
ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ; ತನ್ವೀರ್ ಸೇರಿ 8 ಮಂದಿ ಬಂಧನ
ಘರ್ಷಣೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಅಂಗಡಿಗಳ ಮುಂಭಾಗದ ಗ್ಲಾಸ್ಗಳು ಮತ್ತು ಪೀಠೋಪಕರಣಗಳು ಜಖಂಗೊಂಡಿವೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ವೇಳೆ ಉಂಟಾದ ಸಣ್ಣ ಸಂಘರ್ಷವೊಂದು ಕಲ್ಲು ತೂರಾಟಕ್ಕೆ ತಿರುಗಿ, ನಗರದ ಕಿಲ್ಲಾ ಓಣಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಸೇರಿದಂತೆ ಹಲವರು ಘಟನೆಯಲ್ಲಿ ಗಾಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಸದ್ಯ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬೂದಿ ಮುಚ್ಚಿದ ಕೆಂಡದಂತಹ ಸ್ಥಿತಿ ಸೃಷ್ಟಿಯಾಗಿದೆ.
ಗುರುವಾರ ರಾತ್ರಿ ಅಹಿತಕರ ಘಟನೆ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಅಲ್ಲದೆ, ಶುಕ್ರವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ಸಹ ಕಲ್ಲು ತೂರಾಟ ನಡೆದಿದೆ. ಮಾಂಸದಂಗಡಿಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಘರ್ಷಣೆ ಸಂಭವಿಸಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ಮುಖಂಡರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಘರ್ಷಣೆಯ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಅಂಗಡಿಗಳ ಮುಂಭಾಗದ ಗ್ಲಾಸ್ಗಳು ಮತ್ತು ಪೀಠೋಪಕರಣಗಳು ಜಖಂಗೊಂಡಿವೆ. ಈ ಘಟನೆಯು ಕೋಮು ಸಂಘರ್ಷದ ಸ್ವರೂಪ ಪಡೆದುಕೊಳ್ಳುವ ಭೀತಿ ಎದುರಾಗಿದ್ದು, ವ್ಯಾಪಾರಸ್ಥರು ತರಾತುರಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರಿಂದ ಜನರಲ್ಲಿ ಭೀತಿ ಆವರಿಸಿದೆ.
ಪ್ರಸ್ತುತ ಬಾಗಲಕೋಟೆಯ ಕೆಲವು ಸ್ಥಳಗಳಲ್ಲಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ. ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ, ಎರಡೂ ಕಡೆಯ ಗುಂಪುಗಳ ನಡುವೆ ಆಕ್ರೋಶ ಹೊಗೆಯಾಡುತ್ತಿದೆ. ಸಾರ್ವಜನಿಕ ಸಂಚಾರ ವಿರಳವಾಗಿದ್ದು, ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಕೆಎಸ್ಆರ್ಪಿ ಮತ್ತು ಡಿಎಆರ್ ತುಕಡಿಗಳು ನಗರದ ಆಯಕಟ್ಟಿನ ಸ್ಥಳಗಳಲ್ಲಿ ಮೊಕ್ಕಾಂ ಹೂಡಿವೆ. ಪೊಲೀಸರು ಹಾನಿಗೊಳಗಾದ ಪ್ರದೇಶಗಳಲ್ಲಿ ಪಥಸಂಚಲನ ನಡೆಸುವ ಮೂಲಕ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿದ್ದಾರೆ.
ಎಂಟು ಮಂದಿಯ ಬಂಧನ
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನ್ವೀರ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಈ ಗಲಾಟೆಯಲ್ಲಿ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಅವರೇ ಗಾಯಗೊಂಡಿದ್ದಾರೆ. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ. ನವನಗರದ ನಿವಾಸಿ ತನ್ವೀರ್ ಎಂಬಾತನೇ ಕಲ್ಲು ತೂರಾಟ ನಡೆಸಿದ ಪ್ರಮುಖ ಆರೋಪಿಯಾಗಿದ್ದಾನೆ. ವಿಚಾರಣೆಯ ವೇಳೆ ಆತನೇ ತಾನು ಕಲ್ಲು ತೂರಿದ್ದಾಗಿ ಒಪ್ಪಿಕೊಂಡಿದ್ದಾನೆ. ತನ್ವೀರ್ ಹೊರತುಪಡಿಸಿ ಬೇರೆ ಯಾರೂ ಕಲ್ಲು ತೂರಾಟ ನಡೆಸಿಲ್ಲ ಎಂದು ಆತ ಹೇಳಿಕೆ ನೀಡಿದ್ದಾನೆ," ಎಂದು ತಿಳಿಸಿದರು.
"ಈ ಗಲಾಟೆಯು ಯಾವುದೇ ಪೂರ್ವಯೋಜಿತ ಸಂಚು ಆಗಿರಲಿಲ್ಲ. ತಕ್ಷಣದ ಪ್ರಚೋದನೆಯಿಂದ ನಡೆದ ಘಟನೆ ಇದಾಗಿದೆ. ಸಾಮಾನ್ಯವಾಗಿ ಇಂತಹ ಮೆರವಣಿಗೆಗಳಲ್ಲಿ ಡಿಜೆ ಶಬ್ದದ ವಿಚಾರಕ್ಕೆ ಗಲಾಟೆ ನಡೆಯುತ್ತದೆ. ಆದರೆ ಇಲ್ಲಿ ಡಿಜೆ ವಿಚಾರಕ್ಕೂ ಕಲ್ಲು ತೂರಾಟಕ್ಕೂ ಸಂಬಂಧವಿಲ್ಲ," ಎಂದು ಸಿದ್ಧಾರ್ಥ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಬಾಗಲಕೋಟೆ ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಮತ್ತು ಯಾವುದೇ ಪ್ರಚೋದನಕಾರಿ ಕೃತ್ಯಗಳಲ್ಲಿ ತೊಡಗಬಾರದು ಎಂದು ಅವರು ಮನವಿ ಮಾಡಿದರು. ಬಂಧಿತ 8 ಆರೋಪಿಗಳ ವಿಚಾರಣೆ ಮುಂದುವರಿದಿದೆ.

