ಮಂಗಳವಾರದಿಂದ ಮೈಸೂರು ಸ್ಯಾಂಡಲ್ ಸೋಪಿಗೆ ಮಿಲ್ಕಿ ಬ್ಯೂಟಿ ರಾಯಭಾರಿ
x

ನಟಿ ತಮನ್ನಾ ಭಾಟಿಯಾ

ಮಂಗಳವಾರದಿಂದ ಮೈಸೂರು ಸ್ಯಾಂಡಲ್ ಸೋಪಿಗೆ 'ಮಿಲ್ಕಿ ಬ್ಯೂಟಿ' ರಾಯಭಾರಿ

ಕರ್ನಾಟಕ ಸೋಪ್ಸ್ ಆ್ಯಂಡ್​ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್ - KSDL) ಸಂಸ್ಥೆಯು ತಮನ್ನಾ ಭಾಟಿಯಾ ಅವರೊಂದಿಗೆ ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ಈ ಅವಧಿಗೆ ಅವರಿಗೆ ಬರೋಬ್ಬರಿ 6 ಕೋಟಿ 20 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ.


Click the Play button to hear this message in audio format

ಕನ್ನಡದ ಹೆಮ್ಮೆಯ ಪ್ರತೀಕವಾಗಿರುವ 'ಮೈಸೂರು ಸ್ಯಾಂಡಲ್ ಸೋಪ್'ನ ಬ್ರ್ಯಾಂಡ್ ರಾಯಭಾರಿಯಾಗಿ ಜನಪ್ರಿಯ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕಗೊಂಡಾಗ ಅವರಿಗೆ ನೀಡುವ ಮೊತ್ತದ ವಿಷಯದಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಇದೀಗ ಅವರು ಮಂಗಳವಾರದಿಂದ ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.

ಭಾರಿ ವಿವಾದಗಳಿಗೆ ಕಾರಣವಾಗಿದ್ದ ಈ ನೇಮಕಾತಿ ಇದೀಗ ಅಂತಿಮ ಹಂತ ತಲುಪಿದ್ದು, ತಮನ್ನಾ ನಟಿಸಿರುವ ಮೊದಲ ಜಾಹೀರಾತು ವಿಡಿಯೋ ಮಂಗಳವಾರ ಬಿಡುಗಡೆಯಾಗಲಿದೆ. ಕರ್ನಾಟಕ ಸೋಪ್ಸ್ ಆ್ಯಂಡ್​ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್ - KSDL) ಸಂಸ್ಥೆಯು ತಮನ್ನಾ ಭಾಟಿಯಾ ಅವರೊಂದಿಗೆ ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ಈ ಅವಧಿಗೆ ಅವರಿಗೆ ಬರೋಬ್ಬರಿ 6 ಕೋಟಿ 20 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಮೈಸೂರು ಸ್ಯಾಂಡಲ್ ಸೋಪ್‌ನ ಮಾರಾಟವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ ಮತ್ತು ಯುವ ಜನತೆಯನ್ನು ಆಕರ್ಷಿಸುವ ಉದ್ದೇಶದಿಂದ ಈ ದುಬಾರಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಕನ್ನಡಿಗರ ವಿರೋಧ ಏಕಿತ್ತು?

ಹೊರ ರಾಜ್ಯದ ನಟಿಯನ್ನು ರಾಜ್ಯದ ಪ್ರತಿಷ್ಠಿತ ಸೋಪಿನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿರುವುದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. "ನಮ್ಮ ರಾಜ್ಯದಲ್ಲಿಯೇ ಪ್ರತಿಭಾವಂತ ನಟಿಯರಿರುವಾಗ, ಪರಭಾಷಾ ನಟಿಗೆ ಕೋಟ್ಯಂತರ ರೂಪಾಯಿ ನೀಡಿ ರಾಯಭಾರಿ ಮಾಡುವುದೇಕೆ?" ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿಬಂದಿತ್ತು. 'ಲೋಕಲ್ ಬ್ರ್ಯಾಂಡ್‌ಗೆ ಲೋಕಲ್ ರಾಯಭಾರಿ ಸಾಕು' ಎಂಬ ಕೂಗು ಕೂಡ ಎದ್ದಿತ್ತು. ಆದರೂ, ಕೆಎಸ್‌ಡಿಎಲ್ ಆಡಳಿತ ಮಂಡಳಿ ತನ್ನ ನಿರ್ಧಾರಕ್ಕೆ ಬದ್ಧವಾಗಿ ತಮನ್ನಾ ಅವರನ್ನು ರಾಯಭಾರಿಯಾಗಿ ಮುಂದುವರಿಸಿದೆ.

ಜಾಗತಿಕ ಮಾರುಕಟ್ಟೆ ವಿಸ್ತರಣೆ ಗುರಿ

ಕೆಎಸ್‌ಡಿಎಲ್ ಈಗಾಗಲೇ ತನ್ನ ಮಾರುಕಟ್ಟೆಯನ್ನು 80 ದೇಶಗಳಿಗೆ ವಿಸ್ತರಿಸಿದೆ. ತಮನ್ನಾ ಭಾಟಿಯಾ ಅವರು ದಕ್ಷಿಣ ಭಾರತದಾದ್ಯಂತ ಮತ್ತು ಬಾಲಿವುಡ್‌ನಲ್ಲೂ ಜನಪ್ರಿಯರಾಗಿರುವುದರಿಂದ, ಅವರ ಮೂಲಕ ಬ್ರ್ಯಾಂಡ್ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬುದು ಸಂಸ್ಥೆಯ ಲೆಕ್ಕಾಚಾರವಾಗಿದೆ. ಮಂಗಳವಾರ ಬಿಡುಗಡೆಯಾಗಲಿರುವ ಜಾಹೀರಾತು ಕನ್ನಡಿಗರ ಮನಗೆಲ್ಲುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Read More
Next Story