Auto Lpg Shortage | ರಾಜ್ಯದಲ್ಲಿ ಆಟೋ ಗ್ಯಾಸ್‌ ಅಭಾವವಿಲ್ಲ, ಸುಳ್ಳು ವದಂತಿ ನಂಬಬೇಡಿ;  ಸರ್ಕಾರ ಸ್ಪಷ್ಟನೆ
x

ಸಾಂದರ್ಭಿಕ ಚಿತ್ರ

Auto Lpg Shortage | ರಾಜ್ಯದಲ್ಲಿ ಆಟೋ ಗ್ಯಾಸ್‌ ಅಭಾವವಿಲ್ಲ, ಸುಳ್ಳು ವದಂತಿ ನಂಬಬೇಡಿ; ಸರ್ಕಾರ ಸ್ಪಷ್ಟನೆ

ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಸರಬರಾಜು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸದ್ಯ ಪ್ರತಿದಿನ ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್‌ನ್ನು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.


Click the Play button to hear this message in audio format

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಕಳೆದ ಕೆಲವು ದಿನಗಳಿಂದ ಗ್ಯಾಸ್‌ ಅಭಾವವಿದೆ ಎಂದು ಬಂಕ್‌ಗಳ ಮುಂದೆ ನೂರಾರು ಆಟೋಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಂತು ಗ್ಯಾಸ್‌ ತುಂಬಿಸಿಕೊಂಡಿದ್ದವು. ಇನ್ನು ಕೆಲವು ಆಟೋ ಚಾಲಕರು ಹಾಗೂ ಮಾಲೀಕರು ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ಯಾಸ್‌ ಅಭಾವವಾಗವಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದು, ಅನಿಲ ದಾಸ್ತಾನು ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದೆ.

ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್‌ ಪೂರೈಕೆ

​ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ಅಲ್ಪಮಟ್ಟಿನ ಕೊರತೆ ಕಂಡುಬಂದಿದ್ದು, ಇದನ್ನು ಸರಿಪಡಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಐಒಸಿ (ಇಂಡಿಯನ್ ಆಯಿಲ್), ಬಿಪಿಸಿ (ಭಾರತ್ ಪೆಟ್ರೋಲಿಯಂ) ಮತ್ತು ಎಚ್‌ಪಿಸಿ (ಹಿಂದೂಸ್ತಾನ್ ಪೆಟ್ರೋಲಿಯಂ) ಮೂಲಕ ಹೆಚ್ಚಿನ ಪ್ರಮಾಣದ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ.​ ಈ ಹಿಂದೆ ಮೂರು ಸಂಸ್ಥೆಗಳು ಸರಾಸರಿ 56.67 ಮೆಟ್ರಿಕ್ ಟನ್ ಆಟೋ ಗ್ಯಾಸ್‌ನ್ನು ಸರಬರಾಜು ಮಾಡುತ್ತಿದ್ದವು. ಆದರೆ ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಸರಬರಾಜು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸದ್ಯ ಪ್ರತಿದಿನ ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್‌ನ್ನು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತಿದೆ.

ಗ್ಯಾಸ್‌ ಕೊರತೆಯಿಂದ ಇತ್ತೀಚೆಗೆ ಬಂಕ್‌ಗಳಲ್ಲಿ ಸಾಲುಗಟ್ಟಿ ನಿಂತಿದ್ದ ಆಟೋಗಳು (ಚಿತ್ರ: ಕೀರ್ತಿಕ್‌ ಸಿ.ಎಸ್‌.)

ಕಳೆದ ಐದು ದಿನಗಳ ಸರಬರಾಜು

ಕಳೆದ ಏ. 2 ರಿಂದ ಏ. 6 ರವರೆಗಿನ ಅಂಕಿಅಂಶಗಳ ಮಾಹಿತಿಯಂತೆ ಪೂರೈಕೆಯಲ್ಲಿ ಸ್ಥಿರತೆ ಇರುವುದು ಕಂಡುಬಂದಿದೆ. ಏ. 2 ರಂದು 87.78 ಮೆಟ್ರಿಕ್ ಟನ್, ಏ. 3 ರಂದು 86.05 ಮೆಟ್ರಿಕ್ ಟನ್, ಏ. 4 ರಂದು 84.80 ಮೆಟ್ರಿಕ್ ಟನ್, ಏ. 5 ರಂದು ಗರಿಷ್ಠ 94.11 ಮೆಟ್ರಿಕ್ ಟನ್ ಹಾಗೂ ಏ. 6 ರಂದು 83.58 ಮೆಟ್ರಿಕ್ ಟನ್ ಅನಿಲವನ್ನು ಈ ಮೂರು ಪ್ರಮುಖ ಸಂಸ್ಥೆಗಳು ಯಶಸ್ವಿಯಾಗಿ ಪೂರೈಕೆ ಮಾಡಿವೆ ಎಂದು ಮಾಹಿತಿ ನೀಡಿದೆ.

ರಾಜ್ಯದ ಆಟೋ ಮಾಲೀಕರು ಮತ್ತು ಚಾಲಕರು ಅನಿಲ ದಾಸ್ತಾನು ಇಲ್ಲ ಎಂಬ ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಆತಂಕಕ್ಕೊಳಗಾಗಿ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು. ಅನಿಲ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಆಟೋ ಗ್ಯಾಸ್‌ ಅಭಾವ ಕುರಿತು ʼದ ಫೆಡರಲ್‌ ಕರ್ನಾಟಕʼ ವಿಡಿಯೋ ಸುದ್ದಿ ಮಾಡಿತ್ತು.

Read More
Next Story