
ಇಂದಿನಿಂದ ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರ ರಾಯಭಾರಿಯಾಗಿ ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ ಅವರು ಮೈಸೂರು ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಆ ಮೂಲಕ ಕೆಎಸ್‌ಡಿಎಲ್ ವಹಿವಾಟನ್ನು 5,000 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಿದೆ.
ಕರ್ನಾಟಕದ ಪಾರಂಪರಿಕ ಹೆಮ್ಮೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪಿನ ಮಾರುಕಟ್ಟೆಯನ್ನು ಜಾಗತಿಕ ಮಟ್ಟದಲ್ಲಿ ಬಲಪಡಿಸಲು ಸರ್ಕಾರಿ ಸ್ವಾಮ್ಯದ ಕೆ.ಎಸ್.ಡಿ.ಎಲ್ ಸಂಸ್ಥೆಯು ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ರಾಯಭಾರಿಯನ್ನಾಗಿ ನೇಮಕ ಮಾಡಿದೆ.
5,000 ಕೋಟಿ ರೂ. ವಹಿವಾಟಿನ ಗುರಿ
ಈ ಕುರಿತು ಮಾಹಿತಿ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು, ತಮನ್ನಾ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಯುವಜನತೆಯನ್ನು ತಲುಪುವುದು ಮತ್ತು ಉತ್ತರ ಭಾರತದಲ್ಲಿ ಸಂಸ್ಥೆಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದ್ದಾರೆ. 2030ರ ವೇಳೆಗೆ ಸಂಸ್ಥೆಯ ವಾರ್ಷಿಕ ವಹಿವಾಟನ್ನು 5,000 ಕೋಟಿ ರೂಪಾಯಿಗಳಿಗೆ ಏರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಲಾಗಿದ್ದು, ಅದರ ಭಾಗವಾಗಿ ಈ ಹೊಸ ಪ್ರಚಾರ ಆಂದೋಲನಕ್ಕೆ ಚಾಲನೆ ನೀಡಲಾಗುತ್ತಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ ಸ್ಥಾಪಿತವಾದ ಕೆ.ಎಸ್.ಡಿ.ಎಲ್ ಸಂಸ್ಥೆಯು ಈಗ ತನ್ನ ಪಾರಂಪರಿಕ ಸೌಂದರ್ಯದೊಂದಿಗೆ ನವನವೀನ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಪ್ರಸ್ತುತ 57ಕ್ಕೂ ಹೆಚ್ಚು ಉತ್ಕೃಷ್ಟ ಉತ್ಪನ್ನಗಳನ್ನು ತಯಾರಿಸುತ್ತಿರುವ ಸಂಸ್ಥೆಯು, ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗದೆ ದೆಹಲಿ ಸೇರಿದಂತೆ ಮಧ್ಯ ಭಾರತದ ಮಾರುಕಟ್ಟೆಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿದೆ.
ಈ ನಿಟ್ಟಿನಲ್ಲಿ ರಫ್ತು ವಹಿವಾಟನ್ನು ದ್ವಿಗುಣಗೊಳಿಸಲು ಮತ್ತು ವಿಜಯಪುರ ಹಾಗೂ ಡಾಬಸಪೇಟೆಗಳಲ್ಲಿ ಹೊಸ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಎರಡು ವರ್ಷಗಳ ಕಾಲ ತಮನ್ನಾ ಭಾಟಿಯಾ ಅವರು ಮೈಸೂರು ಸ್ಯಾಂಡಲ್ ಸಂಸ್ಥೆಯ ಉತ್ಪನ್ನಗಳ ಜಾಹೀರಾತುಗಳಲ್ಲಿ ಮಿಂಚಲಿದ್ದು, ಅನ್ಯ ಖಾಸಗಿ ಸಾಬೂನು ಕಂಪನಿಗಳ ಪ್ರಚಾರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ.
ಸಂಸ್ಥೆಯ ಅಧ್ಯಕ್ಷ ಸಿ ಎಸ್ ಅಪ್ಪಾಜಿ ನಾಡಗೌಡ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಅವರು ತಿಳಿಸಿರುವಂತೆ, ಹಳೆಯ ಯಂತ್ರೋಪಕರಣಗಳನ್ನೇ ಬಳಸಿಕೊಂಡು ಮೂರು ಪಾಳಿಗಳಲ್ಲಿ ಶ್ರಮವಹಿಸಿ ಕೆಲಸ ಮಾಡುವ ಮೂಲಕ ಸಾರ್ವಕಾಲಿಕ ಉತ್ಪಾದನಾ ದಾಖಲೆಯನ್ನು ಸಂಸ್ಥೆ ಬರೆದಿದೆ. ಮೈಸೂರು ಸ್ಯಾಂಡಲ್ ಸೋಪ್ ಮಾತ್ರವಲ್ಲದೆ ಸಂಸ್ಥೆಯ ಶವರ್ ಜೆಲ್, ಹ್ಯಾಂಡ್ ವಾಶ್ ಹಾಗೂ ಅಗರಬತ್ತಿಗಳಂತಹ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನ ಕಲ್ಪಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮಂಗಳವಾರದಿಂದ ನೂತನ ಪ್ರಚಾರ ವಿಡಿಯೋಗಳು ಅಧಿಕೃತವಾಗಿ ಬಿಡುಗಡೆಯಾಗಲಿವೆ.

