ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಹಾಹಾಕಾರ, ಚಾಲಕರು ಕಂಗಾಲು
x

ಬೆಂಗಳೂರಿನಲ್ಲಿ ಎಲ್‌ಪಿಜಿ ಇಂಧನ ಕೊರತೆ:

ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಹಾಹಾಕಾರ, ಚಾಲಕರು ಕಂಗಾಲು

ಮಧ್ಯ ಏಷ್ಯಾ ಯುದ್ಧದ ಎಫೆಕ್ಟ್: ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಹಾಹಾಕಾರ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ಸಿಗದ ಇಂಧನ. ಆಟೋ ಚಾಲಕರ ಬದುಕು ದುಸ್ತರ, ಸಾಮಾನ್ಯ ಪ್ರಯಾಣಿಕರಿಗೂ ತಪ್ಪದ ಸಂಕಷ್ಟ.


Click the Play button to hear this message in audio format

ಮಧ್ಯ ಏಷ್ಯಾದಲ್ಲಿ ಸಂಭವಿಸುತ್ತಿರುವ ಯುದ್ಧದ ಪರಿಣಾಮ ಬೆಂಗಳೂರಿನ ಆಟೋ ಚಾಲಕರ ಬದುಕನ್ನು ಸಂಕಷ್ಟಕ್ಕೆ ದೂಡಿವೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಳಿತ ಹಾಗೂ ಇಂಧನ ಬಿಕ್ಕಟ್ಟಿನಿಂದಾಗಿ ನಗರದಲ್ಲಿ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಬಹುತೇಕ ಎಲ್​ಪಿಜಿ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್‌ಗಳ ಮುಂದೆ ಕಿಲೋಮೀಟರ್ ಉದ್ದದ ಆಟೋಗಳ ಸಾಲು ಕಂಡುಬರುತ್ತಿದ್ದು, ಮುಂಜಾನೆಯಿಂದಲೇ ಸಾಲಿನಲ್ಲಿ ನಿಂತರೂ ಮಧ್ಯಾಹ್ನದವರೆಗೆ ಎಲ್‌ಪಿಜಿ ಸಿಗದೆ ಚಾಲಕರು ಹೈರಾಣಾಗಿದ್ದಾರೆ.

ಈ ಬಿಕ್ಕಟ್ಟಿನ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಆಟೋ ಚಾಲಕ ಆರಿಫ್ ಉಲ್ಲಾ ಬೇಗ್ ಅವರು, ʻʻಗ್ಯಾಸ್ ಅಭಾವದಿಂದಾಗಿ ದಿನದ ಅರ್ಧದಷ್ಟು ಸಮಯ ಸಾಲಿನಲ್ಲಿ ಕಳೆಯಬೇಕಾಗಿದೆ. ಬೆಳಿಗ್ಗೆಯಿಂದಲೂ ಸಾಲಿನಲ್ಲಿ ನಿಂತರೆ ಹತ್ತು ಗಂಟೆಯಾದರೂ ಗ್ಯಾಸ್ ಲಭ್ಯವಾಗುತ್ತಿಲ್ಲ. ದಿನಕ್ಕೆ 300 ರೂಪಾಯಿಗಳ ಗ್ಯಾಸ್ ತುಂಬಿಸಿಕೊಳ್ಳಲು ಇಡೀ ಬೆಳಿಗ್ಗಿನ ಸಮಯ ವ್ಯರ್ಥವಾಗುತ್ತಿದ್ದು, ಬಾಡಿಗೆ ಹೊಡೆಯಲು ಸಮಯವೇ ಉಳಿಯುತ್ತಿಲ್ಲ. ಇದರಿಂದ ಆಟೋ ಮಾಲೀಕರಿಗೆ ಹಣ ನೀಡುವುದು ಮತ್ತು ಸಂಸಾರ ನಿರ್ವಹಿಸುವುದು ಅಸಾಧ್ಯವಾಗಿದೆʼʼ ಎಂದು ಅವರು ನೋವು ತೋಡಿಕೊಂಡರು.

ರಸ್ತೆಯಲ್ಲಿ ಆಟೋಗಳ ಕೊರತೆಯಿಂದಾಗಿ ಸಾಮಾನ್ಯ ಪ್ರಯಾಣಿಕರು, ಅದರಲ್ಲೂ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ಪರದಾಡುತ್ತಿದ್ದಾರೆ. ಬಿಎಂಟಿಸಿ ಬಸ್‌ಗಳಲ್ಲಿ ವಿಪರೀತ ಜನದಟ್ಟಣೆ ಉಂಟಾಗಿದ್ದು, ಆಟೋಗಳು ಸಿಕ್ಕರೂ ದುಪ್ಪಟ್ಟು ದರ ಕೇಳುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ. ಅಂತಾರಾಷ್ಟ್ರೀಯ ರಾಜತಾಂತ್ರಿಕ ಜಗಳಕ್ಕೆ ಬೆಂಗಳೂರಿನ ಸಾಮಾನ್ಯ ಜನಸಾಮಾನ್ಯರು ಬೆಲೆ ತೆರುವಂತಾಗಿದೆ.

ಇಂಧನ ಅಭಾವ ಮತ್ತು ಆರ್ಥಿಕ ಸಂಕಷ್ಟದ ನೆಪವೊಡ್ಡಿ ಆಟೋ ಚಾಲಕರು ಪ್ರಯಾಣಿಕರಿಂದ ದುಬಾರಿ ದರ ವಸೂಲಿ ಮಾಡುತ್ತಿರುವ ದೂರುಗಳು ಹೆಚ್ಚಾಗಿವೆ. ನಂದಿನಿ ಲೇಔಟ್‌ನಿಂದ ರಾಜಾಜಿನಗರದ ಆಸ್ಪತ್ರೆಗೆ ತುರ್ತು ವರದಿ ಪಡೆಯಲು ಬಂದಿದ್ದ ಯಶೋದಾ ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡುತ್ತಾ, ಅರ್ಧ ಗಂಟೆ ಕಾದರೂ ಯಾವುದೇ ಆಟೋ ಸಿಗಲಿಲ್ಲ. ಆನ್‌ಲೈನ್ ಆಪ್‌ಗಳಲ್ಲಿ ಪದೇ ಪದೇ ರೈಡ್ ರದ್ದಾಗುತ್ತಿತ್ತು. ಅಲ್ಪ ದೂರಕ್ಕೇ 200 ರೂಪಾಯಿಗಳಷ್ಟು ದರ ಕೇಳುತ್ತಾರೆʼʼ ಎಂದು ಅವರು ತಿಳಿಸಿದರು.

ಅಂತಾರಾಷ್ಟ್ರೀಯ ಮಟ್ಟದ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಉಂಟಾಗಿರುವ ಈ ಇಂಧನ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಕೂಡಲೇ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು. ಸಬ್ಸಿಡಿ ದರದಲ್ಲಿ ಇಂಧನ ಪೂರೈಕೆ ಅಥವಾ ಸ್ಟಾಕ್ ಹೆಚ್ಚಿಸುವ ಮೂಲಕ ಆಟೋ ಚಾಲಕರ ನೆರವಿಗೆ ಬರಬೇಕು ಎಂಬುದು ಆಟೋ ಚಾಲಕರ ಒತ್ತಾಯ.

Read More
Next Story