ಮುಡಾ ಹಗರಣ: ಆರೋಪಿ ಜಿ.ಟಿ. ದಿನೇಶ್ ಕುಮಾರ್ ನ್ಯಾಯಾಂಗ ಬಂಧನ 13 ದಿನ ವಿಸ್ತರಣೆ
x

ಮುಡಾ ಹಗರಣ: ಆರೋಪಿ ಜಿ.ಟಿ. ದಿನೇಶ್ ಕುಮಾರ್ ನ್ಯಾಯಾಂಗ ಬಂಧನ 13 ದಿನ ವಿಸ್ತರಣೆ

ಆರೋಪಿ ದಿನೇಶ್ ಕುಮಾರ್ ನ್ಯಾಯಾಂಗ ಬಂಧನವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇದೇ ತಿಂಗಳು 20ರವರೆಗೆ ವಿಸ್ತರಣೆ ಮಾಡಿದ್ದು, ಮುಂದಿನ ವಿಚಾರಣೆ ವೇಳೆಗೆ ಅಂತಿಮ ವರದಿ ಸಲ್ಲಿಕೆ ಮಾಡುವಂತೆ ತನಿಖಾಧಿಕಾರಿಗೆ ಸೂಚನೆ ನೀಡಿದೆ.


ಮುಡಾ ಹಗರಣ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಆರೋಪಿ ದಿನೇಶ್ ಕುಮಾರ್ ನ್ಯಾಯಾಂಗ ಬಂಧನವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇದೇ ತಿಂಗಳು 20ರವರೆಗೆ ವಿಸ್ತರಣೆ ಮಾಡಿದ್ದು, ಮುಂದಿನ ವಿಚಾರಣೆ ವೇಳೆಗೆ ಅಂತಿಮ ವರದಿ ಸಲ್ಲಿಕೆ ಮಾಡುವಂತೆ ತನಿಖಾಧಿಕಾರಿಗೆ ಸೂಚನೆ ನೀಡಿದೆ.

ಲೋಕಾಯುಕ್ತ ವಿಶೇಷ ಅಭಿಯೋಜಕರು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಆರೋಪಿಯ ನ್ಯಾಯಾಂಗ ಬಂಧನವನ್ನು ಮತ್ತೆ 13 ದಿನಗಳ ಕಾಲ ವಿಸ್ತರಣೆ ಮಾಡಲಾಯಿತು. ಆರೋಪಿಯನ್ನು ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ವಿಚಾರಣೆಯ ಸಂದರ್ಭದಲ್ಲಿ ಖುದ್ದು ಹಾಜರಿದ್ದ ದೂರುದಾರ ಸ್ನೇಹಮಯಿ ಕೃಷ್ಣ, ತನಿಖಾಧಿಕಾರಿಯ ವಿರುದ್ಧ ಗಂಭೀರ ಆರೋಪ ಮಾಡಿದರು. ತನಿಖಾಧಿಕಾರಿಯು ಅಸಲಿ ಆರೋಪಿಗಳನ್ನು ಪ್ರಕರಣದಿಂದ ಕೈಬಿಡಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಿಲ್ಲ ಎಂದು ದೂರಿದರು.

ಅಂತಿಮ ವರದಿ ಸಲ್ಲಿಸಿಲ್ಲ

ಆರೋಪಿ ದಿನೇಶ್‌ ಕುಮಾರ್ ಪರ ವಕೀಲರು ಸಹ ತನಿಖಾ ಸಂಸ್ಥೆಯ ವಿಳಂಬ ಧೋರಣೆಯನ್ನು ವಿರೋಧಿಸಿದರು. ತನ್ನ ಕಕ್ಷಿದಾರರು ಜೈಲಿನಲ್ಲಿದ್ದರೂ ತನಿಖಾ ಸಂಸ್ಥೆಯು ಇದುವರೆಗೆ ಅಂತಿಮ ವರದಿಯನ್ನು ಸಲ್ಲಿಸಿಲ್ಲ. ಇದರಿಂದಾಗಿ ಆರೋಪಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ವಾದಿಸಿದರು.‌

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು, ತನಿಖಾ ಪ್ರಕ್ರಿಯೆಯನ್ನು ಕೂಡಲೇ ಚುರುಕುಗೊಳಿಸುವಂತೆ ತನಿಖಾಧಿಕಾರಿಗೆ ಸೂಚಿಸಿದರು. ಮುಂದಿನ ವಿಚಾರಣೆಯ ದಿನಾಂಕದೊಳಗೆ ಪ್ರಕರಣದ ಅಂತಿಮ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಆದೇಶಿಸಿದರು. ಲೋಕಾಯುಕ್ತ ಎಸ್‌ಪಿಪಿ ಅವರು ದೂರುದಾರರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.

ಮುಡಾ ಆಯುಕ್ತರಾಗಿದ್ದ ಅವಧಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಅನರ್ಹರಿಗೆ ನಿವೇಶನಗಳನ್ನು ಹಂಚಿದ್ದಾರೆಂಬ ಆರೋಪವನ್ನು ಜಿ.ಟಿ.ದಿನೇಶ್ ಕುಮಾರ್ ಎದುರಿಸುತ್ತಿದ್ದಾರೆ. ಈ ಸಂಬಂಧ ಪಿಎಂಎಲ್ಎ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ 2025ರ ಸೆ.17ರಂದು ದಿನೇಶ್​​ ಅವರನ್ನು ಬಂಧಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆ ನಂತರ ಅ.5ಕ್ಕೆ ಇ.ಡಿ, ದಿನೇಶ್ ಕುಮಾರ್​ಗೆ ಸೇರಿದ ಸುಮಾರು 40 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ, ದಿನೇಶ್ ಕುಮಾರ್ ವಿರುದ್ಧ 2025ರ ನ.19ರಂದು ಆರೋಪಪಟ್ಟಿ ಸಲ್ಲಿಸಿದ್ದು, ಅನರ್ಹರಿಗೆ ಒಟ್ಟು 450 ಕೋಟಿಗೂ ಅಧಿಕ ಬೆಲೆಬಾಳುವ 283 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆಂದು ಉಲ್ಲೇಖಿಸಿದೆ.

Read More
Next Story