Karnataka Budget 2026|ರಾಮನಗರ, ಶಿಡ್ಲಘಟ್ಟದಲ್ಲಿ ಸಿಲ್ಕ್‌ ಪಾರ್ಕ್‌; ರೇಷ್ಮೆ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್‌
x
ಸಿಎಂ ಸಿದ್ಧರಾಮಯ್ಯ

Karnataka Budget 2026|ರಾಮನಗರ, ಶಿಡ್ಲಘಟ್ಟದಲ್ಲಿ ಸಿಲ್ಕ್‌ ಪಾರ್ಕ್‌; ರೇಷ್ಮೆ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್‌

ಸಿಎಂ ಸಿದ್ದರಾಮಯ್ಯ ಅವರಿಂದ ದಾಖಲೆಯ 17ನೇ ಕರ್ನಾಟಕ ರಾಜ್ಯ ಬಜೆಟ್ 2026-27 ಮಂಡನೆ. ರಾಜ್ಯದ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಲಿರುವ ಈ ಆಯವ್ಯಯದ ಪ್ರಮುಖ ಅಂಶಗಳು ಮತ್ತು ನೇರ ಅಪ್‌ಡೇಟ್ಸ್‌ ಇಲ್ಲಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಈ ಬಾರಿಯ ಆಯವ್ಯಯ ಕೇವಲ ಅಂಕಿ-ಅಂಶಗಳ ಆಟವಲ್ಲ. ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ ಆಗಿದ್ದು, ರಾಜ್ಯದ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಲಿದೆ.

ದಾಖಲೆಯ ಸರದಾರನ ಆಯವ್ಯಯ

ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದು. ಇನ್ನು ರಾಷ್ಟ್ರಮಟ್ಟದಲ್ಲಿ ಗಮನಿಸುವುದಾದರೆ, ದೇಶದಲ್ಲೇ ಎರಡನೇ ಅತಿ ಹೆಚ್ಚು ಬಜೆಟ್ ಮಂಡಿಸಿದ ಹಣಕಾಸು ಸಚಿವರಾಗಿ ಅವರು ಗುರುತಿಸಿಕೊಂಡಿದ್ದಾರೆ. ಅನುಭವದ ಭಂಡಾರವೇ ಆಗಿರುವ ಸಿಎಂ, ಈ ಬಾರಿ ರಾಜ್ಯದ ಜನರ ನಿರೀಕ್ಷೆಗಳನ್ನು ಹೇಗೆ ಸರಿದೂಗಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Live Updates

  • 6 March 2026 11:42 AM IST

    ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ ಹಾಗೂ ನವ ಕರ್ನಾಟಕದ ನಿರ್ಮಾಣ ಎಂಬ ಆಶಯದೊಂದಿಗೆ ಮಂಡನೆಯಾಗಿರುವ 2026-27ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಸಹಕಾರಿ ವಲಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಒತ್ತು ನೀಡಿದೆ.  ಈ ಬಾರಿಯ ಬಜೆಟ್‌ನಲ್ಲಿ ರೈತರ ಹಿತರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರಾಜ್ಯದ ಸುಮಾರು 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಒಟ್ಟು 30,000 ಕೋಟಿ ರೂಪಾಯಿಗಳ ಕೃಷಿ ಸಾಲ ವಿತರಿಸುವ ಬೃಹತ್ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. 

     ಸಹಕಾರ ಸಂಘಗಳ ನಿಬಂಧಕರ ಹಂತದಲ್ಲಿ ಲಭ್ಯವಿರುವ ವಿವಿಧ ಸೇವೆಗಳು ಮತ್ತು ಕಾಯ್ದೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಸಂಪೂರ್ಣ ದತ್ತಾಂಶವನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (APMC) ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದ್ದು, 10 ಕೋಟಿ ರೂಪಾಯಿ ವೆಚ್ಚದಲ್ಲಿ ಇಆರ್‌ಪಿ (ERP) ತಂತ್ರಜ್ಞಾನ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

    ವಾಣಿಜ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಿಂದ ಮೈಸೂರಿನ ಬಂಬೂ ಬಜಾರ್ ಹಾಗೂ ಹುಬ್ಬಳ್ಳಿಯ ಕಾಟನ್ ಮಾರ್ಕೆಟ್ ಕೇಂದ್ರಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಡಿ (PPP) ಅತ್ಯಾಧುನಿಕ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ.

  • 6 March 2026 11:34 AM IST

    ಸರ್ಕಾರಿ ಶಾಲೆಗಳ ಹೈಟೆಕ್ ರೂಪಾಂತರಕ್ಕೆ ಒತ್ತು

    ರಾಜ್ಯದ ಶೈಕ್ಷಣಿಕ ಗುಣಮಟ್ಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಗುರಿಯೊಂದಿಗೆ ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರ್ಜರಿ ಕೊಡುಗೆಗಳನ್ನು ಘೋಷಿಸಲಾಗಿದೆ. ವಿಶೇಷವಾಗಿ ತಂತ್ರಜ್ಞಾನ ಆಧಾರಿತ ಕಲಿಕೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಎಐ (AI) ಆಧಾರಿತ ಕಲಿಕಾ ಸೌಲಭ್ಯವನ್ನು ಪರಿಚಯಿಸುತ್ತಿರುವುದು ಹೊಸ ಮೈಲಿಗಲ್ಲಾಗಿದೆ.

    ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ 3,900 ಕೋಟಿ ರೂಪಾಯಿಗಳ ಬೃಹತ್ ಮೊತ್ತದಲ್ಲಿ 800 ಶಾಲೆಗಳನ್ನು ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ, ಶಾಲಾ ಕಟ್ಟಡಗಳ ದುರಸ್ತಿಗಾಗಿ 565 ಕೋಟಿ ರೂ., ಶೌಚಾಲಯಗಳ ನಿರ್ಮಾಣಕ್ಕೆ 75 ಕೋಟಿ ರೂ. ಹಾಗೂ ಒಟ್ಟಾರೆ ಶಾಲಾ-ಕಾಲೇಜುಗಳ ನಿರ್ವಹಣೆಗಾಗಿ 125 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ. ಇನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿರುವುದು ಹಾಗೂ ವಿದ್ಯಾರ್ಥಿಗಳ ಮಾನಸಿಕ ಒತ್ತಡ ನಿವಾರಣೆಗಾಗಿ ವಿಶೇಷವಾಗಿ ಆರೋಗ್ಯ ಸಲಹೆಗಾರರನ್ನು ನೇಮಿಸುತ್ತಿರುವುದು ಶ್ಲಾಘನೀಯ ಕ್ರಮವಾಗಿದೆ.

    ಬೋಧನಾ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರಿಗೆ 24 ಕೋಟಿ ರೂಪಾಯಿ ವೆಚ್ಚದಲ್ಲಿ ಇಂಗ್ಲಿಷ್ ಭಾಷಾ ತರಬೇತಿ ನೀಡಲು ಸರ್ಕಾರ ಮುಂದಾಗಿದೆ. ದೀರ್ಘಕಾಲದ ಬೇಡಿಕೆಯಾಗಿದ್ದ ಖಾಲಿ ಇರುವ ಶಿಕ್ಷಕ ಹುದ್ದೆಗಳ ಭರ್ತಿಗೂ ಈ ಬಜೆಟ್‌ನಲ್ಲಿ ಹಸಿರು ನಿಶಾನೆ ಸಿಕ್ಕಿದೆ. ಪಠ್ಯಕ್ರಮದಲ್ಲಿ ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡಲು 1 ರಿಂದ 10ನೇ ತರಗತಿಯವರೆಗೆ ಉಚಿತ ಮೌಲ್ಯ ಶಿಕ್ಷಣ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆಯಂತಹ ಜನಪರ ಯೋಜನೆಗಳನ್ನು ಪ್ರಕಟಿಸಲಾಗಿದೆ. ವಿದ್ಯಾವಿಕಾಸ ಯೋಜನೆಯಡಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೂ ಹೆಚ್ಚಿನ ಬಲ ನೀಡಲಾಗುತ್ತಿದ್ದು, ಇದು ರಾಜ್ಯದ ಒಟ್ಟಾರೆ ಶೈಕ್ಷಣಿಕ ಚಿತ್ರಣವನ್ನೇ ಬದಲಿಸುವ ನಿರೀಕ್ಷೆಯಿದೆ.

  • 6 March 2026 11:22 AM IST

    ರಾಜ್ಯ ಬಜೆಟ್ 2026: ಮಹಿಳಾ ಸಬಲೀಕರಣ ಮತ್ತು ಆರೋಗ್ಯಕ್ಕೆ ಬಂಪರ್ ಕೊಡುಗೆ

    ರಾಜ್ಯ ಸರ್ಕಾರವು ತನ್ನ ಇತ್ತೀಚಿನ ಬಜೆಟ್‌ನಲ್ಲಿ ಮಹಿಳೆಯರ ಅಭಿವೃದ್ಧಿ, ಆರೋಗ್ಯ ಮತ್ತು ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಿದೆ. ಈ ಬಾರಿಯ ಆಯವ್ಯಯದಲ್ಲಿ ಸ್ತ್ರೀಶಕ್ತಿ ಮತ್ತು ಮಹಿಳಾ ಕಾರ್ಮಿಕರ ಹಿತದೃಷ್ಟಿಯಿಂದ ಹಲವಾರು ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದ್ದು, ವಿಶೇಷವಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

    ಮಹಿಳೆಯರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಮನಗಂಡು, ಬೆಂಗಳೂರಿನಲ್ಲಿ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ವಿಶೇಷ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದು ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆಯಲ್ಲಿ ರಾಜ್ಯದ ಮಹಿಳೆಯರಿಗೆ ದೊಡ್ಡ ಮಟ್ಟದ ನೆರವು ನೀಡಲಿದೆ. ಇನ್ನುಳಿದಂತೆ, ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಮಾಜಿ ದೇವದಾಸಿಯರ ಮಕ್ಕಳ ಶಿಕ್ಷಣಕ್ಕಾಗಿ 5 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಮೀಸಲಿಡಲಾಗಿದ್ದು, ಅವರ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಬದ್ಧತೆ ತೋರಿದೆ.

    ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೂ ಬಜೆಟ್‌ನಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದ ಒಟ್ಟು 1,39,844 ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಸಮವಸ್ತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಕೆಲಸ ಮಾಡುವ ತಾಯಂದಿರ ಅನುಕೂಲಕ್ಕಾಗಿ ಜಿಲ್ಲಾ ಮಟ್ಟದಲ್ಲಿ 20 ಹೊಸ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 1 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ.

    ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ 'ಧನಶ್ರೀ' ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಸರ್ಕಾರವು ಗಣನೀಯವಾಗಿ ಹೆಚ್ಚಿಸಿದೆ. ಈ ಹಿಂದೆ ಇದ್ದ 30 ಸಾವಿರ ರೂಪಾಯಿಗಳ ಮೊತ್ತವನ್ನು ಈಗ 45 ಸಾವಿರ ರೂಪಾಯಿಗಳಿಗೆ ಏರಿಸಲಾಗಿದ್ದು, ಇದು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕಾರಿಯಾಗಲಿದೆ. ಒಟ್ಟಾರೆಯಾಗಿ, ಈ ಬಾರಿಯ ಬಜೆಟ್ ಮಹಿಳೆಯರ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಆಶಯ ಹೊಂದಿದೆ.

  • 6 March 2026 11:18 AM IST

    ತೆಂಗು ಬೆಳೆಗಾರರ ಸಮಸ್ಯೆಯನ್ನು ನಿವಾರಿಸಲು 10 ಕೋಟಿ ರೂ. ಮೀಸಲು

    ಅಡಿಗೆ ಬೆಳೆಗಾರರು ಅನುಭವಿಸುತ್ತಿರುವ ಎಲೆಚುಕ್ಕಿ, ಹಳದಿ ಚುಕ್ಕಿ ರೋಗ ನಿವಾರಣೆ ಹಾಗೂ ತೆಂಗು ಬೆಳೆಗಾರರ ಸಮಸ್ಯೆಯನ್ನು ನಿವಾರಿಸಲು 10 ಕೋಟಿ ರೂ. ಮೀಸಲಿಡಲಾಗಿದೆ.

  • 6 March 2026 11:17 AM IST

    ರಾಜ್ಯದ ಎರಡನೇ ಐಟಿ ಸಿಟಿ ಆಗಿ ಮೈಸೂರು ಅಭಿವೃದ್ಧಿ

    ಮೈಸೂರನ್ನ ರಾಜ್ಯದ ಎರಡನೇ ಐಟಿ ಸಿಟಿಯಾಗಿ ನಿರ್ಮಾಣ ಮಾಡಲು ಈ ಬಾರಿ ಬಜೆಟ್​​ನಲ್ಲಿ ತೀರ್ಮಾನ ಮಾಡಲಾಗಿದೆ. ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

  • 6 March 2026 11:12 AM IST

    ರಾಜ್ಯ ಬಜೆಟ್ 2026: ಕೃಷಿ ವಲಯದ ಕಾಯಕಲ್ಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಯೋಜನೆಗಳ ಘೋಷಣೆ

    ರಾಜ್ಯದ ರೈತರ ಆರ್ಥಿಕ ಸಬಲೀಕರಣ ಹಾಗೂ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಾರಿಯ ಬಜೆಟ್‌ನಲ್ಲಿ ಕೃಷಿ ವಲಯಕ್ಕಾಗಿ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಮುಂಬರುವ ಮೂರು ವರ್ಷಗಳ ಅವಧಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲು 'ಸಸ್ಯ ಸಂಜೀವಿ' ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ. ರೈತರಿಗೆ ಅಗತ್ಯವಿರುವ ಕೃಷಿ ಮಾಹಿತಿ ಮತ್ತು ಸಲಹೆಗಳನ್ನು ಕ್ಷಣಮಾತ್ರದಲ್ಲಿ ಒದಗಿಸಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಆಧಾರಿತ 'ರೈತ ಕರೆ ಕೇಂದ್ರ'ಗಳನ್ನು ಸ್ಥಾಪಿಸುವ ಮೂಲಕ ಡಿಜಿಟಲ್ ಕೃಷಿಗೆ ಸರ್ಕಾರ ಮನ್ನಣೆ ನೀಡಿದೆ.

    ಕೃಷಿ ಉತ್ಪಾದನಾ ವೆಚ್ಚವನ್ನು ತಗ್ಗಿಸುವುದು ಮತ್ತು ಯಾಂತ್ರೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯಾದ್ಯಂತ 'ಹೈಟೆಕ್ ಹಾರ್ವೆಸ್ಟರ್ ಹಬ್'ಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಇದು ಸಣ್ಣ ಮತ್ತು ಅತಿಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ಸುಧಾರಿತ ಯಂತ್ರೋಪಕರಣಗಳು ಲಭ್ಯವಾಗುವಂತೆ ಮಾಡಲಿದೆ. ಮಣ್ಣಿನ ಫಲವತ್ತತೆಯನ್ನು ಕಾಪಾಡಿ ಗುಣಮಟ್ಟವನ್ನು ಹೆಚ್ಚಿಸಲು 'ವಸುಧಾಮೃತ' ಎಂಬ ವಿಶೇಷ ಯೋಜನೆಯನ್ನು ಘೋಷಿಸಲಾಗಿದ್ದು, ಇದು ಸುಸ್ಥಿರ ಕೃಷಿಗೆ ನಾಂದಿ ಹಾಡಲಿದೆ. ಇನ್ನು ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಬೆಲೆ ಪಡೆಯುವಂತಾಗಲು ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಹೈಟೆಕ್ 'ರೈತ ಮಾಲ್' ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಈ ಎಲ್ಲಾ ಯೋಜನೆಗಳು ರಾಜ್ಯದ ಕೃಷಿ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿವೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • 6 March 2026 11:06 AM IST

    ರೈತರ ಆದಾಯ ಹೆಚ್ಚಿಸಲು 'ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ'

    ರಾಜ್ಯದ ಅನ್ನದಾತರ ಆರ್ಥಿಕ ಸಬಲೀಕರಣ ಮತ್ತು ಕೃಷಿ ಕ್ಷೇತ್ರದಲ್ಲಿ ಆಧುನಿಕತೆಯನ್ನು ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ 'ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ' ಎಂಬ ನೂತನ ಕಾರ್ಯಕ್ರಮವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಮೊದಲ ಹಂತದಲ್ಲಿ 100 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಮೀಸಲಿರಿಸಲಾಗಿದೆ. ರೈತರ ಆದಾಯದ ಮೂಲಗಳನ್ನು ಹೆಚ್ಚಿಸುವುದು ಮತ್ತು ಕೃಷಿ ಚಟುವಟಿಕೆಗಳನ್ನು ಲಾಭದಾಯಕವಾಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. 

  • 6 March 2026 11:02 AM IST

    2,000 ಕೋಟಿ ರೂ. ವೆಚ್ಚದಲ್ಲಿ 288 ಸೇತುವೆ ಹಾಗೂ 386 ಕಾಲುಸಂಕಗಳ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ

    ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಮುಂದಾಗಿದ್ದು, ಬರೋಬ್ಬರಿ 2,000 ಕೋಟಿ ರೂಪಾಯಿಗಳ ಬೃಹತ್ ಯೋಜನೆಯಡಿ ಸೇತುವೆ ಮತ್ತು ಕಾಲುಸಂಕಗಳ ಅಭಿವೃದ್ಧಿಗೆ ಅಧಿಕೃತ ಅನುಮೋದನೆ ನೀಡಿದೆ. ಈ ಯೋಜನೆಯಡಿ ಒಟ್ಟು 288 ಹಳೆಯ ಸೇತುವೆಗಳ ದುರಸ್ತಿ ಕಾರ್ಯ ಹಾಗೂ 386 ಹೊಸ ಕಾಲುಸಂಕಗಳ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

    ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ ಹಂತಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ವಿಶೇಷವಾಗಿ 2025-26ನೇ ಸಾಲಿನಲ್ಲಿ ಒಟ್ಟು 216 ಹೊಸ ಸೇತುವೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಸರ್ಕಾರ ಆದ್ಯತೆ ನೀಡಿದೆ. ಮಳೆಗಾಲದಲ್ಲಿ ಉಂಟಾಗುವ ಸಂಪರ್ಕ ಕಡಿತದ ಸಮಸ್ಯೆಗಳನ್ನು ನೀಗಿಸಲು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

  • 6 March 2026 11:00 AM IST

    16ನೇ ವಯಸ್ಸಿನ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ

    ಹೆಚ್ಚುತ್ತಿರುವ ಮೊಬೈಲ್ ಬಳಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ ಹಾಗೂ ಅಡ್ಡಪರಿಣಾಮ ತಡೆಗಟ್ಟುವ ಹಿನ್ನೆಲೆಯಲ್ಲಿ 16ನೇ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧ ಮಾಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು 204 ಬಿಆರ್‌ಸಿ ಕೇಂದ್ರಗಳಲ್ಲಿ ಓರ್ವ ಅರ್ಹ ಮಾನಸಿಕ ಆರೋಗ್ಯ ಸಲಹೆಗಾರ ನೇಮಕ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. 

  • 6 March 2026 10:56 AM IST

    ಬಜೆಟ್ 2026: 'ಕನ್ನಡವೇ ಉಸಿರು' - ಆಡಳಿತ ಮತ್ತು ಕಾನೂನಿನಲ್ಲಿ ಕನ್ನಡಕ್ಕೆ ಅಗ್ರ ಮನ್ನಣೆ

    ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಇಂದು ಮಂಡನೆಯಾದ 2026-27ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಅಭೂತಪೂರ್ವ ಯೋಜನೆಗಳನ್ನು ಘೋಷಿಸಿದ್ದಾರೆ. ಕೇವಲ ಆಡುಭಾಷೆಯಾಗಿ ಮಾತ್ರವಲ್ಲದೆ, ಆಡಳಿತ ಮತ್ತು ಕಾನೂನು ಪ್ರಕ್ರಿಯೆಯಲ್ಲೂ ಕನ್ನಡವನ್ನು ಕಡ್ಡಾಯಗೊಳಿಸಲು ಸರ್ಕಾರ ಗಟ್ಟಿ ಹೆಜ್ಜೆ ಇಟ್ಟಿದೆ.

    ಆಡಳಿತದಲ್ಲಿ ಕನ್ನಡ ಕಡ್ಡಾಯ: ಸರ್ಕಾರದ ಎಲ್ಲಾ ಹಂತದ ವ್ಯವಹಾರಗಳು ಮತ್ತು ಅಧಿಕೃತ ಸಂವಹನಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಲಾಗಿದೆ.

    ಕಾನೂನುಗಳ ಭಾಷಾಂತರ: ಇದುವರೆಗಿನ ಎಲ್ಲಾ ಸಂಕೀರ್ಣ ಸರ್ಕಾರಿ ಕಾನೂನುಗಳು ಮತ್ತು ಅಧಿನಿಯಮಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಕನ್ನಡಕ್ಕೆ ಭಾಷಾಂತರಿಸಲು ವಿಶೇಷ 'ಕನ್ನಡ ಕಾನೂನು ಕೋಶ'ಕ್ಕೆ ಅನುದಾನ ಮೀಸಲಿಡಲಾಗಿದೆ.

    ಮುಂದಿನ ಕಾನೂನುಗಳು ಕನ್ನಡದಲ್ಲೇ: ಇನ್ಮುಂದೆ ವಿಧಾನಸಭೆಯಲ್ಲಿ ಮಂಡನೆಯಾಗುವ ಎಲ್ಲಾ ಮಸೂದೆಗಳು ಮತ್ತು ಹೊಸ ಕಾನೂನುಗಳು ಮೂಲ ರೂಪದಲ್ಲಿಯೇ ಕನ್ನಡದಲ್ಲಿ ಇರಲಿವೆ. ಇದರಿಂದ ಜನಸಾಮಾನ್ಯರಿಗೂ ಕಾನೂನಿನ ಅರಿವು ಸುಲಭವಾಗಿ ಸಿಗಲಿದೆ.

    ನಾಮಫಲಕಗಳಲ್ಲಿ ಕನ್ನಡದ ದರ್ಬಾರ್: ರಾಜ್ಯದಾದ್ಯಂತ ಎಲ್ಲಾ ವಾಣಿಜ್ಯ ಮಳಿಗೆಗಳು ಮತ್ತು ಉದ್ದಿಮೆಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರುವುದನ್ನು ಕಡ್ಡಾಯಗೊಳಿಸುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು.

Read More
Next Story