ಮುಡಾ ಪ್ರಕರಣ: ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ವಿಚಾರಣೆಯನ್ನು ಇಡಿ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದ ಹೈಕೋರ್ಟ್
x

ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌

ಮುಡಾ ಪ್ರಕರಣ: ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ವಿಚಾರಣೆಯನ್ನು ಇಡಿ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದ ಹೈಕೋರ್ಟ್

ಈ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಬದಲಾಗಿ ಇಡಿ ವಿಶೇಷ ನ್ಯಾಯಾಲಯವೇ ವಿಚಾರಣೆ ನಡೆಸುವುದು ಸೂಕ್ತ ಎಂದು ಪೀಠವು ಸ್ಪಷ್ಟವಾಗಿ ಆದೇಶಿಸಿದೆ.


Click the Play button to hear this message in audio format

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್‌ ಕುಮಾರ್‌ ಅವರ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ಜಾರಿ ನಿರ್ದೇಶನಾಲಯದ (ಇಡಿ) ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿದೆ.

ತಮ್ಮ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಬದಲಾಗಿ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಸ್ಥಾಪಿತವಾಗಿರುವ ವಿಶೇಷ ನ್ಯಾಯಾಲಯವೇ ನಡೆಸಬೇಕು ಎಂದು ಆಕ್ಷೇಪಿಸಿ ದಿನೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಜನಪ್ರತಿನಿಧಿಗಳ ನ್ಯಾಯಾಲಯದ ವ್ಯಾಪ್ತಿ ಪ್ರಶ್ನಿಸಿದ್ದ ಅರ್ಜಿ

ದಿನೇಶ್‌ ಕುಮಾರ್‌ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್‌ ಚೌಟ ಅವರು, ಅರ್ಜಿದಾರರು ಯಾವುದೇ ಜನಪ್ರತಿನಿಧಿಯಲ್ಲ ಹಾಗೂ ಜಾರಿ ನಿರ್ದೇಶನಾಲಯವು ಯಾವುದೇ ಜನಪ್ರತಿನಿಧಿಯ ವಿರುದ್ಧ ಈ ಪ್ರಕರಣವನ್ನು ದಾಖಲಿಸಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಕೆಯಾಗಿದ್ದು, ಅದನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಗಾಗಲೇ ಒಪ್ಪಿಕೊಂಡಿದೆ ಎಂದು ಅವರು ವಿವರಿಸಿದರು. ಈ ಹಿನ್ನೆಲೆಯಲ್ಲಿ ದಿನೇಶ್ ಕುಮಾರ್ ಅವರ ಪ್ರಕರಣದ ವಿಚಾರಣೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವ್ಯಾಪ್ತಿ ಇಲ್ಲದಿರುವುದರಿಂದ, ಪ್ರಕರಣವನ್ನು ಇಡಿ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಅವರು ಮನವಿ ಮಾಡಿದರು.

ಇಡಿ ಪರ ವಕೀಲರ ಆಕ್ಷೇಪಣೆ ವಜಾ ಹಾಗೂ ಹೈಕೋರ್ಟ್ ಆದೇಶ

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ. ಅರವಿಂದ್‌ ಕಾಮತ್‌ ಅವರು, ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ 'ಬಿ' ರಿಪೋರ್ಟ್ ಅನ್ನು ಅಂಗೀಕರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ, ಖಾಸಗಿ ದೂರುದಾರರಾದ ಸ್ನೇಹಮಯಿ ಕೃಷ್ಣ ಅವರ ವಾದವನ್ನು ಆಲಿಸದೇ ನ್ಯಾಯಾಲಯ ಈ ನಿರ್ಧಾರ ಕೈಗೊಳ್ಳಬಾರದು ಎಂದು ವಾದಿಸಿದರು. ಆದರೆ, ಈ ವಾದವನ್ನು ಹೈಕೋರ್ಟ್ ಪೀಠವು ಒಪ್ಪಲಿಲ್ಲ. ಪ್ರಸ್ತುತ ಪ್ರಕರಣದಲ್ಲಿ ದಿನೇಶ್ ಕುಮಾರ್ ಜನಪ್ರತಿನಿಧಿಯಲ್ಲ ಹಾಗೂ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿರುವುದರಿಂದ, ಈ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಬದಲಾಗಿ ಇಡಿ ವಿಶೇಷ ನ್ಯಾಯಾಲಯವೇ ವಿಚಾರಣೆ ನಡೆಸುವುದು ಸೂಕ್ತ ಎಂದು ಪೀಠವು ಸ್ಪಷ್ಟವಾಗಿ ಆದೇಶಿಸಿದೆ.

Read More
Next Story