
Lokayukta Raid: ಲೋಕಾಯುಕ್ತ ದಾಳಿ; ಕಂತೆ ಕಂತೆ ನೋಟು ಕಂಡು ಅಧಿಕಾರಿಗಳೇ ದಂಗು..!
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀಕ್ಷಕ ಎಂಜಿನಿಯರ್ ಎಚ್.ಎಂ. ಜನಾರ್ದನಗೆ ಸೇರಿದ ಸ್ಥಳ ಪರಿಶೀಲನೆ ನಡೆಸಿದಾಗ ಆತನ ಸ್ನೇಹಿತನ ಮನೆಯಲ್ಲಿ ಬರೋಬ್ಬರಿ 1.70 ಕೋಟಿ ನಗದು ಪತ್ತೆಯಾಗಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ರಾಜ್ಯದ ಹಲವೆಡೆ ಕಾರ್ಯಾಚರಣೆ ಕೈಗೊಂಡಿದ್ದು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀಕ್ಷಕ ಎಂಜಿನಿಯರ್ ಎಚ್.ಎಂ. ಜನಾರ್ದನ ಸೇರಿದ ಸ್ಥಳಗಳನ್ನು ಪರಿಶೀಲನೆ ನಡೆಸಿದಾಗ ಆತನ ಸ್ನೇಹಿತನ ಮನೆಯಲ್ಲಿ ಬರೋಬ್ಬರಿ 1.70 ಕೋಟಿ ನಗದು ಪತ್ತೆಯಾಗಿದೆ. ಕಂತೆ ಕಂತೆ ನೋಟುಗಳನ್ನು ಕಂಡು ಲೋಕಾಯುಕ್ತ ಪೊಲೀಸರೇ ದಂಗಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರು ಜನಾರ್ದನಗೆ ಸೇರಿದ ಆರು ಪ್ರದೇಶಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ 1.70 ಕೋಟಿ ರೂ. ನಗದಿಗೆ ದಾಖಲೆಗಳನ್ನು ಕೇಳಲಾಯಿತು. ಆದರೆ, ಸೂಕ್ತ ದಾಖಲೆಗಳನ್ನು ನೀಡದಿದ್ದಾಗ ಆ ಹಣವನ್ನು ಅಕ್ರಮ ಎಂದು ಪರಿಗಣಿಸಿ ಜಪ್ತಿ ಮಾಡಲಾಗಿದೆ. ಮೂಲಗಳ ಪ್ರಕಾರ ಎಚ್.ಎಂ. ಜನಾರ್ದನ ತಮ್ಮ ಅಧಿಕೃತ ಆದಾಯಕ್ಕಿಂತ ಸುಮಾರು ಶೇ. 216ರಷ್ಟು ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
3.20 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದ್ದು, 2.40 ಕೋಟಿ ರೂ. ಮೌಲ್ಯದ 3 ಐಷಾರಾಮಿ ಮನೆಗಳು, 66.84 ಲಕ್ಷ ರೂ. ಮೌಲ್ಯದ 34 ಎಕರೆ ಕೃಷಿ ಭೂಮಿ, 12.77 ಲಕ್ಷ ರೂ. ಮೌಲ್ಯದ ನಿವೇಶನದ ದಾಖಲೆಗಳು ಲಭ್ಯವಾಗಿವೆ. 2.57 ಕೋಟಿ ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದ್ದು, ಸ್ನೇಹಿತನ ಮನೆಯಲ್ಲಿ 1.70 ಕೋಟಿ ರೂ. ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿದೆ. 7.08 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 20 ಲಕ್ಷ ರೂ. ಮೌಲ್ಯದ ವಾಹನಗಳು ಸಿಕ್ಕಿವೆ. ಅಧಿಕಾರಿಯ ಬಳಿ ಒಟ್ಟು ಆದಾಯ ಮೀರಿದ ಆಸ್ತಿಯ ಮೌಲ್ಯ 4.42 ಕೋಟಿ ರೂ. ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನುಳಿದಂತೆ ದಾವಣಗೆರೆಯಲ್ಲಿ ವಿದ್ಯುತ್ ಸರಬರಾಜು ಸಂಸ್ಥೆಯ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅರ್ಜುನ್ ಆರ್.ಎಚ್., ಧಾರವಾಡದಲ್ಲಿ ಭೂ ದಾಖಲೆಗಳ ಇಲಾಖೆ ಸರ್ವೇಯರ್ ಸೋಮಲಿಂಗಪ್ಪ, ಬೆಂಗಳೂರು ನಗರದಲ್ಲಿ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್ ಪುರುಷೋತ್ತಮ ದಾಸ್ ಹೆಗ್ಡೆ ದಾಳಿಗೊಳಗಾದ ಅಧಿಕಾರಿಗಳಾಗಿದ್ದಾರೆ. ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿತ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಈ ವೇಳೆ ಮಹತ್ವದ ದಾಖಲೆಗಳು, ನಗದು, ಆಭರಣಗಳು ಹಾಗೂ ಆಸ್ತಿ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

