Reservation Row|ಕಾಂಗ್ರೆಸ್‌ ವಿರುದ್ಧ ತಿರುಗಿಬಿದ್ದ ಎಡಗೈ ಸಮುದಾಯ;  ಮಾ.11ಕ್ಕೆ ಬೃಹತ್ ಪ್ರತಿಭಟನೆಗೆ ಸಜ್ಜು
x
ತುಮಕೂರಿನಲ್ಲಿ ದಲಿತ ಮುಖಂಡರು ಸಭೆ ನಡೆಸಿದರು

Reservation Row|ಕಾಂಗ್ರೆಸ್‌ ವಿರುದ್ಧ ತಿರುಗಿಬಿದ್ದ 'ಎಡಗೈ' ಸಮುದಾಯ; ಮಾ.11ಕ್ಕೆ ಬೃಹತ್ ಪ್ರತಿಭಟನೆಗೆ ಸಜ್ಜು

ಹೈಕೋರ್ಟ್ ನಲ್ಲಿ ಶೇ. 50ರ ಮೀಸಲಾತಿಯಲ್ಲಿ ನೇಮಕಾತಿ ಮಾಡಲು ಸರ್ಕಾರವೇ ಮನವಿ ಮಾಡಿದೆ. ಇಂದು ಪರಿಶಿಷ್ಟರಿಗೆ ಮಾಡಿರುವ ಆತ್ಮದ್ರೋಹದ ಕೆಲಸ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.


Click the Play button to hear this message in audio format

ಹಳೆಯ ಮೀಸಲಾತಿಯಲ್ಲೇ (ಶೇ 50) 56 ಸಾವಿರ ಉದ್ಯೋಗಗಳ ನೇಮಕಾತಿ ಕೈಗೆತ್ತಿಕೊಳ್ಳಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷದ ದಲಿತ ನಾಯಕರು ಹಾಗೂ ಹೋರಾಟಗಾರರು ತಿರುಗಿಬಿದ್ದಿದ್ದಾರೆ.

ಸತತ ಮೂರೂವರೆ ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆಸಿದ ಎಡಗೈ ಸಮುದಾಯವನ್ನು ವಂಚಿಸಲು ಸರ್ಕಾರವೇ ಪ್ರಜ್ಞಾಪೂರ್ವಕವಾಗಿ ಮೀಸಲಾತಿ ಗೊಂದಲ ಸೃಷ್ಟಿಸಿದೆ ಎಂದು ಆರೋಪಿಸಿರುವ ಮುಖಂಡರು, ಮಾ.11ಕ್ಕೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.

ತುಮಕೂರಿನಲ್ಲಿ ನಡೆದ ಚಿತ್ರದುರ್ಗ,ಬಳ್ಳಾರಿ, ರಾಯಚೂರು, ದಾವಣಗೆರೆ, ತುಮಕೂರು ಜಿಲ್ಲೆಯ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಪಕ್ಷಾತೀತವಾಗಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್‌ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ. ಅಲ್ಲದೇ, ಬಲಗೈ ಸಮುದಾಯದ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಸರ್ಕಾರಕ್ಕೆ ರಾಜಕೀಯವಾಗಿಯೂ ಬುದ್ದಿ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತವರು ಜಿಲ್ಲೆಯಲ್ಲೇ ಎಡಗೈ ಸಮುದಾಯದವರ ಹೋರಾಟ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಒಳಮೀಸಲಾತಿ ಹೋರಾಟ ಸಮಿತಿಯ ಮುಖಂಡ ಬಸವರಾಜ ಕೌತಾಳ್ ಮಾತನಾಡಿ, ಸರ್ಕಾರ ಪ್ರಾಮಾಣಿಕವಾಗಿ ಒಳಮೀಸಲಾತಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಸರ್ಕಾರ ಶಾಶ್ವತ ಪರಿಹಾರ ಹುಡುಕುವ ಕೆಲಸ ಮಾಡುತ್ತಿಲ್ಲ, ಒಳಮೀಸಲಾತಿ ಬದಿಗಿಟ್ಟು ನೇಮಕಾತಿ ಮಾಡಲ್ಲ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರು ನಂತರದ ದಿನಗಳಲ್ಲಿ ಕೈತೊಳೆದುಕೊಂಡಿರುವ ಉದಾಹರಣೆಗಳಿವೆ. ಈಗ ಮೀಸಲಾತಿ ಕಡಿತಗೊಳಿಸಿ ನೇಮಕಾತಿಗೆ ಮುಂದಾಗಿದ್ದು, ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಒಳ ಮೀಸಲಾತಿ ಹೊರತುಪಡಿಸಿ 56 ಸಾವಿರ ಹುದ್ದೆಗಳ ನೇಮಕಾತಿಗೆ ಹೊರಟಿರುವ ಸರ್ಕಾರವು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಇದರಿಂದ ಮಾದಿಗ ಸಮುದಾಯಕ್ಕೆ 3500 ಉದ್ಯೋಗಗಳು ನಷ್ಟವಾಗಲಿದೆ ಎಂದರು.

ಒಳಮೀಸಲಾತಿಗಾಗಿಯೇ ಹೋರಾಟ

ನಮ್ಮ ಹೋರಾಟ ಒಳ ಮೀಸಲಾತಿಗಾಗಿಯೇ ಹೊರತು ನೇಮಕಾತಿಗಲ್ಲ, ಒಳ ಮೀಸಲಾತಿ ಅನ್ವಯಿಸಿಯೇ ನೇಮಕಾತಿ ಆಗಬೇಕು. ಸರ್ಕಾರ ತೆಗೆದುಕೊಂಡಿರುವ ತೀರ್ಮಾನದ ವಿರುದ್ಧ ಸಹಿ ಸಂಗ್ರಹ ಆಂದೋಲನ ಆರಂಭಿಸಬೇಕು. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಪಂಗಡಗಳಿಗೂ ಬಹುದೊಡ್ಡ ಅನ್ಯಾಯ ಮಾಡಿದ್ದು, ಮೀಸಲಾತಿಯನ್ನು ಮತ್ತೆ ಶೇ.7ರಿಂದ 3ಕ್ಕೆ ಇಳಿಸಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ ಎಂದು ಬಸವರಾಜ ಕೌತಾಳ್‌ ಹೇಳಿದರು.

ಚಿಂತಕ ದೊರೈರಾಜು ಮಾತನಾಡಿ, ಒಳ ಮೀಸಲಾತಿಯು ಸಮಾಜದ ಕುತ್ತಿಗೆಗೆ ಬಂದಿದೆ. ಸರ್ಕಾರ ಕಾನೂನು ಮೂಲಕವೇ ಮಹಾಮೋಸ ಮಾಡಿದೆ. ಇಂದಿರಾ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ವಿಶೇಷ ಪ್ರಕರಣ ಅಥವಾ ಸಂದರ್ಭದಲ್ಲಿ ಮೀಸಲಾತಿ ಪ್ರಮಾಣ ಶೇ.50 ಮೀರಲು ಅವಕಾಶವಿದೆ. ಆದರೆ, ಒಳ ಮೀಸಲಾತಿ ನೀಡಲು ಮನಸ್ಸಿಲ್ಲದ ಕಳ್ಳರು, ಮೋಸಗಾರರು ಸಮುದಾಯವನ್ನು ಗಿಲ್ಕಿ ಆಡಿಸಿದಂತೆ ಆಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ನ್ಯಾಯಾಲಯದಲ್ಲಿರುವ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಕಾಲತ್ತು ಹಾಕುವ ಜವಾಬ್ದಾರಿ ಯಾರದ್ದು, ಒಳ ಮೀಸಲಾತಿ ವಿರೋಧಿಗಳು ಸಾರ್ವಜನಿಕರನ್ನು ಎತ್ತಿಟ್ಟು ಹಳೆಯ ಮೀಸಲಾತಿ ಜಾರಿಗೆ ತರುವ ಮಾತನಾಡಿದ್ದಾರೆ. ಅದರಲ್ಲಿ ಒಳ ಮೀಸಲಾತಿ ಇರುತ್ತದೆ ಎನ್ನುವ ನಂಬಿಕೆ ನಮಗಿಲ್ಲ, ಸರ್ಕಾರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ. ಉದ್ಯೋಗ ಭರ್ತಿಗೆ ನಮ್ಮ ವಿರೋಧವಿಲ್ಲ, ಆದರೆ ಒಳ ಮೀಸಲಾತಿ ನೀಡದೇ ನಮ್ಮ ಪಾಲು ನಮಗೆ ನೀಡದೇ ಭರ್ತಿ ಮಾಡುವುದಕ್ಕೆ ವಿರೋಧವಿದೆ ಎಂದರು.

ಒಳ ಮೀಸಲಾತಿಗೆ ಒಂದು ತಲೆಮಾರು, ಉದ್ಯೋಗಕ್ಕಾಗಿ ಇನ್ನೊಂದು ತಲೆಮಾರು ಹೋರಾಟ ಮಾಡಬೇಕೆ? ಶೀಘ್ರ ನೇಮಕಾತಿ ಮಾಡಬೇಕಿರುವುದು ತುರ್ತು, ಒಳ ಮೀಸಲಾತಿ ನಮ್ಮ ಅಗತ್ಯ, ಒಳ ಮೀಸಲಾತಿಗೆ ಇರುವ ಕಾನೂನು ಅಡಚಣೆಗಳ ಬಗ್ಗೆ ಶೀಘ್ರ ತೀರ್ಮಾನ ಕೈಗೊಂಡು ಪರಿಹರಿಸುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.

ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ ಅವಕಾಶವಂಚಿತ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕೆಂಬ ಕಳಕಳಿ ಯಾವ ಪಕ್ಷಕ್ಕೂ ಇಲ್ಲದಂತಾಗಿದೆ. 30 ವರ್ಷಗಳ ಹೋರಾಟಕ್ಕೆ ಅಂತಿಮ ರೂಪವನ್ನು ನೀಡಬೇಕಾದ ಸಮಯ ಬಂದಿದೆ ಎಂದರು.

ಒಳಮೀಸಲಾತಿ ವಿಚಾರವಾಗಿ ಯಾವುದೇ ಭಿನ್ನಾಭಿಪ್ರಾಯ ಇದ್ದರು ಸಹ ಪಕ್ಷಾತೀತವಾಗಿ ಎಲ್ಲ ಮುಖಂಡರು ಒಂದಾಗಿ ಸಮುದಾಯದ ಹಿತಕ್ಕಾಗಿ ಹೋರಾಟ ಮಾಡಬೇಕಾಗಿದೆ. ಹೈಕೋರ್ಟ್ ನಲ್ಲಿ ಶೇ. 50ರ ಮೀಸಲಾತಿಯಲ್ಲಿ ನೇಮಕಾತಿ ಮಾಡಲು ಸರ್ಕಾರವೇ ಮನವಿ ಮಾಡಿದೆ. ಇಂದು ಪರಿಶಿಷ್ಟರಿಗೆ ಮಾಡಿರುವ ಆತ್ಮದ್ರೋಹದ ಕೆಲಸ ಎಂದರು.

ವಕೀಲರಾದ ಪಾವಗಡ ಶ್ರೀರಾಮ್ ಮಾತನಾಡಿ, ಒಳ ಮೀಸಲಾತಿ ಇಲ್ಲದ ನೇಮಕಾತಿ ಸಮಾಜಕ್ಕೆ ತುಂಬಲಾರದ ನಷ್ಟ, ಒಳ ಮೀಸಲಾತಿಗೆ ಒಳಪೆಟ್ಟುಗಳು ಸಾಕಷ್ಟಿವೆ. ಒಳಪೆಟ್ಟು ತಪ್ಪಿಸಿಕೊಳ್ಳದೇ ಹೋದರೆ ಒಳ ಮೀಸಲಾತಿ ಜಾರಿಯಾಗುವುದಿಲ್ಲ, ಬಜೆಟ್ ಅಧಿವೇಶನಕ್ಕೆ ಮುಂಚೆ ಸಮುದಾಯದ ಶಕ್ತಿ ಪ್ರದರ್ಶನವಾಗಬೇಕೆಂದು ಸಲಹೆ ನೀಡಿದರು.

ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ ಒಳ ಮೀಸಲಾತಿಯನ್ನು ಸದನದಲ್ಲಿ ಜಾರಿಗೊಳಿಸಿ, ರಾಜ್ಯಪಾಲರಿಗೆ ಕಳುಹಿಸಿ ಈಗ ಮೀಸಲಾತಿ ಕಸಿಯುತ್ತಿರುವುದು ಸರ್ಕಾರದ ಗೊಂದಲವೇ ಕಾರಣ. ಮಾದಿಗ ಮತ್ತು ಅಲೆಮಾರಿ ಸಮುದಾಯಗಳ ವಿರುದ್ಧ ಎಲ್ಲ ಸಮುದಾಯಗಳು ಒಗ್ಗಟ್ಟಾಗಿವೆ, ಇದರ ವಿರುದ್ಧ ಅಂತಿಮ ಹೋರಾಟಕ್ಕೆ ಮುಂದಾಗಬೇಕಿದೆ ಎಂದರು.

2018ರಲ್ಲಿ ಕಾಂಗ್ರೆಸ್ ಸೋಲಿಗೆ ಸದಾಶಿವ ಆಯೋಗ ಜಾರಿ ಮಾಡದೇ ಇರುವುದೇ ಕಾರಣ, ಒಳ ಮೀಸಲಾತಿ ಜಾರಿಗೊಳಿಸದೇ ಹೋದಲ್ಲಿ 2028ಕ್ಕೆ ಕಾಂಗ್ರೆಸ್ ಸೋಲಿಗೆ ನಾವೆಲ್ಲ ಕಾರಣವಾಗಬೇಕಾಗುತ್ತದೆ. ತುಮಕೂರು ಜಿಲ್ಲೆಯಿಂದಲೇ ಕಾಂಗ್ರೆಸ್ ಸೋಲಿಸುವ ಹೋರಾಟಕ್ಕೆ ಚಾಲನೆ ನೀಡಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ದಲಿತ ಮುಖಂಡರಾದ ನರಸೀಯಪ್ಪ,ಶಿವನಂಜಪ್ಪ, ನರಸಿಂಹಯ್ಯ, ಜಯಮೂರ್ತಿ, ಡಾ.ಲಕ್ಷ್ಮೀಕಾಂತ್, ನೀಲಕುಮಾರಗುಡಿಮನಿ, ಡಿ.ಟಿ.ವೆಂಕಟೇಶ್, ಕೊಟ್ಟಶಂಕರ್, ಶಿವರಾಂ, ರಾಜು, ಎಂ.ಸಿ.ನರಸಿಂಹಮೂರ್ತಿ, ದಂಡಿನಶಿವರ ಕುಮಾರ್, ತಿಪಟೂರು ಕೃಷ್ಣ ಸೇರಿದಂತೆ ಇತರರಿದ್ದರು.

Read More
Next Story