West Bengal Election 2026: ಮತದಾರರ ಪಟ್ಟಿ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಸರ್ಕಾರಕ್ಕೆ ಹಿನ್ನಡೆ
x
ಸುಪ್ರೀಂ ಕೋರ್ಟ್‌(ಸಂಗ್ರಹ ಚಿತ್ರ)

West Bengal Election 2026: ಮತದಾರರ ಪಟ್ಟಿ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಸರ್ಕಾರಕ್ಕೆ ಹಿನ್ನಡೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯಿಂದ ಕೈಬಿಡಲಾದ 60 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳ ಮರು ಸೇರ್ಪಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


Click the Play button to hear this message in audio format

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರಾಗಿ ಗುರುತಿಸಿಕೊಳ್ಳಲು ವಿಫಲರಾದವರನ್ನು ಮಧ್ಯಂತರವಾಗಿ ಪಟ್ಟಿಗೆ ಸೇರಿಸಲು ಸುಪ್ರೀಂ ಕೋರ್ಟ್ ಮಂಗಳವಾರ (ಏಪ್ರಿಲ್ 7) ನಿರಾಕರಿಸಿದೆ. ಮೇಲ್ಮನವಿಗಳು ವಿಚಾರಣೆ ಹಂತದಲ್ಲಿರುವಾಗ ಇಂತಹ ಸೇರ್ಪಡೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಧ್ಯಂತರ ಸೇರ್ಪಡೆಗೆ ಪಟ್ಟು

ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್ ಮತ್ತು ಕಪಿಲ್ ಸಿಬಲ್ ಅವರು, ಮೇಲ್ಮನವಿ ಸಲ್ಲಿಸಿರುವ ಮತದಾರರನ್ನು ತಾತ್ಕಾಲಿಕವಾಗಿ ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದ್ದರು. ಆದರೆ, ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರಿದ್ದ ಪೀಠವು ಇದನ್ನು ತಿರಸ್ಕರಿಸಿತು.

ನ್ಯಾಯಾಧಿಕರಣದ ಪ್ರಕ್ರಿಯೆ ಅಂತಿಮ

"ಪರಿಷ್ಕರಣೆ ವೇಳೆ ಕೈಬಿಟ್ಟವರು ಮೇಲ್ಮನವಿ ಸಲ್ಲಿಸಲು ಅರ್ಹರಿದ್ದಾರೆ. ಮೇಲ್ಮನವಿ ಪ್ರಾಧಿಕಾರಗಳು ನ್ಯಾಯಸಮ್ಮತವಾದ ಪ್ರಕ್ರಿಯೆಯನ್ನು ಅನುಸರಿಸಿ ಅಂತಿಮ ಆದೇಶ ನೀಡಲಿವೆ. ಇದಕ್ಕೆ ಒಂದು ಅಥವಾ ಎರಡು ತಿಂಗಳು ಬೇಕಾಗಬಹುದು. ಕೇವಲ ಮೇಲ್ಮನವಿ ಬಾಕಿ ಇದೆ ಎಂಬ ಕಾರಣಕ್ಕೆ ಎಲ್ಲರನ್ನೂ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿ ಬಾಗ್ಚಿ ತಿಳಿಸಿದರು.

60 ಲಕ್ಷ ಜನರ ಹೆಸರು ಡಿಲೀಟ್‌

ಸರ್ಕಾರದ ಅಂಕಿಅಂಶಗಳ ಪ್ರಕಾರ, ಸುಮಾರು 60 ಲಕ್ಷ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇದರಲ್ಲಿ 44 ಲಕ್ಷ ಪ್ರಕರಣಗಳ ಪೈಕಿ ಕೇವಲ ಶೇ. 55 ರಷ್ಟು (ಸುಮಾರು 24 ಲಕ್ಷ) ಜನರನ್ನು ಮಾತ್ರ ಮರು ಸೇರ್ಪಡೆ ಮಾಡಲಾಗಿದೆ. ಉಳಿದ 20 ಲಕ್ಷ ಜನರು ಇನ್ನೂ ಪಟ್ಟಿಯಿಂದ ಹೊರಗಿದ್ದಾರೆ. ಇವರಲ್ಲಿ 7 ಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ಮೇಲ್ಮನವಿ ಸಲ್ಲಿಸಿದ್ದಾರೆ.

ನ್ಯಾಯಾಂಗ ಅಧಿಕಾರಿಗಳ ನಿಯೋಜನೆ

ಮತದಾರರ ಸ್ಥಿತಿಗತಿ ಕುರಿತಾದ ಆಕ್ಷೇಪಣೆಗಳನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಈ ಹಿಂದೆ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಿತ್ತು. ಫೆಬ್ರವರಿ 28 ರಂದು ಪ್ರಕಟವಾದ ಅಂತಿಮ ಪಟ್ಟಿಯಲ್ಲಿ ಸುಮಾರು 63 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿತ್ತು.

ಗಡುವು ನೀಡಲು ನಿರಾಕರಣೆ

ಏಪ್ರಿಲ್ 15ರೊಳಗೆ ಎಲ್ಲಾ ಮೇಲ್ಮನವಿಗಳನ್ನು ವಿಲೇವಾರಿ ಮಾಡಿ, ಏಪ್ರಿಲ್ 18ರೊಳಗೆ ಪೂರಕ ಪಟ್ಟಿಯನ್ನು ಪ್ರಕಟಿಸಬೇಕು ಎಂಬ ಸರ್ಕಾರದ ಮನವಿಯನ್ನೂ ಕೋರ್ಟ್ ಪುರಸ್ಕರಿಸಲಿಲ್ಲ. ಮೇಲ್ಮನವಿ ಪ್ರಕ್ರಿಯೆಯು ಸ್ವತಂತ್ರವಾಗಿ ನಡೆಯಲಿ, ಅದನ್ನು ಆತುರಪಡಿಸುವುದು ಬೇಡ ಎಂದು ನ್ಯಾಯಾಲಯ ಹೇಳಿದೆ.

Read More
Next Story