
ಪ್ರಧಾನಿ ಮೋದಿ ದಕ್ಷಿಣ ದಂಡಯಾತ್ರೆ ಶುರು: 2026ರ ಚುನಾವಣೆಗೆ ಈಗಲೇ ಮೊಳಗಿದ ರಣಕಹಳೆ!
2026ರ ವಿಧಾನಸಭಾ ಚುನಾವಣೆಗೆ ಪ್ರಧಾನಿ ಮೋದಿ ಕೇರಳ ಮತ್ತು ತಮಿಳುನಾಡಿನಲ್ಲಿ ರಣಕಹಳೆ ಮೊಳಗಿಸಿದ್ದಾರೆ. ಈ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಯ ತಂತ್ರಗಾರಿಕೆ ಮತ್ತು ಸವಾಲುಗಳ ಬಗ್ಗೆ ಇಲ್ಲಿದೆ ಪೂರ್ಣ ವಿಶ್ಲೇಷಣೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರ ಕೇರಳ ಮತ್ತು ತಮಿಳುನಾಡಿನಲ್ಲಿ ನಡೆಸಿರುವ ಸರಣಿ ರ್‍ಯಾಲಿಗಳು 2026ರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪೂರ್ವಸಿದ್ಧತೆಯ ಸ್ಪಷ್ಟ ಸಂಕೇತವಾಗಿವೆ. ಈವರೆಗೆ ಈ ಎರಡು ರಾಜ್ಯಗಳಲ್ಲಿ ಮತ ಹಂಚಿಕೆ ಹೆಚ್ಚಿದ್ದರೂ ಅದನ್ನು ಅಧಿಕಾರವಾಗಿ ಪರಿವರ್ತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಬಿಜೆಪಿ ಈಗಿನಿಂದಲೇ "ಪೂರ್ಣ ಪ್ರಮಾಣದ ರಾಜಕೀಯ ಸಮರ"ಕ್ಕೆ ಸಜ್ಜಾಗಿದೆ. ಈ ಬಗ್ಗೆ ʻದ ಫೆಡರಲ್ʼನ ಪ್ರಧಾನ ಸಂಪಾದಕ ಎಸ್.ಶ್ರೀನಿವಾಸನ್ ಸವಿಸ್ತಾರವಾದ ರಾಜಕೀಯ ವಿಶ್ಲೇಷಣೆಯನ್ನು ಮಾಡಿದ್ದು, ಚುನಾವಣೆಗಿಂತ ಸಾಕಷ್ಟು ಮುಂಚಿತವಾಗಿಯೇ ಬಿಜೆಪಿ ದಕ್ಷಿಣದ ರಾಜ್ಯಗಳಲ್ಲಿ ಪೂರ್ಣ ಪ್ರಮಾಣದ ರಾಜಕೀಯ ಸಮರಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ.
ತಿರುವನಂತಪುರಂ ಮತ್ತು ಚೆನ್ನೈ ಸಮೀಪದ ಮಧುರಾಂತಕಂನಲ್ಲಿ ಮಾತನಾಡಿದ ಮೋದಿ, ಉಭಯ ರಾಜ್ಯಗಳ ಆಡಳಿತಾರೂಢ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಮೂಲಕ ಎನ್‌ಡಿಎ (NDA) ಒಕ್ಕೂಟ ಜನರಿಗಿರುವ ಬಲವಾದ ಆಯ್ಕೆ ಎಂಬಂತೆ ಬಿಂಬಿಸಿದರು.
ಕೇರಳ: ಹೆಚ್ಚುತ್ತಿರುವ ಮತ ಹಂಚಿಕೆ, ಸವಾಲಿನ ಹಾದಿ
ಕೇರಳದಲ್ಲಿ ಬಿಜೆಪಿಯ ಬೆಳವಣಿಗೆಯ ಬಗ್ಗೆ ಎಸ್. ಶ್ರೀನಿವಾಸನ್ ಮಹತ್ವದ ಅಂಶಗಳನ್ನು ಹಂಚಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆ ಶೇ. 20ರ ಸಮೀಪಕ್ಕೆ ತಲುಪಿದೆ. ಮತ ಹಂಚಿಕೆ ಹೆಚ್ಚಿದ್ದರೂ, ಚುನಾವಣಾ ಗೆಲುವು ಇನ್ನೂ ಸೀಮಿತವಾಗಿದೆ. ಕೇವಲ ಒಂದು ಲೋಕಸಭಾ ಸ್ಥಾನ ಗೆದ್ದಿರುವುದು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಇದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
ಗುಜರಾತ್ ಮಾದರಿ ವರ್ಸಸ್ ಕೇರಳ 1980ರ ದಶಕದಲ್ಲಿ ಅಹಮದಾಬಾದ್‌ನಲ್ಲಿ ಬಿಜೆಪಿ ಬೆಳೆದಂತೆ ಕೇರಳದಲ್ಲೂ ಬೆಳೆಯಲಿದೆ ಎಂಬ ಮೋದಿಯವರ ಹೇಳಿಕೆಯನ್ನು ಎಸ್. ಶ್ರೀನಿವಾಸನ್ ಪ್ರಶ್ನಿಸಿದ್ದಾರೆ. ಗುಜರಾತ್ ಮತ್ತು ಕೇರಳದ ಸಾಮಾಜಿಕ ರಚನೆ ಮತ್ತು ರಾಜಕೀಯ ಇತಿಹಾಸ ಸಂಪೂರ್ಣ ಭಿನ್ನವಾಗಿದ್ದು, ಇವೆರಡನ್ನೂ ಹೋಲಿಸುವುದು ಕಷ್ಟ ಎನ್ನುವುದು ಅವರ ಅಭಿಪ್ರಾಯ.
ತಮಿಳುನಾಡು: ಎನ್‌ಡಿಎ ಮೈತ್ರಿಕೂಟದ ಹೊಸ ಸಂಚಲನ
ತಮಿಳುನಾಡಿನ ರಾಜಕೀಯ ಚಿತ್ರಣ ಈಗ ಕುತೂಹಲಕಾರಿಯಾಗಿದೆ. ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ AIADMK, ಟಿಟಿವಿ ದಿನಕರನ್ ಅವರ AMMK ಮತ್ತು ಅನ್ಬುಮಣಿ ರಾಮದಾಸ್ ಅವರ PMK ಒಂದೇ ವೇದಿಕೆಗೆ ಬಂದಿರುವುದು ದೊಡ್ಡ ಬದಲಾವಣೆ. ಕಾಗದದ ಮೇಲೆ ಈ ಮೈತ್ರಿಕೂಟ ಅತ್ಯಂತ ಪ್ರಬಲವಾಗಿ ಕಾಣಿಸುತ್ತಿದೆ. ದಶಕಗಳ ಕಾಲ ಕಿತ್ತಾಡುತ್ತಿದ್ದ ಪಕ್ಷಗಳ ನಡುವೆ ಮತ ವರ್ಗಾವಣೆ (Vote Transfer) ಎಷ್ಟು ಸುಲಭವಾಗಿ ನಡೆಯಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ತಮಿಳುನಾಡಿನಲ್ಲಿ ಬಿಜೆಪಿ ಪ್ರಮುಖ ಪಕ್ಷವಲ್ಲದಿದ್ದರೂ, ಈ ದೊಡ್ಡ ಮೈತ್ರಿಕೂಟವನ್ನು ಒಂದೆಡೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ರೀನಿವಾಸನ್ ಅಭಿಪ್ರಾಯಪಟ್ಟಿದ್ದಾರೆ.
ಒಕ್ಕೂಟ ವ್ಯವಸ್ಥೆ ಮತ್ತು ಸವಾಲುಗಳು
ಕೇಂದ್ರ ಮತ್ತು ರಾಜ್ಯಗಳ ನಡುವಿನ ಆರ್ಥಿಕ ಹಂಚಿಕೆ, ರಾಜ್ಯಪಾಲರ ಪಾತ್ರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ವಿಚಾರದಲ್ಲಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಕೇಂದ್ರದ ವಿರುದ್ಧ ಪ್ರಬಲವಾದ ನಿಲುವು ಹೊಂದಿವೆ. ಈ ಒಕ್ಕೂಟ ವ್ಯವಸ್ಥೆಯ ಸಂಘರ್ಷವು ಚುನಾವಣೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.
2026ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ಪ್ರಧಾನಿ ಮೋದಿಯವರ ಈ ಭೇಟಿಗಳು ದಕ್ಷಿಣ ಭಾರತದಲ್ಲಿ ಸುದೀರ್ಘ ರಾಜಕೀಯ ಹೋರಾಟಕ್ಕೆ ಬಿಜೆಪಿ ಸಜ್ಜಾಗಿರುವುದನ್ನು ತೋರಿಸುತ್ತಿವೆ.

