
ಧರ್ಮ ಮೀರಿದ ಮಾನವೀಯತೆ! ಹಿಂದೂ ಮಕ್ಕಳಿಗೆ ಆಸರೆ ಕೊಟ್ಟು ಮದುವೆ ಮಾಡಿಸಿದ ಮುಸ್ಲಿಂ ದಂಪತಿ
ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಇಬ್ಬರು ಲಿಂಗಾಯತ ಮಕ್ಕಳಾದ ಸೋಮಶೇಖರ ಮತ್ತು ವಸಂತ ಮೆಹಬೂಬ್ ಹಸನ್ ನಾಯಿಕವಾಡಿ ಮತ್ತು ನೂರಜಾನ್ ದಂಪತಿ ತಮ್ಮ ಸ್ವಂತ ಮಕ್ಕಳಂತೆ ಸಾಕಿ ಬೆಳೆಸಿದ್ದಾರೆ.
ಧರ್ಮ ಮತ್ತು ಜಾತಿಗಳ ಹೆಸರಿನಲ್ಲಿ ಸಂಘರ್ಷ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಇಲ್ಲೊಂದು ಕುಟುಂಬ ಇಡೀ ದೇಶಕ್ಕೇ ಮಾದರಿಯಾಗುವಂತಹ ಮಾನವೀಯತೆಯ ಸಂದೇಶ ಸಾರಿದೆ. ಅನಾಥರಾದ ಇಬ್ಬರು ಹಿಂದೂ ಮಕ್ಕಳನ್ನು ತನ್ನ ಸ್ವಂತ ಮಕ್ಕಳಿಗಿಂತಲೂ ಮಿಗಿಲಾಗಿ ಸಾಕಿ, ವಿದ್ಯಾವಂತರನ್ನಾಗಿ ಮಾಡಿ, ಇದೀಗ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡುವ ಮೂಲಕ ಬೆಳಗಾವಿಯ ಮುಸ್ಲಿಂ ದಂಪತಿ ಭಾವೈಕ್ಯತೆಯನ್ನು ಸಾರಿದ್ದಾರೆ.
ಏನಿದು ಘಟನೆ?
ಗ್ರಾಮದ ಹಿಂದೂ ಲಿಂಗಾಯತ ಸಮಾಜದ ಶಿವಾನಂದ ಕಾಡಯ್ಯ ಪೂಜಾರ ಎಂಬುವವರು ಖಾಸಗಿ ಬಸ್ ಚಾಲಕರಾಗಿದ್ದರು. ದಂಪತಿಗೆ ಸೋಮಶೇಖರ ಹಾಗೂ ವಸಂತ ಎಂಬ ಇಬ್ಬರು ಮಕ್ಕಳು. ಮಕ್ಕಳು ಚಿಕ್ಕವರಿದ್ದಾಗಲೇ ಈ ದಂಪತಿ ಅಚಾನಕಕ್ಕಾಗಿ ವಿಧಿವಶರಾದರು. ತಂದೆ-ತಾಯಿಯನ್ನು ಕಳೆದುಕೊಂಡು ಬೀದಿಗೆ ಬಿದ್ದ ಈ ಅನಾಥ ಮಕ್ಕಳನ್ನು ಕಂಡು ಮರುಗಿದವರು ಅದೇ ಗ್ರಾಮದ ಕೆಎಸ್ಆರ್‌ಟಿಸಿ ನಿವೃತ್ತ ಚಾಲಕ ಮೆಹಬೂಬ್ ಹಸನ್ ನಾಯಿಕವಾಡಿ (ಮುಲ್ಲಾ) ಹಾಗೂ ಅವರ ಪತ್ನಿ ನೂರಜಾನ್.
ತ್ಯಾಗಮಯ ಬದುಕು
ನಾಯಿಕವಾಡಿ ದಂಪತಿಗೆ ಈಗಾಗಲೇ ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದರು. ಆದರೂ ಒಂದು ಕ್ಷಣ ಯೋಚಿಸದ ದಂಪತಿ, ಈ ಇಬ್ಬರು ಹಿಂದೂ ಮಕ್ಕಳನ್ನು ತಮ್ಮ ಮನೆಗೆ ಕರೆತಂದರು. ಅಂದಿನಿಂದ ಇಂದಿನವರೆಗೆ ತಮ್ಮ ಐವರು ಮಕ್ಕಳ ಜೊತೆಗೇ ಇವರನ್ನೂ ಒಂದೇ ಮನೆಯಲ್ಲಿ ಬೆಳೆಸಿದರು. ಸೋಮಶೇಖರ ಪದವಿ ಮುಗಿಸಿದರೆ, ವಸಂತ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಇಬ್ಬರೂ ಎಸ್‌ಇಝಡ್‌ನ ಏಕಸ್ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದಾರೆ.
ಹಿಂದೂ ಸಂಪ್ರದಾಯದಂತೆ ವಿವಾಹ
ಭಾನುವಾರ ಗ್ರಾಮದ ಕಾಡಸಿದ್ದೇಶ್ವರ ಸಭಾಭವನದಲ್ಲಿ ನಡೆದ ಮದುವೆ ಸಮಾರಂಭ ಅಪರೂಪದ ಸಾಕ್ಷಿಯಾಗಿತ್ತು. ಮದುವೆ ಮಂಟಪದಲ್ಲಿ ವಧು-ವರರು ಮಾತ್ರ ಹಿಂದೂಗಳು. ಆದರೆ, ಮದುವೆಯ ಜವಾಬ್ದಾರಿ ಹೊತ್ತವರು, ಖರ್ಚು-ವೆಚ್ಚ ಭರಿಸಿದವರು ಮತ್ತು ಅತಿಥಿಗಳನ್ನು ಸ್ವಾಗತಿಸಿದವರೆಲ್ಲರೂ ಮುಸ್ಲಿಂ ಬಾಂಧವರು ಸೋಮಶೇಖರ್‌ಗೆ ಕನ್ಯೆ ನೋಡಿ, ಲಿಂಗಾಯತ ಸಂಪ್ರದಾಯದಂತೆಯೇ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಲಾಯಿತು.
ಈ ಬಗ್ಗೆ ಮೆಹಬೂಬ್ ಹಸನ್ ನಾಯಿಕವಾಡಿ ಮಾತನಾಡಿದ್ದು, "ನನಗೆ ಮನುಷ್ಯರೆಲ್ಲ ಒಂದೇ ಎಂಬ ಭಾವನೆ ಇದೆ. ಈ ಇಬ್ಬರೂ ಮಕ್ಕಳು ನಮ್ಮ ಮನೆಯಲ್ಲಿ ನಮ್ಮ ಮಕ್ಕಳಂತೆಯೇ ಬೆಳೆದಿದ್ದಾರೆ. ಇವತ್ತು ಅವರ ಮದುವೆ ನೋಡುತ್ತಿದ್ದರೆ ನನ್ನ ಕರುಳ ಕುಡಿಯ ಮದುವೆ ಮಾಡಿದಷ್ಟೇ ಹೆಮ್ಮೆಯಾಗುತ್ತಿದೆ" ಎಂದಿದ್ದಾರೆ.
ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಬಸವಪ್ರಭು ವಂಟಮೂರಿ ಅವರು ಮಾತನಾಡಿ, "ಧರ್ಮ ಸಂಘರ್ಷಗಳು ಹೆಚ್ಚಾಗಿರುವ ಈ ದಿನಗಳಲ್ಲಿ ನಾಯಿಕವಾಡಿ ಕುಟುಂಬದ ಈ ನಿರ್ಧಾರ ಇಡೀ ದೇಶಕ್ಕೆ ಮಾದರಿ" ಎಂದು ಶ್ಲಾಘಿಸಿದರು. ಗ್ರಾಮದ ಹಿರಿಯರು ಹಾಗೂ ಎರಡೂ ಸಮುದಾಯದ ಜನರು ಈ ಅಪರೂಪದ ಮದುವೆಗೆ ಸಾಕ್ಷಿಯಾಗಿ ಹರಸಿದರು. ಕೇವಲ ರಕ್ತದ ಸಂಬಂಧ ಮಾತ್ರವಲ್ಲ, ಮನುಷ್ಯತ್ವದ ಸಂಬಂಧ ಕೂಡ ಎಷ್ಟು ಗಟ್ಟಿಯಾಗಿರುತ್ತದೆ ಎಂಬುದಕ್ಕೆ ಬಸ್ತವಾಡ ಗ್ರಾಮದ ಈ ಘಟನೆ ಸಾಕ್ಷಿಯಾಗಿದೆ.

