Land Mafia| ಶಾಲೆಗೆ 12 ವರ್ಷವಾಗಿದ್ದರೆ ಆ ಭೂಮಿ ಇನ್ಮುಂದೆ ಸರ್ಕಾರದ ಸ್ವತ್ತು: ಭೂಗಳ್ಳರಿಗೆ ಕಡಿವಾಣ
x

Land Mafia| ಶಾಲೆಗೆ 12 ವರ್ಷವಾಗಿದ್ದರೆ ಆ ಭೂಮಿ ಇನ್ಮುಂದೆ ಸರ್ಕಾರದ ಸ್ವತ್ತು: ಭೂಗಳ್ಳರಿಗೆ ಕಡಿವಾಣ

ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿ ರಕ್ಷಣೆ ವಿಧೇಯಕ ಜಾರಿಗೊಂಡ ನಂತರ, 12 ವರ್ಷಗಳಿಗೂ ಹೆಚ್ಚು ಕಾಲ ಸರ್ಕಾರಿ ಶಾಲೆಯ ಅಧೀನದಲ್ಲಿರುವ ಭೂಮಿಯ ಮೇಲೆ ಯಾವುದೇ ವ್ಯಕ್ತಿ ಸಿವಿಲ್ ನ್ಯಾಯಾಲಯಗಳಲ್ಲಿ ದಾವೆ ಹೂಡುವಂತಿಲ್ಲ.


Click the Play button to hear this message in audio format

ರಾಜ್ಯದ ಸಾವಿರಾರು ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳು ದಶಕಗಳಿಂದ ಅನುಭವಿಸುತ್ತಿದ್ದ 'ಭೂ ಮಾಲೀಕತ್ವ'ದ ಆತಂಕಕ್ಕೆ ಸರ್ಕಾರವು ಈಗ ಪರಿಹಾರ ಕಂಡುಕೊಂಡಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಂಡಿಸಿರುವ "ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ (ರಕ್ಷಣೆ ಮತ್ತು ಸಕ್ರಮ) ವಿಧೇಯಕ, 2026" ರಾಜ್ಯದ ಶೈಕ್ಷಣಿಕ ಮೂಲಸೌಕರ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.

ರಾಜ್ಯದ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿರುವ ಹೆಚ್ಚಿನ ಸರ್ಕಾರಿ ಶಾಲೆಗಳು ದಾನಿಗಳ ಕೊಡುಗೆಯಿಂದ ಸ್ಥಾಪಿತವಾಗಿವೆ. ಅಂದು ದಾನಿಗಳು ಅಥವಾ ಗ್ರಾಮಸ್ಥರು ಸದುದ್ದೇಶದಿಂದ ಭೂಮಿಯನ್ನು ನೀಡಿದ್ದರಾದರೂ, ಯಾವುದೇ ಅಧಿಕೃತ ನೋಂದಣಿ ಅಥವಾ ದಾಖಲೆಗಳನ್ನು ಮಾಡಿಸಿರಲಿಲ್ಲ. ಈಗ ದಶಕಗಳ ನಂತರ, ದಾನಿಗಳ ವಾರಸುದಾರರು ಭೂಮಿಯ ಮೌಲ್ಯ ಹೆಚ್ಚಾದಂತೆ ಕಾನೂನು ತಾಂತ್ರಿಕತೆಗಳನ್ನು ಬಳಸಿಕೊಂಡು ಶಾಲಾ ಭೂಮಿಯ ಮೇಲೆ ಹಕ್ಕು ಸಾಧಿಸುತ್ತಿದ್ದಾರೆ. ಇದರಿಂದಾಗಿ ಸಾವಿರಾರು ಶಾಲೆಗಳು ನ್ಯಾಯಾಲಯ ಕಲಾಪಗಳಲ್ಲಿ ಸಿಲುಕಿಕೊಂಡಿವೆ. ಹೊಸ ಕಟ್ಟಡಗಳ ನಿರ್ಮಾಣ ಸ್ಥಗಿತಗೊಂಡಿದೆ ಮತ್ತು ಕೆಲವು ಕಡೆ ಶಾಲೆಗಳನ್ನೇ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಿಕ್ಕಟ್ಟನ್ನು ನೀಗಿಸಲು ಸರ್ಕಾರ ಈ ವಿಶೇಷ ಕಾನೂನನ್ನು ರೂಪಿಸಿದೆ.

12 ವರ್ಷಗಳ ನಿಯಮ ಸರ್ಕಾರಕ್ಕೆ ವರದಾನ

ಯಾವುದೇ ಒಂದು ಸರ್ಕಾರಿ ಶೈಕ್ಷಣಿಕ ಸಂಸ್ಥೆಯು (ಶಾಲೆ ಅಥವಾ ಪಿಯು ಕಾಲೇಜು) ಒಂದು ಭೂಮಿಯ ಮೇಲೆ ಕನಿಷ್ಠ 12 ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಆ ಭೂಮಿಯು ಸ್ವಯಂಚಾಲಿತವಾಗಿ ರಾಜ್ಯ ಸರ್ಕಾರದ ಆಸ್ತಿಯಾಗಿ ಬದಲಾಗುತ್ತದೆ. ಭೂಮಿ ವರ್ಗಾವಣೆಯ ಅಧಿಕೃತ ನೋಂದಾಯಿತ ದಾಖಲೆ ಇಲ್ಲದಿದ್ದರೂ ಅಥವಾ ದಾನಿ ಮರಣ ಹೊಂದಿದ್ದರೂ ಸಹ, ಆ ಭೂಮಿಯು ಸರ್ಕಾರಕ್ಕೆ ಸೇರುತ್ತದೆ ಎಂದು ವಿಧೇಯಕ ಸ್ಪಷ್ಟಪಡಿಸಿದೆ

ಇದು 'ವರ್ಗಾವಣೆ ಕಾಯ್ದೆ 1882' ಅಥವಾ 'ಭಾರತೀಯ ಉತ್ತರಾಧಿಕಾರ ಕಾಯ್ದೆ 1925' ರಂತಹ ತಾಂತ್ರಿಕ ಅಡೆತಡೆಗಳಿಂದ ಸರ್ಕಾರಿ ಶಾಲೆಗಳನ್ನು ಮುಕ್ತಗೊಳಿಸುತ್ತದೆ. ಈ ಕಾನೂನನ್ನು ಜಾರಿಗೆ ತರಲು ಮತ್ತು ಶಾಲಾ ಆಸ್ತಿಗಳನ್ನು ನಿರ್ವಹಿಸಲು ಇಲಾಖೆಯ ಅಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ತಾಲ್ಲೂಕು ಮಟ್ಟದ ಸರ್ಕಾರಿ ಶಾಲೆಗಳ ಭೂಮಿಗೆ ಸಂಬಂಧಿಸಿದಂತೆ 'ಎಸ್ಟೇಟ್ ಅಧಿಕಾರಿ'ಯಾಗಿ ಕಾರ್ಯನಿರ್ವಹಿಸುತ್ತಾರೆ. ಉಪನಿರ್ದೇಶಕರು ಪದವಿ ಪೂರ್ವ ಕಾಲೇಜುಗಳ ಭೂಮಿಗೆ ಸಂಬಂಧಿಸಿದಂತೆ ಹೊಣೆಗಾರರಾಗಿರುತ್ತಾರೆ. ಇವರು ಶಾಲಾ ಭೂಮಿಗಳ ನಿಖರ ದಾಖಲೆಗಳನ್ನು ನಿರ್ವಹಿಸುವುದು, ಅತಿಕ್ರಮಣಗಳನ್ನು ತಡೆಯುವುದು ಮತ್ತು ತಹಶೀಲ್ದಾರರ ನೆರವಿನೊಂದಿಗೆ ಭೂ ಸಮೀಕ್ಷೆ ನಡೆಸಿ ಗಡಿ ಗುರುತಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ

ವಿಧೇಯಕ ಕುರಿತು ಮಾತನಾಡಿದ ಸಚಿವ ಮಧುಬಂಗಾರಪ್ಪ, ಸರ್ಕಾರವು ಈ ಕಾನೂನನ್ನು ಜಾರಿಗೆ ತರುವಾಗ ಖಾಸಗಿ ವ್ಯಕ್ತಿಗಳ ಹಕ್ಕುಗಳಿಗೂ ಕೆಲವು ಸುರಕ್ಷತಾ ಕ್ರಮಗಳನ್ನು ನೀಡಿದೆ. ಶಾಲಾ ಭೂಮಿಯನ್ನು ಸರ್ಕಾರದ ಹೆಸರಿಗೆ ನೋಂದಾಯಿಸುವ ಮೊದಲು ಕನಿಷ್ಠ ಎರಡು ಪತ್ರಿಕೆಗಳಲ್ಲಿ ಸಾರ್ವಜನಿಕ ನೋಟಿಸ್ ನೀಡಬೇಕು. ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಕಂದಾಯ ನ್ಯಾಯಾಲಯವು ಈ ಕಾಯ್ದೆಯಡಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.

ಯಾರಾದರೂ ತಮ್ಮ ಭೂಮಿಯನ್ನು ದಾನ ನೀಡಿರಲಿಲ್ಲ ಎಂದು ಸಾಬೀತುಪಡಿಸಿದರೆ, ಅಂತಹವರಿಗೆ ಪರ್ಯಾಯ ಭೂಮಿ ಅಥವಾ ಸೂಕ್ತ ಪರಿಹಾರ ನೀಡುವಂತೆ ಪ್ರಾಧಿಕಾರ ಶಿಫಾರಸ್ಸು ಮಾಡಬಹುದು. ಪ್ರಾಧಿಕಾರದ ನಿರ್ಧಾರದ ವಿರುದ್ಧ 30 ದಿನಗಳೊಳಗೆ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.

ಅತಿಕ್ರಮಣದಾರರಿಗೆ ಎಚ್ಚರಿಕೆ

ಈ ಕಾನೂನು ಜಾರಿಗೆ ಬಂದ ನಂತರ, 12 ವರ್ಷಗಳಿಗೂ ಹೆಚ್ಚು ಕಾಲ ಸರ್ಕಾರಿ ಶಾಲೆಯ ಅಧೀನದಲ್ಲಿರುವ ಭೂಮಿಯ ಮೇಲೆ ಯಾವುದೇ ವ್ಯಕ್ತಿ ಸಿವಿಲ್ ನ್ಯಾಯಾಲಯಗಳಲ್ಲಿ ದಾವೆ ಹೂಡುವಂತಿಲ್ಲ. ಈಗಾಗಲೇ ನ್ಯಾಯಾಲಯಗಳಲ್ಲಿರುವ ಇಂತಹ ಪ್ರಕರಣಗಳು ಈ ಕಾನೂನಿನ ಅಡಿಯಲ್ಲಿ ಮುಕ್ತಾಯಗೊಳ್ಳುತ್ತವೆ. ಇದು ಸರ್ಕಾರಿ ಆಸ್ತಿಯನ್ನು ಉಳಿಸಿಕೊಳ್ಳಲು ಸರ್ಕಾರಕ್ಕೆ ಸಿಕ್ಕಿರುವ ದೊಡ್ಡ ಕಾನೂನು ಬಲವಾಗಿದೆ.

ಈ ವಿಧೇಯಕವು ಜಾರಿಗೆ ಬರುವುದರಿಂದ ರಾಜ್ಯಕ್ಕೆ ಹಲವು ಲಾಭಗಳಿವೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಭೂಮಿ ಇನ್ಮುಂದೆ ಸರ್ಕಾರದ ಅಧಿಕೃತ 'ರಿಜಿಸ್ಟರ್'ನಲ್ಲಿ ದಾಖಲಾಗುತ್ತವೆ. ಭೂ ಮಾಲೀಕತ್ವದ ಗೊಂದಲದಿಂದಾಗಿ ಸಾವಿರಾರು ಶಾಲೆಗಳಿಗೆ ಸಿಎಸ್‌ಆರ್‌ ನಿಧಿ ಅಥವಾ ಸರ್ಕಾರಿ ಅನುದಾನದಲ್ಲಿ ಕಟ್ಟಡ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಈಗ ಆ ಅಡೆತಡೆ ನಿವಾರಣೆಯಾಗಲಿದೆ. ಶಾಲಾ ಮೈದಾನಗಳನ್ನು ಅತಿಕ್ರಮಿಸುವ ಪ್ರವೃತ್ತಿಗೆ ಈ ಕಾನೂನು ಅಂತ್ಯ ಹಾಡಲಿದೆ ಎಂದು ತಿಳಿಸಿದರು.

Read More
Next Story