
ಸಾಂದರ್ಭಿಕ ಚಿತ್ರ
ಕೆಸಿಇಟಿ 2026: ಅರ್ಜಿ ಸಲ್ಲಿಕೆ ದಿನಾಂಕ ಫೆಬ್ರವರಿ 27ಕ್ಕೆ ವಿಸ್ತರಣೆ- ಇದುವೇ ಅಂತಿಮ ಅವಕಾಶ
ಇದು ಸಿಇಟಿ-2026 (KCET 2026) ಪರೀಕ್ಷೆಗೆ ಅರ್ಜಿ ಸಲ್ಲಿಸಲು ನೀಡಲಾಗುತ್ತಿರುವ ಅಂತಿಮ ಅವಕಾಶವಾಗಿದೆ. ಫೆಬ್ರವರಿ 27ರ ನಂತರ ಯಾವುದೇ ಕಾರಣಕ್ಕೂ ಮತ್ತೆ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ.
ಎಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ಸೇರಿದಂತೆ ರಾಜ್ಯದ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಯುಜಿಸಿಇಟಿ-2026 (ಸಾಮಾನ್ಯ ಪ್ರವೇಶ ಪರೀಕ್ಷೆ) ಅರ್ಜಿ ಸಲ್ಲಿಕೆ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 27ರವರೆಗೆ ಕಡೆಯ ಅವಕಾಶ ನೀಡಲಾಗಿದೆ ಎಂದು ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ 3ರವರೆಗೆ ಶುಲ್ಕ ಪಾವತಿಗೆ ಅವಕಾಶ
ಈ ಹಿಂದೆ ಫೆಬ್ರವರಿ 22 ಅನ್ನು ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿತ್ತು. ಆದರೆ, ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ದಿನಾಂಕ ವಿಸ್ತರಿಸುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಫೆಬ್ರವರಿ 27ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ನೋಂದಣಿ ಶುಲ್ಕ ಪಾವತಿಸಲು ಮಾರ್ಚ್ 3ರವರೆಗೆ ಕಾಲಾವಕಾಶ ನೀಡಲಾಗಿದೆ.
ಪುನಃ ವಿಸ್ತರಣೆ ಇಲ್ಲ- ಪ್ರಾಧಿಕಾರದ ಎಚ್ಚರಿಕೆ
ಇದು ಸಿಇಟಿ-2026 (KCET 2026) ಪರೀಕ್ಷೆಗೆ ಅರ್ಜಿ ಸಲ್ಲಿಸಲು ನೀಡಲಾಗುತ್ತಿರುವ ಅಂತಿಮ ಅವಕಾಶವಾಗಿದೆ. ಫೆಬ್ರವರಿ 27ರ ನಂತರ ಯಾವುದೇ ಕಾರಣಕ್ಕೂ ಮತ್ತೆ ದಿನಾಂಕವನ್ನು ವಿಸ್ತರಿಸುವುದಿಲ್ಲ. ಹೀಗಾಗಿ, ಇದುವರೆಗೆ ಅರ್ಜಿ ಸಲ್ಲಿಸದ ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್‌ನಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪ್ರಾಧಿಕಾರ ಎಚ್ಚರಿಸಿದೆ.
3.18 ಲಕ್ಷ ಅರ್ಜಿ, ದಾಖಲೆಗಳ ಆನ್‌ಲೈನ್ ಪರಿಶೀಲನೆ ಚುರುಕು
ಇದುವರೆಗಿನ ಅಂಕಿ ಅಂಶಗಳ ಪ್ರಕಾರ, 3.18 ಲಕ್ಷ ಅಭ್ಯರ್ಥಿಗಳು ಯಶಸ್ವಿಯಾಗಿ ಶುಲ್ಕ ಪಾವತಿಸಿ ಸಿಇಟಿಗೆ ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ, ಪ್ರಾಧಿಕಾರವು ಆನ್‌ಲೈನ್ ಮೂಲಕವೇ ದಾಖಲೆಗಳ ಪರಿಶೀಲನೆಯನ್ನು ಚು ರುಕುಗೊಳಿಸಿದೆ. ಅರ್ಜಿ ಸಲ್ಲಿಸಿರುವವರ ಪೈಕಿ 2.18 ಲಕ್ಷ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು 'ಸ್ಯಾಟ್ಸ್' (SATS) ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲೇ ಯಶಸ್ವಿಯಾಗಿ ಪರಿಶೀಲಿಸಲಾಗಿದೆ. ಉಳಿದಂತೆ, 1.08 ಲಕ್ಷ ಅಭ್ಯರ್ಥಿಗಳ ದಾಖಲೆಗಳನ್ನು ಆಯಾ ಕಾಲೇಜು ಹಂತದಲ್ಲಿಯೇ ಪರಿಶೀಲನೆಗೆ ಒಳಪಡಿಸಲಾಗಿದೆ.

