
West Bengal Elections|SIR ಕಾರ್ಯದಲ್ಲಿದ್ದ ಅಧಿಕಾರಿಗಳನ್ನೇ ಒತ್ತೆಯಾಳಾಗಿಸಿದ ಪ್ರತಿಭಟನಾಕಾರರು; ಸುಪ್ರೀಂಕೋರ್ಟ್ ಗರಂ
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿದ್ದ 7 ನ್ಯಾಯಾಂಗ ಅಧಿಕಾರಿಗಳನ್ನು 9 ಗಂಟೆಗಳ ಕಾಲ ಒತ್ತೆಯಾಳಾಗಿಸಿಕೊಳ್ಳಲಾಗಿತ್ತು.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಾಲ್ಡಾ ಜಿಲ್ಲೆಯಲ್ಲಿ ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯದಲ್ಲಿದ್ದ ಏಳು ಮಂದಿ ನ್ಯಾಯಾಂಗ ಅಧಿಕಾರಿಗಳನ್ನು ಸುಮಾರು 9 ಗಂಟೆಗಳ ಕಾಲ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಒತ್ತೆಯಾಳಾಗಿಸಿಕೊಂಡ ಘಟನೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಏನಿದು ಘಟನೆ?
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆ ನಡೆಸಿತ್ತು. ಈ ಪ್ರಕ್ರಿಯೆಯಲ್ಲಿ ಸುಮಾರು 63 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು ಮತ್ತು ಇನ್ನೂ 60 ಲಕ್ಷ ಮತದಾರರ ಹೆಸರನ್ನು 'ವಿಚಾರಣೆ' ಅಡಿಯಲ್ಲಿ ಇರಿಸಲಾಗಿತ್ತು.
ಈ ಹೆಸರುಗಳನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲು ಸುಪ್ರೀಂಕೋರ್ಟ್ ನಿರ್ದೇಶನದಂತೆ ಏಳು ಮಂದಿ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಬುಧವಾರ ಮಾಲ್ಡಾ ಜಿಲ್ಲೆಯ ಕಾಲಿಯಾಚಕ್-2 ಬ್ಲಾಕ್ ಅಭಿವೃದ್ಧಿ ಕಚೇರಿಯಲ್ಲಿ (BDO) ಈ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾಗ, ಹೆಸರು ಕೈಬಿಟ್ಟಿದ್ದಕ್ಕೆ ಆಕ್ರೋಶಗೊಂಡ ಪ್ರತಿಭಟನಾಕಾರರು ಕಚೇರಿಗೆ ಮುತ್ತಿಗೆ ಹಾಕಿದರು.
Unprecedented developments in West Bengal.
— Amit Malviya (@amitmalviya) April 1, 2026
The Kaliachak-II BDO office was under siege. North Bengal and South Bengal were effectively cut off, with protesters blocking NH-12. Seven judicial officers, including three women, were trapped inside. The situation had spiralled out of… pic.twitter.com/AvYGOAzxMh
9 ಗಂಟೆಗಳ ಕಾಲ ನರಕಯಾತನೆ
ಮೂವರು ಮಹಿಳಾ ಅಧಿಕಾರಿಗಳು ಸೇರಿದಂತೆ ಒಟ್ಟು ಏಳು ಮಂದಿ ನ್ಯಾಯಾಂಗ ಅಧಿಕಾರಿಗಳನ್ನು ಸಂಜೆ 4 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಕಚೇರಿಯೊಳಗೆ ಕೂಡಿಹಾಕಲಾಗಿತ್ತು. ಒಬ್ಬ ಮಹಿಳಾ ಅಧಿಕಾರಿಯ ಜೊತೆಗಿದ್ದ 5 ವರ್ಷದ ಮಗುವಿಗೂ ಆಹಾರ ಮತ್ತು ನೀರು ನೀಡಲು ಪ್ರತಿಭಟನಾಕಾರರು ಬಿಡಲಿಲ್ಲ ಎಂಬ ಆಘಾತಕಾರಿ ವಿಷಯ ಹೊರಬಂದಿದೆ.
ಇನ್ನು ಮಧ್ಯರಾತ್ರಿ ಪೊಲೀಸರು ಅಧಿಕಾರಿಗಳನ್ನು ರಕ್ಷಿಸಿ ಕರೆದೊಯ್ಯುವಾಗ ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ವಾಹನದ ಗಾಜುಗಳು ಪುಡಿಯಾಗಿವೆ. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 12 ಅನ್ನು ತಡೆದು ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್‌ನ ಕೆಂಗಣ್ಣು
ಈ ವಿಷಯ ಗುರುವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರಿದ್ದ ಪೀಠವು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು. ಇದೊಂದು "ಅಪರಾಧಾತ್ಮಕ ವೈಫಲ್ಯ" (Criminal Failure) ಎಂದು ಸುಪ್ರೀಂಕೋರ್ಟ್ ಕರೆದಿದೆ. ಅಧಿಕಾರಿಗಳ ರಕ್ಷಣೆಗಾಗಿ ತಕ್ಷಣವೇ ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತೆ ಕೋರ್ಟ್ ಆದೇಶಿಸಿದೆ.
NIA ಅಥವಾ CBI ತನಿಖೆ
ಈ ಮುತ್ತಿಗೆಯು ಪೂರ್ವಯೋಜಿತ ಮತ್ತು ಪ್ರೇರಿತವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ಇದರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಥವಾ ಸಿಬಿಐಗೆ (CBI) ಒಪ್ಪಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ರಾಜಕೀಯ ಸಂಘರ್ಷ: ಮಮತಾ ಸರ್ಕಾರಕ್ಕೆ ಬಿಜೆಪಿ ತರಾಟೆ
ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ನ್ಯಾಯಾಂಗ ಅಧಿಕಾರಿಗಳಿಗೆ ನಿರಂತರ ಬೆದರಿಕೆ ಹಾಕಲಾಗುತ್ತಿದೆ. ಇದು ನ್ಯಾಯಾಂಗದ ಅಧಿಕಾರಕ್ಕೆ ಹಾಕಿರುವ ಸವಾಲು" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ವೇಳಾಪಟ್ಟಿ
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕಾವು ತಾರಕಕ್ಕೇರಿರುವ ಈ ಸಂದರ್ಭದಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಒತ್ತೆಯಾಳಾಗಿಸಿಕೊಂಡ ಘಟನೆಯು ತೀವ್ರ ಆತಂಕ ಮೂಡಿಸಿದೆ; ಈ ಬೆನ್ನಲ್ಲೇ ರಾಜ್ಯದಲ್ಲಿ ಏಪ್ರಿಲ್ 23 ರಂದು ಮೊದಲ ಹಂತದ ಚುನಾವಣೆ ಹಾಗೂ ಏಪ್ರಿಲ್ 29 ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

