
ಲಂಚ ಸ್ವೀಕರಿಸಿ ಲೋಕಾಯುಕ್ತ ಬಲೆಗೆ ಬಿದ್ದ ಕೆ.ಪಿ ಅಗ್ರಹಾರ ಇನ್ಸ್‌ಪೆಕ್ಟರ್; ಬಂಧನದ ವೇಳೆ ರಂಪಾಟ!
ಮೈಸೂರು ರಸ್ತೆಯ ಸಿಎಆರ್ ಮೈದಾನದಲ್ಲಿ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಪೊಲೀಸರು ಬಂಧಿಸಲು ಮುಂದಾಗಿದ್ದ ವೇಳೆ ಕೂಗಾಡಿ ರಂಪಾಟ ಮಾಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.
ಚಿಟ್ ಫಂಡ್ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಸಿಲುಕಿಸುವುದಾಗಿ ಬೆದರಿಸಿ, 4 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರನ್ನು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆದರೆ, ಬಂಧನದ ವೇಳೆ ಇನ್ಸ್‌ಪೆಕ್ಟರ್ ಸೃಷ್ಟಿಸಿದ ರಂಪಾಟ ದೊಡ್ಡ ಸುದ್ದಿಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಆರೋಪಿ ಇನ್ಸ್‌ಪೆಕ್ಟರ್ ಮೈಸೂರು ರಸ್ತೆಯ ಸಿಎಆರ್ ಮೈದಾನದ ಬಳಿ ಲಂಚದ ಮೊತ್ತ ಪಡೆಯುವಾಗ ಲೋಕಾಯುಕ್ತ ಪೊಲೀಸರು ಹಿಡಿದಿದ್ದರು. ಈ ವೇಳೆ ಪೊಲೀಸರ ವಿರುದ್ಧವೇ ಕೂಗಾಡಿ, ರಂಪಾಟ ಮಾಡುವ ಮೂಲಕ ನಾಟಕೀಯ ಪ್ರಸಂಗ ಸೃಷ್ಟಿಸಿದ್ದು ವಿಡಿಯೊದಲ್ಲಿ ದಾಖಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಮೊಹಮ್ಮದ್ ಎಂಬುವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಏನಿದು ಪ್ರಕರಣ?
ದೂರುದಾರ ಮೊಹಮ್ಮದ್ ಅವರ ಸ್ನೇಹಿತರಾದ ಸೂಜನ್, ಸೂರಜ್, ಶ್ರೀನಿವಾಸ್ ಮತ್ತು ಲಕ್ಷ್ಮೀ ಎಂಬುವರು ಯೋಗಮಣಿ ಚೌಧರಿ ಅವರಿಂದ 47.25 ಲಕ್ಷ ರೂ. ಸಾಲ ಪಡೆದಿದ್ದರು. ಆರಂಭದಲ್ಲಿ ಬಡ್ಡಿ ಕಟ್ಟಿದ್ದರಾದರೂ ನಂತರ ನಿಲ್ಲಿಸಿದ್ದರು. ಈ ವೇಳೆ ನೀಡಿದ್ದ ಶ್ಯೂರಿಟಿ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲು ಇನ್ಸ್‌ಪೆಕ್ಟರ್ ಗೋವಿಂದರಾಜು ಬರೋಬ್ಬರಿ 7.50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ಈಗಾಗಲೇ 6 ಲಕ್ಷ ರೂ. ಸ್ವೀಕರಿಸಿದ್ದರು. ಆದರೆ, ಹಣ ಪಡೆದರೂ ಬಿ-ವರದಿ ಸಲ್ಲಿಸಿರಲಿಲ್ಲ.
ಪದೇ ಪದೆ ಕಿರುಕುಳ
ಒಂದು ಬಾರಿ ಹಣ ಪಡೆದ ಬಳಿಕವೂ ಸುಮ್ಮನಾಗದ ಗೋವಿಂದರಾಜ್, ಹಳೆ ಪ್ರಕರಣವನ್ನು ಮತ್ತೆ ತನಿಖೆಗೆ ಎತ್ತಿಕೊಂಡಿದ್ದರು. ಮೊಹಮ್ಮದ್ ಎಂಬುವರ ಪಾತ್ರವಿಲ್ಲದಿದ್ದರೂ, ವಾಟ್ಸ್ಆ್ಯಪ್ ಕರೆ ಮಾಡಿ ಪದೇ ಪದೇ ಠಾಣೆಗೆ ಬರುವಂತೆ ಕಿರುಕುಳ ನೀಡುತ್ತಿದ್ದರು. ಬಳಿಕ ಮೊಹಮ್ಮದ್ ಮತ್ತು ಅವರ ಸ್ನೇಹಿತರ ವಿರುದ್ಧ ಕ್ರಮ ಕೈಗೊಳ್ಳದಿರಲು ಮತ್ತೆ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 1 ಲಕ್ಷ ರೂ. ಪಡೆದುಕೊಂಡಿದ್ದ ಗೋವಿಂದರಾಜು, ಬಾಕಿ ಉಳಿದ 4 ಲಕ್ಷ ರೂ. ಹಣವನ್ನು ಜನವರಿ 26ರೊಳಗೆ ನೀಡುವಂತೆ ತಾಕೀತು ಮಾಡಿದ್ದರು.
ಪತ್ನಿ ಮೊಬೈಲ್‌ನಲ್ಲಿ ರೆಕಾರ್ಡ್
ಇನ್ಸ್‌ಪೆಕ್ಟರ್ ಕಿರುಕುಳದಿಂದ ಬೇಸತ್ತ ಮೊಹಮ್ಮದ್, ಇನ್ಸ್‌ಪೆಕ್ಟರ್ ವಾಟ್ಸ್ಆ್ಯಪ್ ಕರೆ ಮೂಲಕ ಲಂಚದ ಬೇಡಿಕೆ ಇಟ್ಟಿದ ಸಂಭಾಷಣೆಯನ್ನು ತಮ್ಮ ಪತ್ನಿಯ ಮೊಬೈಲ್ ಮೂಲಕ ರೆಕಾರ್ಡ್ ಮಾಡಿಕೊಂಡರು. ಬಳಿಕ ದಾಖಲೆ ಸಮೇತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆಗಿಳಿದ ಲೋಕಾಯುಕ್ತ ತಂಡ, ಲಂಚದ ಹಣ ಪಡೆಯುತ್ತಿದ್ದಾಗಲೇ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರನ್ನು ಬಂಧಿಸಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ತನಿಖೆ ಜಾರಿಯಲ್ಲಿದೆ.

