Karnataka Rain Alert| ಮಲೆನಾಡು, ಒಳನಾಡಿನಲ್ಲಿ ಮುಂದಿನ 3 ದಿನ ಗುಡುಗು ಸಹಿತ ಮಳೆ
x

ಕರ್ನಾಟಕ ಹವಾಮಾನ ವರದಿ

Karnataka Rain Alert| ಮಲೆನಾಡು, ಒಳನಾಡಿನಲ್ಲಿ ಮುಂದಿನ 3 ದಿನ ಗುಡುಗು ಸಹಿತ ಮಳೆ

ಕರ್ನಾಟಕ ಹವಾಮಾನ ವರದಿ: ಮಲೆನಾಡು ಮತ್ತು ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ, ಉತ್ತರ ಕರ್ನಾಟಕದಲ್ಲಿ 41°C ತಾಪಮಾನ. ಇಂದಿನ ತಾಜಾ ಹವಾಮಾನ ಅಪ್‌ಡೇಟ್‌ಗಳಿಗಾಗಿ ಈ ಲೇಖನ ಓದಿ.


Click the Play button to hear this message in audio format

ರಾಜ್ಯದಲ್ಲಿ ವಾಯುಗುಣ ವೈಪರೀತ್ಯದಿಂದಾಗಿ ಹವಾಮಾನದಲ್ಲಿ ಭಾರಿ ಬದಲಾವಣೆಗಳಾಗುತ್ತಿದ್ದು, ಬೇಸಿಗೆಯ ನಡುವೆಯೂ ಹಲವೆಡೆ ಮಳೆಯ ಮುನ್ಸೂಚನೆ ನೀಡಲಾಗಿದೆ. ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಸುಳಿಗಾಳಿ ಮತ್ತು ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ರಾಜ್ಯದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಮಧ್ಯಪ್ರದೇಶದಿಂದ ದಕ್ಷಿಣ ತಮಿಳುನಾಡಿನವರೆಗೆ ವಿದರ್ಭದ ಮೂಲಕ ಹಾದುಹೋಗಿರುವ ವಾಯುಭಾರ ಕುಸಿತವು ಸಮುದ್ರ ಮಟ್ಟದಿಂದ ಸುಮಾರು 0.9 ಕಿಲೋಮೀಟರ್ ಎತ್ತರದಲ್ಲಿ ಸಕ್ರಿಯವಾಗಿದೆ. ಇದರ ಪ್ರಭಾವದಿಂದಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಇದರೊಂದಿಗೆ ಕೇರಳ ಮತ್ತು ಕರ್ನಾಟಕದ ಕರಾವಳಿ ತೀರದಲ್ಲಿ 1.5 ಕಿಲೋಮೀಟರ್ ಎತ್ತರದಲ್ಲಿ ಮತ್ತೊಂದು ವಾಯುಭಾರ ಕುಸಿತ ಕಂಡುಬಂದಿದ್ದು, ಮರಾಠವಾಡ ಭಾಗದ ಸುಳಿಗಾಳಿ ದುರ್ಬಲಗೊಂಡಿದ್ದರೂ ರಾಜ್ಯದ ಹಲವೆಡೆ ಮಳೆ, ತೇವಾಂಶ ಮತ್ತು ಮಂಜಿನ ವಾತಾವರಣ ಮುಂದುವರಿಯಲಿದೆ ಎಂದು ವರದಿ ಹೇಳಿದೆ.

ಎಲ್ಲೆಲ್ಲಿ ಮಳೆ?

ಮುಖ್ಯವಾಗಿ ಕೊಡಗು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಿಂಚು ಹಾಗೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದ ಮಳೆಯ ನಿರೀಕ್ಷೆಯಿದ್ದರೆ, ಉತ್ತರ ಕನ್ನಡ ಮತ್ತು ಉಡುಪಿ ಭಾಗದಲ್ಲಿ ಮಂಜಿನ ವಾತಾವರಣ ಇರಲಿದೆ. ಉತ್ತರ ಕರ್ನಾಟಕದ ಬಾಗಲಕೋಟೆ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.

ಮಳೆಯ ಮುನ್ಸೂಚನೆಯ ನಡುವೆಯೂ ರಾಜ್ಯದ ಹಲವೆಡೆ ತಾಪಮಾನ ಏರಿಕೆಯಾಗುತ್ತಲೇ ಇದ್ದು, ಬಿಸಿಲ ಬೇಗೆ ಜನರನ್ನು ಹೈರಾಣಾಗಿಸಿದೆ. ಕಲಬುರಗಿಯಲ್ಲಿ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ವಿಜಯಪುರದಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದೆ. ರಾಯಚೂರು ಮತ್ತು ಕೊಪ್ಪಳ ಭಾಗದಲ್ಲಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ಸಂಜೆಯ ವೇಳೆಗೆ ಮಂಜು ಮುಸುಕಿದ ವಾತಾವರಣವಿರಲಿದೆ. ನಗರದಲ್ಲಿ ಕನಿಷ್ಠ 24 ಡಿಗ್ರಿ ಹಾಗೂ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Read More
Next Story