
ಸಾಂದರ್ಭಿಕ ಚಿತ್ರ
Karnataka Weather Updates: ಕರ್ನಾಟಕದಲ್ಲಿ ಮುಂದಿನ 7 ದಿನ ಬಿಸಿ ಗಾಳಿ ಬೀಸುವ ಅಪಾಯ
'ದ ಫೆಡರಲ್ ಕರ್ನಾಟಕ' ಜೊತೆಗಿನ ವಿಶೇಷ ಸಂದರ್ಶನದಲ್ಲಿ ಹಿರಿಯ ವಿಜ್ಞಾನಿ ಹಾಗೂ ಕರ್ನಾಟಕದ ವಿಭಾಗದ ನಿರ್ದೇಶಕ ಸಿ.ಎಸ್. ಪಾಟೀಲ್ ರಾಜ್ಯದ ಹವಾಮಾನ ಪರಿಸ್ಥಿತಿ, ಬಿಸಿಗಾಳಿ ಬಗ್ಗೆ ವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಝಳ ಮತ್ತಷ್ಟು ತೀವ್ರಗೊಳ್ಳಲಿದೆ. ಕಲಬುರಗಿಯಲ್ಲಿ ತಾಪಮಾನವು ಬರೋಬ್ಬರಿ 45 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ (IMD) ಹಿರಿಯ ವಿಜ್ಞಾನಿ ಹಾಗೂ ಕರ್ನಾಟಕದ ವಿಭಾಗದ ನಿರ್ದೇಶಕ ಸಿ.ಎಸ್. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
'ದ ಫೆಡರಲ್ ಕರ್ನಾಟಕ' ಜೊತೆಗಿನ ವಿಶೇಷ ಸಂದರ್ಶನದಲ್ಲಿ ಅವರು ರಾಜ್ಯದ ಹವಾಮಾನ ಪರಿಸ್ಥಿತಿ, ಬಿಸಿಗಾಳಿ (Heat wave) ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಕಾದಿದೆ 'ಅಗ್ನಿ ಪರೀಕ್ಷೆ'
ಮುಂದಿನ ಒಂದು ವಾರದ ಅವಧಿಯಲ್ಲಿ ರಾಜ್ಯಾದ್ಯಂತ ಉಷ್ಣಾಂಶ ಏರಿಕೆಯಾಗುವ ಸ್ಪಷ್ಟ ಮುನ್ಸೂಚನೆ ಇದೆ ಎಂದು ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ. ಈ ಜಿಲ್ಲೆಗಳಲ್ಲಿ ಹಗಲಿನ ಗರಿಷ್ಠ ತಾಪಮಾನ 39 ರಿಂದ 42 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಲಿದ್ದು, ಕಲಬುರಗಿಯಲ್ಲಿ ಇದು 44-45 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದರೂ ಅಚ್ಚರಿಯಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಮಧ್ಯ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ 36 ರಿಂದ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆಯಿದೆ.
ಬೆಂಗಳೂರು ಮತ್ತು ಕರಾವಳಿಯ ಪರಿಸ್ಥಿತಿ ಹೇಗಿದೆ?
ಬೆಂಗಳೂರಿನಲ್ಲಿ ಪ್ರಸ್ತುತ ಹಗಲಿನ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇದ್ದು, ಮುಂದಿನ ದಿನಗಳಲ್ಲಿ ಇದು 36-37 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಬಹುದು. ರಾತ್ರಿ ವೇಳೆಯ ಕನಿಷ್ಠ ತಾಪಮಾನ 23-24 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ರಾಜಧಾನಿಯಲ್ಲಿ ಸೆಕೆ ಹೆಚ್ಚಾಗಿ ಕಾಡುತ್ತಿದೆ. ಆದರೆ, ಸದ್ಯಕ್ಕೆ ಬೆಂಗಳೂರಿನಲ್ಲಿ 'ಹೀಟ್ ವೇವ್' (ಬಿಸಿಗಾಳಿ) ಪರಿಸ್ಥಿತಿ ಇಲ್ಲ ಎಂದು ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಹಗಲಿನ ಗರಿಷ್ಠ ತಾಪಮಾನ 35-37 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕರಾವಳಿಯಲ್ಲಿ ತಾಪಮಾನದ ಜೊತೆಗೆ ವಾತಾವರಣದಲ್ಲಿ ತೇವಾಂಶವೂ ಹೆಚ್ಚಿರುವುದರಿಂದ ಜನರಿಗೆ ಹೆಚ್ಚು ಸೆಕೆ ಮತ್ತು ಅಸ್ವಸ್ಥತೆ ಕಾಡಲಿದೆ ಎಂದು ಅವರು ವಿವರಿಸಿದ್ದಾರೆ.
'ಹೀಟ್ ವೇವ್' ಎಂದರೇನು? ವಿಜ್ಞಾನಿಗಳು ಏನಂತಾರೆ?
ಸಾಮಾನ್ಯ ಬಿಸಿಲಿಗೂ ಹಾಗೂ 'ಹೀಟ್ ವೇವ್'ಗೂ ಇರುವ ವ್ಯತ್ಯಾಸವನ್ನು ಪಾಟೀಲ್ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. "ಯಾವುದೇ ಎರಡು ಅಥವಾ ಮೂರು ಸ್ಥಳಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದಾಗ ಮತ್ತು ಕಳೆದ 30 ವರ್ಷಗಳ ಸರಾಸರಿ ತಾಪಮಾನಕ್ಕಿಂತ 4-5 ಡಿಗ್ರಿ ಸೆಲ್ಸಿಯಸ್ ಹೆಚ್ಚಳ ಕಂಡುಬಂದಾಗ ಅದನ್ನು 'ಹೀಟ್ ವೇವ್' ಅಥವಾ ಬಿಸಿಗಾಳಿ ಪರಿಸ್ಥಿತಿ ಎಂದು ಕರೆಯುತ್ತೇವೆ. ಕರಾವಳಿ ಭಾಗದಲ್ಲಿ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಟಿದರೆ ಅದನ್ನು ಹೀಟ್ ವೇವ್ ಎಂದು ಪರಿಗಣಿಸಲಾಗುತ್ತದೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾಪಮಾನ ಏರಿಕೆಗೆ ಕಾರಣಗಳೇನು?
ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ತಾಪಮಾನಕ್ಕೆ ಪ್ರಮುಖವಾಗಿ ಮೂರು ಕಾರಣಗಳನ್ನು ಸಿ.ಎಸ್. ಪಾಟೀಲ್ ಉಲ್ಲೇಖಿಸಿದ್ದಾರೆ:ಜಾಗತಿಕ ತಾಪಮಾನ ಏರಿಕೆ ಮೊದಲ ಕಾರಣವಾಗಿದ್ದು, ಕಾರ್ಬನ್ ಡೈಆಕ್ಸೈಡ್, ಮೀಥೇನ್‌ನಂತಹ ಹಸಿರುಮನೆ ಅನಿಲಗಳು ವಾತಾವರಣದಲ್ಲಿ ಹೆಚ್ಚಾಗುತ್ತಿದ್ದು, ಇವು ಭೂಮಿಯಿಂದ ಹೊರಸೂಸುವ ಶಾಖವನ್ನು ಹೀರಿಕೊಂಡು ಬ್ಲಾಂಕೆಟ್‌ನಂತೆ ಕೆಲಸ ಮಾಡುತ್ತಿವೆ. ಇದರಿಂದ ಭೂಮಿ ಹೆಚ್ಚು ಬೆಚ್ಚಗಾಗುತ್ತಿದೆ ಎಂದು ಹೇಳಿದ್ದಾರೆ.
ಮಧ್ಯ ಭಾರತದಲ್ಲಿ ರೂಪುಗೊಂಡಿರುವ ಪ್ರಬಲ 'ಆಂಟಿ-ಸೈಕ್ಲೋನಿಕ್' ವಾತಾವರಣವು ಮೋಡಗಳ ರಚನೆಗೆ ಅಡ್ಡಿಯುಂಟುಮಾಡುತ್ತಿದ್ದು, ನೇರ ಬಿಸಿಲು ಭೂಮಿಗೆ ಬೀಳಲು ಕಾರಣವಾಗಿದೆ ಎಂದು ಹೇಳಿದ್ದಾರೆ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿಯಂತಹ ನಗರ ಪ್ರದೇಶಗಳಲ್ಲಿ ಹಸಿರು ಕಣ್ಮರೆಯಾಗಿ ಕಾಂಕ್ರೀಟ್ ಕಟ್ಟಡಗಳು, ಡಾಂಬರು ರಸ್ತೆಗಳು ಹೆಚ್ಚಾಗಿವೆ. ಇವು ಶಾಖವನ್ನು ಅತಿ ಹೆಚ್ಚು ಹೀರಿಕೊಳ್ಳುವುದರಿಂದ ನಗರಗಳಲ್ಲಿ ತಾಪಮಾನ ವಿಪರೀತವಾಗಿ ಏರಿಕೆಯಾಗುತ್ತಿದೆ.
ಮುಂಗಾರು ಮಳೆ ಯಾವಾಗ?
ಕರ್ನಾಟಕದಲ್ಲಿ ಸಾಮಾನ್ಯವಾಗಿ ಜೂನ್ 5ರ ಸುಮಾರಿಗೆ ಮುಂಗಾರು ಪ್ರವೇಶಿಸುತ್ತದೆ. ಈ ವರ್ಷವೂ ಅದೇ ಸಮಯದಲ್ಲಿ ಮುಂಗಾರು ಆರಂಭವಾಗುವ ನಿರೀಕ್ಷೆಯಿದೆ. ಆದರೆ, ಈ ಬಾರಿ 'ಎಲ್ ನಿನೋ' ಪ್ರಭಾವ ಇರುವ ಸಾಧ್ಯತೆ ಇರುವುದರಿಂದ, ವಾಡಿಕೆಗಿಂತ ಸ್ವಲ್ಪ ಕಡಿಮೆ ಅಥವಾ ಸಾಧಾರಣ ಮಳೆಯಾಗಬಹುದು ಎಂದು ಕೆಲವು ಹವಾಮಾನ ಮಾದರಿಗಳು ಸೂಚಿಸುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷದ ಮಳೆ ಮತ್ತು ಅಂತರ್ಜಲ ಮಟ್ಟವೂ ಪ್ರಸ್ತುತ ತಾಪಮಾನದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಿ ಮಣ್ಣಿನಲ್ಲಿ ತೇವಾಂಶ ಮತ್ತು ಗಿಡಮರಗಳು ಹೆಚ್ಚಿರುತ್ತವೆಯೋ ಅಲ್ಲಿ ತಾಪಮಾನದ ಏರಿಕೆ ಕಡಿಮೆ ಇರುತ್ತದೆ ಎಂದು ವಿವರಿಸಿದ್ದಾರೆ.
ಮುನ್ನೆಚ್ಚರಿಕೆಗಳೇನು?
ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ಅದರಲ್ಲೂ ವಿಶೇಷವಾಗಿ ಬೇಸಿಗೆ ರಜೆಯಲ್ಲಿರುವ ಶಾಲಾ ಮಕ್ಕಳು ತೀವ್ರ ಎಚ್ಚರಿಕೆ ವಹಿಸುವಂತೆ ಸಿ.ಎಸ್. ಪಾಟೀಲ್ ಸಲಹೆ ನೀಡಿದ್ದಾರೆ: ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮನೆಯಿಂದ ಹೊರಬರುವುದನ್ನು, ಆಟವಾಡುವುದನ್ನು ಅಥವಾ ಶ್ರಮದಾಯಕ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ ಎಂದು ಹೇಳಿದ್ದಾರೆ. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಆಗಾಗ ನೀರು, ಮಜ್ಜಿಗೆ, ನಿಂಬೆ ಪಾನಕ, ಎಳನೀರನ್ನು ಹೆಚ್ಚು ಸೇವಿಸಿ. ಟೀ, ಕಾಫಿ ಮತ್ತು ಕೃತಕ ಸಾಫ್ಟ್ ಡ್ರಿಂಕ್ಸ್‌ಗಳನ್ನು ಆದಷ್ಟು ಕಡಿಮೆ ಮಾಡಿ ಎಂದು ಮಾಹಿತಿ ನೀಡಿದ್ದಾರೆ. ಅನಿವಾರ್ಯವಾಗಿ ಮಧ್ಯಾಹ್ನ ಹೊರಹೋಗಬೇಕಾದರೆ ಕಡ್ಡಾಯವಾಗಿ ಛತ್ರಿ ಬಳಸಿ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ ಎಂದು ಹೇಳಿದ್ದಾರೆ. ನಿರ್ಲಕ್ಷ್ಯ ವಹಿಸಿದರೆ 'ಹೀಟ್ ಸ್ಟ್ರೋಕ್' ಮತ್ತು ಚರ್ಮದ ಸಮಸ್ಯೆಗಳು ಎದುರಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
'ದ ಫೆಡರಲ್ ಕರ್ನಾಟಕ' ಜೊತೆಗಿನ ವಿಶೇಷ ಸಂದರ್ಶನದ ವಿಡಿಯೋ ಇಲ್ಲಿದೆ.

