Karnataka Budget 2026|ರಾಮನಗರ, ಶಿಡ್ಲಘಟ್ಟದಲ್ಲಿ ಸಿಲ್ಕ್‌ ಪಾರ್ಕ್‌; ರೇಷ್ಮೆ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್‌
x
ಸಿಎಂ ಸಿದ್ಧರಾಮಯ್ಯ

Karnataka Budget 2026|ರಾಮನಗರ, ಶಿಡ್ಲಘಟ್ಟದಲ್ಲಿ ಸಿಲ್ಕ್‌ ಪಾರ್ಕ್‌; ರೇಷ್ಮೆ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್‌

ಸಿಎಂ ಸಿದ್ದರಾಮಯ್ಯ ಅವರಿಂದ ದಾಖಲೆಯ 17ನೇ ಕರ್ನಾಟಕ ರಾಜ್ಯ ಬಜೆಟ್ 2026-27 ಮಂಡನೆ. ರಾಜ್ಯದ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಲಿರುವ ಈ ಆಯವ್ಯಯದ ಪ್ರಮುಖ ಅಂಶಗಳು ಮತ್ತು ನೇರ ಅಪ್‌ಡೇಟ್ಸ್‌ ಇಲ್ಲಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಈ ಬಾರಿಯ ಆಯವ್ಯಯ ಕೇವಲ ಅಂಕಿ-ಅಂಶಗಳ ಆಟವಲ್ಲ. ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ ಆಗಿದ್ದು, ರಾಜ್ಯದ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಲಿದೆ.

ದಾಖಲೆಯ ಸರದಾರನ ಆಯವ್ಯಯ

ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದು. ಇನ್ನು ರಾಷ್ಟ್ರಮಟ್ಟದಲ್ಲಿ ಗಮನಿಸುವುದಾದರೆ, ದೇಶದಲ್ಲೇ ಎರಡನೇ ಅತಿ ಹೆಚ್ಚು ಬಜೆಟ್ ಮಂಡಿಸಿದ ಹಣಕಾಸು ಸಚಿವರಾಗಿ ಅವರು ಗುರುತಿಸಿಕೊಂಡಿದ್ದಾರೆ. ಅನುಭವದ ಭಂಡಾರವೇ ಆಗಿರುವ ಸಿಎಂ, ಈ ಬಾರಿ ರಾಜ್ಯದ ಜನರ ನಿರೀಕ್ಷೆಗಳನ್ನು ಹೇಗೆ ಸರಿದೂಗಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Live Updates

  • 6 March 2026 10:56 AM IST

    ಸಿರಿಧಾನ್ಯ ಉತ್ಪನ್ನ ಉತ್ತೇಜನಕ್ಕಾಗಿ 100 ಕೋಟಿ ರೂ. ವೆಚ್ಚ

    ಸಿರಿಧಾನ್ಯ ಉತ್ಪನ್ನ ಉತ್ತೇಜನಕ್ಕಾಗಿ ಮಿಲೆಟ್ ಹಬ್ ನಿರ್ಮಿಸಲಾಗುತ್ತದೆ. 100 ಕೋಟಿ ರೂಪಾಯಿ ವೆಚ್ಚದಲ್ಲಿ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ ಜಾರಿ ಮಾಡಲಾಗುತ್ತದೆ. ಮಣ್ಣಿನ ಗುಣಮಟ್ಟ ಹೆಚ್ಚಿಸಲು ವಸುಧಾಮೃತ ಯೋಜನೆ ಜಾರಿ ಮಾಡಲಾಗುತ್ತದೆ. ಮುಂದಿನ ಮೂರು ವರ್ಷದಲ್ಲಿ ಸಸ್ಯ ಸಂಜೀವಿನಿ ಯೋಜನೆ ಜಾರಿ ಮಾಡಲಾಗುತ್ತದೆ. ಕೃಷಿ ಮಾಹಿತಿಗಾಗಿ ಎಐ ತಂತ್ರಜ್ಞಾನ ಆಧಾರಿತ ರೈತ ಕರೆ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಚಿತ್ರದುರ್ಗದಲ್ಲಿ ಕೃಷಿ ಉದ್ದಿಮೆ ತರಬೇತಿ ಕೇಂದ್ರ ಉನ್ನತೀಕರಣಗೊಳಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ 2026ರ ಬಜೆಟ್​​ನಲ್ಲಿ ಘೋಷಿಸಿದ್ದಾರೆ.

  • 6 March 2026 10:55 AM IST

    ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ಬೂಸ್ಟರ್: ಮೂಲಸೌಕರ್ಯಕ್ಕೆ 900 ಕೋಟಿ ರೂ. ಮೀಸಲು

    ಆರೋಗ್ಯ ಇಲಾಖೆ ಮೂಲ ಸೌಕರ್ಯ ಅಭಿವೃದ್ಧಿಗೆ 900 ಕೋಟಿ ರೂ. ಮೀಸಲಿಡಲಾಗುವುದು, ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಟ್ರಾಮಾ ಕೇರ್ ಸೆಂಟರ್ ತೆರೆಯಲಾಗುವುದು. ಐಸಿಯುಗಳಿಗೆ ಉಪಕರಣ ಮೇಲ್ದರ್ಜೆಗೇರಿಸಲು 45 ಕೋಟಿ ರೂಪಾಯಿ ಮೀಸಲಿಡಲಾಗುವುದು. ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಪೌಷ್ಟಿಕ ಪುನಶ್ಚೇತನ ಕೇಂದ್ರ ತೆರೆಯಲಾಗುವುದು. 18 ವರ್ಷದವರೆಗಿನ ಮಧುಮೇಹ ರೋಗಿಗಳಿಗೆ ಉಚಿತ ಇನ್ಸುಲಿನ್ ಪೆನ್ ನೀಡಲಾಗುವುದು. ಮಾರಣಾಂತಿಕ ಕಾಯಿಲೆ ರೋಗಿಗಳಿಗೆ ಕೇರಳ ಮಾದರಿ ಗೃಹಾಧಾರಿತ ಆರೈಕೆ ಒದಗಿಸಲಾಗುವುದು. ಇಸ್ಕಾನ್ ಮೂಲಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಹಾರ ಪೂರೈಕೆ ಮಾಡಲಾಗುವುದು. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳ ಶೀಘ್ರ ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. 

  • 6 March 2026 10:52 AM IST

    ರಾಜ್ಯ ಬಜೆಟ್ 2026: ಶಿಕ್ಷಣ ಕ್ಷೇತ್ರಕ್ಕೆ ಬಂಪರ್ ಕೊಡುಗೆ, 47 ಸಾವಿರ ಕೋಟಿ ರೂ. ಹಂಚಿಕೆ

    ಸರ್ಕಾರವು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ್ದು, ವಿವಿಧ ಕ್ಷೇತ್ರಗಳಿಗೆ ಬಂಪರ್ ಅನುದಾನವನ್ನು ಘೋಷಿಸಿದೆ. ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಇಂಧನ ಇಲಾಖೆಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಈ ಬಾರಿಯ ಬಜೆಟ್‌ನ ವಿಶೇಷತೆಯಾಗಿದೆ.

    ಬಜೆಟ್ ಹಂಚಿಕೆಯ ಸಮಗ್ರ ವರದಿ

    ರಾಜ್ಯ ಸರ್ಕಾರದ ಈ ಬಾರಿಯ ಆಯವ್ಯಯದಲ್ಲಿ ಶಿಕ್ಷಣ ಇಲಾಖೆಗೆ ಸಿಂಹಪಾಲು ದೊರೆತಿದ್ದು, ಬರೋಬ್ಬರಿ47,224 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ಧಿಗಾಗಿ 34,929ಕೋಟಿ ರೂಪಾಯಿ ಹಾಗೂ ಇಂಧನ ಇಲಾಖೆಗೆ 29,947 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ. ಗ್ರಾಮೀಣ ಭಾಗದ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ 26,559ಕೋಟಿ ರೂಪಾಯಿಗಳನ್ನು ನೀಡಲಾಗಿದ್ದರೆ, ಒಳಾಡಳಿತ ಮತ್ತು ಬಂದರು ಇಲಾಖೆಗೆ 23,100 ಕೋಟಿ ರೂಪಾಯಿ ಮೀಸಲಿಡಲಾಗಿದೆ.

    ಕೃಷಿ ಪ್ರಧಾನ ರಾಜ್ಯವಾಗಿರುವುದರಿಂದ ನೀರಾವರಿ ಕ್ಷೇತ್ರಕ್ಕೆ22,436 ಕೋಟಿ ರೂಪಾಯಿ ಹಾಗೂ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ 22,203 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಕಂದಾಯ ಇಲಾಖೆಗೆ 19,845 ಕೋಟಿ ರೂಪಾಯಿ, ಸಮಾಜ ಕಲ್ಯಾಣ ಇಲಾಖೆಗೆ 18,612 ಕೋಟಿ ರೂಪಾಯಿ ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 17,818ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ.

    ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಿಂದ ಲೋಕೋಪಯೋಗಿ ಇಲಾಖೆಗೆ 11,424ಕೋಟಿ ರೂಪಾಯಿ ನೀಡಲಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ 8,373ಕೋಟಿ ರೂಪಾಯಿ ಮೀಸಲಿಡಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 7,942 ಕೋಟಿ ರೂಪಾಯಿ ಹಾಗೂ ಪಶುಸಂಗೋಪನಾ ಇಲಾಖೆಗೆ 4,084 ಕೋಟಿ ರೂಪಾಯಿಗಳ ಅನುದಾನ ಲಭಿಸಿದೆ. ಇನ್ನುಳಿದಂತೆ ವಿವಿಧ ಆಡಳಿತಾತ್ಮಕ ಮತ್ತು ಇತರೆ ವೆಚ್ಚಗಳಿಗಾಗಿ ಒಟ್ಟು 1,72,757 ಕೋಟಿ ರೂಪಾಯಿಗಳನ್ನು ಕಲ್ಪಿಸಲಾಗಿದೆ. ಈ ಮೂಲಕ ಸರ್ಕಾರವು ಎಲ್ಲಾ ವರ್ಗಗಳ ಏಳಿಗೆಗೆ ಪೂರಕವಾದ ಸಮತೋಲಿತ ಬಜೆಟ್ ಮಂಡಿಸಿದೆ.

  • 6 March 2026 10:48 AM IST

    ವಿವಿಧ ಸಮುದಾಯಗಳ ಅಭಿವೃದ್ಧಿಗೆ ಭರಪೂರ ಕೊಡುಗೆ

    ರಾಜ್ಯ ಸರ್ಕಾರವು ಈ ಬಾರಿ ವಿವಿಧ ವರ್ಗಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು, ಸವಿತಾ ಸಮಾಜ ಹಾಗೂ ಮಡಿವಾಳ ಸಮುದಾಯದ ಆರ್ಥಿಕ ಪ್ರಗತಿಗಾಗಿ ಮಹತ್ವದ ಸಾಲ ಸೌಲಭ್ಯಗಳನ್ನು ಘೋಷಿಸಿದೆ. ಸವಿತಾ ಸಮಾಜದ ಬಂಧುಗಳು ಸುಸಜ್ಜಿತ ಸಲೂನ್‌ಗಳನ್ನು ತೆರೆಯಲು ಉತ್ತೇಜನ ನೀಡುವ ದೃಷ್ಟಿಯಿಂದ 4% ರಷ್ಟು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ, ಮಡಿವಾಳ ಸಮಾಜದವರು ಆಧುನಿಕ ತಂತ್ರಜ್ಞಾನದ ಲಾಂಡ್ರಿ ಘಟಕಗಳನ್ನು ಸ್ಥಾಪಿಸಲು ಸಹಕಾರಿಯಾಗುವಂತೆ 5 ಲಕ್ಷ ರೂಪಾಯಿಗಳ ಸಾಲವನ್ನು ಕೇವಲ 4% ಬಡ್ಡಿ ದರದಲ್ಲಿ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.

    ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿಯೂ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಬೌದ್ಧ ಧರ್ಮದ ಧಮ್ಮಾಚಾರಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಮಾಸಿಕ 6 ಸಾವಿರ ರೂಪಾಯಿಗಳ ಗೌರವಧನವನ್ನು ಘೋಷಿಸಲಾಗಿದೆ. ಇದರೊಂದಿಗೆ ಜೈನ್, ಬೌದ್ಧ ಹಾಗೂ ಸಿಖ್ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಒಟ್ಟು 100 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಮೀಸಲಿಡಲಾಗಿದೆ. ಮತ್ತೊಂದು ಪ್ರಮುಖ ಘೋಷಣೆಯಂತೆ, ಆಯ್ದ ವಕ್ಫ್ ಆಸ್ತಿಗಳನ್ನು ಸಾರ್ವಜನಿಕ ಪ್ರಯೋಜನಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಅಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲಿಕಾ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ.

  • 6 March 2026 10:45 AM IST

    ಹುಬ್ಬಳ್ಳಿ-ಧಾರವಾಡದಲ್ಲಿ ₹200 ಕೋಟಿ ವೆಚ್ಚದ ಕೌಶಲ್ಯ ತರಬೇತಿ ಅಕಾಡೆಮಿ

    ಉತ್ತರ ಕರ್ನಾಟಕದ ಶೈಕ್ಷಣಿಕ ಮತ್ತು ಕೈಗಾರಿಕಾ ಕೇಂದ್ರವಾಗಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಯುವಜನತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ನಗರದಲ್ಲಿ ಸುಮಾರು 200 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಅತ್ಯಾಧುನಿಕ 'ಕೌಶಲ್ಯ ತರಬೇತಿ ಅಕಾಡೆಮಿ'ಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಅಕಾಡೆಮಿಯು ಸ್ಥಳೀಯ ಯುವಕರಿಗೆ ಜಾಗತಿಕ ಮಟ್ಟದ ತಾಂತ್ರಿಕ ಕೌಶಲ್ಯಗಳನ್ನು ಒದಗಿಸುವ ಮೂಲಕ ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುವ ಗುರಿ ಹೊಂದಿದೆ.

    ಇದರೊಂದಿಗೆ ತಾಂತ್ರಿಕ ಶಿಕ್ಷಣಕ್ಕೆ ಮತ್ತಷ್ಟು ವೇಗ ನೀಡಲು ರಾಜ್ಯಾದ್ಯಂತ 60 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನ 10 ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳನ್ನು (GTTC) ಸ್ಥಾಪಿಸಲಾಗುತ್ತಿದೆ. ಈ ಕೇಂದ್ರಗಳು ಯುವಜನತೆಗೆ ಅಲ್ಪಾವಧಿ ಮತ್ತು ದೀರ್ಘಾವಧಿಯ ವೃತ್ತಿಪರ ಕೋರ್ಸ್‌ಗಳನ್ನು ಒದಗಿಸಲಿವೆ.’

    ಕಾರ್ಮಿಕ ವರ್ಗದ ಹಿತದೃಷ್ಟಿಯಿಂದ ಸರ್ಕಾರವು ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದು, ಶ್ರಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಜ್ಯದಲ್ಲಿ ಹೊಸದಾಗಿ 62 ವಸತಿ ಶ್ರಮಿಕ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ಒಟ್ಟು 104 ವಸತಿ ಶಾಲೆಗಳನ್ನು ಶೀಘ್ರವಾಗಿ ಆರಂಭಿಸಲು ಆದ್ಯತೆ ನೀಡಲಾಗುತ್ತಿದ್ದು, ಇದು ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸುಸಜ್ಜಿತ ವಸತಿ ಸೌಲಭ್ಯವನ್ನು ಖಚಿತಪಡಿಸಲಿದೆ.

  • 6 March 2026 10:40 AM IST

    ರಾಜ್ಯ ಸರ್ಕಾರದ ಸಾಲ 8.24 ಲಕ್ಷ ಕೋಟಿ ರೂ. ಸಾಲ

    ಕರ್ನಾಟಕದ ಒಟ್ಟು ಸಾಲ 8,24,389 ಕೋಟಿ ರೂ. ಇದೆ, ಗಣಿಗಾರಿಕೆಯಿಂದ 11,000 ಕೋಟಿ ರೂಪಾಯಿ ಶುಲ್ಕ ಅಂದಾಜು ಬರಬಹುದೆಂದು ಅಂದಾಜಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

  • 6 March 2026 10:40 AM IST

    ಮುಳ್ಳಯ್ಯನಗರಿಗೆ ಹೈಟೆಕ್ ಸ್ಪರ್ಶ: ಸೀತಾಳಯ್ಯನಗರಿಯಿಂದ ಕೈಮರದವರೆಗೆ ರೋಪ್‌ ವೇ

    ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗರಿ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಹೊಸ ವೇಗ ನೀಡಲು ಸರ್ಕಾರ ನಿರ್ಧರಿಸಿದೆ. ಸೀತಾಳಯ್ಯನಗರಿಯಿಂದ ಕೈಮರದವರೆಗೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (PPP ಮಾದರಿ) ಅತ್ಯಾಧುನಿಕ ರೋಪ್‌ ವೇ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. 

    ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ

    ರಾಜ್ಯದ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ರೋಪ್‌ ವೇ ನಿರ್ಮಿಸುವ ಯೋಜನೆಯ ಭಾಗವಾಗಿ ಮುಳ್ಳಯ್ಯನಗರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಖಾಸಗಿ ಹೂಡಿಕೆದಾರರ ಸಹಕಾರದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಇದು ಸ್ಥಳೀಯ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಜೊತೆಗೆ ಗಿರಿ ಪ್ರದೇಶದಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

  • 6 March 2026 10:39 AM IST

    ದಲಿತ ಕವಿ ಸಿದ್ದಲಿಂಗಯ್ಯ ಮತ್ತು ಡಾ. ಆರ್‌. ನಾಗರಾಜ್‌ ಹೆಸರಲ್ಲಿ ಟ್ರಸ್ಟ್ ಘೋಷಣೆ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ನಾಡಿನ ಖ್ಯಾತ ದಲಿತ ಕವಿ ಡಾ. ಸಿದ್ದಲಿಂಗಯ್ಯ ಹಾಗೂ ಪ್ರಸಿದ್ಧ ವಿಮರ್ಶಕ ಡಾ. ಆರ್. ನಾಗರಾಜ್ ಅವರ ಸ್ಮರಣಾರ್ಥವಾಗಿ ಪ್ರತ್ಯೇಕ ಟ್ರಸ್ಟ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಗೌರವ ಸಲ್ಲಿಸಿದ್ದಾರೆ.



  • 6 March 2026 10:34 AM IST

    ಕುವೆಂಪು ವಿವಿಯಲ್ಲಿ ಯು.ಆರ್‌. ಅನಂತಮೂರ್ತಿ ಅಧ್ಯಯನ ಪೀಠ ಸ್ಥಾಪನೆ

    ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಜ್ಙಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್‌. ಅನಂತಮೂರ್ತಿ ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ತಿಳಿಸಿದ್ದಾರೆ. 

     

  • 6 March 2026 10:32 AM IST

    50ಕ್ಕೂ ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್

    ಕರ್ನಾಟಕದ 50ಕ್ಕೂ ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್ ಘೋಷಿಸುವುದಾಗಿ ಸಿ.ಎಂ ಸಿದ್ದರಾಮಯ್ಯ ಅವರು ಈ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. 

Read More
Next Story