
ಕರಾವಳಿ ಕೋಮುವಾದ; ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಹೆಚ್ಚಿದ ಆಕ್ರೋಶ
ಕಾಂಗ್ರೆಸ್ ನೇತೃತ್ವದ ಸರ್ಕಾರವು ಕರಾವಳಿ ಭಾಗಕ್ಕೆ ಕೋಮುವಾದದ ಪಟ್ಟ ಕಟ್ಟುತ್ತಿದೆ ಎಂದು ಬಿಜೆಪಿ ಆರೋಪಿಸಿದರೆ, ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ರಾಜಕೀಯ ಮತ್ತು ಸೈದ್ಧಾಂತಿಕ ಸಂಘರ್ಷದ ಕೇಂದ್ರಬಿಂದುವಾಗಿದೆ. ಕೋಮುವಾದದಿಂದ ಕರಾವಳಿಯಲ್ಲಿ ಐಟಿ-ಬಿಟಿ ಕಂಪನಿಗಳು ಹೂಡಿಕೆಗೆ ಹೆದರುತ್ತಿವೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಯು ಕರಾವಳಿ ಭಾಗದ ಜನಪ್ರತಿನಿಧಿಗಳು ಹಾಗೂ ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರವು ಕರಾವಳಿ ಭಾಗಕ್ಕೆ ಕೋಮುವಾದದ ಪಟ್ಟ ಕಟ್ಟುತ್ತಿದೆ ಎಂದು ಬಿಜೆಪಿ ಆರೋಪಿಸಿದರೆ, ಖರ್ಗೆ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮಂಗಳವಾರ (ಫೆ.17) ಮಾಧ್ಯಮದವರೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, ಈ ಹಿಂದೆ ಕರಾವಳಿಯಲ್ಲಿ ಅನೇಕ ಕೋಮುಘರ್ಷಣೆಗಳು ನಡೆದಿವೆ. ರಾಜ್ಯ ಸರ್ಕಾರ ಶಾಂತಿ ಕಾಪಾಡಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಕಾನೂನು ಸುವ್ಯವಸ್ಥೆ ಬಿಗಿಗೊಳಿಸಿದ ಪರಿಣಾಮ ಕಾನೂನುಬಾಹಿರ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ ಎಂದು ಹೇಳಿದ್ದಾರೆ.
ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲಾಗಿದೆ. ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಐಟಿ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುತ್ತಿದ್ದೇವೆ. ಹಿಂಸಾತ್ಮಕ ಘಟನೆಗಳು ಪುನರಾವರ್ತನೆಯಾಗದಂತೆ ನಿಗಾ ವಹಿಸಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಆರ್‌ಎಸ್‌ಎಸ್ ಅತಿದೊಡ್ಡ ಸಂಘಟನೆ. ಅಲ್ಲಿ ಸಂಗ್ರಹವಾಗುತ್ತಿರುವ ದೇಣಿಗೆ ಏನಾಗುತ್ತಿದೆ ಎಂದು ನಾವು ಪ್ರಶ್ನಿಸಬಾರದೇ, ನಮ್ಮದು ಇಡೀ ವಿಶ್ವಕ್ಕೆ ದೊಡ್ಡ ಸಂಘಟನೆ ಎಂದು ಹೇಳಿಕೊಳ್ಳುವವರು ಅದರ ಸದಸ್ಯರು ಯಾರು?, ನೋಂದಣಿ ಯಾಕಾಗಿಲ್ಲ ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದನ್ನು ತಿಳಿಸಬೇಕು. ಪಾರದರ್ಶಕತೆ ಎಲ್ಲರಿಗೂ ಅನ್ವಯಿಸುತ್ತದೆ ಅಲ್ಲವೇ ಎಂದು ಅವರು, ಎಷ್ಟು ಖರ್ಚು, ಆದಾಯ ಎಲ್ಲವನ್ನೂ ತಿಳಿದುಕೊಳ್ಳಬೇಕು. ಸಾರ್ವಜನಿಕವಾಗಿ ಎಲ್ಲರಿಗೂ ಇದು ಗೊತ್ತಾಗಬೇಕು. ಗೌಪ್ಯತೆ ಕಾಪಾಡಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕರಾವಳಿಯ ಅಭಿವೃದ್ಧಿ ಕುಂಠಿತವಾಗಲು ಹಾಗೂ ಅಲ್ಲಿನ ಸೌಹಾರ್ದತೆ ಹಾಳು ಮಾಡಲು ಆರ್‌ಎಸ್‌ಎಸ್ ಸಿದ್ಧಾಂತಗಳೇ ಕಾರಣ ಎಂದೂ ವಾಗ್ದಾಳಿ ನಡೆಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕೂಡ ಕರಾವಳಿ ಕೋಮುವಾದದ ಕುರಿತು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದರು. ಕೋಮುವಾದದ ಕಾರ್ಮೋಡ ಇರುವುದರಿಂದ 'ವೈಟ್ ಕಾಲರ್' ಉದ್ಯೋಗದಾತರು ಮತ್ತು ಉದ್ಯಮಿಗಳು ಕರಾವಳಿಗೆ ಬರಲು ಹಿಂಜರಿಯುತ್ತಿದ್ದಾರೆ ಎಂದು ಟೀಕಿಸಿದ್ದರು.
ಕೋಮುಸಂಘರ್ಷ ನಿಯಂತ್ರಣ ಪಡೆ ಸ್ಥಾಪಿಸಿದ ಬಳಿಕ ಐಟಿ ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ. ಕರಾವಳಿಗೆ ಆರ್‌ಎಸ್‌ಎಸ್ ಬಳಿದಿರುವ ಮಸಿಯನ್ನು ಸರ್ಕಾರ ತೊಳೆಯುತ್ತಿದೆ. ದ್ವೇಷ ಭಾಷಣಗಳ ವಿರುದ್ಧ ಕಾನೂನು ಸಮರ ಸಾರುವ ಮೂಲಕ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದ್ದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಅನ್ನು'ದೆವ್ವ'ಕ್ಕೆ ಹೋಲಿಸಿದ್ದನ್ನು ಹರಿಪ್ರಸಾದ್ ಸಮರ್ಥಿಸಿಕೊಂಡಿದ್ದರು. ಮೋಹನ್ ಭಾಗವತ್ ಅವರೇ ಒಪ್ಪಿಕೊಂಡಂತೆ ಸಂಘಟನೆ ನೋಂದಣಿಯಾಗಿಲ್ಲ ಎಂದಾದರೆ ಅಸ್ತಿತ್ವದಲ್ಲಿಲ್ಲದ, ಆದರೆ ಪ್ರಭಾವ ಬೀರುವ ಶಕ್ತಿಯನ್ನು 'ಘೋಸ್ಟ್' ಎನ್ನದೆ ಇನ್ನೇನು ಎನ್ನಬೇಕು ಎಂದು ಹರಿಪ್ರಸಾದ್ ಪ್ರಶ್ನಿಸಿದ್ದರು.
ಆರ್‌ಎಸ್‌ಎಸ್ ಕುರಿತಾದ ವ್ಯಕ್ತಿಗಳ ಜಗಳ ಇದಲ್ಲ. ಬದಲಿಗೆ ದಶಕಗಳಿಂದ ನಡೆದುಕೊಂಡು ಬಂದಿರುವ ಸೈದ್ಧಾಂತಿಕ ಸಂಘರ್ಷ. ಸಂವಿಧಾನಾತ್ಮಕ ಚೌಕಟ್ಟಿನ ಹೊರಗಿರುವ ಶಕ್ತಿಗಳನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಹಕ್ಕು ಎಂದು ಪ್ರತಿಪಾದಿಸಿದ್ದರು.
ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಕೋಮುವಾದದ ಕಾರಣ ಕರಾವಳಿಯಲ್ಲಿ ಐಟಿ-ಬಿಟಿ ಕಂಪನಿಗಳು ಬಂಡವಾಳ ಹೂಡಲು ಹೆದರುತ್ತಿವೆ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ಐಟಿ-ಬಿಟಿ ಕಂಪನಿಗಳಿಗೆ ಹೂಡಿಕೆ ಮಾಡಿ ಎಂದು ಹೇಳುತ್ತೇವೆ. ಅವರು ಕೂಡ ಸಿದ್ಧರಾಗುತ್ತಾರೆ. ಆದರೆ ನಾಳೆ ಅವರ ಕೆಲಸಗಾರರಿಗೆ ತೊಂದರೆಯಾದರೆ ಏನು ಮಾಡೋದು ಎಂಬ ಚಿಂತೆ ಅವರದ್ದು. ಎಲ್ಲಿಯವರೆಗೆ ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗಿ ಮಾತನಾಡುವುದಿಲ್ಲವೋ ಅಲ್ಲಿಯವರೆಗೂ ಸಮಾಜ ಉದ್ಧಾರವಾಗಲ್ಲ. ರಾಜಕಾರಣಿಗಳು, ಧರ್ಮಗುರುಗಳು ಸೃಷ್ಟಿಸುವ ಧರ್ಮದ ನಶೆ ನಿಲ್ಲಬೇಕು ಎಂದಿದ್ದರು.

