PG NEET | 3rd round seat allocation option entry period extended till Feb. 18, KEA orders
x

ಕೆಇಎ ಪ್ರಕಟಣೆ

PG NEET| 3ನೇ ಸುತ್ತಿನ ಸೀಟು ಹಂಚಿಕೆ ಆಪ್ಷನ್ ಎಂಟ್ರಿ ಅವಧಿ ಫೆ. 18ರವರೆಗೆ ವಿಸ್ತರಣೆ

ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಇತರ ಪಾಲಿಕೆಗಳ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿನ ಡಿಎನ್‌ಬಿ ಸೀಟುಗಳ ಪ್ರವೇಶಕ್ಕೆ ತಮ್ಮ ಆಯ್ಕೆಗಳನ್ನು ದಾಖಲಿಸಬಹುದು ಎಂದು ಕೆಇಎ ತಿಳಿಸಿದೆ.


Click the Play button to hear this message in audio format

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ (PG NEET) ಪ್ರವೇಶಾತಿಯ ಮೂರನೇ ಸುತ್ತಿನ ಸೀಟು ಹಂಚಿಕೆಗೆ ಸಂಬಂಧಿಸಿದಂತೆ, ಇಚ್ಛೆ ಅಥವಾ ಆಯ್ಕೆಗಳನ್ನು (Options) ದಾಖಲಿಸಲು ನೀಡಲಾಗಿದ್ದ ಅವಧಿಯನ್ನು ಫೆ. 18ರ ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿಳಿಸಿದೆ.

ಈ ಕುರಿತು ಮಂಗಳವಾರ (ಫೆ.17) ಪ್ರಕಟಣೆ ಹೊರಡಿಸಿರುವ ಕೆಇಎ, ಬೆಂಗಳೂರಿನ ಮಹಾನಗರ ಪಾಲಿಕೆಗಳು ಸೇರಿದಂತೆ ಸರ್ಕಾರದ ಇತರ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಾ ನಿರತ (In-service) ಅಭ್ಯರ್ಥಿಗಳಿಗೆ ಡಿಎನ್‌ಬಿ ಸೀಟುಗಳು ಲಭ್ಯವಿದ್ದು, ಅವುಗಳನ್ನು ಸೀಟು ಹಂಚಿಕೆಗೆ ಪರಿಗಣಿಸುವಂತೆ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದೆ.

ಯಾರಿಗೆ ಅನ್ವಯ?

ಕಾರ್ಮಿಕ ವಿಮಾ ನಿಗಮದ ಆಸ್ಪತ್ರೆಗಳು, ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಇತರ ಪಾಲಿಕೆಗಳ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿನ ಡಿಎನ್‌ಬಿ ಸೀಟುಗಳ ಪ್ರವೇಶಕ್ಕೆ ತಮ್ಮ ಆಯ್ಕೆಗಳನ್ನು ದಾಖಲಿಸಬಹುದು. ಸೇವಾ ನಿರತ ಅಭ್ಯರ್ಥಿಗಳಲ್ಲದೆ, ಇತರ ಸಾಮಾನ್ಯ ಅಭ್ಯರ್ಥಿಗಳಿಗೂ ಫೆ. 18ರ ಮಧ್ಯಾಹ್ನ 12 ಗಂಟೆಯವರೆಗೆ ಆಪ್ಷನ್ ಎಂಟ್ರಿ ಮಾಡಲು ಅವಕಾಶ ನೀಡಲಾಗಿದೆ.

ಲಭ್ಯವಿರುವ ಕೋರ್ಸ್‌ಗಳ ವಿವರವಾದ ಪಟ್ಟಿಯನ್ನು ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಅದನ್ನು ಪರಿಶೀಲಿಸಿ ಆಯ್ಕೆಗಳನ್ನು ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಗಳಾದ ಇಸ್ಲಾವುದ್ದೀನ್ ಗದ್ಯಾಳ (ಕೆಎಎಸ್) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದು ಡಿಎನ್‌ಬಿ ಕೋರ್ಸ್‌ ?

ವೈದ್ಯಕೀಯ ಕ್ಷೇತ್ರದಲ್ಲಿ ಡಿಎನ್‌ಬಿ ಎಂದರೆ Diplomate of National Board ಎಂದರ್ಥ. ಇದು ಎಂಬಿಬಿಎಸ್ (MBBS) ಮುಗಿಸಿದ ನಂತರ ಮಾಡುವ ಒಂದು ಸ್ನಾತಕೋತ್ತರ ಅಥವಾ ಸ್ನಾತಕೋತ್ತರ ನಂತರದ (Post-Doctoral) ವೈದ್ಯಕೀಯ ಪದವಿಯಾಗಿದೆ. ಇದನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ (NBE) ಎಂಬ ಸ್ವಾಯತ್ತ ಸಂಸ್ಥೆಯು ನೀಡುತ್ತದೆ.

Read More
Next Story