
ಎಸ್‌ಐಆರ್ ದೂರಾಲೋಚನೆ ಅಲ್ಲ, ದುರಾಲೋಚನೆ: ಮತದಾರರ ಪಟ್ಟಿ ಪರಿಷ್ಕರಣೆ ನಡೆಸದಿರಲು ಪ್ರಗತಿಪರರ ಆಗ್ರಹ
ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು ವ್ಯವಸ್ಥಿತ ಪ್ರಜಾಸತ್ತಾತ್ಮಕ 'ದೂರಾಲೋಚನೆ'ಯಲ್ಲ, ಅದು ತನ್ನ ಒಡಲಲ್ಲಿ 'ದುರಾಲೋಚನೆ'ಯನ್ನು ಇಟ್ಟುಕೊಂಡಿದೆ ಎಂದು ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯಾತೀತ ಪಕ್ಷಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಾದ ಮೊಕದ್ದಮೆಗಳ ವಿಚಾರಣೆಯು ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವಾಗ, ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಆತುರದಲ್ಲಿ ನಡೆಸಬಾರದು ಎಂದು ಅವರು ಆಗ್ರಹಿಸಿದ್ದಾರೆ. ಸೋಮವಾರ ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿ.ಟಿ.ಲಲಿತಾ ನಾಯಕ್, ಎನ್.ವೆಂಕಟೇಶ್, ತಾರಾ ರಾವ್, ಕೆ.ಎಲ್.ಅಶೋಕ್, ಬಡಗಲಪುರ ನಾಗೇಂದ್ರ, ಎಚ್.ಆರ್.ಬಸವರಾಜಪ್ಪ, ನೂರ್ ಶ್ರೀಧರ್, ಯೂಸಫ್ ಕಣ್ಣಿ, ಕೆ.ವಿ.ಭಟ್, ವಿನಯ್ ಶ್ರೀನಿವಾಸ್, ಹೈದರ್ ಬೇಗ್, ಶೋಯಬ್ ಅಲಿಖಾನ್, ಡಾ.ವಾಸು, ರಿಯಾಜ್ ಅಹ್ಮದ್ ಹಾಗೂ ವಸೀಂ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿ ಈ ಎಚ್ಚರಿಕೆ ನೀಡಿದ್ದಾರೆ.
ಮತದಾನದ ಹಕ್ಕಿಗೆ ಕುತ್ತು
ಎಸ್‌ಐಆರ್ ಎನ್ನುವುದು ಸಂವಿಧಾನದಲ್ಲಿಯೇ ಇಲ್ಲದ, ಚುನಾವಣಾ ಆಯೋಗದ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುವ ಮತ್ತು ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸುವ ಪದ್ಧತಿ ಎಂದು ಮುಖಂಡರು ದೂರಿದರು. ಹಡಾಹುಡಿಯಲ್ಲಿ ನಡೆಸುವ ಈ ಮತ ಪಟ್ಟಿಯ ಪರಿಷ್ಕರಣಾ ಪ್ರಕ್ರಿಯೆಯಿಂದಾಗಿ ಮಹಿಳೆಯರು, ಅಲೆಮಾರಿಗಳು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲ ಜಾತಿಯ ಬಡವರು ದೊಡ್ಡ ಸಂಖ್ಯೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಕಾರಣವಾಗುತ್ತಿದೆ. ಕೇವಲ ದಾಖಲೆಗಳಿಲ್ಲ ಎಂಬ ಕಾರಣ ನೀಡಿ ಅರ್ಹ ಪ್ರಜೆಗಳ ಮತದಾನದ ಹಕ್ಕನ್ನು ಅವರು ಜೀವಂತ ಇರುವ ಕಾಲದಲ್ಲಿಯೇ ನಿರಾಕರಿಸುವುದು ಪ್ರಜಾತಂತ್ರ ವ್ಯವಸ್ಥೆಯ ದುರಂತ ಅಂತ್ಯವಾಗಿದೆ ಎಂದು ಹೋರಾಟಗಾರರು ಆತಂಕ ವ್ಯಕ್ತಪಡಿಸಿದರು.
ಎಸ್‌ಐಆರ್ ಪ್ರಕ್ರಿಯೆ ನಡೆದಿರುವ ಇತರ ರಾಜ್ಯಗಳಲ್ಲಿ ಇಪ್ಪತ್ತು ಲಕ್ಷದಿಂದ ಆರಂಭಿಸಿ ಮೂರು ಕೋಟಿಯ ತನಕ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕರ್ನಾಟಕವು ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ರಾಜ್ಯವಾಗಿದ್ದು, ಕೇವಲ ಶೇಕಡಾ ಎರಡರಷ್ಟು ಮತಗಳು ಇಡೀ ರಾಜ್ಯದ ಚುನಾವಣಾ ಭವಿಷ್ಯವನ್ನೇ ಏರುಪೇರು ಮಾಡಬಲ್ಲವು. ಈ ಕಾರಣದಿಂದಾಗಿ, ಅಸಂವಿಧಾನಿಕವಾದ ಮತ್ತು ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರದಬ್ಬುವ ಇಂತಹ ವಿಕೃತ ಮತಪಟ್ಟಿಯನ್ನು ತಾವು ಒಪ್ಪುವುದಿಲ್ಲ ಮತ್ತು ಇದನ್ನು ಮನಬಂದಂತೆ ವಕ್ರೀಕರಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರಡು ಪಟ್ಟಿಯ ಬಹಿರಂಗ ಪರಿಶೀಲನೆಗೆ ಆಗ್ರಹ
ಎಸ್‌ಐಆರ್ ಪ್ರಕ್ರಿಯೆಯು ಅತ್ಯಂತ ವ್ಯವಧಾನದಿಂದ, ಜನರನ್ನು 'ಹೊರ ತಳ್ಳುವ' ಬದಲು 'ಒಳ ಸೇರಿಸಿಕೊಳ್ಳುವ' ವಿಶಾಲ ಧೋರಣೆಯೊಂದಿಗೆ ನಡೆಯಬೇಕು ಎಂದು ಮುಖಂಡರು ಒತ್ತಾಯಿಸಿದರು. ಚುನಾವಣಾ ಆಯೋಗದ ಮ್ಯಾನ್ಯುಯಲ್‌ನಲ್ಲಿ ಇರುವಂತೆ, ಕರಡು ಮತದಾರರ ಪಟ್ಟಿಯನ್ನು ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳಲ್ಲಿ ಬಹಿರಂಗವಾಗಿ ಅಂಟಿಸಬೇಕು ಹಾಗೂ ಓದಿ ಹೇಳಬೇಕು. ಆ ಬಳಿಕ ಮುಕ್ತವಾಗಿ ತಿದ್ದುಪಡಿಗಳನ್ನು ಹಾಗೂ ತಕರಾರುಗಳನ್ನು ಸ್ವೀಕರಿಸಿ, ಅವೆಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಪಟ್ಟಿಯನ್ನು ಅಂತಿಮಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಸಭೆಯಲ್ಲಿ ಮತ ಪಟ್ಟಿಯ ಪರಿಶೀಲನೆ ಕಡ್ಡಾಯವಾಗಲೇಬೇಕು. ಒಂದು ವೇಳೆ ಜನರ ಬಳಿ ಸೂಕ್ತ ದಾಖಲೆಗಳಿಲ್ಲದಿದ್ದಲ್ಲಿ, ಅವುಗಳನ್ನು ಸಿದ್ಧಪಡಿಸಿಕೊಳ್ಳಲು ಹಾಗೂ ಮೇಲ್ಮನವಿ ಸಲ್ಲಿಸಲು ಕನಿಷ್ಠ ಆರು ತಿಂಗಳ ಸಮಯಾವಕಾಶ ನೀಡಬೇಕು. ರಾಜ್ಯದ ವಯಸ್ಕರ ಒಟ್ಟು ಜನಸಂಖ್ಯೆಗೂ ಹಾಗೂ ಸ್ಥಳೀಯ ಚುನಾವಣೆಗಳಿಗಾಗಿ ರಾಜ್ಯ ಚುನಾವಣಾ ಆಯೋಗ ಸಿದ್ಧಪಡಿಸುವ ಮತದಾರರ ಪಟ್ಟಿಯ ಸಂಖ್ಯೆಗೂ ಶೇಕಡಾ ಒಂದಕ್ಕಿಂತ ಹೆಚ್ಚು ವ್ಯತ್ಯಾಸವಿರಬಾರದು. ಲಕ್ಷಾಂತರ ಸಂಖ್ಯೆಯಲ್ಲಿ ಅರ್ಹ ಮತದಾರರನ್ನು ಹೊರದಬ್ಬಿ ಚುನಾವಣೆ ನಡೆಸಲು ಅವಕಾಶ ನೀಡುವುದಿಲ್ಲ ಹಾಗೂ ಬಲವಂತ ಮಾಡಿದರೆ, ನಮ್ಮ ಚುನಾವಣೆಗಳನ್ನು ನಾವೇ ನಡೆಸಿಕೊಳ್ಳುತ್ತೇವೆ, ಕೇಂದ್ರದ ಮಧ್ಯಪ್ರವೇಶ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜನಸ್ನೇಹಿ ಕ್ರಮಗಳ ಅಳವಡಿಕೆಗೆ ಒತ್ತಾಯ
ಹಾಲಿ ಪ್ರಕ್ರಿಯೆಯಿಂದ ಜನರು ತೀವ್ರತರನಾದ ಗೊಂದಲ ಹಾಗೂ ಆತಂಕದಲ್ಲಿದ್ದು, ರಾಜ್ಯ ಸರ್ಕಾರವು ತಕ್ಷಣವೇ ಜನರ ನೆರವಿಗೆ ಧಾವಿಸಬೇಕು ಮತ್ತು ಪ್ರಮುಖವಾಗಿ ಮೂರು ರೀತಿಯ ಜನಸ್ನೇಹಿ ಕ್ರಮಗಳಿಗೆ ಮುಂದಾಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಲಾಯಿತು.
ಮೊದಲನೆಯದಾಗಿ, ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಸರ್ಕಾರವು ಮಾಡಿದಂತೆ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಮತ್ತು ವಾರ್ಡುಗಳಲ್ಲಿ ಮತದಾರರ ನೆರವು ಕೇಂದ್ರಗಳನ್ನು ಸ್ಥಾಪಿಸಬೇಕು. ಎರಡನೆಯದಾಗಿ, ಕೇರಳ ಸರ್ಕಾರವು ಮಾಡಿದಂತೆ ದಾಖಲೆಗಳಿಲ್ಲದ ಜನರಿಗೆ ಯಾವುದೇ ರೀತಿಯಲ್ಲಿ ಸತಾಯಿಸದೆ ಅತ್ಯಂತ ಸುಲಭವಾಗಿ ಹಾಗೂ ತ್ವರಿತವಾಗಿ ವಾಸದ ಮತ್ತು ಜಾತಿಯ ಪ್ರಮಾಣ ಪತ್ರಗಳನ್ನು ಒದಗಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಸುತ್ತೋಲೆ ಕಳುಹಿಸಬೇಕು. ಮೂರನೆಯದಾಗಿ, ತಮಿಳುನಾಡಿನಲ್ಲಿ ಅಳವಡಿಸಿಕೊಂಡಂತೆ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಯುದ್ಧೋಪಾದಿಯಲ್ಲಿ ಪರಿಣಾಮಕಾರಿಯಾದ ತರಬೇತಿ ನೀಡಬೇಕು ಮತ್ತು ಅವರು ಪ್ರತಿ ಮನೆಗೂ ತಲುಪಿ ಒಬ್ಬರೇ ಒಬ್ಬ ಅರ್ಹ ವ್ಯಕ್ತಿಯೂ ಹೊರಗುಳಿಯದಂತೆ ಎಚ್ಚರಿಕೆ ವಹಿಸುತ್ತಾ ನೋಂದಾವಣೆ ಪ್ರಕ್ರಿಯೆ ನಡೆಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಹಕ್ಕೊತ್ತಾಯ ಸಲ್ಲಿಕೆ
ಸ್ಥಳೀಯ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಮತ್ತು ಜನರಲ್ಲಿ ವ್ಯಾಪಕ ಆತಂಕ ಇರುವುದರಿಂದ ಮಾಸ್ಟರ್ ರೋಲಿನ ಸುಧಾರಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಿಸಲು ವಿಶೇಷ ಗಮನ ನೀಡಬೇಕು. ಗ್ರಾಮ ಮತ್ತು ವಾರ್ಡ್ ಸಭೆಗಳನ್ನು ಸಿಎಜಿ (CAG) ರೂಪಿಸಿರುವ ಸಾಮಾಜಿಕ ಪರಿಶೀಲನೆಯ ಮಾನದಂಡಗಳನ್ನು ಅನ್ವಯಿಸಿಯೇ ನಡೆಸಬೇಕು. ಆ ಮೂಲಕ ರಾಜ್ಯ ಚುನಾವಣಾ ಆಯೋಗದ ಪಟ್ಟಿಗೆ ಹೆಚ್ಚಿನ ಖಚಿತತೆ ಹಾಗೂ ಮಾನ್ಯತೆ ಬರುವಂತೆ ನೋಡಿಕೊಳ್ಳಬೇಕು. ಒಟ್ಟಾರೆಯಾಗಿ ರಾಜ್ಯವು ತನ್ನದೇ ಆದ ನಿಖರ ಹಾಗೂ ಖಚಿತ ಮತಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು.
ಸಂವಿಧಾನದ ಮೌಲ್ಯಗಳಿಗಿಂತ ಹಾಗೂ ಪ್ರಜಾತಂತ್ರದ ಬುನಾದಿಗಿಂತ ಮೇಲಿನದು ಯಾವುದೂ ಇಲ್ಲ. ಚುನಾವಣಾ ಆಯೋಗವು ಅಸಂವಿಧಾನಿಕವಾಗಿ ಮತ್ತು ಅಪ್ರಜಾತಾಂತ್ರಿಕವಾಗಿ ನಡೆದುಕೊಂಡರೆ ಕರ್ನಾಟಕ ಅದನ್ನು ಎಂದಿಗೂ ಸಹಿಸುವುದಿಲ್ಲ ಮತ್ತು ಅದನ್ನು ಬಲವಂತವಾಗಿ ನಮ್ಮ ಮೇಲೆ ಹೇರಲು ಬಿಡುವುದಿಲ್ಲ. ಈ ಹಕ್ಕೊತ್ತಾಯಗಳನ್ನು ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮತ್ತು ಎಚ್ಚರಿಕೆಯ ರೂಪದಲ್ಲಿ ಸಲ್ಲಿಸುತ್ತಿದ್ದೇವೆ ಎಂದು ಮುಖಂಡರು ಮಾಹಿತಿ ನೀಡಿದರು. ಈ ಆಗ್ರಹಗಳಿಗೆ ಕೇಂದ್ರ ಚುನಾವಣಾ ಆಯೋಗವು ಕಡ್ಡಾಯವಾಗಿ ಕಿವಿಗೊಡಬೇಕು ಎಂದು ಸ್ಪಷ್ಟಪಡಿಸಿದರು.

