Lokayukta Raid: ರಾಜ್ಯದ 29 ಕಡೆ ದಾಳಿ, 23.75 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ
x

Lokayukta Raid: ರಾಜ್ಯದ 29 ಕಡೆ ದಾಳಿ, 23.75 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ

ಆದಾಯದ ಮೂಲಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಪೊಲೀಸರು ನಾಲ್ಕು ಜಿಲ್ಲೆಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ


Click the Play button to hear this message in audio format

ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಶಾಕ್‌ ನೀಡಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ನಾಲ್ವರು ಅಧಿಕಾರಿಗಳಿಗೆ ಸೇರಿದ 29 ಸ್ಥಳಗಳ ಮೇಲೆ ನಡೆಸಿದ ಕಾರ್ಯಾಚರಣೆಯಲ್ಲಿ 23.75 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಕೆ-ಶಿಪ್‌ನ ಕಾರ್ಯಪಾಲಕ ಎಂಜಿನಿಯರ್‌ ಪುರುಷೋತ್ತಮ ದಾಸ್ ಹೆಗಡೆ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸೂಪಡೆಂಟ್‌ ಎಂಜಿನಿಯರ್‌ ಎಚ್.ಎಂ. ಜನಾರ್ದನ, ದಾವಣಗೆರೆಯ ಬೆಸ್ಕಾಂ ಸಹಾಯಕ ಎಕ್ಸ್ಯೂಟಿವ್‌ ಎಂಜಿನಿಯರ್‌ ಅರ್ಜುನ್ ಆರ್.ಎಚ್., ಧಾರವಾಡದ ಎ.ಡಿ.ಎಲ್.ಆರ್ ಸರ್ವೆ ಸೂಪರ್‌ವೈಸರ್ ಸೋಮಲಿಂಗಪ್ಪ ಫಕೀರಪ್ಪ ಸಿದ್ದನಗೌಡರ್ ಅವರಿಗೆ ಸೇರಿದ ಸ್ಥಳಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ. ಶೋಧ ಕಾರ್ಯ ವೇಳೆ ಕೋಟ್ಯಂತರ ರು. ನಗದು, ಆಸ್ತಿ-ಪಾಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

ದಾಳಿ ವೇಳೆ ಲಭ್ಯವಾದ ಅಕ್ರಮ ಆಸ್ತಿ ವಿವರ

1. ಪುರುಷೋತ್ತಮ ದಾಸ್ ಹೆಗಡೆ, ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ - ಕೆ-ಶಿಪ್, ಬೆಂಗಳೂರು

14 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. 11.52 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. 1 ನಿವೇಶನ, 2 ಮನೆಗಳು, 2 ಶಿಕ್ಷಣ ಸಂಸ್ಥೆಗಳು ಹಾಗೂ 11.30 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. 44.23 ಲಕ್ಷ ರೂ. ನಗದು, 60.79 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 27 ಲಕ್ಷ ರೂ. ಸ್ಥಿರ ಠೇವಣಿ ಸೇರಿ ಒಟ್ಟು 1.32 ಕೋಟಿ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.

2. ಎಚ್.ಎಂ. ಜನಾರ್ದನ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಸೂಪಡೆಂಟ್‌ ಎಂಜಿನಿಯರ್‌

6 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. 1 ನಿವೇಶನ, 3 ಮನೆಗಳು ಹಾಗೂ 34 ಎಕರೆ ಕೃಷಿ ಭೂಮಿ ಪತ್ತೆಯಾಗಿದ್ದು, 3.20 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇರುವುದು ಗೊತ್ತಾಗಿದೆ. 1.70 ಕೋಟಿ ರೂ. ನಗದು, 7.08 ಲಕ್ಷ ಮೌಲ್ಯದ ಚಿನ್ನಾಭರಣ, 20 ಲಕ್ಷದ ವಾಹನಗಳು ಹಾಗೂ 60 ಲಕ್ಷ ಮೌಲ್ಯದ ಇತರ ವಸ್ತುಗಳು ಸೇರಿ ಒಟ್ಟು 2.57 ಕೋಟಿ ಚರಾಸ್ತಿ ಇರುವುದು ಪತ್ತೆಯಾಗಿದೆ. ಒಟ್ಟು ಅಸಮತೋಲನ ಆಸ್ತಿಐು 4.42 ಕೋಟಿ ರೂ. ಇರುವುದು ಗೊತ್ತಾಗಿದೆ.

3. ಅರ್ಜುನ್ ಆರ್.ಎಚ್., ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಬೆಸ್ಕಾಂ, ದಾವಣಗೆರೆ

5 ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. 2 ನಿವೇಶನಗಳು, 3 ಮನೆಗಳು ಹಾಗೂ 2.20 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಒಟ್ಟಿ 2.17 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. 2.49 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 16.20 ಲಕ್ಷ ರೂ. ಮೌಲ್ಯದ ವಾಹನಗಳು ಸೇರಿ ಒಟ್ಟು 31.69 ಲಕ್ಷ ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಒಟ್ಟಾರೆ 2.18 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಹಚ್ಚಲಾಗಿದೆ.

4. ಸೋಮಲಿಂಗಪ್ಪ ಫಕೀರಪ್ಪ ಸಿದ್ದನಗೌಡರ್, ಸರ್ವೆ ಸೂಪರ್‌ವೈಸರ್, ಎ.ಡಿ.ಎಲ್.ಆರ್ ಕಚೇರಿ, ಧಾರವಾಡ

4 ಸ್ಥಳಗಳಲ್ಲಿ ದಾಳಿ ನಡೆದಿದೆ. 3 ನಿವೇಶನಗಳು, 1 ಮನೆ ಹಾಗೂ 3 ಎಕರೆ ಕೃಷಿ ಭೂಮಿ ಹೊಂದಿದ್ದು, ಒಟ್ಟು 2.08 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಲಭ್ಯವಾಗಿದೆ. 35.41 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 14.90 ಲಕ್ಷ ರೂ. ಮೌಲ್ಯದ ವಾಹನಗಳು ಹಾಗೂ 50 ಲಕ್ಷದ ಇತರ ವಸ್ತುಗಳು ಸೇರಿ ಒಟ್ಟು 56.13 ಲಕ್ಷ ಚರಾಸ್ತಿ ಪತ್ತೆಯಾಗಿದೆ. ಒಟ್ಟು 1.82 ಕೋಟಿ ಮೌಲ್ಯದ ಅಕ್ರಮ ಆಸ್ತಿ ಇರುವುದು ಪತ್ತೆಯಾಗಿದೆ.

ನಾಲ್ವರೂ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಶೋಧ ಕಾರ್ಯದ ವೇಳೆ ಸಿಕ್ಕಿರುವ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಅಧಿಕಾರಿಗಳ ವಿರುದ್ಧ ವಿಚಾರಣೆ ಮುಂದುವರಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

Read More
Next Story