ಗ್ರಾಮದ ಸಮಸ್ಯೆ ಹೇಳಲು ಹೋದವನಿಗೆ ಕಚ್ಚಿ, ಚಪ್ಪಲಿಯಿಂದ ಹೊಡೆದ ಪಂಚಾಯತ್ ಅಧ್ಯಕ್ಷ!
x
ಗಾಯಾಳು ಹನುಮಂತ ಕರಿಕಟ್ಟಿ

ಗ್ರಾಮದ ಸಮಸ್ಯೆ ಹೇಳಲು ಹೋದವನಿಗೆ ಕಚ್ಚಿ, ಚಪ್ಪಲಿಯಿಂದ ಹೊಡೆದ ಪಂಚಾಯತ್ ಅಧ್ಯಕ್ಷ!

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮ ಪಂಚಾಯತ್ ಅಧ್ಯಕ್ಷ ದುರ್ಗಪ್ಪ ಟೋಪೊಜಿ ಗ್ರಾಮಸ್ಥ ಹನುಮಂತ ಎಂಬುವವರ ಬೆನ್ನು ಕಚ್ಚಿ ಹಲ್ಲೆ ನಡೆಸಿದ್ದಾರೆ.


ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು, ಸಮಸ್ಯೆ ಹೇಳಲು ಬಂದ ಗ್ರಾಮಸ್ಥನ ಬೆನ್ನಿಗೆ ಕಚ್ಚಿ ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ

ಶಿಂಧೋಗಿ ಗ್ರಾಮ ಪಂಚಾಯತ್ ಅಧ್ಯಕ್ಷ ದುರ್ಗಪ್ಪ ಟೋಪೊಜಿ ಎಂಬುವವರ ಮೇಲೆ ಈ ಹಲ್ಲೆಯ ಆರೋಪ ಕೇಳಿಬಂದಿದೆ. ಗ್ರಾಮದ ನಿವಾಸಿ ಹನುಮಂತ ಕರಿಕಟ್ಟಿ (30) ಎಂಬುವವರು ಹಲ್ಲೆಗೊಳಗಾದ ವ್ಯಕ್ತಿ. ಗ್ರಾಮದ ಶಾಲೆಯ ಪಕ್ಕದ ರಸ್ತೆಯ ಮೇಲೆ ಚರಂಡಿ ನೀರು ನಿಲ್ಲುತ್ತಿರುವ ಬಗ್ಗೆ ಹನುಮಂತ ಅವರು ಈ ಹಿಂದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ (PDO) ಗಮನಕ್ಕೆ ತಂದಿದ್ದರು. ಇದೇ ವಿಚಾರವಾಗಿ ಅಧ್ಯಕ್ಷ ದುರ್ಗಪ್ಪ ಅವರನ್ನು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ.

ವಿಕೃತಿ ಮೆರೆದ ಅಧ್ಯಕ್ಷ

ಜಗಳದ ಸಂದರ್ಭದಲ್ಲಿ ಅಧ್ಯಕ್ಷ ದುರ್ಗಪ್ಪ ಮತ್ತು ಆತನ ಸಂಬಂಧಿಕರು ಹನುಮಂತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅಧ್ಯಕ್ಷರು ಹನುಮಂತನ ಬೆನ್ನನ್ನು ಬಲವಾಗಿ ಕಚ್ಚಿ ಗಾಯಗೊಳಿಸಿದ್ದಲ್ಲದೆ, ಚಪ್ಪಲಿಯಿಂದಲೂ ಹೊಡೆದು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ದಾಳಿಯಲ್ಲಿ ಗಾಯಗೊಂಡಿರುವ ಹನುಮಂತ ಅವರನ್ನು ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯೊಬ್ಬರು ಈ ರೀತಿ ಅಮಾನವೀಯವಾಗಿ ವರ್ತಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Read More
Next Story