
ಬಾಗಲಕೋಟೆ ಹಿಂಸಾಚಾರ|ಹಿಂದೂ ಕಾರ್ಯಕರ್ತರ ಬಂಧನದ ವೇಳೆ ಮಹಿಳೆಯರ ಹೈಡ್ರಾಮಾ!
ಪೊಲೀಸರ ನೂಕಾಟ ಮತ್ತು ಅಕ್ರಮ ಬಂಧನದ ಯತ್ನದ ವಿರುದ್ಧ ಸಾರ್ವಜನಿಕರು ರೊಚ್ಚಿಗೆದ್ದಿದ್ದರಿಂದ ಹಳೆಯ ನಗರದ ಅಂಬಿಗೇರ ಗಲ್ಲಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಬಾಗಲಕೋಟೆ ನಗರದಲ್ಲಿ ಶಿವಾಜಿ ಜಯಂತಿಯ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದ ಬೂದಿ ಮುಚ್ಚಿದ ಕೆಂಡದಂತಿದ್ದ ವಾತಾವರಣ ಈಗ ಮತ್ತೆ ಭುಗಿಲೆದ್ದಿದೆ. ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ, ಸ್ಥಳೀಯರು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ತಳ್ಳಾಟ-ನೂಕಾಟ ನಡೆದಿದ್ದು, ಇಡೀ ಪ್ರದೇಶ ರಣರಂಗವಾಗಿ ಮಾರ್ಪಟ್ಟಿದೆ.
ಘಟನೆಯ ಹಿನ್ನೆಲೆ
ಫೆ.20 ರಂದು ಬಾಗಲಕೋಟೆ ನಗರದ ಕಿಲ್ಲಾ ಓಣಿಯಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆಯ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ಹಾಗೂ ಚಪ್ಪಲಿ ತೂರಾಟ ನಡೆಸಿದ್ದರು. ಶಿವಾಜಿ ಜಯಂತಿ ಮೆರವಣಿಗೆಯು ಕಿಲ್ಲಾ ಓಣಿಯ ಮಸೀದಿ ಬಳಿ ಸಾಗುತ್ತಿದ್ದಾಗ ಹಠಾತ್ತನೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ಮೆರವಣಿಗೆಯಲ್ಲಿದ್ದ ಹಿಂದೂ ಕಾರ್ಯಕರ್ತ ಪ್ರಕಾಶ್ ಅರಕೇರಿ ಅವರ ತಲೆಗೆ ತೀವ್ರ ಗಾಯವಾಗಿದ್ದು, ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಕೆಲ ಸಾರ್ವಜನಿಕರಿಗೂ ಗಾಯಗಳಾಗಿದ್ದವು. ಮತ್ತೊಂದೆಡೆ, ನವನಗರದ ಈದ್ಗಾ ಮೈದಾನದ ಬಳಿಯ ಮಸೀದಿಯ ಮೂರು ಗುಮ್ಮಟಗಳನ್ನು ಕಿಡಿಗೇಡಿಗಳು ಕೆಡವಿ, ಗೋಡೆಯ ಮೇಲೆ 'ಓಂ' ಎಂದು ಬರೆದಿರುವ ಘಟನೆ ವರದಿಯಾಗಿತ್ತು.
ಮಹಿಳೆಯರಿಂದ ವಿರೋಧ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆಯ ನಗರದ ಕಿಲ್ಲಾ ಹಾಗೂ ಅಂಬಿಗೇರ ಓಣಿಯ ನಿವಾಸಿಗಳಾದ ಮುತ್ತು ಮತ್ತು ಮಾಗಿ ಎಂಬ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಪೊಲೀಸರು ತಡರಾತ್ರಿ ಆಗಮಿಸಿದ್ದರು. ಡಿವೈಎಸ್‌ಪಿ ಗಜಾನನ ಸುತ್ತಾರೆ ಹಾಗೂ ಸಿಪಿಐ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪೊಲೀಸರ ತಂಡ ಈ ಕಾರ್ಯಾಚರಣೆಗೆ ಇಳಿದಿತ್ತು. ಪೊಲೀಸರು ಯಾವುದೇ ಪೂರ್ವ ಮಾಹಿತಿ ಅಥವಾ ಸೂಕ್ತ ಕಾರಣ ನೀಡದೆ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಮುಂದಾದದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಅದರಲ್ಲೂ ವಿಶೇಷವಾಗಿ ಸ್ಥಳೀಯ ಮಹಿಳೆಯರು ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಕಾರು ತಡೆದ ಸಾರ್ವಜನಿಕರು
ಪೊಲೀಸರು ಹಿಂದೂ ಕಾರ್ಯಕರ್ತರನ್ನು ಖಾಸಗಿ ಕಾರಿನಲ್ಲಿ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ, ಮಹಿಳೆಯರು ಕಾರಿಗೆ ಅಡ್ಡಲಾಗಿ ನಿಂತು ಪ್ರತಿಭಟಿಸಿದರು. ಪೊಲೀಸರ ವಾಹನ ಚಲಿಸದಂತೆ ತಡೆಯಲು ರಸ್ತೆಗೆ ತಗಡಿನ ಶೀಟ್‌ಗಳು ಮತ್ತು ಕಲ್ಲುಗಳನ್ನು ಇಟ್ಟು ರಸ್ತೆ ತಡೆ ನಡೆಸಲಾಯಿತು. ಪೊಲೀಸರ ಹಿಡಿತದಲ್ಲಿದ್ದ ಕಾರ್ಯಕರ್ತರನ್ನು ಮಹಿಳೆಯರು ಬಲವಂತವಾಗಿ ಬಿಡಿಸಿಕೊಂಡು ಕಾರಿನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು.
ಎಎಸ್‌ಐ ವಿರುದ್ಧ ಮಹಿಳೆಯರ ಗಂಭೀರ ಆರೋಪ
ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾಗ, ಎಎಸ್‌ಐ ಆನಂದ್ ವಾಗ್ಮೋರೆ ಅವರ ವಿರುದ್ಧ ಮಹಿಳೆಯರು ಮತ್ತು ಯುವಕರು ತಿರುಗಿಬಿದ್ದರು. "ಇವನೇ ಮಹಿಳೆಯರನ್ನು ಎಳೆದಾಡಿದ್ದು" ಎಂದು ಆರೋಪಿಸಿ ಸಾರ್ವಜನಿಕರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪೊಲೀಸರು ಅನಿವಾರ್ಯವಾಗಿ ಸ್ಥಳದಿಂದ ವಾಪಸ್ ಆಗಬೇಕಾಯಿತು.
ಬಿಗುವಿನ ವಾತಾವರಣ
ಕೇವಲ ಒಂದು ದಿನದ ಹಿಂದೆಯಷ್ಟೇ 'ಹಿಂದೂ ಹಿತರಕ್ಷಣಾ ಹೋರಾಟ ಸಮಿತಿ'ಯು ಮಸೀದಿ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಆದರೆ, ಈ ಬೆನ್ನಲ್ಲೇ ಪೊಲೀಸರು ಹಿಂದೂ ಕಾರ್ಯಕರ್ತರ ಬಂಧನಕ್ಕೆ ಮುಂದಾದದ್ದು ಹಳೆಯ ನಗರದಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ ಅಂಬಿಗೇರ ಗಲ್ಲಿಯಲ್ಲಿ ಬಿಗುವಿನ ವಾತಾವರಣವಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

