Important discussion on internal reservation classification in upcoming cabinet meeting: K.H. Muniyappa
x

ಸಭೆಯಲ್ಲಿ ಸಚಿವ ಕೆ.ಎಚ್‌. ಮುನಿಯಪ್ಪ ಮಾತನಾಡಿದರು. 

ಮುಂಬರುವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ವರ್ಗೀಕರಣದ ಬಗ್ಗೆ ಚರ್ಚೆ: ಕೆ.ಹೆಚ್. ಮುನಿಯಪ್ಪ

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗವನ್ನು ನೇಮಿಸಿ ಸಮಗ್ರ ದತ್ತಾಂಶ ಸಂಗ್ರಹಿಸಿತ್ತು.


Click the Play button to hear this message in audio format

ರಾಜ್ಯದಲ್ಲಿ ಖಾಲಿ ಇರುವ 56,342 ಸರ್ಕಾರಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಯ (SC) ಶೇ. 15ರಷ್ಟು ಮೀಸಲಾತಿಯನ್ನು ಎ, ಬಿ ಮತ್ತು ಸಿ (A, B, C) ಗುಂಪುಗಳಿಗೆ ಒಳಮೀಸಲಾತಿಯಾಗಿ ವರ್ಗೀಕರಿಸುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ್ ಹಾಗೂ ಶೋಷಿತ ಸಮುದಾಯದ ಇತರ ಪ್ರಮುಖ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 101 ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಕಂಕಣಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹಿನ್ನೆಲೆ ಮತ್ತು ಪ್ರಸ್ತುತ ಗೊಂದಲಗಳು

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗವನ್ನು ನೇಮಿಸಿ ಸಮಗ್ರ ದತ್ತಾಂಶ ಸಂಗ್ರಹಿಸಿತ್ತು. ಅದರ ಆಧಾರದ ಮೇಲೆ ಎ, ಬಿ ಮತ್ತು ಸಿ ಗುಂಪುಗಳಿಗೆ ಕ್ರಮವಾಗಿ ಶೇ.6 , ಶೇ.6 ಮತ್ತು ಶೇ.5 ಮೀಸಲಾತಿ ಹಂಚಿಕೆ ಮಾಡಿ, ಬೆಳಗಾವಿ ಅಧಿವೇಶನದಲ್ಲಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿ ರಾಜ್ಯಪಾಲರ ಅಂಕಿತವನ್ನೂ ಪಡೆಯಲಾಗಿತ್ತು.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ಮತ್ತೊಂದು ಆದೇಶದ ಅನ್ವಯ ಒಟ್ಟು ಮೀಸಲಾತಿ ಪ್ರಮಾಣ ಶೇ. 50 ಮೀರದಂತೆ ನಿರ್ಬಂಧ ವಿಧಿಸಿರುವುದರಿಂದ ನೇಮಕಾತಿಯಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾಗಿವೆ. 2026ರ ಫೆಬ್ರವರಿ 26ರ ಸಚಿವ ಸಂಪುಟ ನಿರ್ಣಯದಂತೆ 56,342 ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಲಾಗಿದ್ದು, ಇದರಲ್ಲಿ ಶೇ. 15ರಷ್ಟು ಎಸ್‌ಸಿ ಮೀಸಲಾತಿ ಎಂದು ಉಲ್ಲೇಖಿಸಲಾಗಿದೆಯೇ ಹೊರತು, ಒಳಮೀಸಲಾತಿಯ ಉಪವರ್ಗೀಕರಣವನ್ನು ಸ್ಪಷ್ಟಪಡಿಸಿಲ್ಲ. ಇದು ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಮಾದಿಗ ಸಮುದಾಯದಲ್ಲಿ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು.

ಸರ್ಕಾರದ ಸ್ಪಷ್ಟನೆ ಮತ್ತು ಹಕ್ಕೊತ್ತಾಯ

ಈ ಗೊಂದಲಗಳಿಗೆ ತೆರೆ ಎಳೆದಿರುವ ಸಚಿವ ಮುನಿಯಪ್ಪ, "ಸರ್ಕಾರವು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುತ್ತಲೇ, ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಶೇ. 15ರಷ್ಟು ಮೀಸಲಾತಿಯನ್ನು ಎ, ಬಿ, ಸಿ ಗುಂಪುಗಳಿಗೆ ವರ್ಗೀಕರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಶೋಷಿತ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಹೀಗಾಗಿ ಸಮುದಾಯದವರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಶಾಂತಿಯಿಂದ ಇರಬೇಕು" ಎಂದು ಮನವಿ ಮಾಡಿದ್ದಾರೆ.

ಇದರ ಜೊತೆಗೆ ಮಾದಿಗ ಸಮುದಾಯದ ಮುಖಂಡರು ಮತ್ತು ಜನಪ್ರತಿನಿಧಿಗಳು ಪ್ರಮುಖವಾಗಿ 4 ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

- 56,342 ಹುದ್ದೆಗಳ ಭರ್ತಿಯಲ್ಲಿ ಶೇ. 15ರಷ್ಟು ಒಳಮೀಸಲಾತಿಯನ್ನು ಎ, ಬಿ, ಸಿ ವರ್ಗೀಕರಣದಂತೆ ಸ್ಪಷ್ಟವಾಗಿ ಅನ್ವಯಿಸಬೇಕು.

- ಉಪವರ್ಗೀಕರಣವನ್ನು ಜಾರಿಗೊಳಿಸಿ, ಪರಿಷ್ಕೃತ ರೋಸ್ಟರ್ ಪ್ರಕಟಿಸಬೇಕು.

- ನಾಗಮೋಹನ್ ದಾಸ್ ವರದಿಯ ಆಧಾರದ ಮೇಲೆ ಉಪಗುಂಪುಗಳವಾರು ಹಂಚಿಕೆ ಮಾಡಿ ನೇಮಕಾತಿ ಕೈಗೊಳ್ಳಬೇಕು.

- ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು ಶೇ. 2ರಷ್ಟು ಎಸ್‌ಸಿ ಮತ್ತು ಶೇ. 4ರಷ್ಟು ಎಸ್‌ಟಿ ಹುದ್ದೆಗಳನ್ನು ಪ್ರತ್ಯೇಕವಾಗಿ ಪರಿಗಣಿಸುವ ಕುರಿತು ಸ್ಪಷ್ಟ ನಿರ್ದೇಶನ ನೀಡಬೇಕು.

ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಕೆ.ಹೆಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪೂರ್ ಅವರೊಂದಿಗೆ ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದರಾದ ಎಲ್. ಹನುಮಂತಯ್ಯ, ಬಿ.ಎನ್. ಚಂದ್ರಪ್ಪ ಹಾಗೂ ಶಾಸಕರಾದ ರೂಪಕಲಾ, ಎನ್. ಶ್ರೀನಿವಾಸ್, ಬಸವಂತಪ್ಪ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Read More
Next Story