ಬೈಟ್‌ಗಳಿಗೆ ಬ್ರೇಕ್​! ಬಿಜೆಪಿಯನ್ನು ಟೀಕಿಸುತ್ತಲೇ ಮಾಧ್ಯಮಕ್ಕೆ ಲಕ್ಷ್ಮಣ ರೇಖೆ ಎಳೆದ ಕೈ
x
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ.

ಬೈಟ್‌ಗಳಿಗೆ ಬ್ರೇಕ್​! ಬಿಜೆಪಿಯನ್ನು ಟೀಕಿಸುತ್ತಲೇ ಮಾಧ್ಯಮಕ್ಕೆ 'ಲಕ್ಷ್ಮಣ ರೇಖೆ' ಎಳೆದ 'ಕೈ'

ವಿಧಾನಸೌಧದ ಕಾರಿಡಾರ್‌ಗಳಲ್ಲಿ ಕ್ಯಾಮೆರಾ ನಿಷೇಧಿಸಲಾಗಿದ್ದು, ನಿಗದಿತ ಸ್ಥಳದಲ್ಲೇ ಬೈಟ್ ಪಡೆಯಲು ಸೂಚನೆ ನೀಡಲಾಗಿದೆ.


Click the Play button to hear this message in audio format

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಸರ್ಕಾರವೇ ಈಗ ಮಾಧ್ಯಮಗಳ ಮೇಲೆ ಸವಾರಿ ಮಾಡಲು ಹೊರಟಿದೆಯೇ? ಇಂತಹದೊಂದು ಪ್ರಶ್ನೆ ಈಗ ವಿಧಾನಸೌಧದ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ವಿಧಾನಸೌಧದಲ್ಲಿ ಮಾಧ್ಯಮಗಳ ಚಟುವಟಿಕೆಗೆ ಅಂಕುಶ ಹಾಕಲು ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.

ಹೊಸ ನಿಮಯದಲ್ಲೇನಿದೆ?

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ವಾರ್ತಾ ಇಲಾಖೆಗೆ ಪತ್ರ ಬರೆದಿದ್ದು, ಮಾಧ್ಯಮಗಳಿಗೆ ಕೆಲವು ಕಠಿಣ ಸೂಚನೆಗಳನ್ನು ನೀಡುವಂತೆ ತಿಳಿಸಿದೆ. ಇನ್ಮುಂದೆ ವಿಧಾನಸೌಧದಲ್ಲಿ ಎಲ್ಲೆಂದರಲ್ಲಿ ರಾಜಕೀಯ ನಾಯಕರ ಹೇಳಿಕೆ ಪಡೆಯುವಂತಿಲ್ಲ. ಕೇವಲ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಬೈಟ್ ಪಡೆಯಬೇಕು. ವಿಧಾನಸೌಧದ ಕಾರಿಡಾರ್‌ಗಳು ಅಥವಾ ಇತರ ಪ್ರಮುಖ ಸ್ಥಳಗಳಲ್ಲಿ ನಾಯಕರ ಅಭಿಪ್ರಾಯ ಪಡೆಯುವುದಕ್ಕೆ ನಿರ್ಬಂಧ ಹೇರಲಾಗಿದೆ.

ಮಾಧ್ಯಮಗಳ ಚಲನವಲನಕ್ಕೆ ಬ್ರೇಕ್

ಇಲ್ಲಿಯವರೆಗೆ ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧದ ಕಾರಿಡಾರ್‌ಗಳಲ್ಲಿ, ಸಚಿವರ ಕೊಠಡಿಗಳ ಬಳಿ ಅಥವಾ ಮುಖ್ಯಮಂತ್ರಿಗಳ ಕಚೇರಿಯ ಹೊರಗೆ ರಾಜಕೀಯ ನಾಯಕರನ್ನು ಕಂಡಾಗ ತಕ್ಷಣವೇ ಪ್ರತಿಕ್ರಿಯೆ (Byte) ಪಡೆಯುತ್ತಿದ್ದರು. ಆದರೆ, ಹೊಸ ನಿಯಮದ ಪ್ರಕಾರ ಮಾಧ್ಯಮದವರು ಎಲ್ಲೆಂದರಲ್ಲಿ ಕ್ಯಾಮೆರಾ ಹಿಡಿದು ನಿಲ್ಲುವಂತಿಲ್ಲ. ಇದು ರಾಜಕೀಯ ಬೆಳವಣಿಗೆಗಳ ಮೇಲೆ ಕ್ಷಣಕ್ಷಣದ ನಿಗಾ ಇಡುವ ಮಾಧ್ಯಮಗಳ ವೇಗಕ್ಕೆ ಅಡ್ಡಿಯಾಗಲಿದೆ.

ನಿಗದಿತ ಸ್ಥಳದಲ್ಲೇ ಬೈಟ್‌

ಸರ್ಕಾರವು ವಿಧಾನಸೌಧದಲ್ಲಿ ನಿರ್ದಿಷ್ಟವಾದ ಒಂದು ಅಥವಾ ಎರಡು ಸ್ಥಳಗಳನ್ನು ಮಾತ್ರ 'ಮೀಡಿಯಾ ಪಾಯಿಂಟ್' ಎಂದು ಗುರುತಿಸಲಿದೆ. ರಾಜಕೀಯ ನಾಯಕರು ಅಥವಾ ಸಚಿವರು ತಮಗೆ ಇಷ್ಟವಿದ್ದರೆ ಮಾತ್ರ ಆ ಸ್ಥಳಕ್ಕೆ ಬಂದು ಹೇಳಿಕೆ ನೀಡಬೇಕಾಗುತ್ತದೆ.

ಕಾರಿಡಾರ್‌ಗಳಲ್ಲಿ 'ಕ್ಯಾಮೆರಾ' ನಿಷೇಧ

ವಿಧಾನಸೌಧದ ಕಾರಿಡಾರ್‌ಗಳು (ಪಡಸಾಲೆಗಳು) ಪ್ರಮುಖ ಚರ್ಚೆಗಳು ನಡೆಯುವ ತಾಣಗಳು. ಇಲ್ಲಿ ನಾಯಕರನ್ನು ಪ್ರಶ್ನಿಸುವುದು ಪತ್ರಕರ್ತರಿಗೆ ಸುಲಭವಾಗಿತ್ತು. ಈಗ ಇಲ್ಲಿ ಬೈಟ್ ಪಡೆಯುವುದನ್ನು ನಿಷೇಧಿಸಿರುವುದರಿಂದ, ಒಳಗಡೆ ನಡೆಯುವ ಭ್ರಷ್ಟಾಚಾರ ಅಥವಾ ಭದ್ರತಾ ಲೋಪಗಳಂತಹ ವಿಚಾರಗಳನ್ನು ಪ್ರಶ್ನಿಸಲು ಮಾಧ್ಯಮಗಳಿಗೆ ಅವಕಾಶವೇ ಸಿಗದಂತೆ ಮಾಡುವ ತಂತ್ರ ಇದಾಗಿದೆ.

ವಿರೋಧ ಪಕ್ಷದ ಧ್ವನಿ ಹತ್ತಿಕ್ಕುವಿಕೆ: ಸರ್ಕಾರದ ತಪ್ಪುಗಳನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಥವಾ ಕಾರಿಡಾರ್‌ಗಳಲ್ಲಿ ನಿಂತು ಮಾಧ್ಯಮಗಳ ಮುಂದೆ ವಿರೋಧ ಪಕ್ಷದ ನಾಯಕರು ಬಿಚ್ಚಿಡುತ್ತಿದ್ದರು. ಈಗ 'ನಿಗದಿತ ಸ್ಥಳ'ದ ನಿಯಮದಿಂದಾಗಿ ವಿರೋಧ ಪಕ್ಷದ ನಾಯಕರು ಮಾಧ್ಯಮಗಳಿಗೆ ಸಿಗದಂತೆ ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ಸಂಶಯ ದಟ್ಟವಾಗಿದೆ.

ಭದ್ರತಾ ಲೋಪಗಳ ಮರೆಮಾಚಲು ಈ ನಡೆ?

ಇತ್ತೀಚೆಗೆ ವಿಧಾನಸೌಧದ ಹೈ-ಸೆಕ್ಯೂರಿಟಿ ವಲಯದಲ್ಲೇ ನಡೆದ ಚಿನ್ನದ ಕಳ್ಳತನದಂತಹ ಪ್ರಕರಣಗಳು ಸರ್ಕಾರದ ಭದ್ರತಾ ವೈಫಲ್ಯವನ್ನು ತೋರಿಸಿದ್ದವು. ಮಾಧ್ಯಮಗಳು ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಸುಳಿದಾಡುವುದರಿಂದ ಈ ಲೋಪಗಳು ಪದೇ ಪದೇ ಜಗಜ್ಜಾಹೀರಾಗುತ್ತಿವೆ ಎಂಬುದು ಸರ್ಕಾರದ ಅಸಮಾಧಾನ.

ಕಳೆದ ವಾರವಷ್ಟೇ ವಿಧಾನಸೌಧದ ಒಳಗಡೆ 300 ಗ್ರಾಂ ಚಿನ್ನದ ಕಳ್ಳತನವಾಗಿತ್ತು. ಇದು ಸರ್ಕಾರದ ಭದ್ರತಾ ಲೋಪವನ್ನು ಜಗಜ್ಜಾಹೀರು ಮಾಡಿತ್ತು. ಪದೇ ಪದೇ ಬಹಿರಂಗವಾಗುತ್ತಿರುವ ಭದ್ರತಾ ಲೋಪಗಳ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಬಾರದು ಮತ್ತು ಸರ್ಕಾರದ ನಕಾರಾತ್ಮಕ ಸುದ್ದಿಗಳನ್ನು ಹತ್ತಿಕ್ಕಬೇಕು ಎಂಬ ಉದ್ದೇಶ ಈ ಆದೇಶದ ಹಿಂದೆ ಇದೆಯೇ ಎಂಬ ಸಂಶಯ ಮೂಡಿದೆ.

ಬಿಜೆಪಿ ಅವಧಿಯಲ್ಲೂ ಮಾಧ್ಯಮಗಳ ಮೇಲೆ ನಿರ್ಬಂಧ

ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ಸರ್ಕಾರ ಈಗ ನಿರ್ಬಂಧ ಹೇರಲು ಹೊರಟಿರುವ ಬೆನ್ನಲ್ಲೇ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಿಂದೆ ತೆಗೆದುಕೊಂಡಿದ್ದ ಕಠಿಣ ನಿರ್ಧಾರದ ನೆನಪುಗಳು ಮತ್ತೆ ಮುನ್ನೆಲೆಗೆ ಬಂದಿವೆ. ಸದನದ ಕಲಾಪ ಚಿತ್ರೀಕರಣಕ್ಕೆ ಖಾಸಗಿ ಮಾಧ್ಯಮಗಳಿಗೆ ನಿರ್ಬಂಧ ಹೇರುವ ಮೂಲಕ ಕಾಗೇರಿ ಅವರು ಪತ್ರಿಕಾ ಸ್ವಾತಂತ್ರ್ಯದ ವಿಷಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದರು.

ಅಂದು ಕಾಗೇರಿ ಹಾಕಿದ್ದ ನಿಯಮಗಳೇನು?

ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭಾಧ್ಯಕ್ಷರಾಗಿದ್ದ ಅವಧಿಯಲ್ಲಿ ಸದನದ ಒಳಗಡೆ ಖಾಸಗಿ ಟಿವಿ ಚಾನೆಲ್‌ಗಳ ಕ್ಯಾಮೆರಾಗಳನ್ನು ನಿಷೇಧಿಸಿದ್ದರು. ಸದನದ ಕಲಾಪವನ್ನು ಕೇವಲ ದೂರದರ್ಶನ ಮಾತ್ರ ಚಿತ್ರೀಕರಿಸಬೇಕು ಮತ್ತು ಉಳಿದ ಮಾಧ್ಯಮಗಳು ಅಲ್ಲಿಂದ ಫೀಡ್ ಪಡೆಯಬೇಕು ಎಂಬ ನಿಯಮ ಜಾರಿಗೆ ತಂದಿದ್ದರು. ಸದನದ ಘನತೆ ಎತ್ತಿ ಹಿಡಿಯುವುದು ಮತ್ತು ಶಿಸ್ತು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಅಂದು ಸಮರ್ಥಿಸಿಕೊಂಡಿದ್ದರು.

ತೀವ್ರ ವಿರೋಧ ಮತ್ತು ಪ್ರತಿಭಟನೆ

ಕಾಗೇರಿ ಅವರ ಈ ನಿರ್ಧಾರವನ್ನು ಅಂದು ಮಾಧ್ಯಮ ಲೋಕ 'ಕಪ್ಪು ಶಾಸನ' ಎಂದು ಕರೆದಿತ್ತು. "ಸರ್ಕಾರದ ಮತ್ತು ಜನಪ್ರತಿನಿಧಿಗಳ ತಪ್ಪುಗಳನ್ನು ಮರೆಮಾಚಲು ಮಾಧ್ಯಮಗಳನ್ನು ದೂರವಿಡಲಾಗುತ್ತಿದೆ" ಎಂದು ಪತ್ರಕರ್ತರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದರು. ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಕೂಡ ಈ ನಿರ್ಧಾರವನ್ನು ಟೀಕಿಸಿದ್ದರು. ಬಿಜೆಪಿ ಅಧಿಕಾರದಲ್ಲಿರುವ ಕಡೆಗಳಲ್ಲಿ ಮಾಧ್ಯಮಗಳನ್ನು ತನ್ನ ಕೈಗೊಂಬೆ ಮಾಡಿಕೊಳ್ಳಲು ಯತ್ನಿಸುತ್ತಿದೆ. ಸತ್ಯವನ್ನು ಹೇಳುವ ಪತ್ರಕರ್ತರನ್ನು ಬೆದರಿಸುವುದು ಅಥವಾ ಅವರಿಗೆ ನಿರ್ಬಂಧ ಹೇರುವುದು ಬಿಜೆಪಿಯ ಡಿಎನ್‌ಎಯಲ್ಲೇ ಇದೆ ಎಂದು ಒಂದು ಸಂದರ್ಭದಲ್ಲಿ ಹೇಳಿಕೆ ನೀಡಿದರು.

ಅಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಗೇರಿ ಈ ಕ್ರಮ ಕೈಗೊಂಡಾಗ ಟೀಕಿಸಿದ್ದ ಕಾಂಗ್ರೆಸ್, ಇಂದು ತಾನೇ ಮಾಧ್ಯಮಗಳ ಮೇಲೆ ಅಂಕುಶ ಹಾಕಲು ಹೊರಟಿರುವುದು ವಿಪರ್ಯಾಸ ಎಂಬ ಮಾತುಗಳು ಕೇಳಿಬರುತ್ತಿವೆ.

Read More
Next Story