ರಾಜ್ಯಕ್ಕೆ ಹರಿದು ಬರಲಿದೆ 11,850 ಕೋಟಿ ಹೂಡಿಕೆ; 7,200 ಉದ್ಯೋಗ ಸೃಷ್ಟಿಯ ಗುರಿ
x

ರಾಜ್ಯಕ್ಕೆ ಹರಿದು ಬರಲಿದೆ 11,850 ಕೋಟಿ ಹೂಡಿಕೆ; 7,200 ಉದ್ಯೋಗ ಸೃಷ್ಟಿಯ ಗುರಿ

ಇದೇ 17ರಂದು ದೆಹಲಿಯಲ್ಲಿ ಬ್ರಿಡ್ಜ್‌ ಬೆಂಗಳೂರು ರಾಜತಾಂತ್ರಿಕರ ಜತೆ ಸಂವಾದ ನಡೆಯಲಿದೆ. ರಾಜ್ಯದ ನವೋದ್ಯಮಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ, ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಲಾಗಿದೆ.


Click the Play button to hear this message in audio format

ಕರ್ನಾಟಕವನ್ನು ಜಾಗತಿಕ ನಾವೀನ್ಯತೆಯ ಹೆಬ್ಬಾಗಿಲನ್ನಾಗಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ, ದೆಹಲಿಯಲ್ಲಿ 80ಕ್ಕೂ ಹೆಚ್ಚು ದೇಶಗಳ ರಾಜತಾಂತ್ರಿಕರ ಸಮ್ಮುಖದಲ್ಲಿ 'ಬ್ರಿಡ್ಜ್ ಟು ಬೆಂಗಳೂರು-2026' ಕಾರ್ಯಕ್ರಮ ಆಯೋಜಿಸಲಿದೆ. ಯುರೋಪ್‌ನಿಂದ ಬೆಂಗಳೂರಿನವರೆಗೆ ನಿರ್ಮಾಣವಾಗಲಿರುವ 'ನಾವೀನ್ಯತಾ ಕಾರಿಡಾರ್' ರಾಜ್ಯದ ನವೋದ್ಯಮಗಳ ಪಾಲಿಗೆ ಹೊಸ ಆಶಾದೀಪವಾಗಲಿದೆ. ರಾಜ್ಯದ ಆರ್ಥಿಕತೆಗೆ 11,850 ಕೋಟಿ ರೂ. ಹೂಡಿಕೆ ಹರಿದುಬರಲಿದ್ದು, 7,200 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.

ಈ ಕುರಿತು ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, 2025ರಲ್ಲಿ ನಡೆದ ವಿವಾ ಟೆಕ್ ಸಮ್ಮೇಳನದಲ್ಲಿ ಯುರೋಪ್- ಬೆಂಗಳೂರು ಮಧ್ಯೆ ನಾವೀನ್ಯತಾ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅದೇ ರೀತಿ 2027ರಲ್ಲಿ ಬೆಂಗಳೂರಿನಲ್ಲಿ ಜಿಟೆಕ್ಸ್ ಎಐ ಇಂಡಿಯಾ- ಜಾಗತಿಕ ಮಟ್ಟದ ಸಮ್ಮೇಳನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ನುರ್ನ್ಬದ ಮೆಸ್ಸೆ ಇಂಡಿಯಾ ಜತೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದ್ದು ಬೆಂಗಳೂರು ಟೆಕ್ ಶೃಂಗದ ಜತೆ ಜತೆಗೆ ಇದು ನಡೆಯಲಿದೆ ಎಂದು ಮಾಹಿತಿ ನೀಡಿದರು..

ನ.17ರಿಂದ 19ರವರೆಗೆ ನಡೆಯಲಿರುವ ಜಿಟೆಕ್ಸ್ ಎಐ ಇಂಡಿಯಾ ಶೃಂಗಸಭೆಗೆ ದೆಹಲಿಯ ರಾಜತಾಂತ್ರಿಕ ಸಮಾವೇಶವು ಪೂರ್ವಭಾವಿ ಸಿದ್ಧತೆಯಾಗಿದೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಕರ್ನಾಟಕಕ್ಕೆ ಬೃಹತ್ ಪ್ರಮಾಣದ ಹೂಡಿಕೆ ಹರಿದು ಬರಲಿದೆ. ಸುಮಾರು 5,500 ಕೋಟಿ ರೂ. ಮೊತ್ತದ ಜಾಗತಿಕ ಹೂಡಿಕೆ ನಿರೀಕ್ಷಿಸಲಾಗಿದೆ. 6,350 ಕೋಟಿ ರೂ. ಮೊತ್ತದ ಹೂಡಿಕೆಯು ರಾಜ್ಯದಲ್ಲಿ ಡಾಟಾ ಕೇಂದ್ರಗಳ ಸ್ಥಾಪನೆಗೆ ಬಳಕೆಯಾಗಲಿದೆ. ಇವೆಲ್ಲವುಗಳಿಂದ ಅಂದಾಜು 7,200 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಮುಖ್ಯವಾಗಿ ಡೀಪ್ ಟೆಕ್, ಫಿನ್‌ಟೆಕ್ (ಹಣಕಾಸು ತಂತ್ರಜ್ಞಾನ), ಹೆಲ್ತ್‌ಟೆಕ್ (ಆರೋಗ್ಯ), ಕ್ಲೀನ್ ಟೆಕ್ (ಪರಿಸರ ಸ್ನೇಹಿ), ಬಯೋಟೆಕ್ (ಜೈವಿಕ) ಮತ್ತು ಟ್ರಾವೆಲ್‌ಟೆಕ್ ಕ್ಷೇತ್ರಗಳ ಮೇಲೆ ಗಮನ ಹರಿಸುತ್ತಿದೆ. ಈ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಹೂಡಿಕೆದಾರರು ಮತ್ತು ನಿಯಂತ್ರಣಾ ಸಂಸ್ಥೆಗಳ ಜೊತೆ ನೇರ ಸಂಪರ್ಕ ಕಲ್ಪಿಸುವ ಮೂಲಕ ಸಂಪರ್ಕ ಸೇತುವೆಯಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಇದೇ 17ರಂದು ದೆಹಲಿಯಲ್ಲಿ ಬ್ರಿಡ್ಜ್‌ ಬೆಂಗಳೂರು

ಕರ್ನಾಟಕದ ನವೋದ್ಯಮಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ ಹಾಗೂ ಅಂತಾರಾಷ್ಟ್ರೀಯ ಹೂಡಿಕೆಯನ್ನು ಆಕರ್ಷಿಸುವ ಬೃಹತ್ ಗುರಿಯನ್ನು ಹೊಂದಿದೆ. ಇದೇ 17ರಂದು ದೆಹಲಿಯಲ್ಲಿ ಬ್ರಿಡ್ಜ್‌ ಬೆಂಗಳೂರು - 2026 ರಾಜತಾಂತ್ರಿಕರ ಜತೆ ಸಮಾಲೋಚನೆ ಕಾರ್ಯಕ್ರಮ ನಡೆಯಲಿದ್ದು, ಮುಂದಿನ ತಲೆಮಾರುಗಳಿಗೆ ಅನುಕೂಲವಾಗುವಂತೆ ಕ್ಷೇತ್ರವಾರು ಸಹಭಾಗಿತ್ವ ಸಾಧಿಸುವಿಕೆ, ಜಾಗತಿಕ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಲಾಗಿದೆ. ಅಲ್ಲದೇ, ಉದ್ಯೋಗ ಸೃಷ್ಟಿ ಮತ್ತು ಹೂಡಿಕೆಯ ಗುರಿ ಹೊಂದುವುದು ಸಮಾವೇಶದ ಉದ್ದೇಶವಾಗಿದೆ ಎಂದು ಹೇಳಿದರು

ದೆಹಲಿಯಲ್ಲಿ ನಡೆಯುವ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. 80 ದೇಶಗಳ ರಾಯಭಾರಿಗಳು ಸೇರಿದಂತೆ ಹಲವು ದೇಶಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ರಾಜ್ಯ ಸರ್ಕಾರವು ಕೇವಲ ಒಪ್ಪಂದಗಳಿಗೆ ಸೀಮಿತವಾಗದೆ, ಪ್ರತಿಫಲ ಆಧಾರಿತ ಕಾರ್ಯಕ್ರಮಗಳಿಗೆ ಒತ್ತು ನೀಡಿದೆ. ಮುಂದಿನ ಹತ್ತು ವರ್ಷಗಳಲ್ಲಿ ಕರ್ನಾಟಕವನ್ನು 'ಡೀಪ್ ಟೆಕ್' ಕ್ಷೇತ್ರದಲ್ಲಿ ವಿಶ್ವದ ಅಗ್ರಗಣ್ಯ ರಾಜ್ಯವನ್ನಾಗಿ ಮಾಡುವುದು ಸರ್ಕಾರದ ಕನಸಾಗಿದೆ. ರಾಜ್ಯದಲ್ಲಿರುವ ಅಪಾರ ಪ್ರತಿಭೆಗಳನ್ನು ಜಾಗತಿಕ ಸಂಶೋಧನಾ ಸಂಸ್ಥೆಗಳೊಂದಿಗೆ ಜೋಡಿಸುವ ಕೆಲಸ ನಡೆಯುತ್ತಿದೆ. ಸಾಂಪ್ರದಾಯಿಕ ಉದ್ದಿಮೆಗಳಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವ ಮೂಲಕ ಅವುಗಳ ದಕ್ಷತೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಜಿಐಎ ಸಾಧನೆಗಳು

ರಾಜ್ಯ ಸರ್ಕಾರವು ಈಗಾಗಲೇ 40ಕ್ಕೂ ಹೆಚ್ಚು ದೇಶಗಳೊಂದಿಗೆ ಸಂಪರ್ಕ ಹೊಂದಿದ್ದು, 2000ಕ್ಕೂ ಅಧಿಕ ನವೋದ್ಯಮಗಳಿಗೆ ಬೆಂಬಲ ನೀಡುತ್ತಿದೆ. 60ಕ್ಕೂ ಹೆಚ್ಚು ಜಾಗತಿಕ ಮಟ್ಟದ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಲಾಗಿದೆ. ಸರ್ಕಾರದಿಂದ ಸರ್ಕಾರದ ಜತೆಗಿನ ಸಹಕಾರ ಮೈತ್ರಿ ಯೋಜನೆಯು ಸ್ಟಾರ್ಟ್‌ಅಪ್‌ಗಳಿಗೆ ಮಾರುಕಟ್ಟೆ ಒದಗಿಸುವಲ್ಲಿ ಭಾರತದಲ್ಲೇ ಪ್ರಥಮ ಮಾದರಿಯಾಗಿದೆ. ಕಳೆದ ಒಂದು ವರ್ಷದಲ್ಲಿ ಜಪಾನ್, ಜರ್ಮನಿ, ಆಸ್ಟ್ರೇಲಿಯಾ, ಬೆಲ್ಜಿಯಂ, ಸಿಂಗಪೂರ ಮತ್ತು ಯುಎಇ ಸೇರಿದಂತೆ 9 ದೇಶಗಳೊಂದಿಗೆ ಮಾರುಕಟ್ಟೆ ಆಧಾರಿತ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.

ಜಾಗತಿಕ ಮಟ್ಟದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳೊಂದಿಗೆ ಕರ್ನಾಟಕವು ಕೈಜೋಡಿಸಿದೆ. ಲಂಡನ್ನಿನ ಇಂಪೀರಿಯಲ್ ಕಾಲೇಜು, ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ, ರೈಸ್ ವಿಶ್ವವಿದ್ಯಾಲಯ, ಗ್ಲಾಸ್ಗೋ ವಿಶ್ವವಿದ್ಯಾಲಯ, ಲಾ ಟ್ರೋಬ್ ವಿಶ್ವವಿದ್ಯಾಲಯ ಸಂಸ್ಥೆಗಳ ತಾಂತ್ರಿಕ ನೆರವಿನಿಂದ ರಾಜ್ಯದ ನವೋದ್ಯಮಿಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

Read More
Next Story