
ಚಿರತೆ ದಾಳಿಗೊಳಗಾಗಿರುವ ಬಾಲಕ
ಫೆಡರಲ್ ಕಳಕಳಿಗೆ ಇನ್ನಷ್ಟು ಪುರಾವೆ: ಬೆಟ್ಟದ ಪಾದಯಾತ್ರೆಗಳ ಮೇಲೆ ಮತ್ತೆ ಚಿರತೆ ದಾಳಿ
ನರ ಹಂತಕ ಚಿರತೆಯು, ಬಾಲಕನೊಬ್ಬನ ಮೇಲೆ ಹಾಡಗಲೆ ದಾಳಿ ನಡೆಸಿ ಪರಾರಿಯಾಗಿದೆ. ಹೀಗಾಗಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಸಾಗಲು ಭಕ್ತರು ಭಯ ಪಡುವಂತಾಗಿದೆ.
ಮಹಾಶಿವರಾತ್ರಿ ಹಿನ್ನಲೆಯಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸುತ್ತಿದ್ದ ಭಕ್ತರ ಮೇಲೆ ಮತ್ತೊಮ್ಮೆ ಚಿರತೆ ದಾಳಿ ನಡೆದಿದೆ. ಕಳೆದ ತಿಂಗಳು ಒಬ್ಬ ಭಕ್ತನನ್ನು ಚಿರತೆ ಬಲಿ ತೆಗೆದುಕೊಂಡಿದ್ದ ಬೆನ್ನಲೆ, ಮಂಗಳವಾರ ಹಗಲು ಹೊತ್ತೇ ಚನ್ನಪಟ್ಟಣದ ಬಾಲಕ ಶ್ರೇಯಸ್ ಮೇಲೆ ದಾಳಿ ನಡೆದು ಅವನ ಕಿವಿಗೆ ಗಾಯಗಳಾಗಿವೆ. ಪಾದಯಾತ್ರಿಗಳಲ್ಲಿ ಭಯ ಹಾಗೂ ಆತಂಕ ಹೆಚ್ಚಾಗಿದೆ.
ದ ಫೆಡರಲ್ ಕರ್ನಾಟಕ ಈ ಬಗ್ಗೆ ಮಲೆ ಮಹದೇಶ್ವರನ ಭಕ್ತರು ಬೆಟ್ಟಕ್ಕೆ ಯಾತ್ರೆ ತೆರಳುವಾಗ ಚಿರತೆ ಮತ್ತಿತರ ಕಾಡುಪ್ರಾಣಿಗಳ ಹಾವಳಿ ಹಾಗೂ ಕಾವೇರಿ ನದಿ ದಾಟಲು ಆಗುತ್ತಿರುವ ತೊಂದರೆ ಬಗ್ಗೆ " ಅತ್ತ ಚಿರತೆ, ಇತ್ತ ನದಿ; ಮಾದಪ್ಪನ ಭಕ್ತರ ಪಾದಯಾತ್ರೆಗೆ ಸರ್ಕಾರದ 'ವಿಧಿ'" ಎಂಬ ವಿವರ ವರದಿಯನ್ನು ಫೆ.8 ರಂದು ಪ್ರಕಟಿಸಿತ್ತು. ಈಗ ಮತ್ತೆ ಅದೇ ಭೀತಿ ಮಲೆಮಹದೇಶ್ವರನ ಭಕ್ತರಿಗೆ ಕಾಡುತ್ತಿದೆ.
ಮಂಗಳವಾರ ಮಧ್ಯಾಹ್ನ ತಾಳು ಬೆಟ್ಟದಿಂದ ದೇವಾಲಯದ ಕಡೆಗೆ ಸಾಗುತ್ತಿದ್ದ ಭಕ್ತರ ಗುಂಪಿನಲ್ಲಿದ್ದ ಬಾಲಕನ ಮೇಲೆ ಏಳನೇ ತಿರುವಿನಲ್ಲಿನ ಕಾಡು ದಾರಿಯಲ್ಲಿ ಚಿರತೆ ಹಠಾತ್ ದಾಳಿ ನಡೆಸಿತು. ಚಿರತೆ ಬೇಲಿಯಿಂದ ಹಾರಿ ಬಾಲಕನ ಕಿವಿಗೆ ಗಾಯಗೊಳಿಸಿತು. ಭಕ್ತರು ಜೋರಾಗಿ ಕಿರುಚಿದ್ದರಿಂದ ಚಿರತೆ ಕಾಡಿನೊಳಗೆ ಓಡಿಹೋಯಿತು.
ಗಾಯಗೊಂಡ ಶ್ರೇಯಸ್ಗೆ ಮಲೆಮಹದೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಗುಂಪಿನಲ್ಲಿ ಜನ ಹೆಚ್ಚಿದ್ದರಿಂದ ಬಾಲಕ ಬದುಕುಳಿದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಯ ವಿವರಣೆ
ಪ್ರತ್ಯಕ್ಷದರ್ಶಿ ಕಮಲಮ್ಮ ಮಾತನಾಡಿ, "ನಾವು ಮೊದಲು ಅದನ್ನು ನಾಯಿ ಎಂದುಕೊಂಡಿದ್ದೆವು. ಆದರೆ ಅದರ ಮೈ ಮೇಲಿನ ಮಚ್ಚೆಗಳನ್ನು ನೋಡಿದ ನಂತರ ಅದು ಚಿರತೆ ಎಂದು ತಿಳಿಯಿತು. ಬಾಲಕನ ಕಿವಿಯ ಮೇಲೆ ದಾಳಿ ಮಾಡಿತು. ನಾವೆಲ್ಲರೂ ಜೋರಾಗಿ ಕಿರುಚಿದ್ದರಿಂದ ಗಾಬರಿಗೊಂಡ ಚಿರತೆ ಓಡಿಹೋಯಿತು. ಒಂದು ಕ್ಷಣ ತಡವಾಗಿದ್ದರೆ ಬಾಲಕನನ್ನು ಎಳೆದುಕೊಂಡು ಹೋಗುತ್ತಿತ್ತು" ಎಂದರು.
ಕಿ.ಮೀಗೊಂದು ತಂಡ ರಚನೆ
ಕಳೆದ ತಿಂಗಳಷ್ಟೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ ನಡೆಸುತ್ತಿದ್ದ ಭಕ್ತನೊಬ್ಬನನ್ನು ಚಿರತೆ ಬಲಿ ಪಡೆದಿತ್ತು. ಹೀಗಾಗಿ ಒಂದು ವಾರಗಳ ಕಾಲ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಮಹಾಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಭಕ್ತರಿಗೆ ಪಾದಯಾತ್ರೆಗೆ ಮತ್ತೆ ಅವಕಾಶ ಕಲ್ಪಿಸಿ, ಬೆಳಗ್ಗೆ 7 ಗಂಟೆಯಿಂದ ಸಂಜೆ 5 .30 ರ ವರೆಗೆ ಮಾತ್ರವೇ ಪಾದಯಾತ್ರೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಬೆಟ್ಟದ ಪ್ರತಿ ಒಂದು ಕಿ.ಮೀಗೊಂದು ಅರಣ್ಯ ಇಲಾಖೆಯು ತಂಡ ರಚಿಸಿ, ಭಕ್ತರ ಸುರಕ್ಷತೆಗೆ ಆಧ್ಯತೆ ನೀಡಿತ್ತು. ಹೀಗಿದ್ದರೂ ಚಿರತೆ ದಾಳಿ ಮತ್ತೆ ಮುಂದುವರಿದಿರುವುದು ಭಕ್ತರ ಆಂತಕಕ್ಕೆ ಕಾರಣವಾಗಿದೆ.
ಈ ಸಂಬಂಧ ಪ್ರತ್ಯಕ್ಷದರ್ಶಿ ಕಮಲಮ್ಮ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, ಮಾದಪ್ಪನ ಹೆಸರೇಳಿಕೊಂಡು ಪಾದಯಾತ್ರೆ ನಡೆಸುತ್ತಿದ್ದೆವು. ಕಾಲುದಾರಿಯ ಮೆಟ್ಟಿಲುಗಳ ಬಳಿ ಏಕಾಏಕಿ ಚಿರತೆ ದಾಳಿ ನಡೆಸಿತು. ನಾವು ಮೊದಲು ಅದನ್ನು ನಾಯಿ ಎಂದುಕೊಂಡಿದ್ದೆವು. ಬಳಿಕ ಅದರ ಮೈಮೇಲಿನ ಮಚ್ಚೆ ನೋಡಿದ ಮೇಲೆ ಚಿರತೆ ಎನ್ನುವುದು ದೃಢಪಡಿಸಿಕೊಂಡೆವು. ಬೇಲಿಯಿಂದ ಹಾರಿದ ಚಿರತೆ ಬಾಲಕನ ಕಿವಿ ಮೇಲೆ ದಾಳಿ ನಡೆಸಿತ್ತು. ಕೂಡಲೇ ಎಲ್ಲರೂ ಜೋರಾಗಿ ಕಿರುಚಾಡಿದ್ದರಿಂದ ಗಾಬರಿಗೊಂಡ ಚಿರತೆ, ಕಾಡಿನೊಳಗೆ ಹಾರಿ ಹೋಯಿತು. ಒಂದು ಕ್ಷಣ ತಡವಾಗಿದ್ದರೂ, ಬಾಲಕನನ್ನು ಚಿರತೆ ಎಳೆದೊಯ್ಯಿತು ಎಂದು ಗಾಬರಿಯಿಂದಲೇ ವಿವರಿಸಿದರು.

