
ನಂದಿನಿ ಉತ್ಪನ್ನಗಳ ವಿರುದ್ಧ ಅಪಪ್ರಚಾರ- KMFನಿಂದ ಕಠಿಣ ಕ್ರಮದ ಎಚ್ಚರಿಕೆ
ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ (FSSAI) ನಿಗದಿಪಡಿಸಿರುವ ಎಲ್ಲಾ ಸುರಕ್ಷತಾ ಮಾನದಂಡಗಳು ಮತ್ತು ಅನುಮೋದಿತ ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ.
ದಶಕಗಳಿಂದ ಕನ್ನಡಿಗರ ನಂಬಿಕಸ್ಥ ಬ್ರ್ಯಾಂಡ್ ಆಗಿರುವ 'ನಂದಿನಿ' ಉತ್ಪನ್ನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕರ್ನಾಟಕ ಹಾಲು ಮಹಾಮಂಡಳಿ (KMF) ಗುಡುಗಿದೆ. ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ಎಚ್ಚರಿಕೆ ನೀಡಿದೆ.
ಮಂಗಳವಾರ (ಫೆ.17) ಈ ಕುರಿತು ಪ್ರಕಟಣೆ ಹೊರಡಿಸಿರುವ ಕೆಎಂಎಫ್, ನಂದಿನಿ ಬ್ರಾಂಡ್‌ನ ಕೆಲವು ಉತ್ಪನ್ನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳನ್ನು ಮಾಡಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಂದಿನಿ ಉತ್ಪನ್ನಗಳನ್ನು ಸೇವನೆಗೆ ಅಸುರಕ್ಷಿತವೆಂದು ತಪ್ಪಾಗಿ ಪ್ರಚಾರ ಮಾಡಲಾಗುತ್ತಿದ್ದು, ಬಾಲ್ಯದಿಂದಲೇ ನಂದಿನಿ ಬ್ರಾಂಡ್‌ನೊಂದಿಗೆ ಬೆಳೆದಿರುವ ಕೋಟ್ಯಂತರ ಗ್ರಾಹಕರಲ್ಲಿ ಅನಗತ್ಯ ಗೊಂದಲ ಉಂಟುಮಾಡಲಾಗಿದೆ ಎಂದು ತಿಳಿಸಿದೆ.
ಮಾನದಂಡಗಳ ಪ್ರಕಾರವೇ ಉತ್ಪಾದನೆ
ಮುಂದುವರಿದು, ಕರ್ನಾಟಕ ಹಾಲು ಮಹಾಮಂಡಳಿಯು (KMF) ಕಾನೂನುಬದ್ಧ ಸಂಸ್ಥೆಗಳು ಹಾಗೂ ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ (FSSAI) ನಿಗದಿಪಡಿಸಿರುವ ಎಲ್ಲಾ ಸುರಕ್ಷತಾ ಮಾನದಂಡಗಳು ಮತ್ತು ಅನುಮೋದಿತ ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದೆ. ನಂದಿನಿ ಹಾಲು ಹಾಗೂ ಹಾಲು ಉತ್ಪನ್ನಗಳೆಲ್ಲವೂ ಸೇವನೆಗೆ ಸಂಪೂರ್ಣ ಸುರಕ್ಷಿತವಾಗಿದ್ದು, ಗ್ರಾಹಕರು ಆತಂಕಪಡಬೇಕಾಗಿಲ್ಲವೆಂದು ಕೆಎಂಎಫ್ ಭರವಸೆಯನ್ನು ನೀಡುತ್ತದೆ ಎಂದು ಹೇಳಿದೆ.
ಏನಿದು ಘಟನೆ ?
ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಉತ್ಪನ್ನಗಳನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂದು ಚರ್ಮ ವೈದ್ಯೆ ಡಾ. ಶರಣ್ಯ ಎಂಬುವವರು ಆರೋಪ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಎಂಎಫ್, ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರ, ಎಫ್‌ಎಸ್‌ಎಸ್‌ಎಐ ಅಥವಾ ಪ್ರಮಾಣಿತ ಪ್ರಯೋಗಾಲಯದ ವರದಿ ಇಲ್ಲದೆ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಸಂಸ್ಥೆ ಆರೋಪಿಸಿದೆ.
ನಂದಿನಿ ಉತ್ಪನ್ನಗಳ ವಿರುದ್ಧ ಸಂಚು
ರಾಜ್ಯದ ಲಕ್ಷಾಂತರ ಹಾಲು ಉತ್ಪಾದಕ ರೈತರ ಜೀವನಾಡಿಯಾಗಿರುವ ಕೆಎಂಎಫ್, ನಂದಿನಿ ಉತ್ಪನ್ನಗಳು ಕಠಿಣ ಗುಣಮಟ್ಟದ ಮಾನದಂಡಗಳನ್ನು ಪಾಲಿಸಿ ತಯಾರಾಗುತ್ತವೆ ಎಂದು ಸ್ಪಷ್ಟಪಡಿಸಿದ್ದು. ಪಶುಗಳಿಗೆ ಹಾನಿಕಾರಕ ಪದಾರ್ಥಗಳು ಅಥವಾ ನಿಷೇಧಿತ ಕೃತಕ ರಾಸಾಯನಿಕಗಳನ್ನು ಬಳಸದೆ, ಸುರಕ್ಷಿತ ಹಾಗೂ ನೈಸರ್ಗಿಕ ವಿಧಾನಗಳಲ್ಲಿ ಹಾಲು ಸಂಗ್ರಹಿಸಿ ಉತ್ಪಾದನೆ ನಡೆಸಲಾಗುತ್ತದೆ. ಎಲ್ಲಾ ಉತ್ಪನ್ನಗಳು ನಿಯಮಿತವಾಗಿ ಗುಣಮಟ್ಟ ಪರೀಕ್ಷೆಗೊಳಗಾಗಿ ಬಳಿಕವೇ ಮಾರುಕಟ್ಟೆಗೆ ಬಿಡುಗಡೆ ಆಗುತ್ತವೆ. ಕೇವಲ ನಂದಿನಿ ಉತ್ಪನ್ನಗಳನ್ನು ಗುರಿಯಾಗಿಸಿ ಈ ರೀತಿಯ ಅಪಪ್ರಚಾರ ನಡೆಯುತ್ತಿರುವ ಹಿನ್ನೆಲೆ ಇದರ ಹಿಂದೆ ಸಂಚು ಇರಬಹುದೆಂಬ ಶಂಕೆಯನ್ನೂ ಕೆಎಂಎಫ್ ವ್ಯಕ್ತಪಡಿಸಿದೆ.
ರೈತರ ಬದುಕಿಗೆ ಧಕ್ಕೆ ತರಬಹುದಾದ ತಪ್ಪು ಮಾಹಿತಿಯನ್ನು ತಡೆಯಲು ಸೈಬರ್ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ. ತಪ್ಪು ಮಾಹಿತಿ ಹಂಚುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.

