಿ ನೀರು ಸಮುದ್ರ ಸೇರುವ ಬದಲು ಆಂಧ್ರದ ಗಡಿ ಭಾಗದಲ್ಲಿರುವ 'ಹಂದ್ರಿ ಸುಜಲಾ ಶ್ರವಂತಿ ಯೋಜನೆ' (ಎಚ್‌ಎನ್‌ಎಸ್‌ಎಸ್) ಯೋಜನೆಯಡಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಹರಿಸುವಂತೆ ಮನವಿ ಮಾಡಲಾಗಿದೆ.
ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಕಾರ್ಯಸಾಧ್ಯತೆಗಳ ಬಗ್ಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ವಿವರಿಸಿದ್ದು, ಕರ್ನಾಟಕದ ಮೂರು ಜಿಲ್ಲೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೆಚ್ಚುವರಿ ನೆರೆ ನೀರು ಕೊಡಬೇಕು. ತಮ್ಮ ಮನವಿಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಶೀಲನೆ ನಡೆಸಬೇಕು ಎಂದು ಕೋರಿದ್ದಾರೆ.
ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡುಗೆ ಮನವಿ ಸಲ್ಲಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಆಂಧ್ರ ಪ್ರದೇಶದ ಗಡಿ ಹಂಚಿಕೊಂಡಿವೆ. ಪಾಲಾರ್ ಮತ್ತು ಪೆನ್ನಾರ್ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. ಈ ನದಿಗಳು ನಂದಿಬೆಟ್ಟದಲ್ಲಿ ಹುಟ್ಟಿ, ಆಂಧ್ರಪ್ರದೇಶಕ್ಕೆ ಹರಿಯುತ್ತವೆ. ಆದರೆ, ಈ ನದಿಗಳ ಮುಖಜಭೂಮಿಯಲ್ಲಿರುವ ಜನರು ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಭಾಗದಲ್ಲಿ ಅಂತರ್ಜಲ ಮಟ್ಟವೂ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ನಮ್ಮ ಮನವಿ ಪರಿಗಣಿಸಬೇಕು ಎಂದಿದ್ದಾರೆ.
ಇದಕ್ಕೆ ಸಾಕಾರಾತ್ಮಕವಾಗಿ ಸ್ಪಂದಿಸಿರುವ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು, ನೀವು ಹೇಳಿದ ಮೂರು ಜಿಲ್ಲೆಗಳ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಇದೆ. ಈ ವಿಷಯದ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಎಚ್‌ಡಿಕೆ ಮನವಿಗೆ ಕಾರಣವೇನು?
ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಈಗಾಗಲೇ ಯೋಜನೆಯ ವೆಚ್ಚ ಬೆಟ್ಟದಂತೆ ಬೆಳೆದಿದೆಯೇ ಹೊರತು ಈವರೆಗೂ ನೀರು ಹರಿದಿಲ್ಲ. ಇನ್ನು ಯೋಜನೆ ಮೂಲದಲ್ಲಿ ನಿಗದಿತ ಪ್ರಮಾಣ ನೀರು ಇಲ್ಲವೆಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಜತೆಗೆ ಭಾರತೀಯ ವಿಜ್ಞಾನ ಸಂಸ್ಥೆ ಕೂಡ ಅಧ್ಯಯನ ನಡೆಸಿ, ಎತ್ತಿನಹೊಳೆಯಲ್ಲಿ ಉದ್ದೇಶಿಸಿದಷ್ಟು ನೀರು ಸಿಗುವುದಿಲ್ಲ ಎಂದು ಹೇಳಿತ್ತು.ಈಗ ಯೋಜನೆ ಮತ್ತಷ್ಟು ವಿಳಂಬವಾಗುತ್ತಿದ್ದು, ಹಣ ಖರ್ಚಾಗುತ್ತಿದೆಯೇ ವಿನಾಃ ನೀರು ಹರಿಯವುದಿಲ್ಲ ಎಂಬುದು ಪ್ರತಿಪಕ್ಷಗಳ ಆರೋಪವಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೂಡ ಇದೇ ವಿಚಾರ ಮುಂದಿಟ್ಟು ಇದೀಗ ಕೃಷ್ಣೆಯಿಂದ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಹರಿಸಲು ಮನವಿ ಮಾಡಿದ್ದಾರೆ.

