ನಟಿ ಸುಧಾರಾಣಿ ನಂದಿನಿ ಬ್ರ್ಯಾಂಡ್ ರಾಯಭಾರಿ; ಬಮೂಲ್ ನಿರ್ಧಾರಕ್ಕೆ ಕೆಎಂಎಫ್ ಕೆಂಗಣ್ಣು
x
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯನ್ನಾಗಿ ಸುಧಾರಾಣಿ ಅವರನ್ನು ಡಿ.ಕೆ.ಸುರೇಶ್ ನೇಮಿಸಿದರು

ನಟಿ ಸುಧಾರಾಣಿ ನಂದಿನಿ ಬ್ರ್ಯಾಂಡ್ ರಾಯಭಾರಿ; ಬಮೂಲ್ ನಿರ್ಧಾರಕ್ಕೆ ಕೆಎಂಎಫ್ ಕೆಂಗಣ್ಣು

ಸಾಮಾನ್ಯವಾಗಿ ನಂದಿನಿ ಬ್ರ್ಯಾಂಡ್‌ ರಾಯಭಾರಿಗಳನ್ನು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಕೆಎಂಎಫ್ ನೇಮಕ ಮಾಡುತ್ತದೆ. ಆದರೆ, ಈಗ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಸ್ವತಂತ್ರವಾಗಿ ಸುಧಾರಾಣಿ ಅವರನ್ನು ನೇಮಿಸಿಕೊಂಡಿದೆ


ಕರ್ನಾಟಕ ಹಾಲು‌ ಮಹಾಮಂಡಲದ (ಕೆಎಂಎಫ್) 'ನಂದಿನಿ' ಉತ್ಪನ್ನಗಳ ಪ್ರಚಾರ ರಾಯಭಾರಿ ನೇಮಕ ವಿಚಾರ ವಿವಾದ ಸೃಷ್ಟಿಸಿದೆ.

ಬೆಂಗಳೂರು ಹಾಲು ಒಕ್ಕೂಟವೇ (ಬಮೂಲ್) ಏಕಪಕ್ಷಿಯವಾಗಿ ಹಿರಿಯ ನಟಿ ಸುಧಾರಾಣಿ ಅವರನ್ನು ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿರುವುದಕ್ಕೆ ಮಾತೃ ಸಂಸ್ಥೆ ಕೆಎಂಎಫ್ ಆಕ್ರೋಶ ವ್ಯಕ್ತಪಡಿಸಿದೆ.

ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ನಟಿ ಸುಧಾರಾಣಿ ಅವರನ್ನು ಭೇಟಿಯಾಗಿ ಅಧಿಕೃತವಾಗಿ ಬರಮಾಡಿಕೊಂಡಿರುವುದು ಕೆಎಂಎಫ್ ಅಸಮಾಧಾನಕ್ಕೆ ಕಾರಣವಾಗಿದೆ.

ಕೆಎಂಎಫ್ ನಿಯಮಗಳಿಗೆ ವಿರುದ್ಧವಾಗಿ ಪ್ರಚಾರ ರಾಯಭಾರಿ ನೇಮಕ ಮಾಡಲಾಗಿದೆ. ಈ ಹಿಂದೆ ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರಂತಹ ಗಣ್ಯರನ್ನು ಕೆಎಂಎಫ್ ನೇರವಾಗಿಯೇ ಪ್ರಚಾರ ರಾಯಭಾರಿಗಳನ್ನಾಗಿ ನೇಮಕ ಮಾಡಿತ್ತು. ಆದರೆ, ಈಗ ಕೆಎಂಎಫ್ ಅಧೀನದಲ್ಲಿರುವ ಬಮೂಲ್ ಅಧ್ಯಕ್ಷರು ಯಾವುದೇ ಅನುಮತಿ ಪಡೆಯದೇ ಪ್ರಚಾರ ರಾಯಭಾರಿ ನೇಮಕ‌ ಮಾಡಿರುವುದು ಅಕ್ಷಮ್ಯ ಎಂದು ಹೇಳಿದೆ.

ಈ ಮಧ್ಯೆ, ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯನ್ನಾಗಿ ತಮ್ಮನ್ನು ನೇಮಕ ಮಾಡಿರುವುದಕ್ಕೆ ನಟಿ ಸುಧಾರಾಣಿ ಸಂತಸ ವ್ಯಕ್ತಪಡಿಸಿದ್ದಾರೆ.

"ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರಂತಹ ಮೇರು ವ್ಯಕ್ತಿಗಳು ನಡೆದ ಹಾದಿಯಲ್ಲಿ ಸಾಗುವುದು ನನಗೆ ಹೆಮ್ಮೆಯ ವಿಷಯ. ಇದು ಕೇವಲ ಪ್ರಚಾರವಲ್ಲ, ರೈತರ ಏಳಿಗೆ ಮತ್ತು ದೇಸಿ ತಳಿಗಳ ಸಂರಕ್ಷಣೆಯ ಜವಾಬ್ದಾರಿಯಾಗಿದೆ ಎಂದಿದ್ದಾರೆ.

ವಿವಾದಕ್ಕೆ ಕಾರಣವೇನು?

ಸಾಮಾನ್ಯವಾಗಿ ನಂದಿನಿ ಬ್ರ್ಯಾಂಡ್‌ ರಾಯಭಾರಿಗಳನ್ನು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಕೆಎಂಎಫ್ ನೇಮಕ ಮಾಡುತ್ತದೆ. ಆದರೆ, ಈಗ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಸ್ವತಂತ್ರವಾಗಿ ಸುಧಾರಾಣಿ ಅವರನ್ನು ನೇಮಿಸಿಕೊಂಡಿದೆ. ಇದು ಸಂಸ್ಥೆಯ ಬೈಲಾಗಳಿಗೆ ವಿರುದ್ಧವಾಗಿದೆ ಎಂಬುದು ಕೆಎಂಎಫ್ ಅಧಿಕಾರಿಗಳ ವಾದ. ಈ ಕುರಿತು ಬಮೂಲ್ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಲು ಕೆಎಂಎಫ್ ಮುಂದಾಗಿದೆ.

Read More
Next Story