ದೇವರಾಜು ಅರಸು ದಾಖಲೆ ಪತನ:  ಸಿದ್ದರಾಮಯ್ಯ ಹೆಸರಲ್ಲಿ ಹೊಸ ಇತಿಹಾಸದ ಉದಯ
x

ದೇವರಾಜು ಅರಸು ದಾಖಲೆ ಪತನ: ಸಿದ್ದರಾಮಯ್ಯ ಹೆಸರಲ್ಲಿ ಹೊಸ ಇತಿಹಾಸದ ಉದಯ

ಜ.7ರ ಸೂರ್ಯೋದಯವು ಸಿದ್ದರಾಮಯ್ಯ ಅವರನ್ನು ಕರ್ನಾಟಕದ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ಆಳಿದ ಮುಖ್ಯಮಂತ್ರಿಯನ್ನಾಗಿ ಮಾಡಲಿದೆ. ದೇವರಾಜ ಅರಸು ಅವರ 2,792 ದಿನಗಳ ದಾಖಲೆಯನ್ನು ಸರಿಗಟ್ಟಿದೆ.


Click the Play button to hear this message in audio format

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮಂಗಳವಾರ (ಜ.6) ಅಂದರೆ 2026ರ ಜ.6ರ ದಿನಾಂಕವು ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ. ರಾಜ್ಯದ ಅತಿ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಸಿದ್ದರಾಮಯ್ಯ ಅವರು, ದಶಕಗಳ ಕಾಲ ಅಜೇಯವಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಸುದೀರ್ಘ ಆಡಳಿತದ ದಾಖಲೆಯನ್ನು ಸರಿಗಟ್ಟುತ್ತಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಸಾಧನೆಯಲ್ಲ, ಬದಲಿಗೆ ಕಳೆದ ನಾಲ್ಕು ದಶಕಗಳಲ್ಲಿ ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮೂಡಿಸಿರುವ ಮುದ್ರೆಯಾಗಿದೆ.

ಉಳುವವನೇ ಹೊಲದೊಡೆಯ.. ಇದು ಅರಸು ಭಿತ್ತಿದ ಕ್ರಾಂತಿಕಾರಿ ಬೀಜ.. ಕರ್ನಾಟಕದಲ್ಲಿ ಬಿತ್ತನೆ ಆದ ಈ ಬೀಜ ಹೊನ್ನ ಕಳಸದಂತ ಫಲ ನೀಡಿದ ಕಿರಿಟಪ್ರಾಯದ ಯೋಜನೆ.. ಕಾನೂನಿನ ಮೂಲಕ ಭೂಮಿ ಮರುಹಂಚಿ, ಸಾಮಾಜಿಕ ಬದಲಾವಣೆ ಕ್ರಾಂತಿಯ ಹೆಜ್ಜೆ ಇಟ್ಟಿದ್ದು ಇತಿಹಾಸ.. ಅದೇ ದಿಕ್ಕಿನಲ್ಲಿ ರಾಜಕೀಯ ಅರಸಿದ ಸಿದ್ದರಾಮಯ್ಯ, ಭೂಮಿಗಿಂತ ಹೆಚ್ಚಾಗಿ ಸರ್ಕಾರದ ಸಂಪನ್ಮೂಲಗಳನ್ನು ನೇರವಾಗಿ ಜನರಿಗೆ ತಲುಪಿಸುವ ಗ್ಯಾರಂಟಿಗಳ ಹರಿಕಾರ..

ಅಹಿಂದ ಎಂಬ ಗುಪ್ತಗಂಗೆಯ ಮತಬ್ಯಾಂಕ್ ಅನ್ನು ಸೃಷ್ಟಿಸಿದ ಅರಸು, ಆ ಪರಿಕಲ್ಪನೆಯ ಜನ್ಮದಾತ.. ಪ್ರಬಲ ಜಾತಿಗಳ ವಿರುದ್ಧ ಈಜಿದ ಜನ ರಾಜಕಾರಣಿಯಾಗಿ ಮಿಂಚಿದರು. ಈಗ ಸಿದ್ದರಾಮಯ್ಯ ಸಹ ಅದೇ ಸಿದ್ಧಾಂತವನ್ನು ಆಧುನಿಕ ರಾಜಕಾರಣದಲ್ಲಿ ಮರುಸ್ಥಾಪಿಸಿ, ಆ ವರ್ಗಗಳ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದು ಚರಿತ್ರೆ.. ಈಗ ಅರಸು ಅವಧಿಯ ದಾಖಲೆಯನ್ನ ಸಿದ್ದರಾಮಯ್ಯ ಮುರಿಯುತ್ತಿದ್ದಾರೆ.

ಅಂಕಿ-ಅಂಶಗಳ ಇತಿಹಾಸ

ರಾಜ್ಯದ ಅತಿ ಪ್ರಭಾವಿ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರು ಮಾ.20, 1979 ರಿಂದ ಜ.12, 1980 ರವರೆಗೆ ರಾಜ್ಯವನ್ನು ಆಳಿದ್ದರು. ಅವರು ಒಟ್ಟು 2,792 ದಿನಗಳ ಕಾಲ (ಸುಮಾರು 7 ವರ್ಷ 239 ದಿನ) ಚುಕ್ಕಾಣಿ ಹಿಡಿದಿದ್ದರು. ವಿಶೇಷವೆಂದರೆ ಅರಸು ಅವರು ಸತತವಾಗಿ ಈ ಅವಧಿಯನ್ನು ಪೂರೈಸಿದ್ದರು. ಸಿದ್ದರಾಮಯ್ಯ ಅವರ ಈ ದಾಖಲೆಯನ್ನು ಗಮನಿಸಿದರೆ ಮೊದಲ ಅವಧಿ ಮೇ 13, 2013 ರಿಂದ ಮೇ 17, 2018 ರವರೆಗೆ ಅವರು 1,829 ದಿನಗಳ ಕಾಲ ರಾಜ್ಯವಾಳಿದರು. ಮೇ 20, 2023 ರಿಂದ ಆರಂಭವಾದ ಅವರ ಎರಡನೇ ಪಯಣ ಮಂಗಳವಾರ (ಜ.6) ದೇವರಾಜ ಅರಸು ಅವರ 2,792 ದಿನಗಳ ದಾಖಲೆಯನ್ನು ಸರಿಗಟ್ಟಿದೆ. ಜ.7ರ ಸೂರ್ಯೋದಯವು ಸಿದ್ದರಾಮಯ್ಯ ಅವರನ್ನು ಕರ್ನಾಟಕದ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ಆಳಿದ ಮುಖ್ಯಮಂತ್ರಿಯನ್ನಾಗಿ ಮಾಡಲಿದೆ.

ಹೋಲಿಕೆ: ದೇವರಾಜ ಅರಸು ಹಾಗೂ ಸಿದ್ದರಾಮಯ್ಯ

ದಿನಗಳ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಅವರು ಅರಸು ಅವರ ದಾಖಲೆಯನ್ನು ಮೀರಿಸಿದರೂ, ಇಬ್ಬರ ನಡುವೆ ಒಂದು ವ್ಯತ್ಯಾಸವಿದೆ. ಅರಸು ಅವರು ಸತತವಾಗಿ 7.5 ವರ್ಷ ಆಡಳಿತ ನಡೆಸಿದ್ದರು. ಸಿದ್ದರಾಮಯ್ಯ ಅವರು ನಡುವೆ ಐದು ವರ್ಷಗಳ ವಿರಾಮದ ನಂತರ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಆದರೂ ವಿರಾಮದ ನಂತರವೂ ಅಷ್ಟೇ ಜನಪ್ರಿಯತೆಯೊಂದಿಗೆ ಮರಳಿ ಅಧಿಕಾರ ಹಿಡಿಯುವುದು ಸುಲಭದ ಮಾತಲ್ಲ. ಇದು ಅವರ ನಾಯಕತ್ವದ ಶಕ್ತಿಯನ್ನು ಸಾಬೀತುಪಡಿಸುತ್ತದೆ.

'ಅಹಿಂದ' (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ಚೌಕಟ್ಟಿನಲ್ಲಿ ಸಿದ್ದರಾಮಯ್ಯ ಅವರ ಆಡಳಿತದ ಯಶಸ್ಸಿನ ಗುಟ್ಟು ಇದೆ. ದೇವರಾಜ ಅರಸು ಅವರಂತೆಯೇ ಸಿದ್ದರಾಮಯ್ಯ ಕೂಡ ಸಾಮಾಜಿಕ ಸಮಾನತೆಗೆ ಒತ್ತು ನೀಡಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯದಂತಹ ಯೋಜನೆಗಳು ಸಮಾಜದ ಕೆಳಹಂತದ ಜನರ ಬದುಕನ್ನು ಹಸನು ಮಾಡಿವೆ. ಎರಡನೇ ಅವಧಿಯಲ್ಲಿ ಜಾರಿಗೆ ತಂದ 'ಶಕ್ತಿ', 'ಗೃಹಜ್ಯೋತಿ', 'ಗೃಹಲಕ್ಷ್ಮಿ', 'ಯುವನಿಧಿ' ಮತ್ತು 'ಅನ್ನಭಾಗ್ಯ'ದ ೫ ಗ್ಯಾರಂಟಿಗಳು ಇಂದು ದೇಶಕ್ಕೇ ಮಾದರಿಯಾಗಿವೆ. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಬಡ ಕುಟುಂಬಗಳ ಆರ್ಥಿಕ ಹೊರೆಯನ್ನು ಇಳಿಸುವಲ್ಲಿ ಈ ಯೋಜನೆಗಳು ಯಶಸ್ವಿಯಾಗಿವೆ.

ಅಹಿಂದ: ದೇವರಾಜ ಅರಸು ಬಿತ್ತಿದ ಬೀಜ, ಸಿದ್ದರಾಮಯ್ಯ ಬೆಳೆಸಿದ ಫಸಲು

ರಾಜ್ಯದ ರಾಜಕಾರಣದಲ್ಲಿ ಪ್ರಬಲ ಜಾತಿಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪ್ರಾಬಲ್ಯವನ್ನು ಮುರಿದು, ಕೆಳವರ್ಗದ ಸಮುದಾಯಗಳನ್ನು ಸಂಘಟಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಅಹಿಂದ ಮತಬ್ಯಾಂಕ್ ಸೃಷ್ಟಿಸಿದ ಜನ್ಮದಾತ ದೇವರಾಜು ಅರಸು ಅವರಾದರೆ, ಸಿದ್ದರಾಮಯ್ಯ ಅವರು ಇದೇ ಅಹಿಂದ ಪರಿಕಲ್ಪನೆಯನ್ನು ಆಧುನಿಕ ರಾಜಕಾರಣದಲ್ಲಿ ಮರುಸ್ಥಾಪಿಸಿದರು. ಅರಸು ಅವರು ಕೇವಲ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ್ದರೆ, ಸಿದ್ದರಾಮಯ್ಯ ಆ ವರ್ಗಗಳಿಗೆ ರಾಜಕೀಯ ಶಕ್ತಿ ಮತ್ತು ಆರ್ಥಿಕ ಭದ್ರತೆ ನೀಡಿದರು. ಪ್ರಬಲ ಜಾತಿಗಳ ನಡುವೆ ಸ್ವಂತ ಶಕ್ತಿಯಿಂದ ಮೇಲೆದ್ದು ಬಂದು, ಅಹಿಂದ ವರ್ಗಗಳ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದು ಸಿದ್ದರಾಮಯ್ಯ ಅವರ ರಾಜಕೀಯ ಚತುರತೆಗೆ ಸಾಕ್ಷಿಯಾಗಿದೆ.

ಸಿದ್ಧಾಂತಗಳ ಸಂಘರ್ಷ, ಸಾಮ್ಯತೆ: ಮಾರ್ಕ್ಸ್ ಹಾಗೂ ಲೋಹಿಯಾ

ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಇಬ್ಬರು ನಾಯಕರು ಮೈಸೂರು ಜಿಲ್ಲೆಯವರೇ ಆಗಿದ್ದರೂ, ಅವರ ಹಿನ್ನೆಲೆ ಮತ್ತು ಸಿದ್ಧಾಂತಗಳಲ್ಲಿ ಭಿನ್ನತೆಯಿದೆ. ದೇವರಾಜ ಅರಸು ಅವರು ಮೇಲ್ವರ್ಗದ ಶ್ರೀಮಂತ ಕುಟುಂಬದಿಂದ ಬಂದ ಅರಸು ಅವರ ಮೇಲೆ ಕಾರ್ಲ್ ಮಾರ್ಕ್ಸ್ ಸಿದ್ಧಾಂತದ ಪ್ರಭಾವ ದಟ್ಟವಾಗಿತ್ತು. ಅವರು ಸಾಹಿತ್ಯ, ಕಲೆ ಮತ್ತು ಬೌದ್ಧಿಕ ಚಿಂತನೆಗಳಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಶ್ರೀಮಂತಿಕೆಯಿಂದ ಬಂದರೂ ಅವರು ಶೋಷಿತರ ಪರ ನಿಂತದ್ದು ಒಂದು ಕ್ರಾಂತಿ. ಸಿದ್ದರಾಮಯ್ಯ ಅವರು ಹಳ್ಳಿಯ ಬಡತನದ ಬೇಗೆಯಲ್ಲಿ ಬೆಂದು ಬಂದ ನಾಯಕ. ಅವರ ಮೇಲೆ ರಾಮ ಮನೋಹರ್ ಲೋಹಿಯಾ ಅವರ ಸಮಾಜವಾದಿ ಸಿದ್ಧಾಂತದ ಪ್ರಭಾವವಿದೆ. ಅವರು ಬೌದ್ಧಿಕ ಚರ್ಚೆಗಿಂತ ಹೆಚ್ಚಾಗಿ ಜನರೊಂದಿಗಿನ ನೇರ ಸಂಪರ್ಕ ಮತ್ತು ಪ್ರಾಯೋಗಿಕ ಸಮಾಜವಾದದಲ್ಲಿ ನಂಬಿಕೆಯಿಟ್ಟವರಾಗಿದ್ದಾರೆ. ಇಬ್ಬರೂ ತಮ್ಮ ರಾಷ್ಟ್ರೀಯ ನಾಯಕರೊಂದಿಗೆ ಸಂಘರ್ಷ ನಡೆಸಿದವರೇ ಆಗಿದ್ದಾರೆ. ದೇವರಾಜ ಅರಸು ಅವರು ಅಧಿಕಾರ ಕಳೆದುಕೊಂಡರೆ, ಸಿದ್ದರಾಮಯ್ಯ ಸಂಘರ್ಷದ ನಡುವೆಯೇ ಅಧಿಕಾರವನ್ನು ಗಟ್ಟಿಗೊಳಿಸಿಕೊಂಡ ಚಾಣಾಕ್ಷ ನಾಯಕ ಎನ್ನಿಸಿಕೊಂಡಿದ್ದಾರೆ.

ಕ್ರಾಂತಿಕಾರಿ ಯೋಜನೆಗಳು

ಇಬ್ಬರು ನಾಯಕರನ್ನು ಹೋಲಿಸುವಾಗ ಅವರ ಪ್ರಮುಖ ಯೋಜನೆಗಳನ್ನು ಗಮನಿಸಿದರೆ, 'ಉಳುವವನೇ ಹೊಲದೊಡೆಯ' ಎಂಬ ಘೋಷಣೆಯಡಿ ಭೂಮಿಯನ್ನು ಮರುಹಂಚಿಕೆ ಮಾಡಿದ್ದು ದೇವರಾಜ ಅರಸು ಅವರ ಶ್ರೇಷ್ಠ ಸಾಧನೆ. ಇದು ಸಾಮಾಜಿಕ ಬದಲಾವಣೆಯ ದೊಡ್ಡ ಹೆಜ್ಜೆಯಾಗಿತ್ತು. ಇನ್ನು, ಸಿದ್ದರಾಮಯ್ಯ ಇಂದಿನ ಕಾಲಘಟ್ಟದಲ್ಲಿ ಭೂಮಿಗಿಂತ ಹಣದ ಅವಶ್ಯಕತೆ ಹೆಚ್ಚಿದೆ ಎಂದು ಅರಿತು ಸರ್ಕಾರದ ಸಂಪನ್ಮೂಲಗಳನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗೆ ತಲುಪಿಸುತ್ತಿದ್ದಾರೆ. 'ಭಾಗ್ಯಗಳ ಒಡೆಯ' ಎಂದೇ ಖ್ಯಾತರಾದ ಇವರು ಅನ್ನಭಾಗ್ಯದಿಂದ ಹಿಡಿದು ಐದು ಗ್ಯಾರಂಟಿಗಳವರೆಗೆ ಜನರಿಗೆ ನೇರ ಆರ್ಥಿಕ ಸಬಲೀಕರಣ ನೀಡುತ್ತಿದ್ದಾರೆ.

ಸಿದ್ದರಾಮಯ್ಯ ಯುಗದ ಪ್ರಭಾವ

ಅಸ್ಥಿರತೆಯಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮರುಜೀವ ನೀಡಿ ಅಧಿಕಾರಕ್ಕೆ ತಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅಸ್ಥಿರತೆಯ ನಡುವೆಯೂ ದೀರ್ಘಕಾಲದ ಸ್ಥಿರ ಆಡಳಿತ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದ್ದಾರೆ. ಮೇಲ್ವರ್ಗದ ಪ್ರಾಬಲ್ಯವಿದ್ದ ರಾಜಕೀಯ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಮೂಲಕ ಅಧಿಕಾರ ಹಿಡಿದ ಸಾಧಕ ಎಂಬ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸುತ್ತದೆ.

ಬಜೆಟ್ ಮಂಡನೆಯಲ್ಲಿ ದಾಖಲೆಯತ್ತ

ಸಿದ್ದರಾಮಯ್ಯ ಆರ್ಥಿಕ ಶಿಸ್ತು ಮತ್ತು ರಾಜ್ಯದ ಆರ್ಥಿಕತೆಯ ಮೇಲಿನ ಹಿಡಿತಕ್ಕೆ ಅವರು ಮಂಡಿಸಿರುವ ಬಜೆಟ್‌ಗಳೇ ಸಾಕ್ಷಿ. ಈಗಾಗಲೇ 16 ಬಜೆಟ್‌ಗಳನ್ನು ಮಂಡಿಸಿರುವ ಅವರು ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಮುಂಗಡ ಪತ್ರ ಮಂಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಮುಂದಿನ 2026-27ರ ಸಾಲಿನ ತಮ್ಮ 17ನೇ ಬಜೆಟ್‌ಗೆ ಸಿದ್ಧತೆ ನಡೆಸುತ್ತಿರುವುದು ಅವರ ಆಡಳಿತಾತ್ಮಕ ಅನುಭವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಜ್ಯದ ಸಂಪನ್ಮೂಲಗಳನ್ನು ಬಡವರ ಮತ್ತು ಶೋಷಿತರ ಕಲ್ಯಾಣಕ್ಕೆ ಹೇಗೆ ಬಳಸಬಹುದು ಎಂಬುದನ್ನು ಇವರು ತಮ್ಮ ಬಜೆಟ್‌ಗಳ ಮೂಲಕ ನಿರೂಪಿಸಿದ್ದಾರೆ.

ಸಿದ್ದರಾಮಯ್ಯ ಅವರ ಈ ಐತಿಹಾಸಿಕ ಸಾಧನೆಯು ರಾಜ್ಯ ರಾಜಕೀಯದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದೆ. ದೇವರಾಜ ಅರಸು ಅವರು ಹಾಕಿಕೊಟ್ಟ ಸಾಮಾಜಿಕ ನ್ಯಾಯದ ಹಾದಿಯನ್ನು ಸಿದ್ದರಾಮಯ್ಯ ಅವರು ಮತ್ತಷ್ಟು ವಿಸ್ತರಿಸಿದ್ದಾರೆ. ಕೇವಲ ದಿನಗಳ ಲೆಕ್ಕದಲ್ಲಿ ಮಾತ್ರವಲ್ಲದೆ, ಗುಣಾತ್ಮಕ ಆಡಳಿತದ ಮೂಲಕವೂ ಅವರು ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ದೇವರಾಜ ಅರಸು ಹಾಕಿಕೊಟ್ಟ ಭೂ ಕ್ರಾಂತಿಯ ಅಡಿಪಾಯದ ಮೇಲೆ ಸಿದ್ದರಾಮಯ್ಯ 'ಗ್ಯಾರಂಟಿ'ಗಳ ಗೋಪುರವನ್ನು ನಿರ್ಮಿಸಿದ್ದಾರೆ. ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಸಿದ್ದರಾಮಯ್ಯ ಹೆಸರಿಲ್ಲದೆ ಬರೆಯಲು ಸಾಧ್ಯವಿಲ್ಲ ಎನ್ನುವಷ್ಟು ಆಳವಾಗಿ ಅವರು ಛಾಪು ಮೂಡಿಸಿದ್ದಾರೆ. ದಾಖಲೆಗಳು ಹುಟ್ಟುವುದೇ ಮುರಿಯಲು ಎಂಬ ನಾಣ್ಣುಡಿಯಂತೆ, ದೇವರಾಜು ಅರಸು ದಾಖಲೆ ಮುರಿದಿದೆ. ಆದರೆ ಸಿದ್ದರಾಮಯ್ಯ ಅವರು ನಿರ್ಮಿಸಿದ ಈ 'ಜನಮಾನಸದ ದಾಖಲೆ'ಯನ್ನು ಮುರಿಯುವುದು ಮುಂದಿನ ತಲೆಮಾರಿನ ನಾಯಕರಿಗೆ ಸವಾಲಾಗಲಿದೆ.

Read More
Next Story