
Keralam Elections| ಕೇರಳ ರಣಕಣಕ್ಕೆ ಸಿಲಿಕಾನ್ ಸಿಟಿಯಿಂದ 'ಬಸ್ ಯಾತ್ರೆ' : ಮತದಾರರ ಪಯಣ
ನೆರೆಯ ರಾಜ್ಯ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಲಕ್ಷಾಂತರ ಕೇರಳಿಗರು ಮಂಗಳವಾರ ಮತ್ತು ಬುಧವಾರ ತಮ್ಮ ಊರಿನತ್ತ ಪ್ರಯಾಣ ಬೆಳೆಸಲಿದ್ದಾರೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಬೆಂಗಳೂರು ನಗರದ ಕಲಾಸಿಪಾಳ್ಯ, ಶಾಂತಿನಗರ, ಮಡಿವಾಳ, ಮೆಜೆಸ್ಟಿಕ್ ಸೇರಿದಂತೆ ಹಲವು ಬಸ್‌ನಿಲ್ದಾಣಗಳಲ್ಲಿ ಕೇರಳದತ್ತ ಬಸ್‌ಗಳು ಮುಖಮಾಡಿ ನಿಂತಿವೆ.
ಕೇರಳ ವಿಧಾನಸಭಾ ಚುನಾವಣೆಯ ಮಹಾಸಂಗ್ರಾಮಕ್ಕೆ ಕೆಲವೇ ಗಂಟೆಗಳು (ಏ.9 - ಮತದಾನದ ದಿನ) ಬಾಕಿ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಸಾವಿರಾರು ಕೇರಳಿಗರು ತಮ್ಮ ಊರುಗಳತ್ತ ಮತದಾನದ ಪಯಣ ಬೆಳೆಸಲಿದ್ದಾರೆ. 30ಕ್ಕೂ ಹೆಚ್ಚು ಸುಸಜ್ಜಿತ ಬಸ್‌ಗಳು ಸಾಲು ಸಾಲಾಗಿ ಕೇರಳದತ್ತ ಮುಖ ಮಾಡಿವೆ. ಇದು ಕೇವಲ ಬಸ್‌ಗಳ ಸಂಚಾರವಲ್ಲ, ಕೇರಳದ ಹಣೆಬರಹ ಬದಲಿಸಲು ಹೊರಟಿರುವ ಪ್ರಜಾಪ್ರಭುತ್ವದ ರಥಯಾತ್ರೆಯಾಗಿದೆ.
ಈ ಬಾರಿಯ ಕೇರಳ ವಿಧಾನಸಭಾ ಚುನಾವಣೆಯು ಅಭೂತಪೂರ್ವ ಪೈಪೋಟಿಗೆ ಸಾಕ್ಷಿಯಾಗುತ್ತಿದ್ದು, ಇದರ ಕದನ ಕೇವಲ ಕೇರಳದ ಗಡಿಗಳಿಗೆ ಸೀಮಿತವಾಗಿಲ್ಲ. ನೆರೆಯ ರಾಜ್ಯ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಲಕ್ಷಾಂತರ ಕೇರಳಿಗರು ಈ ಚುನಾವಣೆಯ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನಿಂದ ಕೇರಳದ ವಿವಿಧ ಭಾಗಗಳಿಗೆ ಮತದಾನ ಮಾಡಲು ಹೊರಟಿದ್ದಾರೆ.
ಐಟಿ ನೌಕರರು, ನರ್ಸ್‌ಗಳು ಮತ್ತು ವ್ಯಾಪಾರ ಸೇರಿದಂತೆ ವಿವಿಧ ಉದ್ಯೋಗಗಳನ್ನು ಕಂಡುಕೊಂಡಿರುವ ಕೇರಳಿಗರು ಬೆಂಗಳೂರಿನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ. ಬಹಳಷ್ಟು ಮಂದಿ ತಮ್ಮ ಊರುಗಳಲ್ಲಿ ಮತದಾನದ ಹಕ್ಕನ್ನು ಉಳಿಸಿಕೊಂಡಿದ್ದಾರೆ. ಕೇರಳದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಬೆಂಗಳೂರಿನಲ್ಲಿ ಕೆಲಸ ಮಾಡುವ ಕನಿಷ್ಠ 2 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಈ ಸಂಖ್ಯೆಯು ಚುನಾವಣೆಯಲ್ಲಿ ಅಭ್ಯರ್ಥಿಗಳ ಅಂತರವನ್ನು ನಿರ್ಧರಿಸಬಲ್ಲದು. ಹೀಗಾಗಿ, ಕೇರಳದ ಅಭ್ಯರ್ಥಿಗಳಿಗೆ ಬೆಂಗಳೂರಿನ ಮತದಾರರನ್ನು ಸೆಳೆಯುವುದು ಅನಿವಾರ್ಯವಾಗಿದೆ.
ಖಾಸಗಿ ಬಸ್‌ಗಳಿಗೆ ಬೇಡಿಕೆ
ಚುನಾವಣಾ ದಿನ ಹತ್ತಿರ ಬರುತ್ತಿದ್ದಂತೆ ಬೆಂಗಳೂರಿನಿಂದ ಕೇರಳಕ್ಕೆ ಹೊರಡುವ ಬಸ್‌ಗಳಿಗೆ ಬಾರಿ ಬೇಡಿಕೆ ಬಂದಿದೆ. ಬಿಜೆಪಿ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಪಕ್ಷಗಳು ತಮ್ಮ ಬೆಂಬಲಿಗರಿಗಾಗಿ ವಿಶೇಷ ಬಸ್ ಸೌಲಭ್ಯಗಳನ್ನು ಕಲ್ಪಿಸುವೆ. 30ಕ್ಕೂ ಹೆಚ್ಚು ಖಾಸಗಿ ಬಸ್‌ಗಳನ್ನು ರಾಜಕೀಯ ಪಕ್ಷಗಳ ಬೆಂಬಲಿಗರೇ ಬಾಡಿಗೆಗೆ ಪಡೆದಿದ್ದಾರೆ. ಬೆಂಗಳೂರು ನಗರದ ವಿವಿಧೆಡೆಯಿಂದ ಕೇರಳದ ವಿವಿಧ ಜಿಲ್ಲೆಗಳಾದ ಕಣ್ಣೂರು, ಪಾಲಕ್ಕಾಡ್, ವಯನಾಡ್ ಮತ್ತು ಎರ್ನಾಕುಲಂಗೆ ಸಂಚರಿಸುತ್ತಿವೆ. ಈ ಪ್ರಯಾಣವು ಮತದಾರರಿಗೆ ಉಚಿತವಾಗಿದ್ದು, ಊಟದ ವ್ಯವಸ್ಥೆಯನ್ನೂ ಪಕ್ಷಗಳೇ ಭರಿಸುತ್ತಿವೆ. ಇದು ಕೇವಲ ಸಾರಿಗೆಯಲ್ಲ, ಬದಲಿಗೆ ಮತದಾರರ ಮೇಲೆ ಪ್ರಭಾವ ಬೀರುವ ತಂತ್ರವೂ ಹೌದು.
ಕೇರಳವು ಸಾಂಪ್ರದಾಯಿಕವಾಗಿ ಎಡರಂಗ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವಿನ ದ್ವಿಮುಖ ಸ್ಪರ್ಧೆಗೆ ಹೆಸರಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿರುವ ಎಡರಂಗಕ್ಕೆ ಆಡಳಿತ ವಿರೋಧಿ ಅಲೆ ಮತ್ತು ಕೆಲವು ವಿವಾದಗಳು ಸವಾಲಾಗಿವೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಈ ಚುನಾವಣೆ ಅಸ್ತಿತ್ವದ ಪ್ರಶ್ನೆಯಾಗಿದೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ಪ್ರಭಾವ ಮತ್ತು ಸ್ಥಳೀಯ ನಾಯಕರ ಒಗ್ಗಟ್ಟು ಅವರಿಗೆ ವರದಾನವಾಗಬಹುದು ಎಂಬ ನಿರೀಕ್ಷೆಯಿದೆ. ಬಿಜೆಪಿ ಈ ಬಾರಿ ಕೇರಳದಲ್ಲಿ ತೃತೀಯ ಶಕ್ತಿಯಾಗಿ ಪ್ರಬಲವಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಅಥವಾ ಹೆಚ್ಚಿನ ಮತಗಳನ್ನು ಪಡೆದರೆ ಅದು ಇತರೆರಡು ಮೈತ್ರಿಕೂಟಗಳ ಸಮೀಕರಣವನ್ನೇ ಬದಲಿಸಲಿದೆ ಎಂದು ಹೇಳಲಾಗಿದೆ.
ಬೆಂಗಳೂರು ಕೇರಳಿಗರ ಬೇಡಿಕೆ - ಪ್ರಭಾವ
ಕರ್ನಾಟಕದಿಂದ ಹೋಗುವ ಮತದಾರರಿಗೆ ಈ ಬಾರಿ ಹೆಚ್ಚಿನ ಗೌರವ ಸಿಗುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳು ಬೆಂಗಳೂರಿನಲ್ಲಿ ನೆಲೆಸಿರುವ ಕೇರಳಿಗರು ಸುಶಿಕ್ಷಿತರಾಗಿದ್ದು, ಅವರು ತಮ್ಮ ಕುಟುಂಬದವರ ಮತಗಳ ಮೇಲೆಯೂ ಪ್ರಭಾವ ಬೀರಬಹುದು. ಸ್ಪರ್ಧೆಯು ಎಷ್ಟು ಕಠಿಣವಾಗಿದೆಯೆಂದರೆ, ಗೆಲುವಿನ ಅಂತರವು ಕೇವಲ 100 ರಿಂದ 500 ಮತಗಳಷ್ಟೇ ಇರಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ. ಇಂತಹ ಸಮಯದಲ್ಲಿ ಬೆಂಗಳೂರಿನಿಂದ ಹೋಗುವ ಸಾವಿರಾರು ಮತದಾರರು ಫಲಿತಾಂಶದ ಮೇಲೆ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಸ್‌ಐಆರ್ ಪರಿಣಾಮ: ಹೊರರಾಜ್ಯದಲ್ಲಿರುವವರೇ ನಿರ್ಣಾಯಕ..!
ಈ ಬಾರಿಯ ಚುನಾವಣೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿರಲು ತಾಂತ್ರಿಕ ಕಾರಣವೂ ಇದೆ. ಕೇರಳದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್) ನಡೆದಾಗ, ಸ್ಥಳೀಯವಾಗಿ ಹತ್ತಾರು ಸಾವಿರ ಮತದಾರರ ಹೆಸರುಗಳು ಪಟ್ಟಿಯಿಂದ ನಾಪತ್ತೆಯಾಗಿವೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ, ಪ್ರತಿಯೊಂದು ಮತವೂ ಈಗ "ಬಂಗಾರʼದಷ್ಟೇ ಬೆಲೆಬಾಳುವಂತಾಗಿದೆ. ಸ್ಥಳೀಯವಾಗಿ ಮತಗಳು ಕಡಿಮೆಯಾಗಿರುವುದರಿಂದ, ಬೆಂಗಳೂರಿನಂತಹ ಹೊರ ರಾಜ್ಯಗಳಲ್ಲಿ ನೆಲೆಸಿರುವ ಮತದಾರರೇ ಈಗ ಜಯ-ಅಪಜಯದ ತೀರ್ಪು ನೀಡುವ ನಿರ್ಣಾಯಕರಾಗಿದ್ದಾರೆ. ಒಂದು ಓಟು ಕೇರಳದ ಭವಿಷ್ಯವನ್ನೇ ಬದಲಿಸಬಲ್ಲದು ಎಂಬ ಮಾತುಗಳು ಕೇಳಿಬಂದಿವೆ. ಹೀಗಾಗಿ ಬೆಂಗಳೂರಿನಿಂದ ಮತದಾರರನ್ನು ಕರೆಸಿಕೊಳ್ಳಲಾಗುತ್ತಿದೆ.
ಸಾಮಾಜಿಕ ಜಾಲತಾಣ ಮೂಲಕ ಸಮನ್ವಯ
ಬೆಂಗಳೂರಿನಲ್ಲಿರುವ ವಿವಿಧ ಕೇರಳ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಬೆಂಬಲಿಗರು ವಾಟ್ಸಾಪ್ ಗ್ರೂಪ್‌ಗಳ ಮೂಲಕ ಮತದಾರರನ್ನು ಒಗ್ಗೂಡಿಸುತ್ತಿವೆ. ಯಾವ ಬಸ್ ಎಲ್ಲಿಂದ ಹೊರಡುತ್ತದೆ, ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯನ್ನು ನಿರಂತರವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಕೇವಲ ಚುನಾವಣೆಯಲ್ಲ, ಒಂದು ದೊಡ್ಡ ರಾಜಕೀಯ ಸಾರಿಗೆ ಹಬ್ಬದಂತೆ ಭಾಸವಾಗುತ್ತಿದೆ. ಬಸ್ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಸಮನ್ವಯ ಕಾಯ್ದುಕೊಂಡು ಕೇರಳಿಗರನ್ನು ಕರೆದುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಗುರುವಾರ ಮತದಾನ ನಡೆಯಲಿದ್ದು, ಮಂಗಳವಾರ ಮತ್ತು ಬುಧವಾರ ಕೇರಳಿಗರು ತಮ್ಮ ಊರಿನತ್ತ ಪ್ರಯಾಣ ಬೆಳೆಸಲಿದ್ದಾರೆ.
ಪಕ್ಷದಿಂದ ಮಾಡಿದ ವ್ಯವಸ್ಥೆಯಲ್ಲ
ಈ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಅಖಿಲ ಭಾರತೀಯ ವೃತ್ತಿಪರ ಕಾಂಗ್ರೆಸ್ ಕ್ರೀಡಾ ವಿಭಾಗದ ಮುಖ್ಯಸ್ಥ ಸಂಜಯ್ ಅಲೆಕ್ಸ್, ಬೆಂಗಳೂರಿನ ವಿವಿಧ ಭಾಗದಲ್ಲಿ ಹಲವು ಕೇರಳಿಗರು ನೆಲೆಸಿದ್ದಾರೆ. ಉದ್ಯೋಗಕ್ಕಾಗಿ ವಲಸೆ ಹೋಗಿರುವವರ ಪೈಕಿ ಕೆಲವರು ಬೆಂಗಳೂರಿನಲ್ಲಿಯೇ ಮತದಾರರ ಚೀಟಿಯನ್ನು ಮಾಡಿಸಿಕೊಂಡಿದ್ದಾರೆ. ಆದರೆ ಇನ್ನು ಕೆಲವರ ಮತದಾನದ ಹಕ್ಕು ತಮ್ಮ ಊರಿನಲ್ಲಿಯೇ ಇದೆ. ಸಹಜವಾಗಿ ಅವರು ಮತದಾನ ಮಾಡಲು ಊರಿಗೆ ತೆರಳುತ್ತಾರೆ. ಅಂತಹವರಿಗೆ ಅನುಕೂಲವಾಗಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದು ಪಕ್ಷದಿಂದ ಮಾಡಿರುವ ವ್ಯವಸ್ಥೆಯಲ್ಲ. ಬದಲಿಗೆ ಪಕ್ಷದ ಬೆಂಬಲಿಗರು ಮಾಡಿರುವ ವ್ಯವಸ್ಥೆಯಾಗಿದೆ. ಮತದಾನ ಮಾಡಲು ಸಮಸ್ಯೆಯಾಗದಂತೆ ಅನುಕೂಲ ಮಾಡಿಕೊಡಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಕೇರಳಿಗರು ಮತದಾನಕ್ಕೆ ತೆರಳಲಿದ್ದಾರೆ. ಕೆಲವರು ಕಾರ್‌ಗಳಲ್ಲಿಯೂ ಪ್ರಯಾಣಿಸಲಿದ್ದಾರೆ ಎಂದು ಹೇಳಿದರು.
ಬಸ್‌ನಲ್ಲಿ ತೆರಳುವವರಿಗಾಗಿ 30ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆಯಾಗಿರುವ ಬಗ್ಗೆ ಮಾಹಿತಿ ಇದೆ. ಗೂಗಲ್ ಫಾರಂ ಮೂಲಕ ಬೆಂಗಳೂರಿನಲ್ಲಿ ನೆಲೆಸಿರುವ ಕೇರಳಿಗರನ್ನು ಗುರುತಿಸಲಾಗಿದೆ. ಅಂತಹವರು ತೆರಳಲು ಅವಕಾಶ ಮಾಡಿಕೊಡಲಾಗಿದೆ. ಕರ್ನಾಟಕದಿಂದಲೇ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಕೇರಳದ ಗಡಿಯಲ್ಲಿ ತೆರಿಗೆ ಪಾವತಿಸಿ ಬಸ್‌ಗಳು ಒಳಗೆ ಪ್ರವೇಶಿಸಲಿವೆ. ಅಲ್ಲದೇ, ಸರ್ಕಾರಗಳು ಕೇರಳಿಗರಿಗೆ ಮತದಾನ ಮಾಡಲು ಊರಿನತ್ತ ತೆರಳಲು ಅವಕಾಶ ಮಾಡಿಕೊಟ್ಟಿರುವುದರಿಂದ ಹೆಚ್ಚಿನ ಸಮಸ್ಯೆಯಾಗುವುದಿಲ್ಲ ಎಂಬುದಾಗಿ ಭಾವಿಸಲಾಗಿದೆ ಎಂದರು.

