
ಅರಸು ದಾಖಲೆ ಬ್ರೇಕ್ ಬೆನ್ನಲ್ಲೇ ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ: ಇದು ಸಾಧನೆಯೋ ಅಥವಾ ಹಗರಣಗಳ ಸರಮಾಲೆಯೋ?
ಸಿದ್ದರಾಮಯ್ಯ ಅವರು ದೇವರಾಜ ಅರಸು ದಾಖಲೆ ಮುರಿದ ಹಿನ್ನೆಲೆಯಲ್ಲಿ ಬಿಜೆಪಿ ವ್ಯಂಗ್ಯಭರಿತ ಪೋಸ್ಟ್ ಮಾಡಿದೆ. ಮುಡಾ, ವಾಲ್ಮೀಕಿ ಹಗರಣಗಳನ್ನು ಪ್ರಸ್ತಾಪಿಸಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಪೂರ್ಣ ವಿವರ ಇಲ್ಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿ ಸುದೀರ್ಘ ಕಾಲ ಅಧಿಕಾರ ನಡೆಸಿದ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿದ ಸಂಭ್ರಮದಲ್ಲಿದ್ದರೆ, ಇತ್ತ ಕರ್ನಾಟಕ ಬಿಜೆಪಿ ಈ ಸಂಭ್ರಮದ ಬಗ್ಗೆ ವ್ಯಂಗ್ಯವಾಡಿದೆ. ಸಿದ್ದರಾಮಯ್ಯ ಸರ್ಕಾರದ ಮೇಲಿರುವ ಹಗರಣಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಕಾಲೆಳೆದಿದೆ.
ಬಿಜೆಪಿಯ ಪೋಸ್ಟ್‌ನಲ್ಲೇನಿದೆ?
ಬಿಜೆಪಿ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಆಡಳಿತಾವಧಿಯನ್ನು "ಹಗರಣಗಳ ಇತಿಹಾಸ" ಎಂದು ಟೀಕಿಸಿದೆ. ಖಜಾನೆ ಖಾಲಿ, ಹಗರಣಗಳ ಸರಮಾಲೆ, ರೈತರು- ಯುವಕರ ಬದುಕು ಬೀದಿಗೆ, ಅಭಿವೃದ್ಧಿ ಕುಂಠಿತ, ರಾಜ್ಯದ ಜನತೆಗೆ ಇಂತಹ ದುರಾಡಳಿತ ನೀಡಿದ ಮೇಲೆ ಇನ್ನೂ ಯಾವ 'ಭಾಗ್ಯ' ನೀಡುವುದು ಬಾಕಿ ಉಳಿದಿದೆ ಸಿಎಂ ಸಿದ್ಧರಾಮಯ್ಯನವರೇ? ಎಂದು ಪ್ರಶ್ನಿಸಿದೆ.
"ಸಿದ್ದರಾಮಯ್ಯನವರೇ, ಅರಸು ಅವರ ದಾಖಲೆ ಮುರಿದಿದ್ದಕ್ಕೆ ಅಭಿನಂದನೆಗಳು. ಆದರೆ ನೀವು ಮುರಿದಿರುವುದು ಕೇವಲ ಆಡಳಿತದ ಅವಧಿಯ ದಾಖಲೆಯನ್ನಲ್ಲ, ಭ್ರಷ್ಟಾಚಾರದ ದಾಖಲೆಗಳನ್ನೂ ಸಹ!" ಎಂದು ಬಿಜೆಪಿ ಲೇವಡಿ ಮಾಡಿದೆ.
ಇನ್ನು ಸಿದ್ಧರಾಮಯ್ಯ ಸರ್ಕಾರ ಸಪ್ತ ಸಾಧನೆಗಳು ಎಂದು ಪಟ್ಟಿಯೊಂದನ್ನೂ ಬಿಜೆಪಿ ಬಿಡುಗಡೆ ಮಾಡಿದೆ.
- ಮುಡಾ ಹಗರಣ
- ವಾಲ್ಮೀಕಿ ನಿಗಮ ಹಗರಣ
- ಗ್ಯಾರಂಟಿ ಹೆಸರಲ್ಲಿ ಲೂಟಿ
- ವಕ್ಫ್ ಆಸ್ತಿ ವಿವಾದ
- SCSP/TSP ಹಣ ದುರ್ಬಳಕೆ
- ವರ್ಗಾವಣೆ ದಂಧೆ
- ಅರ್ಕಾವತಿ ರೀ ಡೂ
ಹೀಗೆ ಇಷ್ಟು ಆರೋಪಗಳನ್ನು ಮಾಡುವ ಮೂಲಕ ಸಿಎಂ ಫೋಟೋವನ್ನು ಶೇರ್ ಮಾಡಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯನವರ ಅವಧಿಯ 'ಸಪ್ತ' ಸಾಧನೆಗಳ ಪಟ್ಟಿ! ರಾಜ್ಯದ ಸಂಪತ್ತು ಲೂಟಿಯಾಗುತ್ತಿದ್ದರೆ, ಆಡಳಿತ ಯಂತ್ರ ಹಳ್ಳ ಹಿಡಿಯುತ್ತಿದೆ. ಮುಡಾದಿಂದ ಹಿಡಿದು ವಕ್ಫ್‌ವರೆಗೆ.. ಸಾಲು ಸಾಲು ಹಗರಣಗಳನ್ನು ಮಾಡಿದ್ದೇ ಸಿದ್ಧರಾಮಯ್ಯ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದೆ.

