
ಮುಡಾ ಹಗರಣದ ಕಳಂಕಿತ ಅಧಿಕಾರಿಗೆ ಬಡ್ತಿ : ಶಾಲಿನಿ ರಜನೀಶ್ ಮೇಲೆ ಲಂಚದ ಆರೋಪ..!
ಈ ಬಗ್ಗೆ ಅರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪ ಹೊರಿಸಿದ್ದಾರೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಡಿ.ಬಿ.ನಟೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮುಡಾ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕೆಎಎಸ್ ಅಧಿಕಾರಿ ಡಿ.ಬಿ. ನಟೇಶ್‌ಗೆ ಬಡ್ತಿ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಲಂಚ ಪಡೆದು ಬಡ್ತಿ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಅನುಕೂಲವಾಗುವಂತೆ ಕೆಲಸ ಮಾಡಿದ್ದಾರೆ ಎಂಬ ಆರೋಪ ಡಿ.ಬಿ. ನಟೇಶ್ ವಿರುದ್ಧ ಆರೋಪಗಳಿದ್ದರೂ ಅವರನ್ನು ಅಮಾನತುಗೊಳಿಸದೆ ಸರ್ಕಾರಿ ಕೆಲಸದಲ್ಲಿ ಮುಂದುವರಿಸಲಾಗಿದೆ. ಪ್ರಸ್ತುತ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಡಿ.ಕೆ. ನಟೇಶ್‌ಗೆ ಬಡ್ತಿ ನೀಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. ಕೋಟ್ಯಂತರ ರೂ. ಲಂಚ ಪಡೆದು ಬಡ್ತಿ ನೀಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಸ್ಪಷ್ಟೀಕರಣ ನೀಡಬೇಕು. ಪತ್ರ ತಲುಪಿದ ಏಳು ದಿನಗಳೊಗಾಗಿ ಡಿ.ಬಿ. ನಟೇಶ್ ವಿರುದ್ಧ ಕಾನೂನು ಕ್ರಮ ಕೈಗೊಂಡು ಅಮಾನತಿಗೆ ಆದೇಶಿಸಬೇಕು. ಒಂದು ವೇಳೆ ಸರ್ಕಾರ ಸ್ಪಷ್ಟನೆ ನೀಡದಿದ್ದರೆ ಅಥವಾ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರವು ಭ್ರಷ್ಟಾಚಾರವನ್ನು ಒಪ್ಪಿಕೊಂಡಿದೆ ಎಂದು ಭಾವಿಸಿ, ಈ ವಿಷಯವನ್ನು ಹೈಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆಗಾಗಿ ಶಾಲಿನಿ ರಜನೀಶ್ ಅವರನ್ನು ದ ಫೆಡರಲ್ ಕರ್ನಾಟಕ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿತು ಹಾಗೂ ಸಂದೇಶವನ್ನೂ ಹಾಕಲಾಯಿತು. ಆದರೆ, ಅವರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮುಖ್ಯ ಕಾರ್ಯದರ್ಶಿಗೆ 12 ಪ್ರಶ್ನೆಗಳು
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ಸ್ನೇಹಮಯಿ ಕೃಷ್ಣ 12 ಪ್ರಶ್ನೆಗಳನ್ನು ಕೇಳಿ ಸ್ಪಷ್ಟೀಕರಣ ನೀಡುವಂತೆ ಒತ್ತಾಯ ಮಾಡಿದ್ದಾರೆ. ಭ್ರಷ್ಟಚಾರ ಪ್ರತಿಬಂಧಕ ಕಾಯಿದೆ ಪ್ರಕಾರ ಗಂಭೀರ ಅಪರಾಧ ಮಾಡಿರುವ ವಿಚಾರ ತಿಳಿದಬಂದ ಕೂಡಲೇ ಡಿ.ಬಿ.ನಟೇಶ್ ರವರನ್ನು ಅಮಾನತ್ತು ಗೊಳಿಸಿ, ಇಲಾಖಾ ವಿಚಾರಣೆಗೆ ಒಳಪಡಿಸಿ, ವರದಿಯನ್ನು ಪಡೆದು ಕೊಳ್ಳಬೇಕಿತ್ತು. ವರದಿಯನ್ನು ಆಧರಿಸಿ ನಟೇಶ್‌ರವರನ್ನು ಸರ್ಕಾರದ ಕೆಲಸದಿಂದ ತೆಗೆದು ಹಾಕುವ ಪ್ರಕ್ರಿಯೆ ಯನ್ನು ನಡೆಸಬೇಕಾಗಿತ್ತು. ಆದರೆ, ಈ ಪ್ರಕ್ರಿಯೆಯನ್ನು ಏಕೆ ನಡೆಸಿಲ್ಲ ನಟೇಶ್ ವಿರುದ್ದ ಇದುವರೆವಿಗೂ ಕ್ರಮಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷ್ಯವನ್ನು ವಹಿಸಿರುವುದನ್ನು ಗಮನಿಸಿದರೆ, ಅಕ್ರಮವಾಗಿ, ಭ್ರಷ್ಟಚಾರ ನಡೆಸುವ ಮೂಲಕ ಸರ್ಕಾರದ ಆಸ್ತಿಯನ್ನು ಕಬಳಿಸಿರುವವರನ್ನು, ದುರ್ಬಳಕೆ ಮಾಡಿಕೊಳ್ಳುವವರನ್ನು ಪರೋಕ್ಷವಾಗಿ ರಕ್ಷಣೆ ಮಾಡುತ್ತಿದ್ದೀರಿ ಎಂಬುದು ಖಚಿತವಾಗುತ್ತದೆಯಲ್ಲವೆ? ಲೋಕಾಯುಕ್ತ ಪೊಲೀಸರು ವರದಿ ನೀಡಿದ್ದರೂ ಡಿ.ಬಿ. ನಟೇಶ್ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡದಿರಲು ಕಾರಣವೇನು? ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡಿದವರಿಗೆ ಸರ್ಕಾರವು ಪರೋಕ್ಷವಾಗಿ ರಕ್ಷಣೆ ನೀಡುತ್ತಿದೆಯೇ? ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯವಲ್ಲವೇ? ಇಂತಹ ಗಂಭೀರ ಹಗರಣಗಳಲ್ಲಿ ತುರ್ತು ಕ್ರಮ ಕೈಗೊಳ್ಳದಿರುವುದು ಕರ್ತವ್ಯ ಲೋಪವಲ್ಲವೇ? ಎಂಬುದು ಪ್ರಮುಖ ಪ್ರಶ್ನೆಗಳಾಗಿವೆ.
ಡಿ.ಕೆ.ನಟೇಶ್ ವಿರುದ್ಧ ದೂರು ನೀಡದೆ, ಬಡ್ತಿಯನ್ನು ಹಿಂಪಡೆಯುವ, ಅಮಾನತ್ತಿಗೆ ಮತ್ತು ಇಲಾಖಾ ವಿಚಾರಣೆಗೆ ಆದೇಶ ಮಾಡಬೇಕು. ಇಲ್ಲದಿದ್ದರೆ, ಬಂದಿರುವ ಮಾಹಿತಿಯ ಮತ್ತು ಸಾಕ್ಷ್ಯಾಧಾರದ ಪ್ರಕಾರ ಡಿ.ಬಿ.ನಟೇಶ್‌ರವರಿಂದ ಕೋಟ್ಯಂತರ ರೂ. ಲಂಚವನ್ನು ಪಡೆದು, ಗಂಭೀರ ಆರೋಪ ಹೊತ್ತಿರುವ ಅವರ ವಿರುದ್ಧ ಸರ್ಕಾರದಿಂದ ಯಾವುದೇ ಕ್ರಮ ತೆಗೆದುಕೊಳ್ಳದಂತೆ ರಕ್ಷಣೆ ಮಾಡುತ್ತಿರುವುದಲ್ಲದೆ, ಬಡ್ತಿಯನ್ನು ಸಹ ನೀಡಲಾಗಿದೆ ಎಂದು ಪರಿಗಣಿಸಬೇಕಾಗುತ್ತದೆ. ಏಳು ದಿನಗಳಲ್ಲಿ ಸ್ಪಷ್ಟಿಕರಣ ಮತ್ತು ದೃಢೀಕೃತ ದಾಖಲೆಗಳನ್ನು ನೀಡದಿದ್ದಲ್ಲಿ, ಅಕ್ರಮವಾಗಿ, ಭ್ರಷ್ಟಚಾರ ನಡೆಸುವ ಮೂಲಕ ಸರ್ಕಾರದ ಆಸ್ತಿಯನ್ನು ಕಬಳಿಸಿರುವವರನ್ನು ರಕ್ಷಣೆ ಮಾಡುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಎಂದು ಪರಿಗಣಿಸಿ, ತಮ್ಮ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗುತ್ತದೆ ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ತಿಳಿಸಿದ್ದಾರೆ.

