
Karnataka Budget 2026 : ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಲಾದ ಹೊಸ ಯೋಜನೆಗಳ ವಿವರಣೆ ಇಲ್ಲಿದೆ
ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಶಿಕ್ಷಣ ಹಾಗೂ ಮೂಲಸೌಕರ್ಯ ವಲಯಗಳಲ್ಲಿ ಸಂಪೂರ್ಣ ಹೊಸ ಕಾನ್ಸೆಪ್ಟ್‌ನೊಂದಿಗೆ ರೂಪಿಸಲಾಗಿರುವ ಕಾರ್ಯಕ್ರಮಗಳು ಈ ಬಾರಿಯ ಬಜೆಟ್‌ನ ಪ್ರಮುಖ ಆಕರ್ಷಣೆಯಾಗಿವೆ.
ಮುಖ್ಯಮಂತ್ರಿಗಳು ಮಂಡಿಸಿರುವ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಎಲ್ಲ ವರ್ಗದ ಜನರನ್ನು ತಲುಪುವ ನಿಟ್ಟಿನಲ್ಲಿ ಹಲವು ವಿನೂತನ ಯೋಜನೆಗಳನ್ನು ಘೋಷಿಸಲಾಗಿದೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಶಿಕ್ಷಣ ಹಾಗೂ ಮೂಲಸೌಕರ್ಯ ವಲಯಗಳಲ್ಲಿ ಸಂಪೂರ್ಣ ಹೊಸ ಕಾನ್ಸೆಪ್ಟ್‌ನೊಂದಿಗೆ ರೂಪಿಸಲಾಗಿರುವ ಕಾರ್ಯಕ್ರಮಗಳು ಈ ಬಾರಿಯ ಬಜೆಟ್‌ನ ಪ್ರಮುಖ ಆಕರ್ಷಣೆಯಾಗಿವೆ. ವಿಶೇಷವಾಗಿ ರೈತರು ಮತ್ತು ಜನಸಾಮಾನ್ಯರ ದೈನಂದಿನ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಹೆಜ್ಜೆಗಳನ್ನಿಟ್ಟಿದೆ.
'* ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ: ಉತ್ಪಾದನೋತ್ತರ ಕೃಷಿ ಚಟುವಟಿಕೆಗಳ (ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಸಂಪರ್ಕ) ಅಭಿವೃದ್ಧಿಗಾಗಿ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಹೊಸ ಯೋಜನೆ.
* ವಸುಧಾಮೃತ ಕಾರ್ಯಕ್ರಮ: ಮಣ್ಣಿನ ಸಾವಯವ ಇಂಗಾಲ ಹಾಗೂ ಗುಣಮಟ್ಟವನ್ನು ಹೆಚ್ಚಿಸಲು ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಹೊಸ ಕಾರ್ಯಕ್ರಮ.
* ಸಸ್ಯ ಸಂಜೀವಿನಿ ಯೋಜನೆ: ಬೆಳೆಗಳಲ್ಲಿ ಕೀಟ ಹಾಗೂ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ, ಜೈವಿಕ ಕೀಟನಾಶಕಗಳ ಮೂಲಕ ನಿರ್ವಹಣಾ ಕ್ರಮಗಳನ್ನು ಒದಗಿಸುವ ಯೋಜನೆ.
* ರೈತ ಮಾಲ್‌ಗಳ ಸ್ಥಾಪನೆ: ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಎಂಎಸ್‌ಐಎಲ್ (MSIL) ವತಿಯಿಂದ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಮತ್ತು ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ಒದಗಿಸಲು ಹೊಸ ರೈತ ಮಾಲ್‌ಗಳ ಸ್ಥಾಪನೆ.
* ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರ: ಬೆಂಗಳೂರು ಹಾಗೂ ಬೀದರ್‌ನಲ್ಲಿ ಪಶುವೈದ್ಯರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಹೊಸ ಕೇಂದ್ರ ಸ್ಥಾಪನೆ.
* ಜಾನುವಾರುಗಳ ಸಿ.ಟಿ. ಸ್ಕ್ಯಾನಿಂಗ್ ಕೇಂದ್ರಗಳು: ರಾಜ್ಯದಲ್ಲಿ ಪ್ರಪ್ರಥಮವಾಗಿ ಬೆಂಗಳೂರು ಮತ್ತು ಬೀದರ್‌ನ ಪಶು ಆಸ್ಪತ್ರೆಗಳಲ್ಲಿ ಹೊಸ ಸಿ.ಟಿ. ಸ್ಕ್ಯಾನ್ ಕೇಂದ್ರಗಳ ಸ್ಥಾಪನೆ.
* ಫಲಧಾರೆ ಶಿಬಿರಗಳು: ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆ ನಿವಾರಿಸಲು 'ವರ್ಷಕ್ಕೊಂದು ಕರು' ಎಂಬ ಘೋಷವಾಕ್ಯದೊಂದಿಗೆ 1,000 ಗ್ರಾಮ ಪಂಚಾಯಿತಿಗಳಲ್ಲಿ 5 ಕೋಟಿ ರೂ. ವೆಚ್ಚದ ಹೊಸ ಶಿಬಿರಗಳು.
ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ
* ಹೊಸ ಶಿಶುಪಾಲನಾ ಕೇಂದ್ರಗಳು: 2026-27ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿಯಾಗಿ 20 ಹೊಸ ಶಿಶುಪಾಲನಾ ಕೇಂದ್ರಗಳ ಸ್ಥಾಪನೆ.
* ಸಂತ ಶಿಶುನಾಳ ಶರೀಫರ ವಸತಿ ಶಾಲೆಗಳು: ಅಲ್ಪಸಂಖ್ಯಾತರಿಗಾಗಿ 10 ಹೊಸ ವಸತಿ ಶಾಲೆಗಳನ್ನು ಸಿಬಿಎಸ್‌ಇ (CBSE) ಪಠ್ಯಕ್ರಮದಡಿ 10 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು. 2026-27ನೇ ಸಾಲಿನಲ್ಲಿ ಇಂಥದ್ದೇ 25 ಹೊಸ ಶಾಲೆಗಳ ಆರಂಭ.
* ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರ: 18 ವರ್ಷದೊಳಗಿನ ಮಕ್ಕಳಿಗಾಗಿ ನಿಮ್ಹಾನ್ಸ್ ಹಾಗೂ ಡಿಮ್ಹಾನ್ಸ್ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಹೊಸ ಪುನರ್ವಸತಿ ಕೇಂದ್ರಗಳ ಪ್ರಾರಂಭ.
ಮೂಲಸೌಕರ್ಯ ಮತ್ತು ಇತರೆ ಕ್ಷೇತ್ರಗಳು
* ಹೊಸ ಪೊಲೀಸ್ ಠಾಣೆಗಳು (ಅನುಬಂಧದ ಆಧಾರದಲ್ಲಿ): ರಾಜ್ಯಾದ್ಯಂತ ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಸೇರಿದಂತೆ 12 ಹೊಸ ಪೊಲೀಸ್ ಠಾಣೆಗಳ (ಸಂಚಾರ ಮತ್ತು ಕಾನೂನು-ಸುವ್ಯವಸ್ಥೆ) ಸ್ಥಾಪನೆಗೆ ಗ್ರೀನ್ ಸಿಗ್ನಲ್.
* ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಪ್ರಸ್ತಾವನೆ: ಪ್ರತಿ ಜಿಲ್ಲೆಯಲ್ಲೂ ಹೊಸ 'ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್' (DCC Bank) ಸ್ಥಾಪಿಸಲು ನಬಾರ್ಡ್ ಸಲಹೆಯಂತೆ ಆರ್‌ಬಿಐಗೆ ಹೊಸ ಪ್ರಸ್ತಾವನೆ ಸಲ್ಲಿಕೆ.
* ಕೆ.ಹೆಚ್.ಬಿ ಸೂರ್ಯ ಕ್ರೀಡಾ ಗ್ರಾಮ: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ 80,000 ಆಸನ ಸಾಮರ್ಥ್ಯದ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ.
* ಇಂದಿರಾ ಆಹಾರ ಕಿಟ್: ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ನೀಡಲಾಗುತ್ತಿರುವ 5 ಕೆ.ಜಿ ಹೆಚ್ಚುವರಿ ಅಕ್ಕಿಯ ಬದಲಾಗಿ, ಹೊಸದಾಗಿ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಒಳಗೊಂಡ ಕಿಟ್ ವಿತರಣೆ (6,200 ಕೋಟಿ ರೂ. ಮೀಸಲು).
* ಹೊಸ ಮತ್ಸ್ಯದರ್ಶಿನಿಗಳು ಮತ್ತು ಮೀನು ಮಾರುಕಟ್ಟೆಗಳು: ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಮತ್ಸ್ಯದರ್ಶಿನಿ ಕೇಂದ್ರಗಳ ಸ್ಥಾಪನೆ.

