Karnataka Budget 2026: Rs 30,000 crore zero interest loan for farmers
x

ಸಾಂದರ್ಭಿಕ ಚಿತ್ರ

Karnataka Budget 2026 : ರೈತರಿಗೆ 30,000 ಕೋಟಿ ರೂ. ಶೂನ್ಯ ಬಡ್ಡಿ ಸಾಲ

ರಾಜ್ಯದ ಅನ್ನದಾತರಿಗೆ ಆರ್ಥಿಕ ನೆರವು ನೀಡುವ ಮಹದುದ್ದೇಶದಿಂದ 2026-27ನೇ ಸಾಲಿನಲ್ಲಿ ಒಟ್ಟು 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬರೋಬ್ಬರಿ 30,000 ಕೋಟಿ ರೂ. ಕೃಷಿ ಸಾಲ ವಿತರಿಸುವ ಬೃಹತ್ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.


Click the Play button to hear this message in audio format

ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸಹಕಾರ ಇಲಾಖೆಯ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ವಿತರಣೆಯ ಗುರಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಜೊತೆಗೆ, ಕೃಷಿ ಮಾರುಕಟ್ಟೆಗಳ ಸಂಪೂರ್ಣ ಗಣಕೀಕರಣ ಹಾಗೂ ಜಿಲ್ಲಾ ಮಟ್ಟದಲ್ಲಿ ಸಹಕಾರ ಬ್ಯಾಂಕ್‌ಗಳ ಜಾಲವನ್ನು ವಿಸ್ತರಿಸುವ ಕುರಿತಾದ ಮಹತ್ವದ ಘೋಷಣೆಗಳನ್ನು ಸರ್ಕಾರ ಮಾಡಿದೆ.

ರಾಜ್ಯದ ಅನ್ನದಾತರಿಗೆ ಆರ್ಥಿಕ ನೆರವು ನೀಡುವ ಮಹದುದ್ದೇಶದಿಂದ 2026-27ನೇ ಸಾಲಿನಲ್ಲಿ ಒಟ್ಟು 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬರೋಬ್ಬರಿ 30,000 ಕೋಟಿ ರೂ. ಕೃಷಿ ಸಾಲ ವಿತರಿಸುವ ಬೃಹತ್ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಕಳೆದ ವರ್ಷ ನಿಗದಿಪಡಿಸಿದ್ದ 28,000 ಕೋಟಿ ರೂ. ಗುರಿಯ ಪೈಕಿ ಫೆಬ್ರವರಿ ಅಂತ್ಯದವರೆಗೆ 25 ಲಕ್ಷ ರೈತರಿಗೆ 22,000 ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ. ಇದರ ಜೊತೆಗೆ, ರಾಜ್ಯದಲ್ಲಿ ಮೆಕ್ಕೆಜೋಳದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಬೆಳೆಗಾರರ ಹಿತ ಕಾಯಲು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಂಬಲ ಬೆಲೆಗೆ ಮೆಕ್ಕೆಜೋಳ ಖರೀದಿಸಲು ಸರ್ಕಾರ 100 ಕೋಟಿ ರೂ.ಗಳ ಆರ್ಥಿಕ ನೆರವು ಒದಗಿಸುವ ಮೂಲಕ ರೈತರ ಕೈಹಿಡಿದಿದೆ.

ಪ್ರತಿ ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್ ಹಾಗೂ ಯಶಸ್ವಿನಿ ಯೋಜನೆ

ಸಹಕಾರ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಹಾಗೂ ರೈತರಿಗೆ ಸ್ಥಳೀಯವಾಗಿ ಸಾಲ ಸೌಲಭ್ಯ ಒದಗಿಸಲು ನಬಾರ್ಡ್ ಸಂಸ್ಥೆಯ ಸಲಹೆಯಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ 'ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್' (ಡಿಸಿಸಿ ಬ್ಯಾಂಕ್) ಸ್ಥಾಪಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಅಧಿಕೃತ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ. ಮತ್ತೊಂದೆಡೆ, ರೈತರ ಜೀವನಾಡಿಯಾಗಿರುವ ಜನಪ್ರಿಯ 'ಯಶಸ್ವಿನಿ' ಆರೋಗ್ಯ ವಿಮಾ ಯೋಜನೆಯು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ 870 ನೆಟ್‌ವರ್ಕ್ ಆಸ್ಪತ್ರೆಗಳ ಮೂಲಕ 86,253 ಫಲಾನುಭವಿಗಳಿಗೆ 163 ಕೋಟಿ ರೂ. ವೆಚ್ಚದಲ್ಲಿ ಉಚಿತ ಚಿಕಿತ್ಸೆ ಒದಗಿಸುವ ಮೂಲಕ ರೈತರ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆ.

ಎಪಿಎಂಸಿ ಮತ್ತು ಕೃಷಿ ಪತ್ತಿನ ಸಂಘಗಳ ಡಿಜಿಟಲೀಕರಣ

ತಂತ್ರಜ್ಞಾನದ ಬಳಕೆಯೊಂದಿಗೆ ಆಡಳಿತದಲ್ಲಿ ಪಾರದರ್ಶಕತೆ ತರಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಕಾರ್ಯಚಟುವಟಿಕೆಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಇಆರ್‌ಪಿ (ERP) ವ್ಯವಸ್ಥೆಯ ಮೂಲಕ ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈಗಾಗಲೇ 3,863 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACS) ಆನ್‌ಲೈನ್ ಸೇವೆ ಆರಂಭಿಸಿದ್ದು, ಉಳಿದ 1,628 ಸಂಘಗಳನ್ನು ಈ ವರ್ಷ ಸಂಪೂರ್ಣ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದೆ. ಜೊತೆಗೆ, ಕರ್ನಾಟಕ ರಾಜ್ಯ ಉಗ್ರಾಣ ನಿಗಮವನ್ನು ಆರ್ಥಿಕವಾಗಿ ಸದೃಢಗೊಳಿಸಲು ಅದರ ಅನುಪಯುಕ್ತ ಆಸ್ತಿಗಳನ್ನು ಬಳಸಿಕೊಂಡು ಮೈಸೂರಿನ ಬಂಬೂ ಬಜಾರ್ ಹಾಗೂ ಹುಬ್ಬಳ್ಳಿಯ ಕಾಟನ್ ಮಾರ್ಕೆಟ್‌ನಲ್ಲಿ ಪಿಪಿಪಿ ಮಾದರಿಯಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

Read More
Next Story